ಕನ್ನಡ ಸುದ್ದಿ  /  Karnataka  /  Dakshina Kannada News Odisha Train Accident Belthangady Woman On Mahimasagar Munimaharaj Yeshwanthpur Howrah Express Mgb

Odisha Tragedy: ನಾವು ಬದುಕಿ ಬರಲು ಮುನಿಮಹಾರಾಜ್ ಮಹಿಮೆಯೇ ಕಾರಣ; ಯಶವಂತಪುರ ಎಕ್ಸ್​ಪ್ರೆಸ್​​ನಲ್ಲಿದ್ದ ಬೆಳ್ತಂಗಡಿ ಮಹಿಳೆ ಹೇಳಿದ್ದಿಷ್ಟು

Belthangady: ಹಿಂದಿನ ಬೋಗಿಯಲ್ಲಿದ್ದ ಸಣ್ಣಪುಟ್ಟ ಗಾಯವಾದವರು ನಮ್ಮ ಬೋಗಿ ಕಡೆ ಬರಲಾರಂಭಿಸಿದರು. ನಾವು ಅವರನ್ನು ವಿಚಾರಿಸಿ ನಮ್ಮ ತುರ್ತು ಚಿಕಿತ್ಸೆ ಬಾಕ್ಸ್ ನಲ್ಲಿದ್ದ ಬ್ಯಾಂಡೇಜ್​ಗಳನ್ನು ನೀಡಿದೆವು. ಅವರ ಬಟ್ಟೆ ಬರೆಗಳು ರಕ್ತಸಿಕ್ತವಾಗಿತ್ತು. ನೋವು ಮತ್ತು ಘಟನೆಯ ಭೀಕರತೆಯನ್ನು ಪ್ರತ್ಯಕ್ಷ ಕಂಡಿದ್ದ ಅವರು ಭಯಭೀತರಾಗಿ ಅಳುತ್ತಿದ್ದರು ಎಂದರು ದೀಪಾಶ್ರೀ ಜೈನ್.

ದೀಪಾಶ್ರೀ ಜೈನ್ (ಎಡಚಿತ್ರ)
ದೀಪಾಶ್ರೀ ಜೈನ್ (ಎಡಚಿತ್ರ)

ಮಂಗಳೂರು: ತೀರ್ಥಯಾತ್ರೆಗೆ ಹೊರಟಿದ್ದ ದಕ್ಷಿಣ ಕನ್ನಡ, ಉಡುಪಿ ಮತ್ತು ಮಲೆನಾಡಿನ ಜೈನ ಸಮುದಾಯದವರು ಒಡಿಶಾದಲ್ಲಿ ನಡೆದ ರೈಲು ದುರಂತದ ಪ್ರತ್ಯಕ್ಷ ಅನುಭವವನ್ನು ತಿಳಿಸಿದ್ದಾರೆ. ಇವೆರೆಲ್ಲ ಅಪಘಾತಕ್ಕೀಡಾದ ಯಶವಂತಪುರ- ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿದ್ದರು.

ಟ್ರೆಂಡಿಂಗ್​ ಸುದ್ದಿ

ಜೂನ್​ 2, ಶುಕ್ರವಾರ ಒಡಿಶಾದ ಬಾಲಾಸೋರ್​ನಲ್ಲಿ ಕೇವಲ ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ನಡುವೆ ಮಾತ್ರ ಅಪಘಾತ ಸಂಭವಿಸಿದ್ದಲ್ಲ. ಬೆಂಗಳೂರಿನಿಂದ ಹೊರಟ ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲೂ ಅಪಘಾತಕ್ಕೀಡಾಗಿತ್ತು. ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿತ್ತು.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರಿನ ಸಂಸೆ, ಕಳಸ, ಹೊರನಾಡು ಸುತ್ತಮುತ್ತದ ಜೈನ ಬಂಧುಗಳು ಮಹಿಮಾಸಾಗರ ಮುನಿಮಹಾರಾಜರ ಸಂಕಲ್ಪದಂತೆ ಜಾರ್ಖಂಡ್ ರಾಜ್ಯದಲ್ಲಿರುವ ಸಮ್ಮೇದ ಶಿಖರ್ಜಿ ಪವಿತ್ರ ಸ್ಥಳಕ್ಕೆ ತೀರ್ಥಯಾತ್ರೆಗೆ ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್​ನಲ್ಲಿ ಹೊರಟಿದ್ದರು. ಅದರಲ್ಲಿ ವೇಣೂರಿನ ಆಶಾಲತಾ ಜೈನ್, ಮಮತಾ ಜೈನ್ ಹಾಗೂ ದೀಪಾಶ್ರೀ ಜೈನ್ ಕತ್ತೋಡಿ ಅವರೂ ಇದ್ದರು. ಯಾತ್ರೆ ಮತ್ತು ಆ ಮಹಾ ದುರಂತ ಮತ್ತು ಅಪಾಯದಿಂದ ಪಾರಾದ ಬಗ್ಗೆ ಯಾತ್ರಿಗಳಲ್ಲಿ ಓರ್ವರಾದ ದೀಪಾಶ್ರೀ ಜೈನ್ ಕತ್ತೋಡಿ ಅವರು ತಮ್ಮ ಅನುಭವವನ್ನು ತಿಳಿಸಿದ್ದಾರೆ.

