ಮತ್ತೆ ಚಿಗುರೊಡೆದ ಕನಸು: 16ನೇ ಶತಮಾನದ ವಿಜಯಪುರ ನೀರಿನ ವ್ಯವಸ್ಥೆ ಕರೇಜ್ ಪುನರುಜ್ಜೀವನಕ್ಕೆ ಗ್ರೀನ್​ ಸಿಗ್ನಲ್
ಕನ್ನಡ ಸುದ್ದಿ  /  ಕರ್ನಾಟಕ  /  ಮತ್ತೆ ಚಿಗುರೊಡೆದ ಕನಸು: 16ನೇ ಶತಮಾನದ ವಿಜಯಪುರ ನೀರಿನ ವ್ಯವಸ್ಥೆ ಕರೇಜ್ ಪುನರುಜ್ಜೀವನಕ್ಕೆ ಗ್ರೀನ್​ ಸಿಗ್ನಲ್

ಮತ್ತೆ ಚಿಗುರೊಡೆದ ಕನಸು: 16ನೇ ಶತಮಾನದ ವಿಜಯಪುರ ನೀರಿನ ವ್ಯವಸ್ಥೆ ಕರೇಜ್ ಪುನರುಜ್ಜೀವನಕ್ಕೆ ಗ್ರೀನ್​ ಸಿಗ್ನಲ್

Vijayapura Karez Water System: ಆದಿಲ್‌ಷಾಹಿ ಕಾಲದ ಪುರಾತನ ಕರೇಜ್ ಆಧರಿಸಿದ ಜಲ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿರುವುದು ವಿಜಯಪುರ ಜನರಲ್ಲಿ ಹೊಸ ಉತ್ಸಾಹ ಮೂಡಿಸಿದೆ. (ವರದಿ: ಸಮೀವುಲ್ಲಾ ಉಸ್ತಾದ)

