ಕನ್ನಡ ಸುದ್ದಿ  /  ಕರ್ನಾಟಕ  /  Lok Sabha Elections 2024: ಮಂಡ್ಯ ಟಿಕೆಟ್‌ಗೆ ಕುಮಾರಸ್ವಾಮಿ- ಸುಮಲತಾ ಜಿದ್ದಾಜಿದ್ದಿ, ಮರುಕಳಿಸುವುದೇ 2019ರ ಸನ್ನಿವೇಶ

Lok Sabha Elections 2024: ಮಂಡ್ಯ ಟಿಕೆಟ್‌ಗೆ ಕುಮಾರಸ್ವಾಮಿ- ಸುಮಲತಾ ಜಿದ್ದಾಜಿದ್ದಿ, ಮರುಕಳಿಸುವುದೇ 2019ರ ಸನ್ನಿವೇಶ

Mandya Politics ಮಂಡ್ಯ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಟಿಕೆಟ್‌ ಗೆ ತುರುಸಿನ ಸ್ಪರ್ಧೆಯೇ ಏಪರ್ಟ್ಟಿದೆ. ಕಳೆದ ಬಾರಿ ಎದುರಾಳಿಗಳಾಗಿದ್ದ ಜೆಡಿಎಸ್‌ ಹಾಗೂ ಸುಮಲತಾ ಈ ಬಾರಿ ಟಿಕೆಟ್‌ ಪಡೆಯಲು ಬೆವರು ಹರಿಸುವ ಸ್ಥಿತಿಯಿದೆ.

ಮಂಡ್ಯದಲ್ಲಿ ಟಿಕೆಟ್‌ಗೆ ಸುಮಲತಾ ಹಾಗೂ ಅಂಬರೀಷ್‌ ನಡುವೆ ಸ್ಪರ್ಧೆ  ಏರ್ಪಟ್ಟಿದೆ.
ಮಂಡ್ಯದಲ್ಲಿ ಟಿಕೆಟ್‌ಗೆ ಸುಮಲತಾ ಹಾಗೂ ಅಂಬರೀಷ್‌ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಮಂಡ್ಯ: ಲೋಕಸಭೆ ಚುನಾವಣೆಗೆ ಇನ್ನೂ ದಿನಾಂಕಗಳು ಪ್ರಕಟವಾಗದೇ ಇದ್ದರೂ ರಾಜಕಾರಣಕ್ಕೆ ಹೆಸರುವಾಸಿಯಾದ ಮಂಡ್ಯದಲ್ಲಿ ಈಗಾಗಲೇ ಅಭ್ಯರ್ಥಿಯಾರಾಗಬಹುದು ಎನ್ನುವ ಚರ್ಚೆಗಳು ಜೋರಾಗಿದೆ. ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್‌ ಮೈತ್ರಿ ಬದಲಾಗಿದೆ. ಹಿಂದಿನ ಬಾರಿ ಕೈ ಕುಲುಕಿ ಈ ಬಾರಿ ಕಮಲವನ್ನು ಹಿಡಿದುಕೊಂಡಿದೆ. ಮಂಡ್ಯದಲ್ಲಿ ನಟಿ ಹಾಗೂ ಸಂಸದೆ ಸುಮಲತಾ ಕಳೆದ ಬಾರಿ ಜೆಡಿಎಸ್‌ ಅನ್ನು ಸೋಲಿಸಿದ್ದರು. ನಂತರ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು. ಈ ಬಾರಿ ಮೈತ್ರಿ ಕಾರಣಕ್ಕೆ ಇಲ್ಲಿ ಜೆಡಿಎಸ್‌ ಸ್ಪರ್ಧೆ ಖಚಿತ. ಇದರಿಂದ ಸುಮಲತಾ ರಾಜಕೀಯ ನಡೆ ಹೇಗಿರಬಹುದು ಎನ್ನುವ ಚರ್ಚೆ ಹುಟ್ಟುಹಾಕಿದೆ. ಜೆಡಿಎಸ್‌ನಿಂದ ಯಾರು ಅಭ್ಯರ್ಥಿಯಾಗಬಹುದು. ಕಾಂಗ್ರೆಸ್‌ ಯಾವ ರೀತಿಯ ತಂತ್ರ ಹೆಣೆಯಲಿದೆ ಎನ್ನುವ ಚರ್ಚೆಗಳಿಗೇನೂ ಮಂಡ್ಯದಲ್ಲಿ ಕಡಿಮೆಯೇನೂ ಇಲ್ಲ.

