ವಿಕ್ರಂ ಗೌಡ ಎನ್‌ಕೌಂಟರ್ ನಡೆದ ನಿಖರ ಸ್ಥಳ ಯಾವುದು? ಪೋಸ್ಟ್ ಮಾರ್ಟಂ ಆಯಿತಾ, ಎಲ್ಲಿ ಮಾಡ್ತಾರೆ: ಐಎಸ್‌ಡಿ ಐಜಿಪಿ ಡಿ ರೂಪಾ ಹೇಳಿರುವುದಿಷ್ಟು
ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಐಜಿಪಿ ರೂಪಾ ಮೌದ್ಗಿಲ್ ಮಂಗಳವಾರ (ನವೆಂಬರ್ 19) ಕಬ್ಬಿನಾಲೆ ಸಮೀಪ ನಕ್ಸಲ್ ಎನ್‌ಕೌಂಟರ್ ನಡೆದು ನಕ್ಸಲ್ ನಾಯಕ ವಿಕ್ರಂ ಗೌಡ ಹತನಾದ ಜಾಗಕ್ಕೆ ಭೇಟಿ ನೀಡಿದರು. ಬಳಿಕ ಸುದ್ದಿಗಾರರ, "ವಿಕ್ರಂ ಗೌಡ ಎನ್‌ಕೌಂಟರ್ ನಡೆದ ನಿಖರ ಸ್ಥಳ ಯಾವುದು? ಪೋಸ್ಟ್ ಮಾರ್ಟಂ ಎಲ್ಲಿ ಮಾಡ್ತಾರೆ ಎಂಬಿತ್ಯಾದಿ ಪ್ರಶ್ನೆಗೆ ಉತ್ತರಿಸುತ್ತ ಹೇಳಿದ್ದಿಷ್ಟು.
ಬೆಂಗಳೂರು: ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಕಬ್ಬಿನಾಲೆ ಸಮೀಪ ನಕ್ಸಲ್ ಎನ್‌ಕೌಂಟರ್ ನಡೆದು ನಕ್ಸಲ್ ನಾಯಕ ವಿಕ್ರಂ ಗೌಡ ಹತನಾದ ಜಾಗಕ್ಕೆ ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಐಜಿಪಿ ರೂಪಾ ಮೌದ್ಗಿಲ್ ಮಂಗಳವಾರ (ನವೆಂಬರ್ 19) ಭೇಟಿ ನೀಡಿದರು. ಆದರೆ, ಮಾಧ್ಯಮ ಪ್ರತಿನಿಧಿಗಳನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಲು ಅವಕಾಶ ನೀಡಿರಲಿಲ್ಲ. ಭೇಟಿ ವೇಳೆ ಸುದ್ದಿಗಾರರ ಜತೆಗೆ ಮಾತನಾಡಿದ ರೂಪಾ ಮೌದ್ಗಿಲ್ ಅವರು, "ವಿಕ್ರಂ ಗೌಡ ಎನ್‌ಕೌಂಟರ್ ನಡೆದ ನಿಖರ ಸ್ಥಳ ಯಾವುದು? ಪೋಸ್ಟ್ ಮಾರ್ಟಂ ಎಲ್ಲಿ ಮಾಡ್ತಾರೆ ಎಂಬಿತ್ಯಾದಿ ಪ್ರಶ್ನೆಗೆ ಉತ್ತರಿಸಿದರು.
ವಿಕ್ರಂಗೌಡ ವಿರುದ್ಧ 61 ಕೇಸ್ ಇತ್ತು; ಸರೆಂಡರ್ ಆಗೋದಕ್ಕೆ ಕೇಳಿದ್ವಿ, ಫಲ ಕೊಡಲಿಲ್ಲ: ರೂಪಾ
ನಕ್ಸಲ್ ನಾಯಕ ಕಬ್ಬಿನಾಲೆ ಭಾಗದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಇತ್ತು. ನಕ್ಸಲ್ ನಿಗ್ರಹಪಡೆಯವರು ಕೂಂಬಿಂಗ್ ಆಪರೇಷನ್ ಚುರುಕುಗೊಳಿಸಿದ್ದರು. ಪೀತಂಬೈಲ್‌ನಲ್ಲಿ ಎನ್‌ಕೌಂಟರ್ ಆಗಿರುವಂಥದ್ದು. ವಿಕ್ರಂ ಗೌಡ ಅಲಿಯಾಸ್ ಶ್ರೀಕಾಂತ್ ಹತನಾಗಿದ್ದಾನೆ. ಆತನಿಗೆ 46 ವರ್ಷ ವಯಸ್ಸು. ಕಾರ್ಕಳ ತಾಲೂಕು ಮೂಲದವನು. ಮೋಸ್ಟ್ ವಾಂಟೆಡ್ ನಕ್ಸಲ್ ಆಗಿದ್ದ. ವಿಕ್ರಂ ಗೌಡನ ವಿರುದ್ಧ 61 ಕೇಸ್ ಇತ್ತು. ಕೇರಳದಲ್ಲಿ 19 ಕೇಸ್ ಇತ್ತು. ಈಗ ಇರುವಂತಹ ನಕ್ಸಲರ ಪೈಕಿ ಪ್ರಮುಖನಾಗಿದ್ದ ವಿಕ್ರಂ ಗೌಡ. ಕಬಿನಿ ದಳಂ ಎರಡರ ನಾಯಕನಾಗಿದ್ದ. ಎಎನ್‌ಎಫ್ ನಡೆಸಿದ ನಾಲ್ಕನೇ ಎನ್‌ಕೌಂಟರ್ ಇದು. ನವೆಂಬರ್ 10ರಿಂದ ಕೂಂಬಿಂಗ್ ಆಪರೇಷನ್ ಶುರುಮಾಡಲಾಗಿತ್ತು. ನಿಖರ ಮಾಹಿತಿ ಇರುವ ಕಾರಣವೇ ಈ ಆಪರೇಷನ್ ನಡೆಸಲಾಗಿದೆ. ಇದು ಮುಂದುವರಿದಿದೆ. ವಿಕ್ರಂ ಗೌಡನಂತೆಯೇ ಇನ್ನೂ ನಾಲ್ಕೈದು ನಾಯಕರಿದ್ದಾರೆ. ಅವರನ್ನೂ ಪತ್ತೆ ಹಚ್ಚುವ ಕೆಲಸ ಮುಂದುವರಿಸಿದೆ ಎಂದು ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಐಜಿಪಿ ರೂಪಾ ಮೌದ್ಗಿಲ್ ಹೇಳಿದರು.
