ಕನ್ನಡ ಸುದ್ದಿ  /  ಜೀವನಶೈಲಿ  /  Beauty Tips: ಕಣ್ಣಿನ ರೆಪ್ಪೆಗೂದಲು ಉದುರಲು ಆರಂಭವಾಗಿದ್ಯಾ, ಅದಕ್ಕೆ ನೀವು ಮಾಡುತ್ತಿರುವ ಈ ತಪ್ಪುಗಳೇ ಕಾರಣ

Beauty Tips: ಕಣ್ಣಿನ ರೆಪ್ಪೆಗೂದಲು ಉದುರಲು ಆರಂಭವಾಗಿದ್ಯಾ, ಅದಕ್ಕೆ ನೀವು ಮಾಡುತ್ತಿರುವ ಈ ತಪ್ಪುಗಳೇ ಕಾರಣ

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಜೊತೆಗೆ ಕಣ್ಣಿನ ರೆಪ್ಪೆಗೂದಲು ಕೂಡ ಉದುರುತ್ತಿದೆ. ಆದರೆ ಇದಕ್ಕೆ ಕಾರಣ ಏನು ಎಂಬುದು ಮಾತ್ರ ಹಲವರಿಗೆ ತಿಳಿದಿಲ್ಲ. ಇದಕ್ಕೆ ಮುಖ್ಯ ಕಾರಣ ನಾವು ಅನುಸರಿಸುತ್ತಿರುವ ಈ ತಪ್ಪುಗಳು. ಇದರಿಂದ ರೆಪ್ಪೆಗೂದಲು ಉದುರುವ ಜೊತೆಗೆ ಅಂದ ಕೆಡುವುದೂ ಸುಳ್ಳಲ್ಲ. ಹಾಗಾದರೆ ರೆಪ್ಪೆಗೂದಲು ಉದುರಲು ಮುಖ್ಯ ಕಾರಣ ಏನು ಎಂಬುದನ್ನು ತಿಳಿಯಿರಿ.

ಕಣ್ಣಿನ ರೆಪ್ಪೆಗೂದಲು ಉದುರಲು ಆರಂಭವಾಗಿದ್ಯಾ, ಇದಕ್ಕೆ ನೀವು ಅನುಸರಿಸುತ್ತಿರುವ ಈ ತಪ್ಪುಗಳೇ ಕಾರಣ
ಕಣ್ಣಿನ ರೆಪ್ಪೆಗೂದಲು ಉದುರಲು ಆರಂಭವಾಗಿದ್ಯಾ, ಇದಕ್ಕೆ ನೀವು ಅನುಸರಿಸುತ್ತಿರುವ ಈ ತಪ್ಪುಗಳೇ ಕಾರಣ (Unsplash)