ಟ್ರೆಂಡಿಂಗ್​ ಸುದ್ದಿ

ಸುಮಲತಾ ತಂತ್ರವೇನು

2019ರಲ್ಲಿ ಗೆದ್ದು 5 ವರ್ಷ ಸಂಸದರಾಗಿರುವ ಸುಮಲತಾ ಅಂಬರೀಷ್‌ ಅವರಿಗೆ ಮತ್ತೆ ಚುನಾವಣೆಯಲ್ಲಿ ನಿಲ್ಲಬೇಕು ಎನ್ನುವ ಉತ್ಸಾಹವಿದೆ. ಚೆನ್ನಾಗಿ ಕೆಲಸ ಮಾಡಿದ್ದೇನೆ. ಜನರೊಂದಿಗೆ ಇದ್ದೇನೆ. ಮತ್ತೊಮ್ಮೆ ಏಕೆ ಸ್ಪರ್ಧಿಸಬಾರದು ಎನ್ನುವ ಬೇಡಿಕೆ ಅವರದ್ದು. ಬಿಜೆಪಿಗೆ ಬೆಂಬಲಿಸಿಕೊಂಡು ಬಂದಿದ್ದೇನೆ. ನನಗೆ ಮಂಡ್ಯದಿಂದಲೇ ಬಿಜೆಪಿ ಟಿಕೆಟ್‌ ಕೊಡಲಿ. ಬೇರೆ ಕಡೆಗೆ ಹೋಗುವುದಿಲ್ಲ ಎನ್ನುವುದು ಸುಮಲತಾ ಅವರ ಅಭಿಪ್ರಾಯ. ಇದನ್ನು ಖುದ್ದು ಮೋದಿ, ಅಮಿತ್‌ ಶಾ ಸಹಿತ ಬಿಜೆಪಿ ವರಿಷ್ಠ ನಾಯಕರ ಮುಂದೂ ಅವರು ಹೇಳಿ ಬಂದಿದ್ದಾರೆ. ಟಿಕೆಟ್‌ ಕೊಡದೇ ಇದ್ದರೆ ಮುಂದೆ ಏನಾಗುತ್ತದೋ ನೋಡೋಣ ಎನ್ನುವ ರೀತಿಯಲ್ಲಿ ಸುಮಲತಾ ಹೇಳಿಕೆ ನೀಡುತ್ತಿದ್ದಾರೆ.

ವರಿಷ್ಠರು ಯಾವುದೇ ಕಾರಣಕ್ಕೂ ದುಡುಕಬೇಡಿ ಎನ್ನುವ ಸಲಹೆಯನ್ನು ನೀಡಿದ್ದು, ಬೆಂಗಳೂರಿನಲ್ಲಿ ಅವಕಾಶ ಮಾಡಿಕೊಡುವ ಭರವಸೆಯನ್ನು ನೀಡಿದ್ದಾರೆ. ಆದರೆ ಸುಮಲತಾ ಅವರಿಗೆ ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧಿಸುವ ಇರಾದೆ ಇದ್ದಂತಿಲ್ಲ. ಮಂಡ್ಯದಲ್ಲೇ ಅವಕಾಶ ಮಾಡಿಕೊಡಿ ಎನ್ನುವ ಪಟ್ಟು ಹಿಡಿದಿದ್ದಾರೆ. ಇದರಿಂದ ವರಿಷ್ಠರಿಗೂ ಇದು ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಮಂಡ್ಯ ಕ್ಷೇತ್ರವನ್ನು ಬಹುತೇಕ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಸೂಚನೆಗಳು ದೊರೆಯುತ್ತಿರುವುದರಿಂದ ಇನ್ನಷ್ಟು ರಾಜಕೀಯ ರಂಗು ಮಂಡ್ಯದಲ್ಲಿ ಏರಲಿದೆ.

