SC, ST Reservation: ರಾಜ್ಯದಲ್ಲಿ ಮೀಸಲಾತಿ ಚಿತ್ರಣ ಹೇಗಿದೆ? ಮೀಸಲಾತಿಗೆ ಮಿತಿ ಎಷ್ಟು? ವಿವರ ಇಲ್ಲಿದೆ
SC, ST Reservation: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೀಸಲಾತಿ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಪ್ರಸ್ತಾವನೆಯನ್ನು ಸಚಿವ ಸಂಪುಟ ಇಂದು ಅಂಗೀಕರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಮೀಸಲಾತಿ ಚಿತ್ರಣ ಮತ್ತು ಮೀಸಲಾತಿ ಮಿತಿಯ ವಿವರ ಇಲ್ಲಿದೆ.
ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳವನ್ನು ಸುಗ್ರಿವಾಜ್ಞೆ ಹೊರಡಿಸಿ ಜಾರಿಗೊಳಿಸಲು ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.
ಈ ವಿಚಾರವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಸರ್ಕಾರದ ನಡೆಯನ್ನು ಸಮರ್ಥಿಸುತ್ತ ಹೇಳಿದ ಮಾತುಗಳಿವು.
ಪರಿಶಿಷ್ಟ ಜಾತಿ ಮತ್ತು ಪಂಗಡದಲ್ಲಿ ಸೇರ್ಪಡೆಯಾಗಿರುವ ಜಾತಿಗಳು ಹೆಚ್ಚಿರುವುದರಿಂದ ಮೀಸಲಾತಿಯನ್ನು ಹೆಚ್ಚಿಸಲು ಅವಕಾಶವಿದೆ. ಅದರಂತೆ ಸರ್ಕಾರ ತೀರ್ಮಾನವನ್ನು ಮಾಡಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಹೆಚ್ಚಳದ ಸುಗ್ರೀವಾಜ್ಞೆ ಹೊರಡಿಸುವ ತೀರ್ಮಾನವನ್ನು ಮೊದಲು ಮಾಡಲಾಗಿದೆ. ನಂತರ ಒಳಮೀಸಲಾತಿ ಬಗ್ಗೆಯೂ ತೀರ್ಮಾನಗಳಾಗುತ್ತವೆ. ಒಳಮೀಸಲಾತಿ ಬಗ್ಗೆಯೂ ನಿರ್ಧಾರಗಳನ್ನು ಮಾಡುತ್ತೇವೆ.
ನಿವೃತ್ತ ನ್ಯಾ. ಡಾ. ನಾಗಮೋಹನ್ ದಾಸ್, ಎ.ಜೆ. ಸದಾಶಿವ, ಸುಭಾಷ್ ಆದಿ ವರದಿಯಲ್ಲಿ ಮೀಸಲಾತಿ ಹೆಚ್ಚಳದ ಜತೆಗೆ ಒಳಮೀಸಲಾತಿಯ ಶಿಫಾರಸ್ಸು ಕೂಡ ಇವೆ. ಎಲ್ಲ ಸೇರಿಸಿ ಜಾರಿ ಮಾಡುವ ಸಂಬಂಧ ಅಧ್ಯಯನ ಮಾಡಿ ಸಂಪುಟಕ್ಕೆ ವರದಿ ಸಲ್ಲಿಸುವಂತೆ ಉಪಸಮಿತಿಯನ್ನು ರಚಿಸಿದ್ದಾರೆ. ಈ ಸಮಿತಿ ಈ ಎಲ್ಲ ವರದಿಗಳನ್ನು ಅಧ್ಯಯನ ಮಾಡಿ ಸೂಕ್ತ ಶಿಫಾರಸ್ಸು ಮಾಡಲಿದೆ.
ಮೀಸಲಾತಿ ಹೆಚ್ಚಳ ನಿರ್ಧಾರ ಸುಲಭವಲ್ಲ
ಸಾಂವಿಧಾನಿಕ ಚೌಕಟ್ಟು ಮತ್ತು ಕಾನೂನು ಚೌಕಟ್ಟಿನ ಪ್ರಕಾರ ಮೀಸಲಾತಿ ಹೆಚ್ಚಳ ಸುಲಭವಲ್ಲ. ಆದ್ದರಿಂದಲೇ ಮೀಸಲಾತಿ ನಿರ್ಧಾರಗಳು ಬಹುತೇಕ ವಿಳಂಬವಾಗುತ್ತವೆ. ಸದ್ಯ ಕರ್ನಾಟಕ ಸರ್ಕಾರ ರೂಪಿಸುವ ಮೀಸಲಾತಿ ಹೆಚ್ಚಳ ತೀರ್ಮಾನದ ಪರಿಣಾಮ ಒಟ್ಟು ಮೀಸಲಾತಿ ಪ್ರಮಾಣ ಶೇ.50 ರಷ್ಟನ್ನು ಮೀರಲಿದೆ.