ಕಣ್ಣು ನಮಗೆ ಎಷ್ಟು ಮುಖ್ಯವೋ ಹಾಗೆಯೇ ಕಣ್ಣಿನ ರೆಪ್ಪೆಗಳು ಕೂಡ ಮುಖ್ಯ. ನಮ್ಮ ಕಣ್ಣುಗಳನ್ನು ಧೂಳು ಅಥವಾ ಇನ್ನಿತರೆ ಕಣಗಳಿಂದ ರಕ್ಷಿಸುವಲ್ಲಿ ಈ ರೆಪ್ಪೆಗೂದಲುಗಳು (eye lashes) ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಅಷ್ಟೇ ಅಲ್ಲ, ಅವು ನಮ್ಮ ಕಣ್ಣುಗಳ ಸೌಂದರ್ಯದ ಆಕರ್ಷಣೆಗೂ ಕೊಡುಗೆ ನೀಡುತ್ತವೆ. ಈಗಂತೂ ಹೆಣ್ಣುಮಕ್ಕಳು ತಾವು ಮೇಕಪ್ ಮಾಡುವಾಗ ಕೃತಕ ಕಣ್ಣಿನ ರೆಪ್ಪೆಗೂದಲನ್ನು ಸಹ ಇಡುತ್ತಾರೆ. ಇದರಿಂದ ಮುಖದ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ. ಇದೆಲ್ಲದರ ನಡುವೆ ಇತ್ತೀಚಿನ ದಿನಗಳಲ್ಲಿ ರೆಪ್ಪೆಗೂದಲುಗಳು ಉದುರುತ್ತಿರುವುದು ಒಂದು ಸಮಸ್ಯೆಯಾಗಿ ಕಾಡುತ್ತಿದೆ. ಇದು ಹೆಂಗಳೆಯರಲ್ಲಿ ಚಿಂತೆಗೆ ಕಾರಣವಾಗಿದೆ. ಕೂದಲು ಉದುರುವ ಜೊತೆಗೆ ರೆಪ್ಪೆಗೂದಲು ಕೂಡ ಉದುರುವುದಕ್ಕೆ ಕಾರಣ ಏನು ಎಂದು ಚಿಂತಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರೆಪ್ಪೆಗೂದಲುಗಳು ದುರ್ಬಲಗೊಳ್ಳುತ್ತಿರುವ ಹಿಂದೆ ಹಲವು ಕಾರಣಗಳಿವೆ. ಸರಿಯಾದ ಕಾಳಜಿಯಿಲ್ಲದೆ ಅವು ಉದರಲು ಕಾರಣವಾಗಿರಬಹುದು. ರೆಪ್ಪೆಗೂದಲುಗಳು (eye lashes) ಯಾಕಿಷ್ಟು ದುರ್ಬಲವಾಗುತ್ತಿದೆ. ಅದಕ್ಕೇನು ಕಾರಣ? ಎಂಬ ಮಾಹಿತಿ ಇಲ್ಲಿದೆ..

1. ಒತ್ತಡ ಮತ್ತು ಆತಂಕ: ಇತ್ತೀಚೆಗೆ ನಮ್ಮ ಜೀವನಶೈಲಿ ಬದಲಾಗಿದೆ. ಮನೆಕೆಲಸ, ಕಚೇರಿ ಕೆಲಸ ಇತ್ಯಾದಿಗಳಿಂದ ಜನ ಒತ್ತಡಕ್ಕೊಳಗಾಗುತ್ತಿದ್ದಾರೆ. ಅತಿಯಾದ ಒತ್ತಡ ಹಾಗೂ ಆತಂಕವು ಕೂದಲಿನ ಬೆಳವಣಿಗೆಯನ್ನು ಅಡ್ಡಿಪಡಿಸುತ್ತದೆ. ಇದು ರೆಪ್ಪೆಗೂದಲು ಉದುರಲು ಪ್ರಮುಖ ಕಾರಣವಾಗಿದೆ. ಒತ್ತಡವನ್ನು ನಿರ್ವಹಿಸಲು ವ್ಯಾಯಾಮ, ಧ್ಯಾನ ಅಥವಾ ಸಮಾಲೋಚನೆಯಂತಹ ಆರೋಗ್ಯಕರ ಕಾರ್ಯವಿಧಾನಗಳನ್ನು ಮೈಗೂಡಿಸಿಕೊಂಡರೆ ಈ ಸಮಸ್ಯೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.

