Tumkur News: ಕೊಬ್ಬರಿಗೆ 15 ಸಾವಿರ ರೂ ಬೆಂಬಲ ಬೆಲೆ ಘೋಷಣೆಗೆ ಆಗ್ರಹ; ಪ್ರಧಾನಿಗೆ ಮಾಜಿ ಸಂಸದ ಮುದ್ದಹನುಮೇಗೌಡ ಪತ್ರ
Muddahanumegowda: ಪ್ರಸ್ತುತ ಕ್ವಿಂಟಾಲ್ ಕೊಬ್ಬರಿ ಬೆಲೆ 8600 ರೂಪಾಯಿಗೆ ಕುಸಿದಿದೆ. ಕೊಬ್ಬರಿ ಇಳುವರಿ ಹಾಗೂ ಬೆಲೆ ಎರಡೂ ಕುಸಿತ ಕಂಡಿದೆ. ಹೀಗಾಗಿ ಕನಿಷ್ಠ 15 ಸಾವಿರ ರೂ. ಬೆಂಬಲ ಬೆಲೆ ಘೋಷಿಸಬೇಕು ಎಂದು ಮಾಜಿ ಸಂಸದ ಎಸ್‌ಪಿ ಮುದ್ದಹನುಮೇಗೌಡ ಆಗ್ರಹಿಸಿದ್ದಾರೆ.
ತುಮಕೂರು: ರಾಜ್ಯದಲ್ಲಿ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾಗಿರುವ ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದೆ. ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುವುದರೊಂದಿಗೆ ತೆಂಗು ಬೆಳೆಯಲು ಆಸಕ್ತಿ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೂಡಲೇ ಕೇಂದ್ರ ಸರ್ಕಾರ ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ರೂಪಾಯಿ ಬೆಂಬಲ ಬೆಲೆ ಘೋಷಿಸುವಂತೆ ಮಾಜಿ ಸಂಸದ ಎಸ್‌ಪಿ ಮುದ್ದಹನುಮೇಗೌಡ ಒತ್ತಾಯಿಸಿದ್ದಾರೆ. (ತುಮಕೂರಿನ ಇತರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ)
ಕೇಂದ್ರ ಸರ್ಕಾರ ರಾಗಿ ಸೇರಿದಂತೆ 14 ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ ಮಾಡಿರುವಂತೆ ಕೊಬ್ಬರಿಗೂ ಬೆಂಬಲ ಬೆಲೆ ಘೋಷಿಸುವಂತೆ ಪ್ರಧಾನಮಂತ್ರಿಗೆ ಪತ್ರ ಬರೆಯುತ್ತಿರುವುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಹಿಂದೆ ಕ್ವಿಂಟಾಲ್ ಕೊಬ್ಬರಿಗೆ 18 ಸಾವಿರ ರೂ. ಬೆಲೆ ನಿಗದಿಪಡಿಸಲಾಗಿತ್ತು. ಆದರೆ ಪ್ರಸ್ತುತ ಕ್ವಿಂಟಾಲ್ ಕೊಬ್ಬರಿ 8600 ರೂಪಾಯಿಗೆ ಕುಸಿದಿದೆ. ಕೊಬ್ಬರಿ ಇಳುವರಿ ಹಾಗೂ ಬೆಲೆ ಎರಡೂ ಕುಸಿತ ಕಂಡಿದೆ. ಆದ್ದರಿಂದ ನಾಫೆಡ್ (NAFED) ಮಧ್ಯೆ ಪ್ರವೇಶಿಸಿ ಕನಿಷ್ಠ 15 ಸಾವಿರ ರೂ. ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದರು.
ಕೊಬ್ಬರಿಗೆ ಬೆಂಬಲ ಬೆಲೆ 11720 ರೂ. ಘೋಷಣೆ ಮಾಡಲಾಗಿದೆ. 16300 ರೂಪಾಯಿಯಷ್ಟು ಬೆಂಬಲ ಬೆಲೆ ನೀಡಬೇಕು ಎಂದು ಕೃಷಿ ಇಲಾಖೆ ಹೇಳಿದೆ. ಈ ಹಿಂದಿನ ರಾಜ್ಯ ಸರ್ಕಾರ ಕೂಡ ಕೇಂದ್ರಕ್ಕೆ ಬೆಂಬಲ ಬೆಲೆ ನೀಡುವಂತೆ ಮನವಿ ಮಾಡಿತ್ತು. ಬೆಲೆ ಕಡಿಮೆಯಾಗಿರುವ ಪರಿಣಾಮ ಕೊಬ್ಬರಿ ಉತ್ಪಾದನೆಯೂ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣಗಳನ್ನು ಹುಡುಕುವ ಕೆಲಸವೂ ಆಗಬೇಕಿದೆ ಎಂದರು.
ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 15 ಸಾವಿರ ರೂಪಾಯಿ ಬೆಲೆ ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆಯುತ್ತಿದ್ದೇವೆ. ನಾನು ಈ ಹಿಂದೆ ಸಂಸದನಾಗಿದ್ದಾಗ ರಾಜ್ಯದ ಎಲ್ಲಾ ಸಂಸದರ ಜೊತೆಗೂಡಿ ಕೊಬ್ಬರಿ ಬೆಲೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುತ್ತಿದ್ದೆ. ಈಗಲೂ ಸಹ ರಾಜ್ಯದ ಎಲ್ಲಾ ಸಂಸದರು ಕೊಬ್ಬರಿಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಧ್ವನಿ ಎತ್ತಬೇಕು ಎಂದು ಹೇಳಿದರು.
ಎಂಪಿ ಟಿಕೆಟ್ ಸಿಗುವ ವಿಶ್ವಾಸವಿದೆ
ಮುಂದಿನ ಲೋಕಸಭಾ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೂರಕ್ಕೆ ನೂರರಷ್ಟು ಸಿಗುವ ವಿಶ್ವಾಸ ನನಗಿದೆ ಎಂದು ಮಾಜಿ ಸಂಸದ ಹೇಳಿದರು.
ಮುಂದಿನ ಲೋಕಸಭೆಗೆ ತುಮಕೂರು ಕ್ಷೇತ್ರಕ್ಕೆ ವಿ ಸೋಮಣ್ಣ ಬರಲಿದ್ದಾರೆ ಎಂದು ಹಾಲಿ ಸಂಸದ ಜಿಎಸ್ ಬಸವರಾಜು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಂಸದ ಎಸ್‌ಪಿಎಂ, ನಾನು ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿ. ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ. ಪಕ್ಷ ನನಗೆ ಟಿಕೆಟ್ ಕೊಡುವ ಭರವಸೆ ಇದೆ ಎಂದರು.
ಟಿಕೆಟ್‌ಗಾಗಿ ನಾನು ಯಾವ ತಂತ್ರವನ್ನೂ ಮಾಡಲ್ಲ. ನಾನು ಬಿಜೆಪಿ ಕಾರ್ಯಕರ್ತನಾಗಿ, ಮಾಜಿ ಸಂಸದನಾಗಿ ಪಕ್ಷದ ನಾಯಕರನ್ನು ಟಿಕೆಟ್ ಕೇಳುತ್ತೇನೆ. ಹಾಗೆಯೇ ಅವರಿಂದ ಟಿಕೆಟ್ ಸಿಗುವ ವಿಶ್ವಾಸ ಸಹ ಇದೆ ಎಂದರು.