ಕರೇಜ್ ಜಲ ವ್ಯವಸ್ಥೆ
ಕರೇಜ್ ಜಲ ವ್ಯವಸ್ಥೆ

ವಿಜಯಪುರ: ವಿಜಯಪುರ ಮತ್ತು ಬೀದರ್‌ನಲ್ಲಿರುವ ಪುರಾತನ ಕರೇಜ್ ಪುನರುಜ್ಜೀವನಕ್ಕೆ ಸರ್ಕಾರವು ಬಜೆಟ್‌ನಲ್ಲಿ 15 ಕೋಟಿ ರೂ. ಘೋಷಣೆಯ ನಂತರ ಆದಿಲ್ ಶಾಹಿ ರಾಜವಂಶದ ಈ ಭವ್ಯವಾದ ವಾಸ್ತುಶಿಲ್ಪವಾದ ಕರೇಜ್ ಪುನರುಜ್ಜೀವನದ ಕನಸು ಈಗ ಮತ್ತೊಮ್ಮೆ ಚಿಗುರೊಡೆದಿದೆ. ಜಲವನ್ನು ಅತ್ಯಂತ ವೈಭವೋಪೇರಿತವಾಗಿ ಬಳಸಿದ ಕೀರ್ತಿ ಆದಿಲ್‌ಷಾಹಿ ಅರಸರಿಗೆ ಸಲ್ಲುತ್ತದೆ, ಐತಿಹಾಸಿಕ ರಾಮಲಿಂಗ ಕೆರೆ, ಕುಮಟಗಿ ಕೆರೆಯಲ್ಲಿನ ಜಲ ಆಧಾರಿತ ಹವಾನಿಯಂತ್ರತ ವ್ಯವಸ್ಥೆ, ಹಲವಾರು ಪ್ರಮುಖ ಸ್ಥಳಗಳಲ್ಲಿ ಸ್ನಾನ ಗೃಹಗಳಲ್ಲಿ ಕಂಡು ಬರುವ ಈಗಿನ ಷಾವರ್ ಮಾದರಿಗಳು, ವಿವಿಧ ಕಡೆಗಳಲ್ಲಿ ನೀರಿನ ಕಾರಂಜಿಗಳ ಮೇಲೆ ಕಣ್ಣಾಡಿಸಿದಾಗ ಆದಿಲ್‌ಷಾಹಿ ಕಾಲದ ಜಲ ಶ್ರೀಮಂತಿಕೆ ಹಾಗೂ ಜಲವನ್ನು ಯಾವ ರೀತಿ ಅಲಂಕಾರಿಕವಾಗಿಯೂ ಕಣ್ಮನ ಸೆಳೆಯುವಂತೆ ಮಾಡಬಹುದು ಎಂಬುದಕ್ಕೆ ಆದಿಲ್‌ಷಾಹಿಗಳ ಆಳ್ವಿಕೆ ಸಾಕ್ಷಿ. ಅವರ ಕಾಲದ ಪುರಾತನ ಕರೇಜ್ ಆಧರಿಸಿದ ಜಲ ವ್ಯವಸ್ಥೆಯನ್ನು (Karez Water System) ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿರುವುದು ಜನರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ವಿಜಯಪುರ ನಗರದಲ್ಲಿ 16ನೇ ಶತಮಾನದಲ್ಲಿ ಅಭಿವೃದ್ಧಿ ಪಡಿಸಿದ ಅಂತರ್ಜಲ ವ್ಯವಸ್ಥೆಗಳಲ್ಲಿ ಒಂದಾದ ಕರೇಜ್‌‌ನ ಪುನಶ್ಚೇತನ ಕಾರ್ಯವನ್ನು ಸರ್ಕಾರ ಕೈಗೆತ್ತಿಕೊಳ್ಳುವಂತೆ ಹೋರಾಟಗಾರರು ಮತ್ತು ಜಲಸಂರಕ್ಷಣಾಕಾರರು ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಇದ್ದಾರೆ. ರಾಮಲಿಂಗ ಕೆರೆ ಪುನರುಜ್ಜೀವನ, ಐತಿಹಾಸಿಕ ಕರೇಜ್ ಪುನರುಜ್ಜೀವನಕ್ಕಾಗಿ ಜಲ ಬಿರಾದಾರಿ ಸಾರಥ್ಯ ವಹಿಸಿದ್ದ ಪೀಟರ್ ಅಲೆಕ್ಸಾಂಡರ್ ದೊಡ್ಡ ಮಟ್ಟದ ಹೋರಾಟ ನಡೆಸುತ್ತಲೇ ಇದ್ದಾರೆ.

ಇತಿಹಾಸಕಾರರ ಪ್ರಕಾರ, ಕರೇಜ್ ಎನ್ನುವುದು ಒಂದು ಅಂತರ್ಜಲ ವ್ಯವಸ್ಥೆಯಾಗಿದ್ದು, ಆದಿಲ್ ಶಾಹಿ ರಾಜವಂಶದ ಅವಧಿಯಲ್ಲಿ ಸುಮಾರು 12 ಲಕ್ಷ ಜನರಿಗೆ ನೀರು ಸರಬರಾಜು ಮಾಡಲು, ಸಂಗ್ರಹಿಸಲು ಮತ್ತು ಕೊಯ್ಲು ಮಾಡಲು ಬಳಸಲಾಗುತ್ತಿತ್ತು. ಪ್ರಾಚೀನ ನೀರಿನ ವ್ಯವಸ್ಥೆಯನ್ನು ನುರಿತ ಪರ್ಷಿಯನ್ ಎಂಜಿನಿಯರ್‌ಗಳು ಅಭಿವೃದ್ಧಿಪಡಿಸಿದ್ದಾರೆ. ಈ ಹಿಂದೆ ಕರೇಜ್‌‌ನ್ನು ಪುನರುಜ್ಜೀವನಗೊಳಿಸಲು ಅಂದಿನ ವಿಜಯಪುರ ಜಿಲ್ಲಾಧಿಕಾರಿಗಳಾಗಿದ್ದ ಡಿ.ರಂದೀಪ್ ಮತ್ತು ಪಿ.ಸುನೀಲ ಕುಮಾರ್ ಅವರು ತೀವ್ರ ಆಸಕ್ತಿ ವಹಿಸಿದ್ದರು ಹಾಗೂ ಕರೇಜ್ ಪುರುಜ್ಜೀವನಕ್ಕೆ ಹಲವಾರು ಪ್ರಯತ್ನಗಳನ್ನು ಮಾಡಿದ್ದು ಇಲ್ಲಿ ಸ್ಮರಿಸಬಹುದು.

