ಸ್ತನ ಕ್ಯಾನ್ಸರ್ ವಂಶಪಾರಂಪರ್ಯವೇ, ಆರಂಭಿಕ ಹಂತದಲ್ಲಿ ಗುರುತಿಸುವುದು ಹೇಗೆ, ಲಕ್ಷಣಗಳೇನು? ಆಂಕೊಲಾಜಿಸ್ಟ್ ಉತ್ತರಗಳನ್ನು ಗಮನಿಸಿ
Breast Cancer: ಶೇಕಡ 5-20ರಷ್ಟು ಸ್ತನ ಕ್ಯಾನ್ಸರ್ ಅನುವಂಶಿಕ (ವಂಶಪಾರಂಪರ್ಯ) ಎಂದು ಆಂಕೊಲಾಜಿಸ್ಟ್ ಹೇಳಿದ್ದಾರೆ. ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಗುರುತಿಸುವುದು ಹೇಗೆ, ಲಕ್ಷಣಗಳೇನು? ತಿಳಿದುಕೊಳ್ಳೋಣ.
Breast Cancer: ಸ್ತನ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಇದು ಇತ್ತೀಚೆಗೆ ಭಾರತದಲ್ಲಿ ಗಮನಾರ್ಹವಾಗಿ ಏರಿಕೆ ಕಂಡಿದೆ. ಜೀವನಶೈಲಿ, ಪರಿಸರದ ಅಂಶಗಳು ಮತ್ತು ವಂಶವಾಹಿ ಅಂಶಗಳು ಸ್ತನ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಾಗಿವೆ. ಇದು ಆನುವಂಶಿಕವಾಗಿರಬಹುದೇ? ತಿಳಿಯೋಣ ಬನ್ನಿ. ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಮಣಿಪಾಲ್ ಆಸ್ಪತ್ರೆ ಯ ವೈದ್ಯಕೀಯ ಆಂಕೊಲಾಜಿಯ ಸಲಹೆಗಾರರಾದ ಡಾ.ಅಭಯ ಕುಮಾರ್ ಎಸ್‌ಎಂ ಅವರು ಸಾಕಷ್ಟು ಮಾಹಿತಿ ನೀಡಿದ್ದಾರೆ. “ಸುಮಾರು ಶೇಕಡ 5 ರಿಂದ 20 ಸ್ತನ ಕ್ಯಾನ್ಸರ್ ಪ್ರಕರಣಗಳು ಆನುವಂಶಿಕವಾಗಿದ್ದು, ಇದು ಕುಟುಂಬಗಳಲ್ಲಿ ಪೀಳಿಗೆಗೆ ಹರಡುತ್ತದೆ. ಆದರೆ, ಎಲ್ಲಾ ಸ್ತನ ಕ್ಯಾನ್ಸರ್‌ಗಳು ಆನುವಂಶಿಕವಾಗಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ" ಎಂದು ಅವರು ಹೇಳಿದ್ದಾರೆ.
ಸ್ತನ ಕ್ಯಾನ್ಸರ್‌ಗೆ ಕಾರಣಗಳು
"ಜೀವನಶೈಲಿ ಅಂಶಗಳು, ನಗರೀಕರಣ, ಹೆಚ್ಚಿನ ಕೊಬ್ಬು ಮತ್ತು ಕಡಿಮೆ ತರಕಾರಿಗಳೊಂದಿಗೆ ಆಹಾರ ಸೇವನೆ, ದೈಹಿಕ ನಿಷ್ಕ್ರಿಯತೆ ಮತ್ತು ಸ್ಥೂಲಕಾಯತೆ ಸ್ತನ ಕ್ಯಾನ್ಸರ್ ಅಭಿವೃದ್ಧಿಪಡಿಸುವ ಪ್ರಮುಖ ಅಪಾಯಕಾರಿ ಅಂಶಗಳೆಂದು ಪರಿಗಣಿಸಲಾಗಿದೆ. ತಡವಾಗಿ ವಿವಾಹವಾಗುವುದು, ತಡವಾದ ಹೆರಿಗೆ, ಸ್ತನಪಾನ ನಿರ್ಲಕ್ಷಿಸುವಿಕೆಯು ಸ್ತನ ಕ್ಯಾನ್ಸರ್‌ಗೆ ಕೊಡುಗೆ ನೀಡುವ ಪ್ರಮುಖ ಅಂಶಗಳಾಗಿವೆ" ಎಂದು ಡಾ ಅಭಯ ಕುಮಾರ್ ಎಸ್ ಎಂ ಹೇಳಿದ್ದಾರೆ.
