Hubli-Davangere-Bengaluru: ಸಿಹಿಸುದ್ದಿ; ಹುಬ್ಬಳ್ಳಿ-ದಾವಣಗೆರೆ-ಬೆಂಗಳೂರು ಮಾರ್ಗವಾಗಿ ಜೂನ್ 26 ರಿಂದ ವಂದೇ ಭಾರತ್​ ರೈಲು ಸಂಚಾರ ಆರಂಭ
ಕನ್ನಡ ಸುದ್ದಿ  /  ಕರ್ನಾಟಕ  /  Hubli-davangere-bengaluru: ಸಿಹಿಸುದ್ದಿ; ಹುಬ್ಬಳ್ಳಿ-ದಾವಣಗೆರೆ-ಬೆಂಗಳೂರು ಮಾರ್ಗವಾಗಿ ಜೂನ್ 26 ರಿಂದ ವಂದೇ ಭಾರತ್​ ರೈಲು ಸಂಚಾರ ಆರಂಭ

Hubli-Davangere-Bengaluru: ಸಿಹಿಸುದ್ದಿ; ಹುಬ್ಬಳ್ಳಿ-ದಾವಣಗೆರೆ-ಬೆಂಗಳೂರು ಮಾರ್ಗವಾಗಿ ಜೂನ್ 26 ರಿಂದ ವಂದೇ ಭಾರತ್​ ರೈಲು ಸಂಚಾರ ಆರಂಭ

Vande Bharat train: ಜೂನ್ 26 ರಂದು ಹುಬ್ಬಳ್ಳಿ -ದಾವಣಗೆರೆ-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಓಡಾಟ ಪ್ರಾರಂಭಿಸಲಿದ್ದು, ದಾವಣಗೆರೆಯಲ್ಲೂ ಕೂಡ ಈ ರೈಲು ನಿಲುಗಡೆ ಆಗಲಿದೆ.

ವಂದೇ ಭಾರತ್​ ರೈಲು (ಸಂಗ್ರಹ ಚಿತ್ರ)
ವಂದೇ ಭಾರತ್​ ರೈಲು (ಸಂಗ್ರಹ ಚಿತ್ರ)

ದಾವಣಗೆರೆ: ಹುಬ್ಬಳ್ಳಿ- ದಾವಣಗೆರೆ - ಬೆಂಗಳೂರು (Hubli-Davangere-Bengaluru) ಮಾರ್ಗವಾಗಿ ಇದೇ ಜೂನ್ 26 ರಂದು ವಂದೇ ಭಾರತ್ ರೈಲು (Vande Bharat train)ಸಂಚಾರ ಆರಂಭಿಸಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದ್ದಾರೆ.

ದೇಶದಲ್ಲಿ ಇದುವರೆಗೂ 19 ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭವಾಗಿದ್ದು, ದೇಶದ ಪ್ರಮುಖ ನಗರಗಳ ನಡುವೆ ತ್ವರಿತ, ಸುಗಮ, ಆರಾಮದಾಯಕ ಪ್ರಯಾಣಕ್ಕಾಗಿ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಲಾಗಿದೆ. ಜೂನ್ 26 ರಂದು ಹುಬ್ಬಳ್ಳಿ -ದಾವಣಗೆರೆ-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಓಡಾಟ ಪ್ರಾರಂಭಿಸಲಿದ್ದು, ದಾವಣಗೆರೆಯಲ್ಲೂ ಕೂಡ ಈ ರೈಲು ನಿಲುಗಡೆ ಆಗಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ನರೇಂದ್ರ ಮೋದಿ ಪ್ರಧಾನಿಯಾಗಿ 9 ವರ್ಷ ಪೂರೈಸಿದ್ದು, ಈ ಅವಧಿಯಲ್ಲಿ ಮೋದಿ ದೂರದೃಷ್ಟಿ ಯೋಜನೆ, ದಿಟ್ಟ ಕ್ರಮ, ವಿಶಿಷ್ಟ ನಿರ್ಧಾರಗಳಿಂದಾಗಿ ಕೇವಲ ಭಾರತವಷ್ಟೇ ಇಲ್ಲ, ಇಡೀ ಜಗತ್ತಿನ ಗಮನ ಸೆಳೆದಿದ್ದಾರೆ. ಉತ್ತಮ ಪಾರದರ್ಶಕ ಆಡಳಿತ, ಬಡವರ ಕಲ್ಯಾಣ, ರಾಷ್ಟ್ರೀಯ ಭದ್ರತೆ, ಸ್ವಾವಲಂಬನೆ, ಜಾಗತಿಕ ಪ್ರತಿಷ್ಟೆ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಭಾರತವನ್ನು ಮುಂಚೂಣಿಗೆ ಕೊಂಡೊಯ್ದು ನಿಲ್ಲಿಸುವ ಕೆಲಸವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಕಳೆದ 9 ವರ್ಷಗಳಲ್ಲಿ ಮೇಕ್ ಇನ್ ಇಂಡಿಯಾಗೆ ಒತ್ತು ನೀಡಿದ ಫಲವಾಗಿ ಭಾರತದಲ್ಲಿ ಪರೋಕ್ಷವಾಗಿ 10 ಕೋಟಿಯಷ್ಟು ಉದ್ಯೋಗ ಸೃಷ್ಟಿಯಾಗಿವೆ. 2004 ರಲ್ಲಿ 3.7 ಲಕ್ಷ ಕೋಟಿ ಇದ್ದ ವಿದೇಶಿ ಹೂಡಿಕೆ ಪ್ರಮಾಣ 2021-22 ರಲ್ಲಿ 6.8 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಳೆದ 9 ವರ್ಷಗಳಲ್ಲಿ ಸಾರಿಗೆ ವಲಯದಲ್ಲಿ ಕ್ರಾಂತಿಯೇ ಆಗಿದೆ. ದೇಶಾದ್ಯಂತ ಹೊಸದಾಗಿ 53 ಸಾವಿರ ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ ಎಂದು ಅವರು ಹೇಳಿದರು.

