Kodagu News: ಕಾವೇರಿಯ ಉಗಮ ಭೂಮಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ: ಕೊಡಗಿನಲ್ಲಿ ಮಾಯವಾಗುತ್ತದೆ ಕಾವೇರಿ ಬೆಡಗು!
ಕನ್ನಡ ಸುದ್ದಿ  /  ಕರ್ನಾಟಕ  /  Kodagu News: ಕಾವೇರಿಯ ಉಗಮ ಭೂಮಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ: ಕೊಡಗಿನಲ್ಲಿ ಮಾಯವಾಗುತ್ತದೆ ಕಾವೇರಿ ಬೆಡಗು!

Kodagu News: ಕಾವೇರಿಯ ಉಗಮ ಭೂಮಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ: ಕೊಡಗಿನಲ್ಲಿ ಮಾಯವಾಗುತ್ತದೆ ಕಾವೇರಿ ಬೆಡಗು!

ಕಾವೇರಿ ಉಗಮ ಜಿಲ್ಲೆ ಕೊಡಗಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದ್ದು, ಜಲಮೂಲಗಳು ಬತ್ತುತ್ತಿರುವುದರಿಂದ, ನಗರದಲ್ಲಿ ವಾರಕ್ಕೆ ಕೇವಲ ಮೂರು ಬಾರಿ ನೀರು ಪೂರೈಕೆ ಮಾಡುವುದಾಗಿ ನಗರಸಭೆ ಸುತ್ತೋಲೆ ಹೊರಡಿಸಿದೆ. ಅತ್ತ ಕುಶಾಲನಗರದಲ್ಲಿ ಕಲುಷಿತ ನೀರು ಬೆರೆಯುವಿಕೆಯಿಂದಾಗಿ, ಕಾವೇರಿ ನದಿ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಈ ಕುರಿತು ಇಲ್ಲಿದೆ ಮಾಹಿತಿ..

ಪಂಪಿನಕೆರೆಯಲ್ಲಿ ತಳ ಸೇರಿದ ನೀರು
ಪಂಪಿನಕೆರೆಯಲ್ಲಿ ತಳ ಸೇರಿದ ನೀರು (HT)

ಮಡಿಕೇರಿ: ಕಾವೇರಿ ಉಗಮ ಜಿಲ್ಲೆ ಕೊಡಗಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದ್ದು, ಮಡಿಕೇರಿಯ ಕುಡಿಯುವ ನೀರಿನ ಎರಡು ಮೂಲಗಳು ಸಂಪೂರ್ಣ ಬತ್ತಿ ಹೋಗಿವೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ನಾಗರಿಕರು ಸಹಕರಿಸಬೇಕು ಎಂದು ನಗರಸಭೆ ಸುತ್ತೋಲೆ ಹೊರಡಿಸಿದೆ.

ಬೇಸಿಗೆಯ ದಿನದಲ್ಲಿ ತಾಪಮಾನ ಏರಿಕೆಯ ಕಾರಣಕ್ಕೆ, ಮಡಿಕೇರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ವಾರದಲ್ಲಿ ಕೇವಲ ಮೂರು ದಿನ ನೀರು ಪೂರೈಕೆಯಾಗುತ್ತಿದೆ. ಕುಡಿಯುವ ನೀರು ಪೂರೈಕೆಯಲ್ಲಿನ ಈ ವ್ಯತ್ಯಯ ಮಡಿಕೇರಿ ನಗರದ ಜನರ ಬೇಸರಕ್ಕೂ ಕಾರಣವಾಗಿದೆ.

ನಗರದ ಒಟ್ಟು 23 ವಾರ್ಡುಗಳಲ್ಲಿ 33 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. 11 ಸಾವಿರಕ್ಕೂ ಹೆಚ್ಚು ಕುಟುಂಬಗಳಿದ್ದು, ಇವುಗಳಲ್ಲಿ ಬಹುತೇಕ ಕುಟುಂಬಗಳಿಗೆ ಸ್ವಂತ ನೀರಿನ ಮೂಲಗಳಿಲ್ಲ. ಇದುವರೆಗೆ ಕೂಟು ಹೊಳೆ, ಕುಂಡಾಮೇಸ್ತ್ರಿ, ರೋಷಾನರ ಹಾಗೂ ಕನ್ನಂಡಬಾಣೆಗಳಿಂದ ನೀರು ಪೂರೈಸಲಾಗುತಿತ್ತು. ಈಗ ರೋಷಾನರ ಮತ್ತು ಕೂಟು ಹೊಳೆಯಲ್ಲಿ ನೀರು ಸಂಪೂರ್ಣ ಬತ್ತಿಹೋಗಿದೆ.

ಈ ಹಿನ್ನೆಲೆಯಲ್ಲಿ ನಿತ್ಯವೂ ನಗರದ ಎಲ್ಲಾ 23 ವಾರ್ಡುಗಳಿಗೆ ಕುಡಿಯುವ ನೀರು ಪೂರೈಕೆ ಸಾಧ್ಯವಿಲ್ಲ ಎಂದು ನಗರಸಭೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ನಿತ್ಯವೂ ವಾರ್ಡ್‌ವಾರು ನೀರು ಪೂರೈಕೆ ಮಾಡುತ್ತಿರುವುದರಿಂದ, ಪ್ರತಿ ವಾರ್ಡ್‌ಗೆ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ದೊರೆಯಲಿದೆ ಎಂದು ನಗರಸಭೆಯ ಸುತ್ತೋಲೆಯಲ್ಲಿ ಹೇಳಲಾಗಿದೆ.

