SSLC Question paper: ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಭಾರಿ ಬದಲಾವಣೆ, ಹೊಸ ಬ್ಲೂಪ್ರಿಂಟ್ ಬಿಡುಗಡೆ; ವರದಿ
ಕನ್ನಡ ಸುದ್ದಿ  /  ಕರ್ನಾಟಕ  /  Sslc Question Paper: ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಭಾರಿ ಬದಲಾವಣೆ, ಹೊಸ ಬ್ಲೂಪ್ರಿಂಟ್ ಬಿಡುಗಡೆ; ವರದಿ

SSLC Question paper: ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಭಾರಿ ಬದಲಾವಣೆ, ಹೊಸ ಬ್ಲೂಪ್ರಿಂಟ್ ಬಿಡುಗಡೆ; ವರದಿ

SSLC Question paper: ಈ ಸಲ 10ನೇ ತರಗತಿ ಪರೀಕ್ಷೆ ಬರೆಯಲು ಸಜ್ಜಾಗುತ್ತಿದ್ದೀರಾ, ಹಾಗಾದರೆ ಗಮನಿಸಿ, ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಭಾರಿ ಬದಲಾವಣೆ ಮಾಡಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ, ಹೊಸ ಬ್ಲೂಪ್ರಿಂಟ್ ಬಿಡುಗಡೆ ಮಾಡಿದೆ ಎಂದು ದ ಹಿಂದೂ ವರದಿ ಮಾಡಿದೆ. ಅದರ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಭಾರಿ ಬದಲಾವಣೆ ಮಾಡಿದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ, ಹೊಸ ಬ್ಲೂಪ್ರಿಂಟ್ ಬಿಡುಗಡೆ ಮಾಡಿದೆ.
ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಭಾರಿ ಬದಲಾವಣೆ ಮಾಡಿದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ, ಹೊಸ ಬ್ಲೂಪ್ರಿಂಟ್ ಬಿಡುಗಡೆ ಮಾಡಿದೆ. (HT Photo)

SSLC Question paper: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೀರಾ?, ಪರೀಕ್ಷೆಗೆ ಇನ್ನು ಕೆಲವೇ ತಿಂಗಳು ಬಾಕಿ. ಹಳೆ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆಗಳನ್ನು ಹುಡುಕಿ, ಅದಕ್ಕೆ ಉತ್ತರ ಬರೆದು ಕಲಿಯುವುದು ಇತ್ಯಾದಿ ಮಾಡುತ್ತಿದ್ದೀರಿ ಅಲ್ವ. ಆದರೆ, ಎಸ್‌ಎಸ್ಎಲ್‌ಸಿ ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿ ಮಹತ್ವದ ಸೂಚನೆಯನ್ನು ಪರೀಕ್ಷಾ ಮಂಡಳಿ ನೀಡಿದೆ. ಹೌದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) 2024-25ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸ್ವರೂಪದಲ್ಲಿ ಗಮನಾರ್ಹ ಬದಲಾವಣೆಗಳನ್ನು ಪ್ರಕಟಿಸಿದೆ. ಅಷ್ಟೇ ಅಲ್ಲ ಈ ಪರಿಷ್ಕರಣೆಗಳ ರೂಪರೇಖೆಯನ್ನು (ಬ್ಲೂಪ್ರಿಂಟ್‌) ಬಿಡುಗಡೆ ಮಾಡಿದೆ ಎಂದು ದ ಹಿಂದೂ ವರದಿ ಮಾಡಿದೆ. ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆಗಳಲ್ಲಿ ಈ ರೀತಿ ಬದಲಾವಣೆ ಈ ಹಿಂದೆ 2019-20ರಲ್ಲಿ ಆಗಿತ್ತು. ಅದಾಗಿ 14 ವರ್ಷಗಳ ಬಳಿಕ ಈಗ ಮತ್ತೊಮ್ಮೆ ಪ್ರಶ್ನೆ ಪತ್ರಿಕೆಯ ಸ್ವರೂಪ ಬದಲಾವಣೆಗೆ ಕೆಎಸ್‌ಇಎಬಿ ಮುಂದಾಗಿದೆ ಎಂದು ದ ಹಿಂದೂ ವರದಿ ಮಾಡಿದೆ.

ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಭಾರಿ ಬದಲಾವಣೆ; ಏನದು

ಪ್ರಸಕ್ತ ಶೈಕ್ಷಣಿಕ ವರ್ಷದ ಅಂದರೆ 2024-25ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸ್ವರೂಪದಲ್ಲಿ ಗಮನಾರ್ಹ ಬದಲಾವಣೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ಪ್ರಕಟಿಸಿದೆ. ಏನೇನು ಬದಲಾವಣೆ ನೋಡೋಣ.

1) ಅಂಕಗಳ ಹಂಚಿಕೆ ವ್ಯತ್ಯಾಸ: ಪ್ರಮುಖ ಬದಲಾವಣೆಗಳೆಂದರೆ ಒಂದು ಅಂಕ ಮತ್ತು ಎರಡು ಅಂಕಗಳ ಪ್ರಶ್ನೆಗಳ ಸಂಖ್ಯೆಯಲ್ಲಿ ಕಡಿತ, ಮೂರು ಅಂಕ ಮತ್ತು ನಾಲ್ಕು ಅಂಕಗಳ ಪ್ರಶ್ನೆಗಳನ್ನು ಹೆಚ್ಚಿಸುವುದು ಮತ್ತು ಐದು ಅಂಕಗಳ ಒಂದು ಪ್ರಶ್ನೆಯನ್ನು ಪರಿಚಯಿಸುವುದು.

2) ಹಳೆಯ ಅಂಕ ವ್ಯವಸ್ಥೆ ಮರುಜಾರಿ: ಕೆಎಸ್‌ಇಎಬಿಯು ಹಳೆಯ ಅಂಕ ವ್ಯವಸ್ಥೆಯನ್ನು ಅಂದರೆ, ಅಂಕಗಳ ಮೌಲ್ಯವು ಕಲಿಕೆಯ ಉದ್ದೇಶಗಳನ್ನು ಆಧರಿಸಿರುವಂತಹ ವ್ಯವಸ್ಥೆಯನ್ನು ಪುನಃ ಪರಿಚಯಿಸಿದೆ. ಇದರಲ್ಲಿ ನೆನಪಿಟ್ಟುಕೊಳ್ಳುವುದಕ್ಕೆ 20 ಪ್ರತಿಶತ, ತಿಳುವಳಿಕೆಗೆ 40 ಪ್ರತಿಶತ ಮತ್ತು ಅನ್ವಯಿಸುವಿಕೆ (ಅಪ್ಲಿಕೇಶನ್)ಗೆ 20 ಪ್ರತಿಶತ. ಹೆಚ್ಚುವರಿಯಾಗಿ, 15 ಪ್ರತಿಶತ ಅಂಕಗಳನ್ನು ರೇಖಾಚಿತ್ರಗಳಂತಹ ಕೌಶಲಗಳಿಗೆ ಮತ್ತು 5 ಪ್ರತಿಶತ ಉನ್ನತ-ಕ್ರಮದ ಚಿಂತನೆಯ ಪ್ರಶ್ನೆಗಳಿಗೆ ಮೀಸಲಿಡಲಾಗುತ್ತದೆ.