ಸಲ್ಲೇಖನ ವ್ರತ ಸ್ವೀಕರಿಸುವುದಾಗಿ ಸಂಕಲ್ಪ ತೊಟ್ಟಿದ್ದ ಮುನಿಶ್ರೀಗಳು:

ಒಡಿಶಾ ರೈಲು ಅಪಘಾತ ಘಟನೆಯ ವಿಚಾರವನ್ನು ತಕ್ಷಣಕ್ಕೆ ತಿಳಿದುಕೊಂಡ ಮಹಿಮಾಸಾಗರ್ ಮುನಿಮಹಾರಾಜರು ಸರಿಸುಮಾರು ಒಂದೂವರೆ ದಿನಗಳ ಕಾಲ ಒಂದು ಹನಿ ನೀರನ್ನೂ ಮುಟ್ಟಿಲ್ಲವಂತೆ. ನಮ್ಮಲ್ಲಿಗೆ ಹೊರಟಿರುವ ಒಬ್ಬ ಯಾತ್ರಾರ್ಥಿಗಳಿಗೆ ಅಪಾಯವಾದರೆ ತಾನು ಸಲ್ಲೇಖನ ವ್ರತ ಸ್ವೀಕರಿಸುವುದಾಗಿ ಸಂಕಲ್ಪ ತೊಟ್ಟಿದ್ದರಂತೆ. ಇಂದು ನಾವು ಸುರಕ್ಷಿತವಾಗಿ ಆ ಮಹಾದುರಂತದದಿಂದ ಪವಾಡಸದೃಶವಾಗಿ ಪಾರಾಗಿದ್ದೇವೆ ಎಂದರೆ ಮಹಿಮಸಾಗರ ಮುನಿಮಹಾರಾಜರ ಮಹಿಮೆ ಹಾಗೂ ನಮ್ಮೆಲ್ಲರ ಪ್ರಾರ್ಥನೆಯೇ ಕಾರಣವೆನ್ನುತ್ತಾರೆ ದೀಪಾಶ್ರೀ ಜೈನ್. (ಧರ್ಮಪೂರ್ವಕವಾಗಿ ಶರೀರ ತ್ಯಾಗಮಾಡುವ ವಿಧಿಗೆ ಸಲ್ಲೇಖನ ವ್ರತ ಎನ್ನಲಾಗುತ್ತದೆ).

ದೀಪಾಶ್ರೀ ಜೈನ್ ತಮ್ಮ ಅನುಭವ ಹೇಳಿದ್ದು ಹೀಗೆ:

"ನಾವು ಮೇ 31ರಂದು ಕಳಸಕ್ಕೆ ತೆರಳಿ ಅಲ್ಲಿಯ ಬಸದಿಯಲ್ಲಿ ಪೂಜೆ ಸಲ್ಲಿಸಿ ಸಂಜೆ ಸುಮಾರು 6.30ಕ್ಕೆ ಎರಡು ಬಸ್​​ಳಲ್ಲಿ ಬೆಂಗಳೂರಿಗೆ ಹೊರಟೆವು. ಮರುದಿನ ಜೂ.1ರ ಮುಂಜಾನೆ 4ರ ಸುಮಾರಿಗೆ ಬೆಂಗಳೂರಿನ ಬಯ್ಯಪ್ಪನಹಳ್ಳಿ ರೈಲ್ವೇ ನಿಲ್ದಾಣಕ್ಕೆ ತೆರಳಿ ಬೆಳಿಗ್ಗೆ ಸುಮಾರು 10 ಗಂಟೆಗೆ ಕೋಲ್ಕತ್ತಾ ರೈಲಿಗೆ ಹೊರಡಲು ತಯಾರಾದೆವು. ಆದರೆ ರೈಲು 2 ಗಂಟೆ ವಿಳಂಬವಾದ ಹಿನ್ನೆಲೆಯಲ್ಲಿ 12 ಗಂಟೆಗೆ ರೈಲು ಬಂದಿದ್ದು, ಕೊನೆಯ ಮೂರು ಬೋಗಿಗಳಲ್ಲಿ ನಾವು 110 ಮಂದಿ ಕುಳಿತುಕೊಂಡೆವು. ರೈಲು ಮುಂದಕ್ಕೆ ಚಲಿಸಿತು. ವಿಶಾಖಪಟ್ಟಣ ತಲುಪಿದಾಗ ಅಲ್ಲೊಂದು ಆದ ಬದಲಾವಣೆ ನಮ್ಮನ್ನು ಇಂದು ಜೀವಂತ ಇರಿಸಿತು"

"ಜೂ. 2ರಂದು ಮಧ್ಯಾಹ್ನ ರೈಲು ವಿಶಾಖಪಟ್ಟಣ ತಲುಪಿತು. ಅಲ್ಲಿ ಮುಂದಿದ್ದ ರೈಲಿನ ಇಂಜಿನನ್ನು ಕಳಚಿದರು. ಮತ್ತು ರೈಲಿನ ಹಿಂದಿನ ಭಾಗಕ್ಕೆ ಇಂಜಿನನ್ನು ಅಳವಡಿಸಿದರು. ಆಗ ಸ್ವಾಭಾವಿಕವಾಗಿ ಮುಂದಿನ ಮೂರನೇ ಬೋಗಿಯಲ್ಲಿರುವಂತಾಯಿತು. ಸಂಜೆ 7 ಗಂಟೆ ಸುಮಾರಿಗೆ ದೊಡ್ಡದೊಂದು ಶಬ್ದದೊಂದಿಗೆ ರೈಲು ಒಮ್ಮಿಂದೊಮ್ಮೆಲೆ ಅಲುಗಾಡಿತು. ನಿಂತಿದ್ದವರೆಲ್ಲ ಆಯತಪ್ಪಿ ಬಿದ್ದರು. ರೈಲು ಕೆಲವೇ ಕ್ಷಣದಲ್ಲಿ ನಿಂತಿತು! ನಾವೆಲ್ಲ ಗಾಬರಿಗೊಂಡೆವು. ಒಬ್ಬರಿಗೊಬ್ಬರು ಎಲ್ಲಿದ್ದೇವೆ, ಏನಾಯಿತು ಏನಾಯಿತು ಎಂದು ಕೇಳತೊಡಗಿದೆವು. ಬಳಿಕ ಒಡಿಶಾದ ಬಾಲಾಸೂರ್ ತಲುಪಿದ್ದೇವೆ ಎಂದು ಗೊತ್ತಾಯಿತು. ಕೆಲವರು ರೈಲಿನಿಂದ ಇಳಿದು ಹಿಂಬದಿಗೆ ಓಡಲು ಆರಂಭಿಸಿದರು. ಸ್ಥಳೀಯ ಊರಿನವರು ಓಡೋಡಿ ಹೋಗುತ್ತಿರುವುದು ಕಾಣಿಸುತಿತ್ತು. ಒಂದೆಡೆ ಕತ್ತಲು ಮತ್ತೊಂದೆಡೆ ನಿರ್ಜನ ಪ್ರದೇಶ. ನಾವೂ ಇಳಿದು ಹೋಗಲು ಮುಂದಾದಾಗ ನಮ್ಮವರು ನಮ್ಮ ಸುರಕ್ಷತೆಯ ದೃಷ್ಟಿಯಿಂದ ಯಾರೂ ಇಳಿಯಬೇಡಿ ಎಂದು ಸೂಚಿಸಿದರು. ನಾವು ಆತಂಕದಲ್ಲೇ ಕುಳಿತುಕೊಂಡೆವು. ಬಳಿಕ ಮಹಾ ದುರಂತವೊಂದು ನಡೆದಿದೆ ಎಂದು ಗೊತ್ತಾಯಿತು. ಕೆಲವು ನಮ್ಮವರು ಅಲ್ಲಿಗೆ ತೆರಳಿ ನೀರಿನ ವ್ಯವಸ್ಥೆ ಮಾಡಿದರು. ಆಗ ರೈಲಿನಲ್ಲಿದ್ದ ನೂರಾರು ಜನರ ನೀರಿನ ಬಾಟಲಿಗಳು ಖಾಲಿಯಾಯಿತು. ಈ ಮಧ್ಯೆ ಟಿ.ವಿ, ವೆಬ್ಸೈಟ್ಗಳಲ್ಲಿ ವಿಚಾರ ತಿಳಿದ ಮನೆಗಳಿಂದ ನಮ್ಮವರಿಗೆ ಕರೆ ಬರಲು ಶುರುವಾಯಿತು ಕುಡಿಯುವ ನೀರಿಗೆ ಪರದಾಡುವಂತಾಯಿತು. ಆಗ ರೈಲಿನಲ್ಲಿದ್ದ ಕೆಲವರು ನಮ್ಮೆಲ್ಲರ ಖಾಲಿಬಾಟಲಿಗಳನ್ನು ಸಂಗ್ರಹಿಸಿ ಹತ್ತಿರದ ಮನೆಗಳಿಂದ ನೀರು ಸಂಗ್ರಹಿಸಿ ನೋವಿನಲ್ಲಿ ಪರದಾಡುತ್ತಿದ್ದ ಮಂದಿಗೆ ನೀರು ಪೂರೈಸಿದರು." ಹೀಗೆಂದು ದೀಪಾಶ್ರೀ ವಿವರಿಸಿದರು.