ಅವರು ಸರ್ಕಾರದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿ ವಿವವರವಾದ ಯೋಜನಾವರದಿಯನ್ನು ಸಿದ್ಧಪಡಿಸಲು ಖಾಸಗಿ ಏಜೆನ್ಸಿಯಾದ ಇಂಡಿಯನ್ ಹೆರಿಟೇಜ್ ಸಿಟೀಸ್ ನೆಟ್ ವರ್ಕ ಫೌಂಡೇಶನ್ (IHCNF)ಗೆ ವಹಿಸಲು ಸಲಹೆ ನೀಡಿ ನಂತರ ಅವರಿಗೆ ಯೋಜನಾವರದಿ ಸಿದ್ದಪಡಿಸಲು ನೇಮಿಸಿಕೊಳ್ಳಲಾಗಿತ್ತು. ಡಿಪಿಆರ್ ಸಿದ್ದಪಡಿಸಲು ಏಜೆನ್ಸಿ ನೇಮಕವಾದ ನಂತರ ಈ ಏಜೆನ್ಸಿಯು ವಿವರವಾದ ಯೋಜನಾವರದಿಯನ್ನು ಸಿದ್ಧಪಡಿಸಿತಾದರೂ ಯೋಜನಾ ವರದಿಯನ್ವಯ ಕರೇಜ್ ಪುನರುಜ್ಜೀವನಕ್ಕೆ ಹೆಚ್ಚಿನ ಹಣ ಬೇಕಾಗುವ ಕಾರಣ ಈ ವರದಿಯು ಸ್ವೀಕಾರವಾಗಲಿಲ್ಲ ಎನ್ನಲಾಗಿದೆ.

ಅಂದಿನ ಜಿಲ್ಲಾಧಿಕಾರಿಯಾಗಿದ್ದ ಪಿ.ಸುನೀಲ್ ಕುಮಾರ್ ಅವರು ಯೋಜನಾವರದಿಯು ಸ್ವೀಕಾರವಾಗದಿದ್ದರು ಅದಕ್ಕೆ ಪರ್ಯಾಯ ಮಾರ್ಗವಾಗಿ ಪ್ರಾಯೋಗಿಕ ಆಧಾರದ ಮೇಲೆ ಮೊದಲ ಹಂತದಲ್ಲಿ ಸುಮಾರು 4 ಕಿ.ಮೀ ಇರುವ ಕರೇಜ್ ನಲ್ಲಿ ಕೇವಲ 400 ಮೀಟರ್ ವರೆಗೆ ಪುನರುಜ್ಜೀವನಗೊಳಿಸಲು ನಿರ್ಧರಿಸಿದರು. ಇದಕ್ಕೆ ಪ್ರವಾಸೋಧ್ಯಮ ಇಲಾಖೆಯಿಂದ 400 ಮೀಟರ್ ಕರೇಜ್ ಪುನರುಜ್ಜೀವನಕ್ಕೆ ಇಟಗಿ ಪೆಟ್ರೋಲ್ ಪಂಪ್ ನಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆ ನಡುವಿನ ಕರೇಜ್‌ನ್ನು ಪುನರುಜ್ಜೀವನಗೊಳಿಸಲು ಗುರುತಿಸಿದರು. ಈ ಸ್ಥಳವು ಕರೇಜ್ ಪುನರುಜ್ಜೀವನಕ್ಕೆ ಉತ್ತಮ ಸ್ಥಿತಿಯಲ್ಲಿದ್ದು ಹಾಗೂ ಅನುಕೂಲವು ಇರುವುದರಿಂದ ಇದೇ ಸ್ಥಳವನ್ನು ಪುನರುಜ್ಜೀವನಗೊಳಿಸಲು ನಿರ್ಧರಿಸಲಾಯಿತಾದರೂ ಅನುದಾನದ ಕೊರತೆಯಿಂದ ಆ ಯೋಜನೆಯು ಸಾಕಾರಗೊಳ್ಳಲು ಸಾಧ್ಯವಾಗಲಿಲ್ಲ. 2015ರಲ್ಲಿ ಅಂದೂ ಕೂಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಬಿ.ಪಾಟೀಲರೂ ಕೂಡ ಕರೇಜ್‌ ಪುನರುಜ್ಜೀವನಗೊಳಿಸುವ ಘೋಷಣೆ ಮಾಡಿದರು ಆದರೆ ಯೋಜನೆ ಕೈಗೂಡಲಿಲ್ಲ.