ಕೇಂದ್ರದ ಕಲ್ಯಾಣ ಯೋಜನೆಗಳು ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪುದನ್ನು ಖಾತರಿ ಪಡಿಸಲಾಗಿದೆ. ಮೂಲಭೂತ ಅಗತ್ಯಗಳಾದ ಶಿಕ್ಷಣ, ಆರೋಗ್ಯ, ಆರ್ಥಿಕ ಸ್ವಾವಲಂಬನೆ, ರಸ್ತೆ, ನೀರು, ವಿದ್ಯುತ್ ಹೀಗೆ ದೇಶದ ಮೂಲೆ ಮೂಲೆಯ ಗ್ರಾಮ, ಕುಗ್ರಾಮಗಳಿಗೂ ತಲುಪಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ. ಕೋವಿಡ್-19 ಮಹಾಮಾರಿಯಿಂದಾಗಿ ಜಗತ್ತಿನ ಅನೇಕ ರಾಷ್ಟ್ರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ತತ್ತರಿಸಿದ್ದರೂ ಭಾರತ ಮಾತ್ರ ಆರ್ಥಿಕತೆಯಲ್ಲೂ ವೇಗವಾಗಿ ಮುನ್ನಡೆಯುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಾಗಿ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲವೆನ್ನುವುದು ಸರಿಯಲ್ಲ. ಅದು ಕಷ್ಟದ ಸಮಯದಲ್ಲಿ ಉಪಯೋಗವಾಗಬೇಕಾದ ಅಕ್ಕಿ. ಅಂತಹ ಅಕ್ಕಿಯನ್ನು ಬೇಕಾಬಿಟ್ಟಿಯಾಗಿ ನೀಡಿದರೆ, ನಾವೂ ಸಹ ಶ್ರೀಲಂಕಾ ಅಥವಾ ಪಾಕಿಸ್ತಾನದಂತಾಗುವುದರಲ್ಲಿ ಅನುಮಾನ ಇಲ್ಲ ಎಂದರು. ನರೇಂದ್ರ ಮೋದಿ 5 ಕೆಜಿ ಉಚಿತ ಅಕ್ಕಿ ನೀಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ 10 ಕೆಜಿ ಅಕ್ಕಿ ನೀಡಿದ್ದರು. ವಾಸ್ತವ ಹೀಗಿದ್ದರೂ ಕಾಂಗ್ರೆಸ್ ಪಕ್ಷದವರು ಗ್ಯಾರಂಟಿ ಯೋಜನೆಗೆ ಕೇಂದ್ರ ಅಕ್ಕಿ ನೀಡುತ್ತಿಲ್ಲವೆನ್ನುವುದು ತಪ್ಪು ಎಂದರು.

ವರದಿ: ಅದಿತಿ, ದಾವಣಗೆರೆ

Whats_app_banner