ಕನ್ನಡ ಸುದ್ದಿ  /  Karnataka  /  Lok Sabha Election 2024 35 Thousand New Voters 17 96 Lakh Total Voters In Dakshina Kannada Constituency Hsm

Lok Sabha Election 2024: ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 35 ಸಾವಿರ ಹೊಸ ಮತದಾರರು ಸೇರಿ 17.96 ಲಕ್ಷ ಮಂದಿಗಿದೆ ಮತದಾನದ ಹಕ್ಕು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಟ್ಟು ಮತದಾರ ಸಂಖ್ಯೆ, ಹೊಸ ಮತದಾರರು, ಮತಗಟ್ಟೆಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ವಿವರ ಇಲ್ಲಿದೆ. (ವರದಿ: ಹರೀಶ್ ಮಾಂಬಾಡಿ)

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ಎದುರಿಸುವ ಸಂಬಂಧ ಮಂಗಳೂರಿನಲ್ಲಿ ಸಭೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ಎದುರಿಸುವ ಸಂಬಂಧ ಮಂಗಳೂರಿನಲ್ಲಿ ಸಭೆ ನಡೆಯಿತು.

ಮಂಗಳೂರು (ದಕ್ಷಿಣ ಕನ್ನಡ): ಸುಡುಬಿಸಿಲಲ್ಲಿ ಉರಿಯುತ್ತಿರುವ ಕರಾವಳಿಯಲ್ಲೀಗ ಚುನಾವಣೆ ಕಾವು. ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 26 ರಂದು ಚುನಾವಣೆ ನಡೆಯಲಿದೆ. ಇದಕ್ಕೆ ಪೂರಕವಾದ ಸಿದ್ಧತೆಗಳು ನಡೆಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ಸಭೆ ನಡೆಯಿತು. ಮತದಾರರನ್ನು ಆಕರ್ಷಿಸಲು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆನಂದ್ ನೇತೃತ್ವದಲ್ಲಿ ಕೆಲಸಕಾರ್ಯಗಳು ಆರಂಭಗೊಂಡಿದ್ದು, 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ 68.8 ಮತದಾನವಾಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.78ರಷ್ಟು ಆಗಿತ್ತು. ಮಂಗಳೂರು ನಗರ, ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಸುಮಾರು 57 ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾಗಿತ್ತು. ಈ ಕಾರಣದಿಂದ ಮತದಾರರನ್ನು ಮತಗಟ್ಟೆಗಳಿಗೆ ಆಕರ್ಷಿಸಲು ಸ್ವೀಪ್ ನಿಂದ ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮತದಾರರು ಹಾಗೂ ಇತರೆ ಮಾಹಿತಿ

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 17,96,826. ಇವರಲ್ಲಿ ಪುರುಷರು 8,77,438, ಮಹಿಳೆಯರು 9,19,321. ತೃತೀಯ ಲಿಂಗಿ ಮತದಾರರು 67. ಮೊದಲ ಬಾರಿ 35,689 ಮಂದಿ ಮತ ಚಲಾಯಿಸಲಿದ್ದಾರೆ. ಇವರಲ್ಲಿ ಯುವಕರು 18,310. ಯುವತಿಯರು 17,376. ತೃತೀಯ ಲಿಂಗಿಗಳು 3. ಹಿರಿಯ ಮತದಾರರ ಪೈಕಿ 85 ವರ್ಷಕ್ಕೆ ಮೇಲ್ಪಟ್ಟವರು 13,159 ಮಂದಿ ಇದ್ದಾರೆ. 90 ವರ್ಷಕ್ಕೆ ಮೇಲ್ಪಟ್ಟವರು 8,269, ಶತಾಯುಷಿಗಳು 459, ಒಟ್ಟು 21,887 ಮತದಾರರಿದ್ದಾರೆ. ಹಾಗೆಯೇ 14,195 ಅಂಗವಿಕಲ ಮತದಾರರು ಇದ್ದಾರೆ.

ಮತಗಟ್ಟೆಗಳ ವಿವರ ಹೀಗಿದೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1876 ಮತಗಟ್ಟೆಗಳಿವೆ. ಬೆಳ್ತಂಗಡಿಯಲ್ಲಿ 241, ಮೂಡುಬಿದಿರೆಯಲ್ಲಿ 219, ಮಂಗಳೂರು ನಗರ ಉತ್ತರದಲ್ಲಿ 254, ದಕ್ಷಿಣದಲ್ಲಿ 249, ಮಂಗಳೂರಿನಲ್ಲಿ 210, ಬಂಟ್ವಾಳದಲ್ಲಿ 249, ಪುತ್ತೂರಿನಲ್ಲಿ 221, ಸುಳ್ಯದಲ್ಲಿ 233 ಮತಗಟ್ಟೆಗಳು ಇವೆ.

