D Gukesh profile: 7ನೇ ವಯಸ್ಸಿಗೆ ಚೆಸ್ ಕಲಿಕೆ, 12ಕ್ಕೆ ಗ್ರ್ಯಾಂಡ್ ಮಾಸ್ಟರ್, 18ಕ್ಕೆ ವಿಶ್ವ ಚಾಂಪಿಯನ್; ಇದು ಗುಕೇಶ್ ಜೀವನ ಚರಿತ್ರೆ
Gukesh Dommaraju: ಚೆನ್ನೈ ಮೂಲಕದ ಗುಕೇಶ್ ದೊಮ್ಮರಾಜು ಚೆಸ್ ಲೋಕದ ಸಾಮ್ರಾಟನಾಗಿದ್ದಾನೆ. ಸಿಂಗಾಪುರದಲ್ಲಿ ಜರುಗಿದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಮಣಿಸಿ ವಿಶ್ವ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ. ಚೆಸ್ ಲೋಕದಲ್ಲಿ ಹೊಸ ಸಾಧನೆಗೈದ ಗುಕೇಶ್ ಜೀವನ ಚರಿತ್ರೆ ಹೀಗಿದೆ ನೋಡಿ.
ಆಗಿನ್ನೂ ಈ ಹುಡುಗನಿಗೆ ಏಳು ವರ್ಷ ವಯಸ್ಸು. ಚದುರಂಗದ ಮನೆಯಲ್ಲಿರುವ ಕಪ್ಪು ಬಿಳುಪಿನ ಕೋಣೆಗಳನ್ನು ಎಣಿಸುವ ಮಕ್ಕಳಾಟದ ವಯಸ್ಸದು. ಅಷ್ಟರಲ್ಲೇ ಈ ಹುಡುಗ ಚೆಸ್ ಎಂಬ ಬುದ್ಧಿವಂತರ ಆಟವನ್ನು ಅರೆದು ಕುಡಿದಾಗಿತ್ತು. ಏಳನೇ ವಯಸ್ಸಿನಲ್ಲಿ ಶಾಲೆಯಲ್ಲಿ ಚೆಸ್ ಕಲಿತ ಬಾಲಕನಿಗೆ, ಆಟದ ಬಗ್ಗೆ ಉತ್ಸಾಹ ಹೆಚ್ಚಿತು. ಅಲ್ಲಿ ಆರಂಭವಾದ ಈ ಬಾಲಕನ ಪಯಣ, ಇಂದು ಆತನನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಂದು ನಿಲ್ಲಿಸಿದೆ. ಕೇವಲ 12ನೇ ವಯಸ್ಸಿಗೆ ಚೆಸ್ ಗ್ರ್ಯಾಂಡ್ ಮಾಸ್ಟರ್ ಆದ ಈ ಬಾಲಕ, ಸಾಧಿಸಲು ಇನ್ನೂ ಇದೆ ಎಂದು ಹೇಳುತ್ತಾರೆ. ಅವರು ಬೇರೆ ಯಾರೂ ಅಲ್ಲ. ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಎದುರು ಗತ್ತಿನಿಂದ ಆಡಿದ 18ರ ಪೋರ ಡಿ ಗುಕೇಶ್, ಇದೀಗ ಚಾಂಪಿಯನ್ ಆಗಿದ್ದಾರೆ. ಕೇವಲ 18ನೇ ವಯಸ್ಸಿಗೆ ಈ ಸಾಧನೆಗೈದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಈತನ ಪೂರ್ತಿ ಹೆಸರು ಗುಕೇಶ್ ದೊಮ್ಮರಾಜು (D Gukesh). ತಮಿಳು ನಾಡಿನ ರಾಜಧಾನಿ ಚೆನ್ನೈ ನಿವಾಸಿ. ಭಾರತಕ್ಕೆ ದಾಖಲೆಯ ಸಂಖ್ಯೆಯ ಗ್ರಾಂಡ್ ಮಾಸ್ಟರ್‌ಗಳನ್ನು ಕೊಟ್ಟಂತಹ ನಗರದ ಬಗ್ಗೆ ಹೆಚ್ಚು ವಿವರಣೆ ಬೇಕೇ? ಹೇಳಿಕೇಳಿ ವಿಶ್ವನಾಥನ್ ಆನಂದ್ ಅವರಂಥಾ ವಿಶ್ವ ಕಂಡ ಶ್ರೇಷ್ಠ ಚದುರಂಗ ಚತುರರು ಹುಟ್ಟಿದ ಊರಿನಲ್ಲಿ ಹುಟ್ಟಿದ್ದೇ, ಗುಕೇಶ್ ರಕ್ತದಲ್ಲಿ ಚದುರಂಗದಾಟದ ಸವಿಜೇನು ಬೆಳೆಯಲು ಸಾಕಿತ್ತು. ವಿಶ್ವ ಚೆಸ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿದ ಅತ್ಯಂತ ಕಿರಿಯ ಸ್ಪರ್ಧಿ ಎಂಬ ದಾಖಲೆಯನ್ನು ಗುಕೇಶ್ ನಿರ್ಮಿಸಿ ಆಗಿದೆ. ಹಾಗಂತಾ ಇದು ಇಂದು ನಿನ್ನೆಯ ಪ್ರಯತ್ನವಂತೂ ಅಲ್ಲ. ಸಣ್ಣ ವಯಸ್ಸಿಗೆ ಜಾಗತಿಕ ಚೆಸ್ ಲೋಕದಲ್ಲಿ ಗುರುತಿಸಿಕೊಂಡ ಗುಕೇಶ್ ಕುರಿತ ಕಿರು ಪರಿಚಯ ಇಲ್ಲಿದೆ.