ಸಾಂವಿಧಾನಿಕ ಚೌಕಟ್ಟು ಮತ್ತು ಕಾನೂನು ಚೌಕಟ್ಟಿನ ಪ್ರಕಾರ ಎಲ್ಲ ಮೀಸಲಾತಿ ಸೇರಿದರೂ ಅದು ಶೇಕಡ 50 ಮೀರುವಂತಿಲ್ಲ. ಮಹಾರಾಷ್ಟ್ರ ಸರ್ಕಾರ, ಮರಾಠಾ ಸಮುದಾಯಕ್ಕೆ ಶೇ.16ರಷ್ಟು ಮೀಸಲಾತಿ ನೀಡಿದ್ದನ್ನು ಸುಪ್ರೀಂಕೋರ್ಟ್ 2021 ರಲ್ಲಿ ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಎಸ್‌ಟಿ, ಎಎಸ್ಸಿ ಸಮುದಾಯಗಳ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಕಾನೂನು ತೊಡಕುಗಳು ಎದುರಾಗಲಿವೆ. ಈ ಬಗ್ಗೆ ಹೈಕೋರ್ಟ್, ಸುಪ್ರೀಂಕೋರ್ಟ್ನಲ್ಲಿ ಕೂಡ ಸರ್ಕಾರ ಸವಾಲು ಎದುರಿಸಬೇಕಾಗಬಹುದು.
ಸಾಂವಿಧಾನಿಕ ಪೀಠದ ತೀರ್ಪು ಏನಿದೆ?
ಸಾಂವಿಧಾನಿಕ ಚೌಕಟ್ಟು ಮತ್ತು ಕಾನೂನು ಚೌಕಟ್ಟಿನ ಪ್ರಕಾರ ಎಲ್ಲ ಮೀಸಲಾತಿ ಸೇರಿದರೂ ಅದು ಶೇ 50 ರಷ್ಟನ್ನು ಮೀರುವಂತಿಲ್ಲ. ಅಸಾಧಾರಣ, ಅಸಾಮಾನ್ಯ ಸಂದರ್ಭಗಳಲ್ಲಿ ಮಾತ್ರ ಶೇ 50ರ ಮೀಸಲಾತಿ ಮೀರಬಹುದು ಎಂದು 1992 ರಲ್ಲಿ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ 9 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ತೀರ್ಪು ನೀಡಿದೆ. ಇದು ಪ್ರತಿ ಮೀಸಲಾತಿ ಕೇಸ್‌ನಲ್ಲೂ ರೆಫರೆನ್ಸ್ ಆಗಿ ಉಲ್ಲೇಖವಾಗುತ್ತದೆ.
ಕರ್ನಾಟಕದ ಮೀಸಲಾತಿ ಚಿತ್ರಣ ಹೀಗಿದೆ
- ಪ್ರವರ್ಗ 1ಕ್ಕೆ ಶೇಕಡ 4 (95 ಜಾತಿಗಳು)
- ಪ್ರವರ್ಗ 2 (ಎ) ಶೇಕಡ 15 (102 ಜಾತಿಗಳು)
- ಪ್ರವರ್ಗ 3ಬಿ ಶೇಕಡ 4 (ಮುಸ್ಲಿಮರು)
- ಪ್ರವರ್ಗ 3ಎ ಶೇಕಡ 4.4 (ಒಕ್ಕಲಿಗ ಮತ್ತು ಬಲಿಜ)
- ಪ್ರವರ್ಗ 3ಬಿ ಶೇಕಡ 5 5 (ಲಿಂಗಾಯತರು ಮತ್ತು ಇತರೆ 5)
- ಪರಿಶಿಷ್ಟ ಜಾತಿಗಳ ಮೀಸಲಾತಿ ಶೇಕಡ 15 (101 ಜಾತಿಗಳು)
- ಪರಿಶಿಷ್ಟ ಪಂಗಡಗಳ ಮೀಸಲಾತಿ ಶೇಕಡ 3 (50 ಜಾತಿಗಳು)
ಮೀಸಲಾತಿ ಹೋರಾಟ
ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ವಿವಿಧ ಸಮುದಾಯಗಳು ಮೀಸಲಾತಿಗಾಗಿ ಹೋರಾಟಗಳನ್ನು ಮಾಡುತ್ತಿವೆ. ಎಲ್ಲವನ್ನೂ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡುತ್ತಲೇ ಇದ್ದಾರೆ. ಆದರೆ, ಇದು ಸುಲಭವಲ್ಲ. ಮೀಸಲಾತಿ ಎಂಬುದು ಸರ್ಕಾರಕ್ಕೆ ನುಂಗಲಾರದ ತುತ್ತಾದರೂ, ಚುನಾವಣಾ ವರ್ಷವಾದ ಕಾರಣ ರಾಜಕೀಯ ಲಾಭಕ್ಕೂ ಒಂದು ದಾರಿ.
ಸಾಧ್ಯತೆ ಏನು?
ಮೀಸಲಾತಿ ಹೆಚ್ಚಳ ಮಾಡುವುದಕ್ಕೆ ಸರ್ಕಾರದ ಮುಂದಿರುವುದು ಒಂದೇ ಒಂದು ದಾರಿ. ಅದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಸಂವಿಧಾನದ 9ನೇ ಷೆಡ್ಯೂಲ್ ಮೂಲಕ ಮೀಸಲಾತಿ ಪ್ರಮಾಣ ಹೆಚ್ಚಿಸುವುದು. ಅದು ಕೂಡ ಸುಲಭವಲ್ಲ.