ಸಭೆ ಸಮಾರಂಭ ನಡೆಸುವವರ ಗಮನಕ್ಕೆ: ಸಭೆ, ಸಮಾರಂಭ ನಡೆಸುವ ಸಾರ್ವಜನಿಕರು ಮತ್ತು ರಾಜಕೀಯ ಪಕ್ಷದವರು ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಗಳ ಅನುಮತಿ ಪಡೆದುಕೊಳ್ಳಬೇಕು. ಧಾರ್ಮಿಕ ಕಾರ್ಯಕ್ರಮಗಳು, ರಾಜಕೀಯ ಸಭೆ, ಪ್ರಚಾರ ಸಭೆಗಳನ್ನು ನಡೆಸಲು ಸಾರ್ವಜನಿಕರು ಅನುಮತಿ ಪಡೆದುಕೊಳ್ಳಬೇಕು. ಇದಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏಕಗವಾಕ್ಷಿ ಕೇಂದ್ರ ತೆರೆಯಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ಫ್ಲೈಯಿಂಗ್ ಸ್ಕ್ವಾಡ್, ಸ್ಟಾಟಿಕ್ ಸರ್ವೈಲೆನ್ಸ್ ಟೀಮ್, ವಿಡಿಯೊ ಸರ್ವೈಲೆನ್ಸ್ ಟೀಮ್ ರಚಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ದೂರು ದಾಖಲಿಸಲು ಅವಕಾಶವಿದೆ.

ಚುನಾವಣಾ ವೇಳಾಪಟ್ಟಿ ಹೀಗಿದೆ: ಚುನಾವಣಾ ಅಧಿಸೂಚನೆ ಹೊರಡಿಸುವ ದಿನಾಂಕ ಮಾರ್ಚ್ 28. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 4. ನಾಮಪತ್ರ ಪರಿಶೀಲನೆ ದಿನಾಂಕ ಏಪ್ರಿಲ್ 5. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಏಪ್ರಿಲ್ 8. ಚುನಾವಣೆ ದಿನಾಂಕ ಏಪ್ರಿಲ್ 26. ಮತ ಎಣಿಕೆ ಜೂನ್ 4.

ಸಹಾಯಕ ಚುನಾವಣಾಧಿಕಾರಿಗಳು ಇವರು: ಬೆಳ್ತಂಗಡಿಗೆ ಕೆಂಪೇಗೌಡ ಎಚ್, ಮೂಡಿಬಿದಿರೆಗೆ ಕೆ.ರಾಜು, ಮಂಗಳೂರು ನಗರ ಉತ್ತರಕ್ಕೆ ಕೆ.ಜಾನ್ಸನ್, ಮಂಗಳೂರು ನಗರ ದಕ್ಷಿಣಕ್ಕೆ ಗಿರೀಶ್ ನಂದನ್, ಮಂಗಳೂರು – ಹರ್ಷವರ್ಧನ, ಬಂಟ್ವಾಳಕ್ಕೆ ಉದಯ ಶೆಟ್ಟಿ, ಪುತ್ತೂರಿಗೆ ಜುಬಿನ್ ಮಹಾಪಾತ್ರ, ಸುಳ್ಯಕ್ಕೆ ಡಾ. ಜಗದೀಶ್ ಕೆ ನಾಯ್ಕ್.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 23 ಚೆಕ್ ಪೋಸ್ಟ್ ರಚನೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಎಂಟು ಮಾದರಿ ನೀತಿ ಸಂಹಿತೆ ತಂಡಗಳು, 24 ವಿಡಿಯೋ ವಿಚಕ್ಷಣ ತಂಡಗಳು, 8 ವಿಡಿಯೋ ಪರಿಶೀಲನಾ ತಂಡ, 72 ಫ್ಲೈಯಿಂಗ್ ಸ್ಕ್ವ್ಯಾಡ್, 186 ಸೆಕ್ಟರ್ ಅಧಿಕಾರಿಗಳ ತಂಡ ರಚನೆಗೊಂಡಿದ್ದು, 23 ಚೆಕ್ ಪೋಸ್ಟ್ ರಚಿಸಲಾಗಿದೆ. 9 ಅಂತಾರಾಜ್ಯ, 7 ಅಂತರ್ಜಿಲ್ಲಾ ಹಾಗೂ 7 ಸ್ಥಳೀಯ ಚೆಕ್ ಪೋಸ್ಟ್ ಗಳಿವೆ. ದೂರುಗಳಿಗೆ ಟೋಲ್ ಫ್ರೀ ಸಂಖ್ಯೆ 1950 ಸಂಪರ್ಕಿಸಬಹುದು. (ವರದಿ: ಹರೀಶ್ ಮಾಂಬಾಡಿ)

IPL_Entry_Point