"ಮಧ್ಯರಾತ್ರಿ 12 ಗಂಟೆ ಆಗಿರಬಹುದು, ಹಿಂದಿನ ಬೋಗಿಯಲ್ಲಿದ್ದ ಸಣ್ಣಪುಟ್ಟ ಗಾಯವಾದವರು ನಮ್ಮ ಬೋಗಿ ಕಡೆ ಬರಲಾರಂಭಿಸಿದರು. ನಾವು ಅವರನ್ನು ವಿಚಾರಿಸಿ ನಮ್ಮ ತುರ್ತು ಚಿಕಿತ್ಸೆ ಬಾಕ್ಸ್ ನಲ್ಲಿದ್ದ ಬ್ಯಾಂಡೇಜ್​ಗಳನ್ನು ನೀಡಿದೆವು. ಅವರ ಬಟ್ಟೆ ಬರೆಗಳು ರಕ್ತಸಿಕ್ತವಾಗಿತ್ತು. ನೋವು ಮತ್ತು ಘಟನೆಯ ಭೀಕರತೆಯನ್ನು ಪ್ರತ್ಯಕ್ಷ ಕಂಡಿದ್ದ ಅವರು ಭಯಭೀತರಾಗಿ ಅಳುತ್ತಿದ್ದರು. ನಮ್ಮಲ್ಲಿದ್ದ ನೋವಿನ ಮಾತ್ರೆಗಳನ್ನು ಕೊಟ್ಟೆವು. ನಮ್ಮದು 12 ದಿನದ ತೀರ್ಥಯಾತ್ರೆಯಾದುದರಿಂದ ಮೆಡಿಕಲ್ ಕಿಟ್ಗಳು ನಮ್ಮಲ್ಲಿತ್ತು. ನಮ್ಮಲ್ಲಿದ್ದ ತಿಂಡಿ, ಫ್ರೂಟ್ಸ್ ಗಳನ್ನು ಗಾಯಾಳುಗಳಿಗೆ ತಿನ್ನಲು ಕೊಟ್ಟೆವು. ಅವರಿಗೆ ಮಲಗಲು ನಮ್ಮ ಸೀಟನ್ನು ಬಿಟ್ಟುಕೊಟ್ಟೆವು. ಮಧ್ಯರಾತ್ರಿ ಸುಮಾರು 1.30ರ ಸುಮಾರಿಗೆ ನಜ್ಜುಗುಜ್ಜಾದ ನಮ್ಮ ರೈಲಿನ ಹಿಂದಿನ ಮೂರು ಬೋಗಿಯನ್ನು ಕಳಚಿ ನಿಧಾನಗತಿಯಲ್ಲಿ ಸುರಕ್ಷಿತವಾಗಿದ್ದ ಪ್ರಯಾಣಿಕರನ್ನು ಹೊತ್ತು ನಮ್ಮ ಹೌರಾ ಸೂಪರ್ ಫಾಸ್ಟ್ ಕೋಲ್ಕತ್ತಾಗೆ ಹೊರಟಿತು".