2. ಕಡಿಮೆ ಬೆಲೆಯ ಮೇಕಪ್ ಸಾಮಗ್ರಿಗಳ ಬಳಕೆ: ಹೆಂಗಳೆಯರಿಗೆ ಮೇಕಪ್ ಅಂದ್ರೆ ಅಚ್ಚುಮೆಚ್ಚು. ಆದರೆ, ಕೆಲವರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಕಡಿಮೆ ಬೆಲೆ ಅಥವಾ ವಾಯಿದೆ ಮುಗಿದಿರುವ ಕಾಡಿಗೆ (eye liner), ಮಸ್ಕರಾ ಮುಂತಾದವುಗಳನ್ನು ಬಳಸುತ್ತಾರೆ. ಇನ್ನೂ ಕೆಲವರು ಕಣ್ಣಿನ ಮೇಕಪ್ ಅನ್ನು ತೆಗೆಯದೇ ಹಾಗೆಯೇ ಮಲಗುತ್ತಾರೆ. ಇದು ಕಣ್ಣಿನ ರೆಪ್ಪೆಗೆ ಹಾನಿಯನ್ನುಂಟು ಮಾಡುತ್ತದೆ.

3. ಕೃತಕ ಕಣ್ಣುರೆಪ್ಪೆ ಕೂದಲು: ಹೆಣ್ಮಕ್ಕಳು ತಮ್ಮ ಮುಖದ ಸೌಂದರ್ಯಕ್ಕಾಗಿ ಮೇಕಪ್ ಮಾಡಿಕೊಳ್ಳುತ್ತಾರೆ. ಈ ವೇಳೆ ಕೃತಕ ಕಣ್ಣಿನ ರೆಪ್ಪೆಗೂದಲನ್ನು ಸಹ ಅಳವಡಿಸುತ್ತಾರೆ. ಇದರಿಂದ ಕಣ್ಣಿನ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಆದರೆ, ಇದನ್ನು ಹಾಕುವಾಗ ಹಾಗೂ ತೆಗೆಯುವಾಗ ಸರಿಯಾದ ರೀತಿಯಲ್ಲಿ ತೆಗೆಯಲು ಆಗದೇ ಕೆಲವರು ಒದ್ದಾಡುತ್ತಾರೆ. ಹಾಗೆಯೇ ಕೃತಕ ಕಣ್ಣಿನ ರೆಪ್ಪೆಗೆ ಬಳಸುವ ಗಮ್‌ನ ಗುಣಮಟ್ಟ ಚೆನ್ನಾಗಿಲ್ಲದಿದ್ದರೂ, ನೈಸರ್ಗಿಕ ರೆಪ್ಪೆಗೂದಲಿಗೆ ಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.

4. ಕಣ್ಣುಗಳನ್ನು ಉಜ್ಜಿಕೊಳ್ಳುವುದು: ಸಾಮಾನ್ಯವಾಗಿ ಕಣ್ಣಿನ ರೆಪ್ಪೆಯನ್ನು ಉಜ್ಜಿಕೊಳ್ಳುವುದರಿಂದ ಅಂತಹ ಯಾವುದೇ ಹಾನಿಯುಂಟಾಗುವುದಿಲ್ಲ. ಆದರೆ, ಕಣ್ಣಿನ ಮೇಕಪ್ ತೆಗೆಯಲು ಮನಬಂದಂತೆ ಉಜ್ಜಿಕೊಂಡರೆ ರೆಪ್ಪೆಗೂದಲಿಗೆ ಹಾನಿಯುಂಟಾಗುತ್ತದೆ. ಇದರಿಂದ ರೆಪ್ಪೆಗೂದಲುಗಳು ಉದುರಲು ಕಾರಣವಾಗಬಹುದು. ಹೀಗಾಗಿ ಶುದ್ಧ ತೆಂಗಿನೆಣ್ಣೆ ಅಥವಾ ಮೇಕಪ್ ರಿಮೂವರ್‌ಗೆ ಹತ್ತಿಯನ್ನು ಅದ್ದಿ ನಿಧಾನವಾಗಿ ತೆಗೆಯಬೇಕು. ನಂತರ ಶುದ್ಧ ನೀರಿನಿಂದ ತೊಳೆದುಕೊಳ್ಳಬೇಕು.

