ಕರ್ನಾಟಕದಲ್ಲಿ ಪ್ರತಿ ವರ್ಷ 86000ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣ ವರದಿ; ಶ್ವಾಸಕೋಶ, ಸ್ತನ ಕ್ಯಾನ್ಸರ್ ಪ್ರಮಾಣವೇ ಹೆಚ್ಚು
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಪ್ರತಿ ವರ್ಷ 86000ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣ ವರದಿ; ಶ್ವಾಸಕೋಶ, ಸ್ತನ ಕ್ಯಾನ್ಸರ್ ಪ್ರಮಾಣವೇ ಹೆಚ್ಚು

ಕರ್ನಾಟಕದಲ್ಲಿ ಪ್ರತಿ ವರ್ಷ 86000ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣ ವರದಿ; ಶ್ವಾಸಕೋಶ, ಸ್ತನ ಕ್ಯಾನ್ಸರ್ ಪ್ರಮಾಣವೇ ಹೆಚ್ಚು

ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಕ್ಯಾನ್ಸರ್ ಪ್ರಕರಣ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಪ್ರತಿ ವರ್ಷ ಸಾವಿರಾರು ಪ್ರಕರಣ ವರದಿಯಾಗುತ್ತಿವೆ. ರಾಜ್ಯದಲ್ಲಿ ಅಂದಾಜು 86,563 ಹೊಸ ಪ್ರಕರಣಗಳು ವರದಿಯಾಗುತ್ತವೆ ಎಂದು ಅಂಕಿ-ಅಂಶಗಳು ತಿಳಿಸಿವೆ. ಇದರಲ್ಲಿ ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್‌ ಪ್ರಮಾಣವೇ ಹೆಚ್ಚು.

ಕರ್ನಾಟಕದಲ್ಲಿ ಪ್ರತಿ ವರ್ಷ 86000ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣ ವರದಿ
ಕರ್ನಾಟಕದಲ್ಲಿ ಪ್ರತಿ ವರ್ಷ 86000ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣ ವರದಿ (Pixabay)

ಭಾರತೀಯರನ್ನು ಹೆಚ್ಚಾಗಿ ಕಾಡುವ ಮಾರಕ ರೋಗಗಳಲ್ಲಿ ಕ್ಯಾನ್ಸರ್‌ ಪಾಲು ತುಂಬಾ ದೊಡ್ಡದು. ವಿಶ್ವದಲ್ಲೇ ಹೆಚ್ಚು ಕ್ಯಾನ್ಸರ್‌ ರೋಗಿಗಳಿರುವ ದೇಶಗಳಲ್ಲಿ ಭಾರತವೂ ಒಂದು. ಪುರುಷರು ಹಾಗೂ ಮಹಿಳೆಯರೆನ್ನದೆ ವರ್ಷವೂ ಹಲವು ಮಂದಿ ಈ ಮಾರಕ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಕ್ಯಾನ್ಸರ್ ರಿಜಿಸ್ಟ್ರಿ ಮಾಹಿತಿಯ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಸುಮಾರು 14 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತವೆ. ಇದರಲ್ಲಿ ಕರ್ನಾಟಕದಲ್ಲಿಯೇ ಅಂದಾಜು 86,563 ಹೊಸ ಪ್ರಕರಣಗಳು ವರದಿಯಾಗುತ್ತವೆ. ಒಟ್ಟಾರೆ 2.3 ಲಕ್ಷ ಕ್ಯಾನ್ಸರ್ ಪ್ರಕರಣಗಳು ರಾಜ್ಯದಲ್ಲಿ ಕಂಡುಬರುತ್ತದೆ ಎಂದು ತಿಳಿದುಬಂದಿದೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೇ ಸರಾಸರಿ 14,630 ಕ್ಯಾನ್ಸರ್ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 6,650 ಪುರುಷರು ಮತ್ತು 7,980 ಮಹಿಳೆಯರು ಎಂದು ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆ (ಕೆಎಂಐಒ) ತಿಳಿಸಿದೆ. ಪುರುಷರಲ್ಲಿ, ಶ್ವಾಸಕೋಶದ ಕ್ಯಾನ್ಸರ್ ಹೆಚ್ಚು ವರದಿಯಾಗುತ್ತಿವೆ. ಪುರುಷರಲ್ಲಿ ವರದಿಯಾಗುವ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ 9.7 ಪ್ರತಿಶತ ಪಾಲು ಶ್ವಾಸಕೋಶದ ಕ್ಯಾನ್ಸರ್‌ನದ್ದು. ಉಳಿದಂತೆ 6.9 ಪ್ರತಿಶತ ಪ್ರಾಸ್ಟೇಟ್ ಕ್ಯಾನ್ಸರ್, 6.5 ಶೇಕಡಾ ಹೊಟ್ಟೆಯ ಕ್ಯಾನ್ಸರ್ ಮತ್ತು 6.4 ಶೇಕಡಾ ಬಾಯಿ ಕ್ಯಾನ್ಸರ್.

“ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಾಗಿ ಹರಡುತ್ತಿವೆ. ಇದು ಮುಖ್ಯವಾಗಿ ಧೂಮಪಾನದಿಂದಾಗಿ ಹೆಚ್ಚು ಸಾಮಾನ್ಯವಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್-ಸರ್ಜಿಕಲ್ ಆಂಕೊಲಾಜಿ ಮತ್ತು ರೊಬೊಟಿಕ್ ಸರ್ಜರಿ ವೈದ್ಯರಾದ ಡಾ.ರಾಜಶೇಖರ್ ಸಿ ಹೇಳಿದ್ದಾರೆ.

ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚು

ಇನ್ನು ಮಹಿಳೆಯರ ವಿಷಯಕ್ಕೆ ಬಂದರೆ, ಸ್ತನ ಕ್ಯಾನ್ಸರ್ ಪ್ರಮಾಣವೇ ಹೆಚ್ಚು. ಸ್ತ್ರೀಯರಲ್ಲಿ ವರದಿಯಾಗುವ ಕ್ಯಾನ್ಸರ್ ಪ್ರಕರಣಗಳ ಪೈಕಿ 31.5 ಶೇಕಡಾ ಪಾಲು ಸ್ತನ ಕ್ಯಾನ್ಸರ್‌ನದ್ದು. ನಂತರ ಗರ್ಭಕಂಠದ ಕ್ಯಾನ್ಸರ್ 9.1 ಪ್ರತಿಶತ ವರದಿಯಾದರೆ, ಅಂಡಾಶಯದ ಕ್ಯಾನ್ಸರ್ 6.4 ಶೇಕಡಾ, ಬಾಯಿ ಕ್ಯಾನ್ಸರ್ 4.3 ಶೇಕಡಾ ಇದೆ.

ಹೆಚ್ಚುತ್ತಿರುವ ಮಾಲಿನ್ಯ ಮತ್ತು ರಾಸಾಯನಿಕಗಳಿಂದ ಈ ಅಪಾಯ ಹೆಚ್ಚು. ತಡವಾಗಿ ಹೆರಿಗೆ, ಸ್ತನ್ಯಪಾನದ ಕೊರತೆ, ಹಾರ್ಮೋನ್ ಚಿಕಿತ್ಸೆ, ಬೊಜ್ಜು, ಅತಿಯಾದ ಜಂಕ್ ಫುಡ್ ಸೇವನೆ, ಆಲ್ಕೋಹಾಲ್ ಬಳಕೆ, ಧೂಮಪಾನ ಮತ್ತು ಬಂಜೆತನ ಸೇರಿದಂತೆ ವಿವಿಧ ಕಾರಣಗಳಿಂದ ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ ಎಂದು ವೈದ್ಯರು ಹೇಳುತ್ತಾರೆ.

ವರ್ಷದಿಂದ ವರ್ಷಕ್ಕೆ ಕ್ಯಾನ್ಸರ್‌ ಪ್ರಕರಣ ಹೆಚ್ಚಳ

ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇದೇ ಉದ್ದೇಶದಿಂದ ಪ್ರತಿವರ್ಷ ನವೆಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆಹಚ್ಚುವುದು, ಅದರ ತಡೆಗಟ್ಟುವಿಕೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಚಿಕಿತ್ಸಾ ಆಯ್ಕೆಗಳನ್ನು ತಿಳಿಯುವ ಉದ್ದೇಶದಿಂದ ಈ ದಿನ ಆಚರಿಸಲಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ವರದಿ ಪ್ರಕಾರ, ಭಾರತದಲ್ಲಿ 2022ರಲ್ಲಿ 14.1 ಲಕ್ಷಕ್ಕೂ ಹೆಚ್ಚು ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿದ್ದವು. ಇದೇ ವೇಳೆ 9.1 ಲಕ್ಷಕ್ಕೂ ಹೆಚ್ಚು ಜನ ಕ್ಯಾನ್ಸರ್‌ನಿಂದಾಗಿ ಸಾವನ್ನಪ್ಪಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಭಾರತದಲ್ಲಿ ಕ್ಯಾನ್ಸರ್ ಪ್ರಕರಣ ಮತ್ತು ಸಾವಿನ ಪ್ರಮಾಣವು 2022 ಮತ್ತು 2045ರ ನಡುವೆ ಹೆಚ್ಚಾಗುವ ನಿರೀಕ್ಷೆಯಿದೆ ಇತ್ತೀಚೆಗೆ ಎಂದು ಹೇಳಿದೆ. 2025ರಲ್ಲಿ ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳ ಪ್ರಮಾಣ ಶೇ 12.8 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದು ಎಂದು ಹೇಳಲಾಗುತ್ತಿದೆ.

Whats_app_banner