Udupi-Dakshina Kannada: ಉಡುಪಿ, ದಕ್ಷಿಣ ಕನ್ನಡ ಕಡಲತೀರಕ್ಕೆ ಬರುವ ಪ್ರವಾಸಿಗರಿಗಾಗಿ ಇಲ್ಲಿದೆ ಉಪಯುಕ್ತ ಮಾಹಿತಿ-udupi news dakshina kannada news beach guards at coastal areas to protect tourists cleanliness of the sea mgb ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Udupi-dakshina Kannada: ಉಡುಪಿ, ದಕ್ಷಿಣ ಕನ್ನಡ ಕಡಲತೀರಕ್ಕೆ ಬರುವ ಪ್ರವಾಸಿಗರಿಗಾಗಿ ಇಲ್ಲಿದೆ ಉಪಯುಕ್ತ ಮಾಹಿತಿ

Udupi-Dakshina Kannada: ಉಡುಪಿ, ದಕ್ಷಿಣ ಕನ್ನಡ ಕಡಲತೀರಕ್ಕೆ ಬರುವ ಪ್ರವಾಸಿಗರಿಗಾಗಿ ಇಲ್ಲಿದೆ ಉಪಯುಕ್ತ ಮಾಹಿತಿ

Udupi-Dakshina Kannada beach: ಇನ್ನು ಕೆಲವೇ ದಿನಗಳಲ್ಲಿ ಮಳೆ ಆರಂಭವಾಗಲಿದೆ. ಈ ಸಂದರ್ಭವಲ್ಲದೆ, ಸಾಮಾನ್ಯವಾಗಿ ಪ್ರತಿದಿನ ಬೀಚ್ ಗೆ ಬರುವ ಪ್ರವಾಸಿಗರ ಸುರಕ್ಷತೆಯೂ ಪ್ರಮುಖವಾದ ವಿಚಾರ. ಇದಲ್ಲದೆ, ಮುಂದೆ ಕಡಲ್ಕೊರೆತ, ಪ್ರವಾಹವೇ ಮೊದಲಾದ ಸಂದರ್ಭ ರಕ್ಷಣಾ ಕಾರ್ಯವೂ ಅವಶ್ಯ. ಈ ಹಿನ್ನೆಲೆಯಲ್ಲಿ ಗೃಹರಕ್ಷಕ ದಳ ಸರ್ವಸನ್ನದ್ಧವಾಗಿದೆ.

ಗೃಹರಕ್ಷಕ ದಳದ ಜಾಗೃತಿ
ಗೃಹರಕ್ಷಕ ದಳದ ಜಾಗೃತಿ

ಮಂಗಳೂರು: ಮಂಗಳೂರು ಸಿಟಿಯಲ್ಲಿರುವ ಪಣಂಬೂರು, ತಣ್ಣೀರುಬಾವಿ ಬೀಚ್​​ಗಳು, ಹೊರವಲಯದ ಉಳ್ಳಾಲ, ಸೋಮೇಶ್ವರ, ಮುಕ್ಕ, ಸುರತ್ಕಲ್ ಬೀಚ್ , ಉಡುಪಿ ಜಿಲ್ಲೆಯ ಪಡುಬಿದ್ರಿ, ಕಾಪು, ಕೋಡಿ ಬೀಚ್ , ಉತ್ತರ ಕನ್ನಡದ ಮರವಂತೆ, ಮುರ್ಡೇಶ್ವರ, ಗೋಕರ್ಣ, ಕಾರವಾರ ಬೀಚ್ ನಲ್ಲಿ ಈಗಲೂ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿಲ್ಲ. ಶಾಲಾರಂಭಗೊಂಡ ಕಾರಣ ಫ್ಯಾಮಿಟಿ ಟ್ರಿಪ್ ಗಳು ಕಡಿಮೆ ಆಗಿದೆಯಾದರೂ, ಫ್ರೆಂಡ್ಸ್ ಗಳ ಜಾಲಿ ಟ್ರಿಪ್, ಆಫೀಸ್ ಟೂರ್ ಎಂಬ ನೆಪಗಳೊಂದಿಗೆ ಬಿಸಿಲ ಬೇಗೆ ತಣಿಸಲು ಕಡಲಿಗೆ ಮೈಯೊಡ್ಡುವವರು ಇನ್ನೂ ಇದ್ದಾರೆ.