ಗಮನಹರಿಸಬೇಕಾದ ಲಕ್ಷಣಗಳು
"ಸ್ತನ ಕ್ಯಾನ್ಸರ್ ಹೊಂದಿರುವ ರೋಗಿಗಳು ಸಾಮಾನ್ಯವಾಗಿ ಸ್ತನದಲ್ಲಿ ಗಡ್ಡೆ ಹೊಂದಿರುತ್ತಾರೆ. ಇದು ನೋವುರಹಿತವಾಗಿರುತ್ತವೆ. ಗಟ್ಟಿಯಾಗಿರುತ್ತವೆ. ಸ್ತನ ಅಂಗಾಂಶದಲ್ಲಿ ಸ್ಥಿರವಾಗಿರುತ್ತದೆ. ರೋಗವು ಮುಂದುವರೆದಂತೆ ಅವರು ಚರ್ಮದ ದಪ್ಪವಾಗಬಹುದು. ಹುಣ್ಣು ಉಂಟಾಗಬಹುದು. ಬಣ್ಣ ಬದಲಾಗಬಹುದು. ಕೆಲವು ರೋಗಿಗಳ ಮೊಲೆತೊಟ್ಟುಗಳ ಹಿಂತೆಗೆದುಕೊಳ್ಳುವಿಕೆ ಉಂಟಾಗಬಹುದು. ಮೊಲೆತೊಟ್ಟುಗಳಿಂದ ವಿಸರ್ಜನೆ, ವಿಶೇಷವಾಗಿ ರಕ್ತಸಿಕ್ತ ಸ್ರವಿಸುವಿಕೆ ಸಹ ಉಂಟಾಗಬಹುದು. ಮುಂದುವರೆದ ಹಂತಗಳಲ್ಲಿ ಕಂಕುಳಿನಲ್ಲಿ ಗಡ್ಡೆ ಕಾಣಿಸಬಹುದು" ಎಂದು ಡಾ ಅಭಯ ಕುಮಾರ್ ಎಸ್ ಎಂ ತಿಳಿಸಿದ್ದಾರೆ.
ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಕಂಡುಹಿಡಿಯಬಹುದೇ?
ಯಾವುದೇ ರೀತಿಯ ಕ್ಯಾನ್ಸರ್‌ಗೆ ಚಿಕಿತ್ಸೆಯನ್ನು ಪ್ರಾರಂಭಿಸಲು ಆರಂಭಿಕ ಹಂತದಲ್ಲಿ ಪತ್ತೆಹಚ್ಚುವುದು ಅತ್ಯಗತ್ಯ. “ಸ್ತನ ಕ್ಯಾನ್ಸರ್ ಅನ್ನು ಅತ್ಯಂತ ಆರಂಭಿಕ ಹಂತದಲ್ಲಿ ಮ್ಯಾಮೊಗ್ರಫಿ ಮೂಲಕ ಕಂಡುಹಿಡಿಯಬಹುದು. ಸ್ಕ್ರೀನಿಂಗ್ ಮ್ಯಾಮೊಗ್ರಫಿಯು ಸ್ತನ ಅಂಗಾಂಶದ ಎಕ್ಸ್-ರೇ ಮತ್ತು ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಲು ಅಮೂಲ್ಯವಾದ ಸಾಧನವಾಗಿದೆ. ಆರಂಭಿಕ ಪತ್ತೆ ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸುತ್ತದೆ. ಗುಣಪಡಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಹೀಗಾಗಿ ವರ್ಷಕ್ಕೊಮ್ಮೆ 40 ವರ್ಷದಿಂದ ಮೇಲ್ಪಟ್ಟವರಿಗೆನಿಯಮಿತ ಮಮೊಗ್ರಾಮ್‌ಗೆ ಒಳಗಾಗಲು ಎಲ್ಲಾ ಮಹಿಳೆಯರಿಗೆ ಶಿಫಾರಸು ಮಾಡಲಾಗಿದೆ ” ಎಂದು ಅವರು ಹೇಳಿದ್ದಾರೆ.
ಡಿಸ್‌ಕ್ಲೈಮರ್: ಈ ಲೇಖನವನ್ನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ. ನಿಮ್ಮ ಆರೋಗ್ಯ ಸ್ಥಿತಿಯ ಕುರಿತು ಯಾವುದೇ ಪ್ರಶ್ನೆಯನ್ನು ನಮ್ಮ ವೈದ್ಯರಿಂದ ಪಡೆಯಿರಿ.
ವಿಭಾಗ