ಕನ್ನಡ ಸುದ್ದಿ  /  Karnataka  /  Bengaluru News Karnataka Govt Retracts Asking Companies To Disclose Kannadigas Employed It Minister Kharge Clarifies Uks

ಕನ್ನಡಿಗ ಉದ್ಯೋಗಿಗಳ ಸಂಖ್ಯೆ ನಿಯಮ ಜಾರಿಗೆ ಬಂದಿಲ್ಲ, ಚರ್ಚೆ ನಡೆದಿದೆ ಅಷ್ಟೆ; ಐಟಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟೀಕರಣ

ಕರ್ನಾಟಕದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳಲ್ಲಿರುವ ಕನ್ನಡಿಗ ಉದ್ಯೋಗಿಗಳ ಸಂಖ್ಯೆ ಬಹಿರಂಗಪಡಿಸುವ ನಿಯಮ ಜಾರಿಗೆ ಬಂದಿಲ್ಲ. ಅದರ ಕುರಿತು ಚರ್ಚೆ ನಡೆದಿದೆ ಅಷ್ಟೆ ಎಂದು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

ಕನ್ನಡಿಗ ಉದ್ಯೋಗಿಗಳ ಸಂಖ್ಯೆ ನಿಯಮ ಜಾರಿಗೆ ಬಂದಿಲ್ಲ, ಅದರ ಬಗ್ಗೆ ಚರ್ಚೆ ನಡೆದಿದೆ ಅಷ್ಟೆ ಎಂದು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಈ ಹಿಂದೆ ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ನಿಯಮ ರೂಪಿಸುತ್ತೇವೆ ಎಂದು ಹೇಳಿದ್ದರು.
ಕನ್ನಡಿಗ ಉದ್ಯೋಗಿಗಳ ಸಂಖ್ಯೆ ನಿಯಮ ಜಾರಿಗೆ ಬಂದಿಲ್ಲ, ಅದರ ಬಗ್ಗೆ ಚರ್ಚೆ ನಡೆದಿದೆ ಅಷ್ಟೆ ಎಂದು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಈ ಹಿಂದೆ ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ನಿಯಮ ರೂಪಿಸುತ್ತೇವೆ ಎಂದು ಹೇಳಿದ್ದರು.

ಬೆಂಗಳೂರು: ಕರ್ನಾಟಕದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳು ತಮ್ಮಲ್ಲಿ ಉದ್ಯೋಗದಲ್ಲಿರುವ ಕನ್ನಡಿಗರ ಸಂಖ್ಯೆಯನ್ನು ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಬೇಕೆಂಬ ನಿಯಮ ಜಾರಿಗೊಳಿಸುವ ವಿಚಾರ ತೀವ್ರ ಟೀಕೆಗೆ ಒಳಗಾಗಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಈ ವಿಚಾರ ಪ್ರಸ್ತಾಪಿಸಿದರೆ, ಐಟಿ ಸಚಿವ ಪ್ರಿಯಾಂಕ್ ಖರ್ಗೆ, ಅಂತಹ ಯಾವುದೇ ಕಾಯ್ದೆ ಮಂಡನೆಯಾಗಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಬೆಂಗಳೂರಿನಲ್ಲಿರುವ ಐಟಿ, ಬಿಟಿ ಕಂಪನಿಗಳು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಪ್ರಸ್ತಾಪಿಸಿದ ವಿಚಾರಕ್ಕೆ ತೀವ್ರ ಟೀಕೆ, ಅಸಮಾಧಾನವ ವ್ಯಕ್ತಪಡಿಸಿದ್ದವು. ಹೀಗಾಗಿ ಸರ್ಕಾರ ಕೂಡ ತನ್ನ ನಿಲುವಿನಿಂದ ಹಿಂದೆ ಸರಿದಿದೆ ಎಂಬಂತೆ, ಐಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವ್ಯಕ್ತವಾಗಿದೆ.