ಸದ್ಯ ಕುಂಡಾಮೇಸ್ತ್ರಿ ಯೋಜನೆಯಿಂದ ನೀರನ್ನು ಕೂಟು ಹೊಳೆಗೆ ಲಿಫ್ಟ್ ಮಾಡಿ ಅಲ್ಲಿಂದ ನೀರು ಒದಿಸುತಿದ್ದೇವೆ. ಕುಂಡಾಮೇಸ್ತ್ರಿಯಲ್ಲಿರುವ ನೀರನ್ನು ಇನ್ನು ಒಂದು ತಿಂಗಳವರೆಗೆ ಬಳಸಬೇಕೆಂದರೆ, ದಿನ ಬಿಟ್ಟು ದಿನ ನೀರು ಪೂರೈಸುವುದು ಅನಿವಾರ್ಯ ಎಂದು ನಗರಸಭೆ ಆಯುಕ್ತ ವಿಜಯ್ ಹೇಳಿದ್ದಾರೆ.

ಬರಿದಾದ ಹಾರಂಗಿ ಜಲಾಶಯ:

ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳ ಪೈಕಿ ಒಂದಾಗಿರುವ ಹಾರಂಗಿ ಜಲಾಶಯ ಸಂಪೂರ್ಣವಾಗಿ ಬರಿದಾಗಿದೆ. ಇದರಿಂದಾಗಿ ಕೊಡಗು ಜಿಲ್ಲೆಯ ಕುಶಾಲನಗರ ಹಾಗೂ ಇತರ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಕೊರತೆ ಎದುರಾಗಿದೆ. ಜಿಲ್ಲೆಯಲ್ಲಿ ಮಾರ್ಚ್‌ ತಿಂಗಳ ಅಂತ್ಯದಲ್ಲಿ ೩೪ ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಏಪ್ರಿಲ್‌ ತಿಂಗಳಲ್ಲೂ ಬಹುತೇಕ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ತೆ ಮತ್ತಷ್ಟು ಹೆಚ್ಚಾಗಲಿದೆ.

ಕಪ್ಪು ಬಣ್ಣಕ್ಕೆ ತಿರುಗಿದ ಜೀವನದಿ:

ಕೊಡಗು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಜೊತೆಗೆ, ನಾಡಿನ ಜೀವನದಿ ಕಾವೇರಿಯ ನೀರಿನ ಗುಣಮಟ್ಟ ಕೂಡ ಕುಸಿಯುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕಾವೇರಿ ನದಿಗೆ ನಿತ್ಯವೂ ಭಾರೀ ಪ್ರಮಾಣದಲ್ಲಿ ಕಲುಷಿತ ನೀರು ಹಾಗೂ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಕುಶಾಲನಗರದ ಮೂಲಕ ಹರಿಯುವ ಕಾವೇರಿ ನದಿ ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗಿದೆ.

ಒಳಚರಂಡಿ ಯೋಜನೆ ಕಾಮಗಾರಿ ಪೂರ್ಣಗೊಳ್ಳದಿರುವುದು, ಕಾವೇರಿ ನದಿಗೆ ಕಲುಷಿತ ನೀರು ಬಂದು ಸೇರುತ್ತಿರುವುದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ನಗರಕ್ಕೆ ನೀರು ಸರಬರಾಜು ಮಾಡುವ ಹೊಣೆ ಹೊತ್ತಿರುವ ಕರ್ನಾಟಕ ರಾಜ್ಯ ನೀರು ಸರಬರಾಜು ಮಂಡಳಿ ಅಧಕಾರಿಗಳು, ನದಿಗೆ ಕಲುಷಿತ ನೀರು ಸೇರುವುದನ್ನು ತಪ್ಪಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ.

ಅಗತ್ಯ ಪ್ರಮಾಣದಲ್ಲಿ ಮಳೆಯಾಗದಿರುವುದು ಕೊಡಗು ಜಿಲ್ಲೆಯ ಜಲಮೂಲಗಳ ಬತ್ತುವಿಕೆಗೆ ಕಾರಣವಾಗಿದೆ. ಇರುವ ಜಲಮೂಲಗಳಿಗೂ ಕಲುಷಿ ನೀರು ಬಂದು ಬಂದು ಸೇರುತ್ತಿರುವುದು, ಶುದ್ಧ ಕುಡಿಯುವ ನೀರಿಗಾಗಿ ಜನರು ತತ್ತರಿಸುವಂತಾಗಿದೆ.

ಸಾರ್ವಜನಿಕರ ಆಕ್ರೋಶ:

ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸದ ಮಡಿಕೇರಿ ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಸಾಮಾನ್ಯ ಜನ ದುಡ್ಡು ಕೊಟ್ಟು ಕುಡಿಯುವ ನೀರಿನ ಟ್ಯಾಂಕರ್‌ ತರಿಸಲು ಸಾಧ್ಯವಿಲ್ಲ. ಹೀಗಾಗಿ ಈ ಕೂಡಲೇ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Whats_app_banner