ಪ್ರವಾಸಿ ತಾಣವಾಗಿಸುವ ಪ್ರಯತ್ನ:

ಅಂದಿನ ಜಿಲ್ಲಾಧಿಕಾರಿಯಾಗಿದ್ದ ಪಿ.ಸುನೀಲ್ ಕುಮಾರು ಅವರು ಆದಿಲ್ ಶಾಹಿ ಕಾಲದ ಕರೇಜ್‌ನ್ನು ಪುನರುಜ್ಜೀವನಗೊಳಿಸಿ ಅದನ್ನು ಪ್ರವಾಸಿ ತಾಣವಾಗಿ ನಿರ್ಮಿಸಲು ಸಹ ಯೋಜನೆಯನ್ನು ಮಾಡಿಕೊಂಡಿದ್ದರು ಎಂದು ಅಧಿಕಾರಿಗಳ ವಲಯದಿಂದ ಮಾಹಿತಿ ಲಭ್ಯವಾಗಿದ್ದು, ಒಂದು ವೇಳೆ ಇದು ಅಭಿವೃದ್ಧಿಯಾಗಿದ್ದರೆ ಇಂದು ಅದು ಪ್ರವಾಸಿಗರ ಆಕರ್ಷಣಿಯ ಸ್ಥಳ ಕೂಡ ಆಗಿರುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರೇಜ್ ಮೇಲೆ ಮನೆ ನಿರ್ಮಾಣ:

ಇನ್ನು ವಿಜಯಪುರದ ಕರೇಜ್ ಸುಮಾರು 4 ಕಿ.ಮೀ ಗಳಷ್ಟು ಇದೆ. ಇದರಲ್ಲಿ ಬಹುತೇಕ ಭಾಗದಲ್ಲಿ ಮನೆಗಳ ನಿರ್ಮಾಣವಾಗಿವೆ. ಕರೇಜ್ ಮೇಲೆಯೆ ಮನೆಗಳ ನಿರ್ಮಾಣವಾದರೂ ಪ್ರವಾಸೋದ್ಯಮ ಇಲಾಖೆಯಾಗಲಿ, ಜಿಲ್ಲಾಡಳಿತವಾಗಲಿ, ಎ.ಎಸ್.ಐ ಆಗಲಿ ಅವುಗಳ ತೆರವಿಗೆ ಈವರೆಗೂ ಮುಂದಾಗಿಲ್ಲ.

ಇನ್ನು ಹೆರಿಟೇಜ್ ಕಾರ್ಯಕರ್ತ ಪೀಟರ್ ಅಲೆಕ್ಸಾಂಡರ್, ಕರೇಜ್ ಪುನರುಜ್ಜೀವನಕ್ಕೆ ಹಣವನ್ನು ಮಂಜೂರು ಮಾಡುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಪುರಾತನ ನೀರಿನ ವ್ಯವಸ್ಥೆ ನಿರ್ಲಕ್ಷಿಸಲ್ಪಟ್ಟಿದೆ. ಹಣವನ್ನು ಮಂಜೂರು ಮಾಡುವ ಮೂಲಕ, ಸರ್ಕಾರವು ಕರೇಜ್‌ನಲ್ಲಿ ಆಸಕ್ತಿಯನ್ನು ತೋರಿಸಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಎ.ಎಸ್.ಐನ ಸಂಘಟಿತ ಪ್ರಯತ್ನಗಳೊಂದಿಗೆ, ಕರೇಜ್‌ನ ಪ್ರಮುಖ ಭಾಗವು ಈಗಾಗಲೇ ಕುಸಿಯುತ್ತಿರುವ ಕಾರಣ ಕರೇಜ್ ಪುನರುಜ್ಜೀವನ ಕಾರ್ಯ ಸಾಧ್ಯವಾದಷ್ಟು ಬೇಗ ಪ್ರಾರಂಭಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ವರದಿ: ಸಮೀವುಲ್ಲಾ ಉಸ್ತಾದ

ಇದನ್ನೂ ಓದಿ:

Whats_app_banner