ಇಂಥ ಹೊತ್ತಿನಲ್ಲೇ ಕಡಲತಡಿಯ ಸ್ವಚ್ಛತೆ ಹಾಗೂ ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಗರಿಷ್ಠ ಒತ್ತು ನೀಡಬೇಕಾಗಿದೆ. ಪಡುಬಿದ್ರಿಯಲ್ಲಿ ಬ್ಲೂ ಫ್ಲ್ಯಾಗ್ ಬೀಚ್ ನಲ್ಲಿ ಅಷ್ಟೊಂದು ಸಮಸ್ಯೆ ಇಲ್ಲದೇ ಇದ್ದರೂ ಉಚಿತ ಪ್ರವೇಶವಿರುವ ಇತರ ಬೀಚ್ ಗಳಲ್ಲಿ ಕಂಡಕಂಡಲ್ಲಿ ಕಸ ಎಸೆಯುವುದು, ತಿಂಡಿ, ತಿನಿಸುಗಳನ್ನು ಅಲ್ಲೇ ಮಾಡಿ, ಗಲೀಜು ಮಾಡುವುದು, ಕೆಲವೊಮ್ಮೆ ಮಲಮೂತ್ರಗಳ ವಿಸರ್ಜನೆ, ಮದ್ಯಪಾನ ಸೇವಿಸಿ ಅಲ್ಲೇ ಮಲಗುವುದು, ಕಸದ ಬುಟ್ಟಿ ಇದ್ದರೂ ಅದನ್ನು ಉಪಯೋಗಿಸದೇ ಇರುವವರೂ ಕಾಣಸಿಗುತ್ತಾರೆ. ಇದರಿಂದ ಪರಿಸರಕ್ಕೂ ಹಾನಿ, ಸುತ್ತಮುತ್ತಲು ಇರುವ ಇತರ ಪ್ರವಾಸಿಗರಿಗೂ ಕಿರಿಕಿರಿ.

ನಾವೇನು ಮಾಡಬೇಕು?

ಕರ್ನಾಟಕ ಕರಾವಳಿಯ ಪ್ರತಿಯೊಂದು ಬೀಚ್ ನಲ್ಲೂ ಕಸ ಎಸೆಯಲೆಂದೇ ಬುಟ್ಟಿ ಇಟ್ಟಿರುತ್ತಾರೆ. ಅವುಗಳನ್ನೇ ಉಪಯೋಗಿಸಿಕೊಳ್ಳಿ. ಹಾಗೆಯೇ ಪಕ್ಕದಲ್ಲೇ ಇರುವ ಸ್ಟಾಲ್ ಗಳಲ್ಲಿ ಐಸ್ ಕ್ರೀಮ್ ಸಹಿತ ವಿವಿಧ ತಿಂಡಿ, ತಿನಿಸುಗಳನ್ನು ಸೇವಿಸುವಾಗಲೂ ಉಪಯೋಗಿಸಿದ ವಸ್ತುಗಳನ್ನು ಹಾಕಲೆಂದೇ ಇರುವ ಜಾಗವನ್ನು ಬಳಸಿಕೊಳ್ಳಿ. ಚೂಪಾದ ವಸ್ತುಗಳು ನೆಲಕ್ಕೆ ಚೆಲ್ಲದಂತೆ ನೋಡಿಕೊಳ್ಳಿ. ಸಾಮಾನ್ಯವಾಗಿ ಫ್ರೆಂಡ್ಸ್ ಪಾರ್ಟಿ ಎಂದೆಲ್ಲಾ ಹೇಳಿಕೊಂಡು ಡ್ರಿಂಕ್ಸ್ ಪಾರ್ಟಿ ಮಾಡುವವರು ಬೀಚ್ ಗಳಿಗೆ ಯಾರಿಗೂ ಗೊತ್ತಾಗದಂತೆ ಲಗ್ಗೆ ಇಡುತ್ತಾರೆ. ಈ ಸಂದರ್ಭ ಒಡೆದ ಬಾಟಲಿಗಳು ಮರುದಿನ ಪ್ರವಾಸಕ್ಕೆಂದು ಬರುವ ಸಣ್ಣ ಮಕ್ಕಳ ಕಾಲಿಗೆ ಚುಚ್ಚಬಹುದು ಎಂಬ ಎಚ್ಚರವಿರಲಿ.