ಕಠಿಣ ತಯಾರಿ, ದೃಢ ಸಂಕಲ್ಪ, ಯೋಗ ಮತ್ತು ಧ್ಯಾನದಿಂದ ಮಾನಸಿಕ ಸಮತೋಲನದ ಮೇಲೆ ಕೇಂದ್ರೀಕರಿಸುವ ಮೂಲಕ, ಗುಕೇಶ್ ಇನ್ನಷ್ಟು ಸವಾಲುಗಳನ್ನು ಎದುರಿಸಲು ಸಜ್ಜಾಗಿ ನಿಂತಿದ್ದಾರೆ.
2006ರ ಮೇ 29ರಂದು ದಕ್ಷಿಣ ಭಾರತದ ಹೆಬ್ಬಾಗಿಲು ಚೆನ್ನೈನಲ್ಲಿ ಜನಿಸಿದ ಗುಕೇಶ್, ಮೂಲತಃ ತೆಲುಗು ಕುಟುಂಬದವರು. ಆದರೆ, ಗುಕೇಶ್ ಹುಟ್ಟಿ ಬೆಳೆದಿದ್ದು ಎಲ್ಲವೂ ಭಾರತದ ಬ್ಯಾಂಕಿಗ್ ಕ್ಷೇತ್ರದ ತೊಟ್ಟಿಲು ಎನಿಸಿಕೊಂಡ ಚೆನ್ನೈ ನಗರದಲ್ಲಿ. ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಸೇರಿದಂತೆ ಭಾರತದ ಹಲವಾರು ಪ್ರಮುಖ ಚೆಸ್ ಆಟಗಾರರ ಜನ್ಮಸ್ಥಳ ಚೆನ್ನೈ. ಹೀಗಾಗಿ ಗುಕೇಶ್‌ಗೆ ಹೆಚ್ಚುವರಿ ಸ್ಪೂರ್ತಿ ಬೇಕಿರಲಿಲ್ಲ. ಆತನಿಗೆ ಆತನ ಊರೇ, ಅಲ್ಲಿ ಹುಟ್ಟಿದ ಚೆಸ್ ದಿಗ್ಗಜರೇ ಸ್ಫೂರ್ತಿ, ಮಾದರಿ. ಗುಕೇಶ್ ತಂದೆ ರಜನಿಕಾಂತ್, ಕಿವಿ-ಮೂಗು ಮತ್ತು ಗಂಟಲು ಶಸ್ತ್ರಚಿಕಿತ್ಸಕ. ತಾಯಿ ಪದ್ಮಾ ಸೂಕ್ಷ್ಮ ಜೀವಶಾಸ್ತ್ರಜ್ಞರಾಗಿದ್ದಾರೆ.
ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ
ಗುಕೇಶ್ 2015ರಲ್ಲಿ ತಮ್ಮ FIDE ಮಾಸ್ಟರ್ ಟೈಟಲ್ ತಮ್ಮದಾಗಿಸಿಕೊಂಡರು. ಅದಕ್ಕೂ ಮುನ್ನವೇ ಏಷ್ಯನ್ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್‌ನ 9 ವರ್ಷದೊಳಗಿನ ವಿಭಾಗವನ್ನು ಬಾಲಕ ಗೆದ್ದಾಗಿತ್ತು. 2018ರ ಮಾರ್ಚ್ ತಿಂಗಳಲ್ಲಿ, ಅಂದರೆ ಕೇವಲ 11 ವರ್ಷದವನಿದ್ದಾಗಲೇ ಅವರು ಅಂತಾರಾಷ್ಟ್ರೀಯ ಚೆಸ್ ಮಾಸ್ಟರ್ ಆದರು. 2019ರ ಜನವರಿ 15ರಂದು ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ ಓಪನ್‌ನಲ್ಲಿ ಗ್ರ್ಯಾಂಡ್‌ಮಾಸ್ಟರ್ ಪ್ರಶಸ್ತಿಯನ್ನು ಬಾಚಿಕೊಂಡರು. ಆ ದಿನ ಗುಕೇಶ್ ಪಾಲಿಗೆ ಐತಿಹಾಸಿಕ. ಏಕೆಂದರೆ ಚೆಸ್ ಗ್ರ್ಯಾಂಡ್ ಮಾಸ್ಟರ್ ಖ್ಯಾತಿ ಪಡೆಯುವಾಗ ಅವರ ವಯಸ್ಸು ಇನ್ನೂ 12 ವರ್ಷ, 7 ತಿಂಗಳು ಮತ್ತು 17 ದಿನಗಳು ಮಾತ್ರ. ಅಂದರೆ ಈ ಹಿರಿಮೆಗೆ ಭಾಜನರಾದ ಮೂರನೇ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದ್ದು.
ಆ ಸಮಯದಲ್ಲಿ ಗುಕೇಶ್ ಅವರ ಭಿನ್ನ ಕಾರ್ಯತಂತ್ರ ಮತ್ತು ಅನನ್ಯ ತಿಳುವಳಿಕೆಯ ವಿಧಾನವನ್ನು ಗುರುತಿಸಿದವರು ಅವರ ಆಗಿನ ತರಬೇತುದಾರ ಹಾಗೂ ಭಾರತೀಯ ಗ್ರ್ಯಾಂಡ್ ಮಾಸ್ಟರ್ ವಿಷ್ಣು ಪ್ರಸನ್ನ. ಅವರ ಪ್ರತಿಭೆಗೆ ತಕ್ಕಂತೆ ಆಟದ ಇನ್ನಷ್ಟು ಟ್ರಿಕ್ಸ್ ಹೇಳಿಕೊಟ್ಟರು. ಮುಂದಿನ 16 ತಿಂಗಳ ಅವಧಿಯಲ್ಲಿ, ಗುಕೇಶ್ ಅವರು ತಮ್ಮ GM ಮಾನದಂಡಗಳನ್ನು ಪೂರೈಸಲು 13 ದೇಶಗಳಿಗೆ ಪ್ರಯಾಣಿಸಿದರು. 30 ಪಂದ್ಯಾವಳಿಗಳಲ್ಲಿ 276 ಆಟಗಳಲ್ಲಿ ಆಡಿ ಮಿಂಚಿದರು.
ಗುಕೇಶ್ ಸಾಧನೆಯ ಹಾದಿಯಲ್ಲಿ ಹಲವು ಮೈಲಿಗಲ್ಲು
- 12 ವರ್ಷದೊಳಗಿನವರ ವಿಶ್ವ ಯುವ ಚೆಸ್ ಚಾಂಪಿಯನ್‌ಶಿಪ್ ಗೆಲುವು
- ಏಷ್ಯನ್ ಯೂತ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಐದು ಚಿನ್ನದ ಪದಕ
- 2022ರಲ್ಲಿ FIDE ಚೆಸ್ ಒಲಿಂಪಿಯಾಡ್‌ನಲ್ಲಿ ವೈಯಕ್ತಿಕ ಚಿನ್ನ (11 ಆಟಗಳಲ್ಲಿ ಅತ್ಯುತ್ತಮ 9 ಅಂಕ). ಈವೆಂಟ್‌ನಲ್ಲಿ ಭಾರತಕ್ಕೆ ಕಂಚಿನ ಪದಕಕ್ಕೆ ನೆರವು.
- 2022ರಲ್ಲಿ 2700 ಚೆಸ್ ರೇಟಿಂಗ್ ಸಾಧಿಸಿದ ವಿಶ್ವದ ಮೂರನೇ ಕಿರಿಯ ಆಟಗಾರ. 2023ರಲ್ಲಿ 2750 ರೇಟಿಂಗ್ ತಲುಪಿದ ಕಿರಿಯ ಆಟಗಾರ.