"ಕೋಲ್ಕತ್ತಾಗೆ ಬಂದು ತಲುಪಿದಾಗ ರೈಲ್ವೇ ನಿಲ್ದಾಣದಲ್ಲಿ ಭಾರೀ ಸಂಖ್ಯೆಯಲ್ಲಿ ಇಲಾಖೆಯವರು, ಪೊಲೀಸರು, ಮೀಡಿಯಾದವರು ನಿಂತಿದ್ದರು. ನಾವು ರೈಲಿನಿಂದ ಇಳಿಯುತ್ತಿದ್ದಂತೆ ಮೀಡಿಯಾದವರು ನಮ್ಮನ್ನು ಇಂಟರ್ ವ್ಯೂ ಮಾಡಲು ಶುರು ಮಾಡಿದರು. ಅಲ್ಲಿ ನಮಗೆ ಫುಡ್ ಕಿಟ್ ಸಿಕ್ಕಿತು. ಅನ್ನ ನೀರಿಲ್ಲದೆ ಆತಂಕದಲ್ಲಿದ್ದ ನಮಗೆ ಫುಡ್ ಗ್ಲುಕೋಸ್ ನೀಡಿದಂತಾಯಿತು. ನಾವು 9 ಗಂಟೆಗೆ ಕೋಲ್ಕತ್ತಾ ತಲುಪಬೇಕಿತ್ತು. ಆ ಮಹಾದುರಂತದಿಂದ ಕೋಲ್ಕತ್ತಾದಿಂದ ನಮಗೆ ಶಿಖರ್ಜಿಗೆ ತೆರಳುವ ರೈಲು ತಪ್ಪಿತು. ಹಾಗಾಗಿ ನಮ್ಮ ತಂಡ ಮುಂದೆ ಶಿಖರ್ಜಿಗೆ ತಲುಪಲು 3 ಬಸ್ಸಿನ ವ್ಯವಸ್ಥೆ ಮಾಡಿದರು. ಅಲ್ಲಿಂದ ಹೊರಟ ನಾವು ಜೂ. 3ರ ರಾತ್ರಿ ಸುಮಾರು ಒಂದು ಗಂಟೆಯ ಸುಮಾರಿಗೆ ಶಿಖರ್ಜಿಯನ್ನು ಸುರಕ್ಷಿತವಾಗಿ ತಲುಪಿದೆವು. ನಮ್ಮ ಮಹಿಮಾಸಾಗರ್ ಮುನಿಮಹಾರಾಜರ ಮಹಿಮೆಯಿಂದ ಬದುಕುಳಿದು ಈ ಪವಿತ್ರ ಕ್ಷೇತ್ರದ ದರ್ಶನ ಮಾಡುವಂತಾಯಿತು. ಜೂ. 4ರಂದು ಅಲ್ಲಿದ್ದ ಎಲ್ಲಾ ಮುನಿಮಹಾರಾಜರುಗಳು ನಮ್ಮನ್ನು ಸ್ವಾಗತಿಸಿ ಗದ್ಗದಿತರಾದರು. ಆ ಭಾವನಾತ್ಮಕ ಕ್ಷಣದಲ್ಲಿ ನಮ್ಮ ಕಣ್ಣಂಚಿನಿಂದಲೂ ನೀರು ಹರಿಯಲಾರಂಭಿಸಿತು. ನಾವು ಶ್ರದ್ಧಾಭಕ್ತಿಯಿಂದ ಯಾತ್ರೆಯನ್ನು ಮುಂದುವರಿಸುತ್ತಿದ್ದೇವೆ" ಎಂದರು.

ವರದಿ: ಹರೀಶ ಮಾಂಬಾಡಿ, ಮಂಗಳೂರು