ಗೃಹರಕ್ಷಕ ದಳದ ಜಾಗೃತಿ:

ಇನ್ನು ಕೆಲವೇ ದಿನಗಳಲ್ಲಿ ಮಳೆ ಆರಂಭವಾಗಲಿದೆ. ಈ ಸಂದರ್ಭವಲ್ಲದೆ, ಸಾಮಾನ್ಯವಾಗಿ ಪ್ರತಿದಿನ ಬೀಚ್ ಗೆ ಬರುವ ಪ್ರವಾಸಿಗರ ಸುರಕ್ಷತೆಯೂ ಪ್ರಮುಖವಾದ ವಿಚಾರ. ಇದಲ್ಲದೆ, ಮುಂದೆ ಕಡಲ್ಕೊರೆತ, ಪ್ರವಾಹವೇ ಮೊದಲಾದ ಸಂದರ್ಭ ರಕ್ಷಣಾ ಕಾರ್ಯವೂ ಅವಶ್ಯ. ಈ ಹಿನ್ನೆಲೆಯಲ್ಲಿ ಗೃಹರಕ್ಷಕ ದಳ ಸರ್ವಸನ್ನದ್ಧವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಅವರು ಈಗಾಗಲೇ ಸೋಮೇಶ್ವರ, ಉಳ್ಳಾಲ ಮೊಗವೀರ ಪಟ್ನ ಬೀಚ್‍ಗಳಿಗೆ ಭೇಟಿ ನೀಡಿ ಅಲ್ಲಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಿಗೆ ಪ್ರವಾಹ ರಕ್ಷಣಾ ಕಾರ್ಯದ ಕುರಿತು ಸೂಕ್ತ ಸಲಹೆ ಮಾರ್ಗದರ್ಶನ ನೀಡಿದ್ದಾರೆ.

ಈ ಕುರಿತು ಅವರು ಎಚ್.ಟಿ. ಕನ್ನಡದೊಂದಿಗೆ ವಿವರಿಸಿದ್ದು ಹೀಗೆ. "ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ವಿಪತ್ತು ನಿರ್ವಹಣಾ ತಂಡ 60 ಗೃಹರಕ್ಷರರನ್ನು ಹೊಂದಿದೆ. ಮಂಗಳೂರಿನ 8 ಬೀಚ್‍ಗಳಾದ ಸೋಮೇಶ್ವರ, ಮೊಗವೀರಪಟ್ಣ, ಉಳ್ಳಾಲ ಹಾಗೂ ಪಣಂಬೂರು, ಫಾತಿಮಾಬೀಚ್, ತಣ್ಣೀರುಬಾವಿ, ಸುರತ್ಕಲ್, ಸಸಿಹಿತ್ಲು ಬೀಚ್‍ಗಳಲ್ಲಿ ಗೃಹರಕ್ಷಕರು ಪ್ರತೀ ಬೀಚ್‍ಗೆ ಇಬ್ಬರಂತೆ 2 ಪಾಳಿಯಲ್ಲಿ ಬೆಳಗ್ಗೆ 7 ರಿಂದ 8 ಗಂಟೆ ವರೆಗೆ ಕರ್ತವ್ಯ ನಿರ್ವಹಿಸುತ್ತಾರೆ. ಮಳೆಗಾಲದ ಸಂದರ್ಭ ಬೀಚ್ ಉಗ್ರವಾಗಿರುತ್ತದೆ. ಅಲೆಗಳು ಎತ್ತರಕ್ಕೆ ಏರುತ್ತಾ ಇರುತ್ತದೆ ಈ ಸಂದರ್ಭ ಮಂಗಳೂರಿಗೆ ಬರುವ ಪ್ರವಾಸಿಗರಿಗೆ ಆಳ ಅಗಲದ ಅರಿವಿರುವುದಿಲ್ಲ. ಸ್ವಾಭಾವಿಕವಾಗಿ ತೊಂದರೆಗೆ ಸಿಲುಕುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಕಳೆದ 5 ವರ್ಷಗಳಿಂದ ನಿರಂತರವಾಗಿ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ 8 ಬೀಚ್‍ಗಳಲ್ಲಿ ಬೀಚ್ ಗಾರ್ಡ್‍ಗಳಾಗಿ ಪ್ರವಾಸಿಗರ ರಕ್ಷಣೆಯನ್ನು ಮಾಡುತ್ತಿರುತ್ತೇವೆ. ಅದೇ ರೀತಿ ಜೂನ್ 1 ರಿಂದ ಎಲ್ಲಾ 8 ಬೀಚ್‍ಗಳಲ್ಲಿಯೂ ಕರ್ತವ್ಯ ನಿರ್ವಹಿಸಲಿದ್ದಾರೆ."