3) ಪ್ರಶ್ನೆಗಳ ಸಂಖ್ಯೆ, ಅಂಕ ಹೊಂದಾಣಿಕೆ: ಮೊದಲ ಭಾಷೆಯ ಪ್ರಶ್ನೆ ಪತ್ರಿಕೆಯು 45 ಪ್ರಶ್ನೆಗಳನ್ನು ಒಳಗೊಂಡಿದ್ದರೆ, ವಿಷಯ ಪತ್ರಿಕೆಗಳು 38 ಪ್ರಶ್ನೆಗಳನ್ನು ಹೊಂದಿರುತ್ತದೆ. ಕೆಲವು 3 ಅಂಕಗಳು, 4 ಅಂಕಗಳು ಮತ್ತು 5 ಅಂಕಗಳ ಪ್ರಶ್ನೆಗಳು ಮತ್ತು ಉಪ ಪ್ರಶ್ನೆಗಳನ್ನು ಹೊಂದಿರಬಹುದು. ಹಿಂದಿನ ವರ್ಷಗಳಂತೆ, ಒಟ್ಟು 20 ಅಂಕಗಳ ಆಂತರಿಕ ಆಯ್ಕೆಯ ಪ್ರಶ್ನೆಗಳನ್ನು ಸಹ ಸೇರಿಸಲಾಗುತ್ತದೆ. ಈ ಆಯ್ಕೆಗಳು ಪ್ರಾಥಮಿಕ ಪ್ರಶ್ನೆಗಳಂತೆಯೇ ಅದೇ ಥೀಮ್‌ಗಳು ಮತ್ತು ಅಧ್ಯಾಯಗಳೊಂದಿಗೆ ಹೊಂದಾಣಿಕೆಯಾಗುತ್ತವೆ.

4) ಪ್ರಶ್ನೆ ಪತ್ರಿಕೆಗಳಲ್ಲಿ ಕಠಿಣ ಪ್ರಶ್ನೆಗಳ ಜೋಡಣೆ: ಹೊಸ ಮಾದರಿಯ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆಯಲ್ಲಿ ಕಠಿಣ ಪ್ರಶ್ನೆಗಳ ಜೋಡಣೆ ಕ್ರಮದಲ್ಲಿ ವ್ಯತ್ಯಾಸ ಇಲ್ಲ. ಶೇಕಡ 30 ಸುಲಭ ಪ್ರಶ್ನೆ, ಶೇಕಡ 50 ಸರಾಸರಿ ಮಧ್ಯಮ ಕಠಿಣ ಪ್ರಶ್ನೆಗಳು, ಶೇಕಡ 20 ಕಷ್ಟದ ಪ್ರಶ್ನೆಗಳು ಇರಲಿವೆ.

ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಮತ್ತು ಹೊಸ ಬ್ಲೂಪ್ರಿಂಟ್ ಬಿಡುಗಡೆ

ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಹೊಸ ಸ್ವರೂಪದಲ್ಲಿ ತರುವುದಕ್ಕೆ ತೀರ್ಮಾನ ತೆಗೆದುಕೊಂಡದ್ದನ್ನು ಕೆಎಸ್‌ಇಎಬಿ ಸ್ಪಷ್ಟಪಡಿಸಿದ್ದು, ಅದಕ್ಕ ಸಂಬಂಧಿಸಿ ಬ್ಲೂಪ್ರಿಂಟ್ ಬಿಡುಗಡೆ ಮಾಡಿದೆ. ಅದರಲ್ಲಿ ಪೂರ್ಣ ವಿವರಗಳಿವೆ ಎಂದು ದ ಹಿಂದೂ ವರದಿ ಹೇಳಿದೆ. "ಪ್ರಮುಖ ಪರಿಕಲ್ಪನೆಗಳ ಮೇಲೆ ಗಮನ ಕೇಂದ್ರೀಕರಿಸಿ, ಪ್ರತ್ಯೇಕ ಅಧ್ಯಾಯಗಳಿಗಿಂತ ಥೀಮ್‌ಗಳ ಆಧಾರದ ಮೇಲೆ ಈ ಬಾರಿ ಅಂಕಗಳನ್ನು ನೀಡಲಾಗುತ್ತದೆ. ಗುಣಾತ್ಮಕ ಕಲಿಕೆಯನ್ನು ಸುಧಾರಿಸಲು ಮತ್ತು ಕಂಠಪಾಠದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಈ ವಿಧಾನವನ್ನು ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ, ಭಾಷಾ ಪತ್ರಿಕೆಗಳಲ್ಲಿನ ವಿಷಯಗಳು ಗದ್ಯ, ಕವನ ಮತ್ತು ವ್ಯಾಕರಣವನ್ನು ಒಳಗೊಂಡಿರಬಹುದು. ಆದರೆ ಮುಖ್ಯ ವಿಷಯದ ಪತ್ರಿಕೆಗಳು ಬಹು ಪಾಠಗಳನ್ನು ಸಂಯೋಜಿಸುವ ಪಾಠಗಳನ್ನು ಒಳಗೊಳ್ಳಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ಹೇಳಿದೆ.