ಕಾಂಗ್ರೆಸ್‌ ನಡೆ ಏನು

ಹಿಂದಿನ ಅವಧಿಯಲ್ಲಿ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದ ಕಾರಣದಿಂದ ಅಭ್ಯರ್ಥಿ ಹಾಕದ ಕಾಂಗ್ರೆಸ್‌ ಈ ಬಾರಿ ಗೌರಿಬಿದನೂರು ಮೂಲದ ಉದ್ಯಮಿ ಸ್ಟಾರ್‌ ಚಂದ್ರು ಅವರ ಹೆಸರನ್ನು ಅಖೈರು ಮಾಡಿಕೊಂಡಿದೆ. ಸಂಪನ್ಮೂಲದ ಲೆಕ್ಕಾಚಾರದೊಂದಿಗೆ ಕಾಂಗ್ರೆಸ್‌ ಈಗಾಗಲೇ ಹೆಸರನ್ನು ಅಂತಿಮಗೊಳಿಸಿದೆ. ಚಂದ್ರು ಕೂಡ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ.

ಹಾಗೇನಾದರೂ ಬಿಜೆಪಿಯ ಆಹ್ವಾನವನ್ನು ಪರಿಗಣಿಸದೇ ಸುಮಲತಾ ಬಂಡಾಯ ಸ್ಪರ್ಧಿಸುವ ಹಂತಕ್ಕೆ ಹೋದರೆ ಕಾಂಗ್ರೆಸ್‌ ಅವರನ್ನು ಕೊನೆ ಕ್ಷಣದಲ್ಲಿ ಬೆಂಬಲಿಸಬಹುದು ಇಲ್ಲವೇ ಅಭ್ಯರ್ಥಿಯನ್ನಾಗಿ ಘೋಷಿಸಲೂಬಹುದು. ಜೆಡಿಎಸ್‌ನಿಂದ ಯಾರು ಅಭ್ಯರ್ಥಿಯಾಗಲಿದ್ಧಾರೆ ಎನ್ನುವುದರ ಮೇಲೆ ಅದು ನಿರ್ಣಯವಾಗಲಿದೆ ಎನ್ನುತ್ತವೆ ಕಾಂಗ್ರೆಸ್‌ ಮೂಲಗಳು.

ಜೆಡಿಎಸ್‌ನಿಂದ ಯಾರು

ಲೋಕಸಭೆ ಚುನಾವಣೆಗೆ ಈ ಬಾರಿ ಜೆಡಿಎಸ್‌ನಿಂದ ಯಾರು ಅಭ್ಯರ್ಥಿಯಾಗಬಹುದು ಎನ್ನುವ ಕುತೂಹಲ ಕ್ಷೇತ್ರದಲ್ಲಿ ಮನೆ ಮಾಡಿದೆ. ಹಿಂದಿನ ಬಾರಿ ನಿಂತು ಸೋತಿದ್ದ ನಿಖಿಲ್‌ ಕುಮಾರಸ್ವಾಮಿ, ಇಲ್ಲವೇ ಸ್ವತಃ ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಸ್ಪರ್ಧಿಸಬಹುದು ಎನ್ನುವ ಚರ್ಚೆಗಳಿವೆ. ಕುಮಾರಸ್ವಾಮಿ ಅವರು ತಾವೇ ಇಲ್ಲಿಂದ ನಿಂತು ಗೆದ್ದು ತಮ್ಮಿಂದ ತೆರವಾಗುವ ಚನ್ನಪಟ್ಟಣ ಕ್ಷೇತ್ರಕ್ಕೆ ಮಗನನ್ನು ನಿಲ್ಲಿಸುವ ಇರಾದೆಯಿದೆ. ಕೇಂದ್ರದಲ್ಲಿ ಮಂತ್ರಿಯೂ ಆಗಬಹುದು ಎನ್ನುವ ಲೆಕ್ಕಾಚಾರ. ಇದರ ನಡುವೆ ಸುಮಲತಾ ರಾಜಕೀಯ ಸನ್ನಿವೇಶ ನೋಡಿಕೊಂಡು ಕುಮಾರಸ್ವಾಮಿ ಇಲ್ಲವೇ ನಿಖಿಲ್‌ ಕುಮಾರಸ್ವಾಮಿ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವ ತೀರ್ಮಾನ ಮಾಡಿದರೆ ಇಲ್ಲಿಂದ ಮಾಜಿ ಸಚಿವ ಹಾಗೂ ಮಾಜಿ ಸಂಸದ ಸಿ.ಎಸ್‌.ಪುಟ್ಟರಾಜು ಕಣಕ್ಕೆ ಇಳಿಬಹುದು ಎನ್ನಲಾಗುತ್ತಿದೆ.