ಕರ್ನಾಟಕಕ್ಕೆ ಬೇಕಾಗಿರುವುದು ಹೂಡಿಕೆ, ಹೂಡಿಕೆದಾರರ ಹಿತವೂ ಗಮನದಲ್ಲಿದೆ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಕರ್ನಾಟಕದ ಅಭಿವೃದ್ಧಿಯಾಗಬೇಕು. ಹೀಗಾಗಿ ಹೂಡಿಕೆ ಬರಬೇಕು. ಅದರ ಕಡೆಗೆ ಕರ್ನಾಟಕ ಸರ್ಕಾರ ಹೆಚ್ಚು ಗಮನಹರಿಸುತ್ತದೆಯೇ ಹೊರತು ಬೇರಾವುದನ್ನೂ ಅಲ್ಲ. ಹೂಡಿಕೆದಾರರ ಹಿತವನ್ನೂ ಸರ್ಕಾರ ಗಮನದಲ್ಲಿರಿಸಿಕೊಂಡೇ ಕೆಲಸ ಮಾಡುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಶೇ 60 ರಷ್ಟು ಕನ್ನಡದ ಬಗ್ಗೆ ಜಾಹೀರಾತು ಫಲಕ ಅಥವಾ ನಾಮಫಲಕಗಳಲ್ಲಿ ಬಳಸಬೇಕು ಎಂಬ ವಿಷಯ ಬಂದಾಗ ಪರಿಷತ್ತಿನ ಮತ್ತು ವಿಧಾನಸಭೆಯ ಸದಸ್ಯರಿಂದ ಈ ರೀತಿಯ ಇತರ ಸಲಹೆಗಳು ಬಂದವು. ಅದನ್ನು ಚರ್ಚಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಕನ್ನಡಿಗರಿಗೆ ಹೆಚ್ಚು ಉದ್ಯೋಗಾವಕಾಶ ಸಿಕ್ಕರೆ, ಕರ್ನಾಟಕದ ಅಭಿವೃದ್ಧಿ ಎಂದು ನೆನಪಿಸಿದ ಸಚಿವ ಖರ್ಗೆ

ಕನ್ನಡಿಗರು, ಕನ್ನಡ ಬಳಕೆ ಮುಂತಾದ ವಿಚಾರಗಳ ಈ ನಿಯಮಕ್ಕೆ ಸೇರ್ಪಡೆ ಮತ್ತು ಪರಿಷ್ಕರಣೆಗಳನ್ನು ನಿರ್ಧರಿಸುವ ಸರಿಯಾದ ಚೌಕಟ್ಟನ್ನು ರಚಿಸುವ ಸಮಿತಿಯನ್ನು ರೂಪಿಸಲಾಗಿದೆ. ಅದರ ಕೆಲಸ ಈಗಾಗಲೇ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

ವಿಧಾನಪರಿಷತ್ ಸದಸ್ಯರಿಂದ ಸಲಹೆ ಬಂದ ಪ್ರಕಾರ, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾದರೆ ಕರ್ನಾಟಕಕ್ಕೆ ಹೆಚ್ಚಿನ ಆರ್ಥಿಕ ಸಮೃದ್ಧಿಯಾಗುತ್ತದೆ. ಇದು ಕೂಡ ಚಿಂತನೆಗೆ ಸೂಕ್ತವಾದ ವಿಚಾರವೇ ಆಗಿದ್ದು, ಮಾತುಕತೆ ಮೂಲಕ ಎಲ್ಲವನ್ನೂ ಇತ್ಯರ್ಥಗೊಳಿಸಿ ಸೂಕ್ತ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಸಚಿವ ಖರ್ಗೆ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದೇನು?

ಕರ್ನಾಟಕದಲ್ಲಿರುವ ಎಂಎನ್‌ಸಿಗಳು ತಮ್ಮಲ್ಲಿ ಉದ್ಯೋಗದಲ್ಲಿರುವ ಕನ್ನಡಿಗರ ಸಂಖ್ಯೆಯನ್ನು ತಮ್ಮ ಕ್ಯಾಂಪಸ್‌ಗಳಲ್ಲಿ ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಮಂಗಳವಾರ ರಾಜ್ಯ ವಿಧಾನ ಪರಿಷತ್ತಿನಲ್ಲಿ ಹೇಳಿದ್ದರು. ಇದಕ್ಕಾಗಿ ನಿಯಮ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ನಿಯಮ ಪಾಲಿಸಲು ವಿಫಲರಾದರೆ ಅಂತಹ ಕಂಪನಿಗಳ ಪರವಾನಗಿ ರದ್ದುಗೊಳಿಸಬಹುದು ಎಂದೂ ಹೇಳಿದ್ದರು.

ಅವರ ಈ ಹೇಳಿಕೆಯು ಉದ್ಯಮವಲಯದಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಯಿತು. ಇನ್ಫೋಸಿಸ್ ಮಂಡಳಿಯ ಮಾಜಿ ಸದಸ್ಯ ಟಿವಿ ಮೋಹನ್‌ದಾಸ್ ಪೈ ಅವರಂತಹ ಪ್ರಮುಖ ನಾಯಕರು, ಭಾಷಾಭಿಮಾನದ ಹೆಸರಿನಲ್ಲಿ ಕಂಪನಿಗಳನ್ನು ನಷ್ಟಕ್ಕೆ, ಅಪಾಯಕ್ಕೆ ತಳ್ಳದಂತೆ ಸರ್ಕಾರವನ್ನು ಎಚ್ಚರಿಸಿದರು.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point