ಅದೇ ರೀತಿ, ಅಂಕಗಳ ಹಂಚಿಕೆ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ, "ಹೆಚ್ಚು ಒಂದು ಅಂಕದ ಪ್ರಶ್ನೆಗಳು ಇದ್ದಾಗ, ವಿದ್ಯಾರ್ಥಿಗಳು ಉತ್ತರಗಳನ್ನು ಹೆಚ್ಚಾಗಿ ಊಹಿಸುತ್ತಾರೆ. ಆದರೆ, ವಿವರಣಾತ್ಮಕ ಉತ್ತರಗಳ ಅಗತ್ಯವಿರುವ ಪ್ರಶ್ನೆಗಳು ವಿದ್ಯಾರ್ಥಿಗಳನ್ನು ವಿಮರ್ಶಾತ್ಮಕವಾಗಿ ಯೋಚಿಸಲು, ವ್ಯಾಪಕವಾಗಿ ಬರೆಯಲು ಮತ್ತು ಅವರ ಅಭಿವ್ಯಕ್ತಿ ಕೌಶಲಗಳನ್ನು ಸುಧಾರಿಸಲು ಪ್ರೋತ್ಸಾಹಿಸುತ್ತವೆ" ಎಂದು ಕೆಎಸ್‌ಇಎಬಿ ಬ್ಲೂಪ್ರಿಂಟ್‌ನಲ್ಲಿ ಹೇಳಿದೆ.

"ಈ ವಿಧಾನವು ಬೋಧನೆ ಮತ್ತು ಕಲಿಕೆಯ ಸಮಯದಲ್ಲಿ ಎಲ್ಲಾ ಅಧ್ಯಾಯಗಳಿಗೆ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಖಚಿತಪಡಿಸುತ್ತದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೇವಲ ಅಧ್ಯಾಯವಾರು ಅಂಕಗಳ ಹಂಚಿಕೆಯ ಆಧಾರದ ಮೇಲೆ ಪರೀಕ್ಷೆಗಳಿಗೆ ತಯಾರಿ ಮಾಡುವ ಅಭ್ಯಾಸದಿಂದ ದೂರ ಹೋಗಬಹುದು. ಪ್ರತ್ಯೇಕ ಅಧ್ಯಾಯಗಳಿಗೆ ನಿರ್ದಿಷ್ಟ ಅಂಕಗಳನ್ನು ನಿಗದಿಪಡಿಸದಿದ್ದರೂ, ಸಂಬಂಧಿತ ವಿಷಯಗಳಿಗೆ ಸ್ಪಷ್ಟವಾದ ತೂಕವನ್ನು ನೀಡಲಾಗುತ್ತದೆ. ಈ ವಿಧಾನವು ಪ್ರತಿ ಅಧ್ಯಾಯಕ್ಕೆ ಸಮಗ್ರ ಅಭ್ಯಾಸವನ್ನು ಖಾತರಿಪಡಿಸುತ್ತದೆ ಮತ್ತು ಪರೀಕ್ಷೆಗಳಲ್ಲಿ ವೈವಿಧ್ಯಮಯ ಪ್ರಶ್ನೆಗಳನ್ನು ಅನುಮತಿಸುತ್ತದೆ, ” ಕೆಎಸ್‌ಇಎಬಿ ಹೇಳಿದ್ದಾಗಿ ವರದಿ ವಿವರಿಸಿದೆ.

Whats_app_banner