5 ವರ್ಷದ ಹಿಂದೆ

ಮಂಡ್ಯದಲ್ಲಿ5 ವರ್ಷದ ಹಿಂದೆ 2019ರಲ್ಲಿ ಇಂತಹುದೇ ಸನ್ನಿವೇಶ ನಿರ್ಮಾಣವಾಯಿತು. ಆಗ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಮೈತ್ರಿ ಏರ್ಪಟ್ಟು ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಯಿತು. ಜೆಡಿಎಸ್‌ನಿಂದ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಲಾಯಿತು.

ಆಗಷ್ಟೇ ಪತಿ ಅಂಬರೀಷ್‌ ತೀರಿಕೊಂಡಿದ್ದರಿಂದ ಅನುಕಂಪದ ವಾತಾವರಣವೂ ಇತ್ತು. ಆಗ ಪಕ್ಷೇತರರಾಗಿ ಸುಮಲತಾ ಅಂಬರೀಷ್‌ ಕಣಕ್ಕೆ ಇಳಿದರು. ಬಿಜೆಪಿ ಕೂಡ ಅವರನ್ನು ಬೆಂಬಲಿಸಿತ್ತು. ಕಾಂಗ್ರೆಸ್‌ನಿಂದ ಅಭ್ಯರ್ಥಿಯೇ ಇಲ್ಲದ ಕಾರಣಕ್ಕೆ ಬಹುತೇಕರು ಸುಮಲತಾ ಅವರ ಪರವೇ ಕೆಲಸ ಮಾಡುವಂತೆ ಸಂದೇಶ ರವಾನಿಸಿದ್ದರು. ಸುಮಲತಾ ಸೆರಗೊಡ್ಡಿ ಮತ ನೀಡುವಂತೆ ಕೋರಿದ್ದೂ ಸಹಕಾರಿಯಾಗಿತ್ತು.

ಇದಲ್ಲದೇ ಜೆಡಿಎಸ್‌ನಲ್ಲೂ ಹೇಳಿಕೆಗಳು ಸುಮಲತಾ ಅವರ ಮತ ಗಳಿಕೆ ಹೆಚ್ಚುವಂತೆ ಮಾಡಿದ್ದವು, ಸುಮಲತಾ ಅವರ ಪರವಾಗಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ನೀಡಿದ ಹೇಳಿಕೆ, ಮಹಿಳೆ ಎನ್ನುವುದನ್ನೂ ಗಮನಿಸದೇ ಪಕ್ಷದ ನಾಯಕರು ಮಾತನಾಡಿದ್ದು ಸುಮಲತಾ ಗೆಲುವಿನ ಅಂತರವನ್ನು ಹೆಚ್ಚಿಸಿತ್ತು.

ಈ ಬಾರಿಯೂ ಸುಮಲತಾ ಮಂಡ್ಯದಿಂದಲೇ ಸ್ಪರ್ಧೆ ಮಾಡಿದರೆ ರಾಜಕಾರಣ ಮತ್ತೊಂದು ದಿಕ್ಕು ಬದಲಿಸಬಹುದು ಎನ್ನುವ ಚರ್ಚೆಗಳು ಕ್ಷೇತ್ರಾದ್ಯಂತ ನಡೆದಿವೆ.

IPL_Entry_Point