B Krishna Karanth: ಅದ್ಭುತ ಹಾಡುಗಾರ, ದಿವಂಗತ ಬಿವಿ ಕಾರಂತರ ಸಹೋದರ ಬಿ ಕೃಷ್ಣ ಕಾರಂತ್ ಇನ್ನಿಲ್ಲ
ಖ್ಯಾತ ಗಾಯಕ, ರಂಗಭೂಮಿಯ ಅಪ್ರತಿಮ ದಿವಂಗತ ಬಿ.ವಿ.ಕಾರಂತರ ಕಿರಿಯ ಸಹೋದರ ಬಿ ಕೃಷ್ಣ ಕಾರಂತರು ಡಿಸೆಂಬರ್ 12ರ ಗುರುವಾರ ಮಧ್ಯಾಹ್ನ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 76 ವರ್ಷ.
ಮಂಗಳೂರು: ದೇಶದ ಪ್ರಸಿದ್ಧ ರಂಗಕರ್ಮಿ ದಿವಂಗತ ಬಿವಿ ಕಾರಂತರ ಸಹೋದರ ಬಿ ಕೃಷ್ಣ ಕಾರಂತರು ಡಿಸೆಂಬರ್ 12ರ ಗುರುವಾರ ಮಧ್ಯಾಹ್ನ ದೈವಾಧೀನರಾದರು. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 76 ವರ್ಷ. ಉಡುಪಿ ಎಂಜಿಎಂ ಕಾಲೇಜಿನ ರೀಜನಲ್ ರಿಸರ್ಚ್ ಸೆಂಟರ್ (RRC)ನ ನಿವೃತ್ತ ಉದ್ಯೋಗಿಯಾಗಿದ್ದ ಇವರು ಅದ್ಭುತ ಹಾಡುಗಾರರಾಗಿದ್ದರು. ಇವರ ಸಂಗೀತ ಕಾರ್ಯಕ್ರಮಗಳು, ಇವರ ಹಾಡಿನ ಕ್ಯಾಸೆಟ್ಗಳು ಬಹಳ ಜನಪ್ರಿಯವಾಗಿದ್ದವು.
ರಂಗಭೂಮಿ ಉಡುಪಿಯ ಸದಸ್ಯರಾದ ಇವರು ಸಂಸ್ಥೆಯ ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೆ, ಹಿನ್ನೆಲೆ ಹಾಡುಗಾರರಾಗಿ ಬಹಳಷ್ಟು ನಾಟಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸಾಂಸ್ಕೃತಿಕ ರಂಗಕ್ಕೆ ನೀಡಿರುವ ಕೊಡುಗೆಗಾಗಿ ಇವರನ್ನು ಇತ್ತೀಚಿಗೆ ರಂಗಭೂಮಿ ಉಡುಪಿ ಸಂಸ್ಥೆಯು ಗೌರವಿಸಿ ಸನ್ಮಾನಿಸಿತ್ತು. ರಂಗಭೂಮಿಯ ಎಲ್ಲಾ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದ ಇವರ ಅಗಲುವಿಕೆ ಸಂಗೀತ ಹಾಗೂ ನಾಟಕ ರಂಗಕ್ಕೆ ಅಪಾರ ನಷ್ಟವಾಗಿದೆ.
ಸಂಜೆ ಅಂತ್ಯಕ್ರಿಯೆ
ಉಡುಪಿ ಕಿದಿಯೂರಿನಲ್ಲಿ ಇರುವ ಅವರ ಮನೆಯಲ್ಲಿ ಡಿಸೆಂಬರ್ 13ರ ಶುಕ್ರವಾರ ಬೆಳಿಗ್ಗೆ ಸುಮಾರು 11.30ರ ನಂತರ ಮೃತರ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. ಹಾಗೂ ವಿದೇಶದಲ್ಲಿರುವ ಬಿಕೆ ಕಾರಂತರ ಮಗ ಆಗಮಿಸಿದ ನಂತರ ಮೃತರ ಅಂತಿಮ ವಿಧಿವಿಧಾನವು ಸಂಜೆ 6.30ರ ಸುಮಾರಿಗೆ ಉಡುಪಿ ಇಂದ್ರಾಳಿಯ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಅವರ ಬಂಧುಗಳು ತಿಳಿಸಿದ್ದಾರೆ.
ಕೃಷ್ಣ ಕಾರಂತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಪ್ರತಿಭಾವಂತ ಕಲಾವಿದರ ನಿಧನಕ್ಕೆ ರಂಗಭೂಮಿ ಉಡುಪಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.