5. ಆರೋಗ್ಯ ಸಮಸ್ಯೆ: ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳು, ಉದಾಹರಣೆಗೆ ಥೈರಾಯ್ಡ್ ಸಮಸ್ಯೆ, ಹಾರ್ಮೋನ್ ಅಸಮತೋಲನ ಇತ್ಯಾದಿಗಳಿಂದಲೂ ಕಣ್ಣು ರೆಪ್ಪೆಗೂದಲುಗಳ ನಷ್ಟಕ್ಕೆ ಕಾರಣವಾಗಬಹುದು. ಒಂದು ವೇಳೆ ನಿಮಗೆ ವಿಪರೀತ ಕಣ್ಣಿನ ರೆಪ್ಪೆಗೂದಲುಗಳು ಉದುರಿಹೋಗುತ್ತಿದ್ದರೆ, ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಕೂಡಲೇ ತಜ್ಞ ವೈದ್ಯರನ್ನು ಭೇಟಿಯಾಗುವುದು ಒಳಿತು.

6. ಪೌಷ್ಟಿಕಾಂಶದ ಕೊರತೆಗಳು: ಜೀವಸತ್ವಗಳು, ಖನಿಜಗಳು ಮತ್ತು ಪ್ರೊಟೀನ್‌ಗಳಂತಹ ಅಗತ್ಯ ಪೋಷಕಾಂಶಗಳ ಕೊರತೆ ಕೂಡ ಈ ಸಮಸ್ಯೆಗೆ ಕಾರಣವಾಗಿದೆ. ವಿಟಮಿನ್ ಎ, ಸಿ, ಇ ಮತ್ತು ಬಯೋಟಿನ್ ಸಮೃದ್ಧವಾಗಿರುವ ಸಮತೋಲಿತ ಆಹಾರವು, ಕಣ್ಣಿನ ರೆಪ್ಪೆಗೂದಲು ಸೇರಿದಂತೆ ಆರೋಗ್ಯಕರ ತಲೆಗೂದಲ ಬೆಳೆವಣಿಗೆಗೆ ಪ್ರಮುಖ ಅಂಶವಾಗಿದೆ. ರೆಪ್ಪೆಗೂದಲ ಬೆಳವಣಿಗೆಗಾಗಿ ಮೀನು, ಒಣ ಹಣ್ಣುಗಳು, ಸೊಪ್ಪು ಮತ್ತು ಮೊಟ್ಟೆ ಸೇರಿದಂತೆ ಪೌಷ್ಠಿಕಾಂಶಯುಕ್ತ ಆಹಾರವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

ಕಣ್ಣುಗಳನ್ನು ಶುದ್ಧ ನೀರಿನಿಂದ ತೊಳೆಯಬೇಕು. ಈ ಸೂಕ್ಷ್ಮ ಕೂದಲಿನ ಬೆಳವಣಿಗೆಗೆ ಹರಳೆಣ್ಣೆ, ಜೇನುತುಪ್ಪ ಮತ್ತು ವಿಟಮಿನ್ ಇ ನಂತಹ ಪದಾರ್ಥಗಳಿರುವ ಕ್ಲೀನ್ ಸೀರಮ್ ಅನ್ನು ನೀವು ಆಯ್ಕೆ ಮಾಡಬಹುದು. ತಲೆಗೂದಲ ಬೆಳವಣಿಗೆಗೆ ನಾವು ಎಷ್ಟೆಲ್ಲಾ ಮಹತ್ವ ಕೊಡುತ್ತೇವೆಯೋ ಅದೇ ರೀತಿ ಕಣ್ಣಿನ ರೆಪ್ಪೆಗೂದಲ ಬಗ್ಗೆ ಕಾಳಜಿ ವಹಿಸಿದರೆ ಈ ಸಮಸ್ಯೆ ದೂರವಾಗುವುದರಲ್ಲಿ ಖಂಡಿತ ಅನುಮಾನವಿಲ್ಲ.

ಬರಹ: ಪ್ರಿಯಾಂಕ ಗೌಡ

ವಿಭಾಗ