ವಿಕ್ರಂ ಗೌಡ ಪೋಸ್ಟ್ ಮಾರ್ಟಂ ಆಯಿತಾ, ಎಲ್ಲಿ ಮಾಡ್ತಾರೆ
ನಕ್ಸಲ್ ನಿಗ್ರಹ ಕಾರ್ಯಾಚರಣೆ, ಕೂಂಬಿಂಗ್ ಕಾರ್ಯಾಚರಣೆ ಎಲ್ಲಿ ನಡೆಯುತ್ತಿದೆ? ವಿಕ್ರಂ ಗೌಡನ ಮೃತದೇಹದ ಪೋಸ್ಟ್ ಮಾರ್ಟಂ ಆಯಿತಾ, ಅದು ಎಲ್ಲಿ ನಡೆಯುತ್ತೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಪ್ರತಿಕ್ರಿಯಿಸಿದ್ದು, ಈ ಮಾಹಿತಿಗಳನ್ನು ಹಂಚಿಕೊಳ್ಳಲಾಗದು. ಅದು ಗೌಪ್ಯತೆಯ ವಿಷಯ. ನಮ್ಮ ಕಾರ್ಯಾಚರಣೆಗೆ ಹಾನಿ ಉಂಟುಮಾಡುವಂಥದ್ದು ಎಂದು ಹೇಳಿದರು.
ವಿಕ್ರಂ ಗೌಡಗೆ ಶರಣಾಗುವಂತೆ ಸೂಚಿಸಲಾಗಿತ್ತು. ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೆ ಅವರು ಕೇಳಲಿಲ್ಲ. ಆಕ್ರಮಣಕಾರಿಯಾಗಿ ವರ್ತಿಸಿದ ಕಾರಣ ಎರಡೂ ಕಡೆಯಿಂದ ಫೈರಿಂಗ್ ಆಗಿದೆ. ಈ ಸಂದರ್ಭದಲ್ಲಿ ವಿಕ್ರಂ ಗೌಡ ಹತನಾದ ಎಂದು ರೂಪಾ ಮೌದ್ಗಿಲ್ ಸ್ಪಷ್ಟಪಡಿಸಿದರು.
ಸೋಮವಾರ ತಡರಾತ್ರಿ ಕಬ್ಬಿನಾಲೆ ನಕ್ಸಲ್ ಎನ್‌ಕೌಂಟರ್
ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಹೆಬ್ರಿ ತಾಲೂಕಿನ ಕಬ್ವಿನಾಲೆಯ ಪೀತಂಬೈಲುವಿನಲ್ಲಿ ಸೋಮವಾರ (ನವೆಂಬರ್ 18) ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಹತನಾಗಿದ್ದಾನೆ. ಕಾರ್ಕಳ, ಹೆಬ್ರಿ ಪರಿಸರದಲ್ಲಿ ಕೆಲದಿನಗಳಿಂದ ನಕ್ಸಲ್ ಓಡಾಟ ಗಮನಸೆಳೆದಿತ್ತು. ಹೀಗಾಗಿ, ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಕೂಂಬಿಂಗ್ ತೀವ್ರಗೊಳಿಸಿತ್ತು. ಸೋಮವಾರ (ನವೆಂಬರ್ 18) ರಾತ್ರಿ ಸೀತಂಬೈಲು ಸಮೀಪ 5 ಮಂದಿ ನಕ್ಸಲರ ತಂಡ ರೇಷನ್ ಸಂಗ್ರಹಕ್ಕೆ ಬಂದಾಗ ನಕ್ಸಲ್ ನಿಗ್ರಹ ಪಡೆಗೆ ಎದುರಾಗಿದೆ. ಈ ವೇಳೆ ನಡೆದ ದಾಳಿ- ಪ್ರತಿದಾಳಿಯಲ್ಲಿ ವಿಕ್ರಂ ಗೌಡ ಹತನಾಗಿದ್ದಾನೆ. ಉಳಿದ ನಾಲ್ವರು ಕಾಡಿನ ಹಾದಿಯಲ್ಲಿ ಪರಾರಿಯಾಗಿದ್ದು, ಅವರ ಪತ್ತೆಗೆ ಶೋಧ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.