- 2023ರ ಸೆಪ್ಟೆಂಬರ್‌ನಲ್ಲಿ ಅವರು ವಿಶ್ವದ 8ನೇ ಶ್ರೇಯಾಂಕ ಪಡೆದರು. ಇದು ಐತಿಹಾಸಿಕ ಸಾಧನೆ. ಭಾರತದ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಅವರು 37 ವರ್ಷಗಳಿಗೂ ಹೆಚ್ಚು ಕಾಲ ಹೊಂದಿದ್ದ ಸ್ಥಾನವನ್ನು ಗುಕೇಶ್ ತಮ್ಮದಾಗಿಸಿಕೊಂಡರು. ಭಾರತದ ಅಗ್ರ ಶ್ರೇಯಾಂಕದ ಆಟಗಾರನಾದರು.
- 2024 ಏಪ್ರಿಲ್‌ನಲ್ಲಿ ಟೊರೊಂಟೊದಲ್ಲಿ ನಡೆದ ಈವೆಂಟ್‌ನಲ್ಲಿ ಗುಕೇಶ್ ಮತ್ತೊಮ್ಮೆ ಚೆಸ್ ಜಗತ್ತಿನ ಗಮನ ಸೆಳೆದರು. ಇದೇ ಮೊದಲ ಬಾರಿಗೆ ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಿ, 9/14 ಸ್ಕೋರ್‌ನೊಂದಿಗೆ ಈವೆಂಟ್ ಗೆದ್ದರು. ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಗೆದ್ದ ಅತ್ಯಂತ ಕಿರಿಯ ಆಟಗಾರ ಗುಕೇಶ್.
ಇದನ್ನೂ ಓದಿ | ಒತ್ತಡ ನಿಭಾಯಿಸೋದು ಹೇಗೆ? ಮಾನಸಿಕ ಆರೋಗ್ಯಕ್ಕೆ ಚೆಸ್ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್ ಟಿಪ್ಸ್
ಬುಡಾಪೆಸ್ಟ್‌ನಲ್ಲಿ ನಡೆದ 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ 10ರಲ್ಲಿ 9 ಅಂಕಗಳನ್ನು ಗಳಿಸಿದರು. ವೈಯಕ್ತಿಕ ಚಿನ್ನ ಮಾತ್ರವಲ್ಲದೆ ತಮ್ಮ ತಂಡವು ಮೊದಲ ಬಾರಿಗೆ ಚಿನ್ನ ಗೆಲ್ಲುವಲ್ಲಿ ನೆರವಾದರು.
ವಿಶ್ವ ಚೆಸ್ ಚಾಂಪಿಯನ್‌ಶಿಪ್ ಫೈನಲ್ ತಲುಪಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಗುಕೇಶ್ ಪಾತ್ರರಾದರು. ಅವರು ತಮ್ಮ ರೋಲ್ ಮಾಡೆಲ್ ವಿಶ್ವನಾಥನ್ ಆನಂದ್ ಅವರ ಹೆಜ್ಜೆಗಳನ್ನು ಅನುಸರಿಸಿದ್ದಾರೆ.
ಚೆಸ್‌ನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಪರ್ಧಿಸಿದ ಮೊದಲ ಹದಿಹರೆಯದ ಆಟಗಾರ ಎಂಬ ದಾಖಲೆಯೂ ಇವರದ್ದು.
ಅಂತಾರಾಷ್ಟ್ರೀಯ ಚೆಸ್ ಬದುಕಿನ ಆರಂಭದಲ್ಲಿ ಸತತ ವಿದೇಶ ಪ್ರಯಾಣಗಳಿಗೆ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದ ಗುಕೇಶ್ ಕುಟುಂಬಕ್ಕೆ, ಕುಟುಂಬ ಹಾಗೂ ಸ್ನೇಹಿತರೇ ನೆರವಾಗಿದ್ದರು. ಆದರೆ, ಈಗ ಹಣಕಾಸಿನ ಚಿಂತೆಯಿಲ್ಲ. ಅಂತಾರಾಷ್ಟ್ರೀಯ ಚೆಸ್ ಸಾಧಕನಿಗೆ ಪ್ರಾಯೋಜಕತ್ವ ನೀಡಲು, ಹಲವು ಪ್ರಾಯೋಜಕರು ಮುಂದೆ ಬರುತ್ತಿದ್ದಾರೆ. ಸದ್ಯ ವೆಸ್ಟ್‌ಬ್ರಿಡ್ಜ್ ಕ್ಯಾಪಿಟಲ್ ಗುಕೇಶ್ ಪ್ರಾಯೋಜಕತ್ವ ವಹಿಸಿಕೊಂಡಿದೆ.