" ಜಿಲ್ಲಾಧಿಕಾರಿಯವರ ಆದೇಶದಂತೆ ಜಿಲ್ಲಾಡಳಿತದ ನಿರ್ದೇಶನದದಲ್ಲಿ ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆ ಜೊತೆಗೂಡಿ ಜಿಲ್ಲಾ ವಿಪತ್ತು ನಿರ್ವಹಣಾ ತಂಡದ ಗೃಹರಕ್ಷಕರು ಕರ್ತವ್ಯ ನಿರ್ವಹಿಸಲಿದ್ದಾರೆ. ಜಿಲ್ಲಾ ಕಛೇರಿಯಲ್ಲಿ 10 ಗೃಹರಕ್ಷಕರು ರಿಸರ್ವ್ ಆಗಿರುತ್ತಾರೆ. ಮಳೆಗಾಲದ ಸಂದರ್ಭದಲ್ಲಿ ಬಂದಂತಹ ತುರ್ತು ಕರೆಗಳಿಗೆ ಸ್ಪಂದಿಸುತ್ತಾರೆ ಇದಲ್ಲದೆ ಜಿಲ್ಲೆಯಾದ್ಯಂತ ಒಟ್ಟು 60 ಗೃಹರಕ್ಷಕರಿದ್ದು, ವಿಪತ್ತು ನಿರ್ವಹಣೆ ತಂಡದಲ್ಲಿ ಕೆಲಸ ಮಾಡಲಿದ್ದಾರೆ. ಸುಬ್ರಹ್ಮಣ್ಯದ ಸ್ನಾನಘಟ್ಟ, ಉಪ್ಪಿನಂಗಡಿಯ ಸಂಗಮ ಕ್ಷೇತ್ರ, ಬಂಟ್ವಾಳ, ಮೂಲ್ಕಿ, ಮತ್ತು ಸುಳ್ಯ, ಉಳ್ಳಾಲ ಈ ಎಲ್ಲಾ ಜಾಗದಲ್ಲಿ ಗೃಹರಕ್ಷಕರು ಸನ್ನದ್ಧರಾಗಿರುತ್ತಾರೆ. ತುರ್ತು ಕರೆಗಳಿಗೆ ಸ್ಪಂದಿಸುತ್ತಾರೆ. ಮುಳುಗು ತಜ್ಞರು ಹಾಗೂ ಉತ್ತಮ ಈಜುಗಾರರನ್ನು ಗುರುತಿಸಿಕೊಂಡಿತ್ತೇವೆ, ತುರ್ತು ಅಗತ್ಯದ ಸಂದರ್ಭಗಳಲ್ಲಿ ಜನರ ರಕ್ಷಣೆ ಹಾಗೂ ಆಸ್ತಿಪಾಸ್ತಿ ರಕ್ಷಣೆಗೆ ಗೃಹರಕ್ಷಕರು ಬದ್ಧರಾಗಿರುತ್ತೇವೆ. ಒಟ್ಟಿನಲ್ಲಿ ಎಲ್ಲಾ ಇಲಾಖೆಗಳ ಜೊತೆ ಸೇರಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನಾವು ಪ್ರವಾಸಿಗರ ರಕ್ಷಣೆಗೆ ಕಟಿಬದ್ಧರಾಗಿರುತ್ತೇವೆ."

ವರದಿ: ಹರೀಶ ಮಾಂಬಾಡಿ, ಮಂಗಳೂರು

mysore-dasara_Entry_Point