ಬೆಳ್ಳುಳ್ಳಿ ಸಿಪ್ಪೆ ತೆಗೆಯುವುದು ಕಷ್ಟನಾ: ಈ ತಂತ್ರಗಳನ್ನು ಅನುಸರಿಸಿ, ಕೆಲಸವನ್ನು ಸುಲಭವಾಗಿಸಿ
ಭಕ್ಷ್ಯಗಳನ್ನು ತಯಾರಿಸುವಾಗ ಅಥವಾ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ತಯಾರಿಸಲು ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಬೇಕಾಗುತ್ತದೆ. ಆದರೆ, ಬೆಳ್ಳುಳ್ಳಿ ಸಿಪ್ಪೆ ಸುಲಿಯುವುದೆಂದರೆ ಅದು ಕಷ್ಟವೇ ಸರಿ. ಇಲ್ಲಿ ನೀಡಿರುವ ಕೆಲವು ತಂತ್ರ ಅಥವಾ ಸಲಹೆಗಳನ್ನು ತೆಗೆದುಕೊಂಡು ಸುಲಭವಾಗಿ ಬೆಳ್ಳುಳ್ಳಿಯ ಸಿಪ್ಪೆ ಸುಲಿಯಬಹುದು. ಅದು ಹೇಗೆ ಅನ್ನೋದು ಇಲ್ಲಿದೆ.
ನಾವು ದಿನನಿತ್ಯದ ಅಡುಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ಬಳಸುತ್ತೇವೆ. ತಿಂಗಳಿಗೊಮ್ಮೆ ಕೆಲವರು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ತಯಾರಿಸಬಹುದು. ವಿವಿಧ ಪಾಕವಿಧಾನಗಳಿಗೆ ಬೆಳ್ಳುಳ್ಳಿಯನ್ನು ಹೆಚ್ಚು ಬಳಸಲಾಗುತ್ತದೆ. ಸಸ್ಯಾಹಾರದಿಂದ ಹಿಡಿದು ಮಾಂಸಾಹಾರ ಖಾದ್ಯಗಳವರೆಗೆ ಬೆಳ್ಳುಳ್ಳಿಯ ಬಳಕೆ ಹೆಚ್ಚು. ಆದರೆ ಬೆಳ್ಳುಳ್ಳಿಯು ಕಠಿಣವಾದ ಪದರದಿಂದ ಮುಚ್ಚಲ್ಪಟ್ಟಿರುತ್ತದೆ. ಅವುಗಳನ್ನು ತೆಗೆದುಹಾಕುವುದು ಅಂದರೆ ಒಂದು ಸವಾಲೇ ಸರಿ. ಸುಲಿದ ಬೆಳ್ಳುಳ್ಳಿ ಕೂಡ ಸೂಪರ್ ಮಾರ್ಕೆಟ್‌ಗಳಲ್ಲಿ ಸಿಗುತ್ತದೆ. ಆದರೆ, ಅದು ತಾಜಾ ಆಗದಿರಬಹುದು. ಹೀಗಾಗಿ ಮನೆಯಲ್ಲಿಯೇ ಅದನ್ನು ಸುಲಿಯುವುದು ಉತ್ತಮ. ಕೆಲವೊಮ್ಮೆ ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆಯಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಉಗುರು ನೋಯಬಹುದು. ಇಲ್ಲಿ ನೀಡಿರುವ ಕೆಲವು ತಂತ್ರ ಅಥವಾ ಸಲಹೆಗಳನ್ನು ತೆಗೆದುಕೊಂಡು ಸುಲಭವಾಗಿ ಬೆಳ್ಳುಳ್ಳಿಯ ಸಿಪ್ಪೆ ಸುಲಿಯಬಹುದು. ಅದು ಹೇಗೆ ಅನ್ನೋದು ಇಲ್ಲಿದೆ.
ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ತೆಗೆಯಲು ಸಲಹೆಗಳು
ಮೈಕ್ರೋವೇವ್ ವಿಧಾನ: ಬೆಳ್ಳುಳ್ಳಿಯ ಸಿಪ್ಪೆ ತೆಗೆಯಲು ಇದು ಸುಲಭವಾದ ವಿಧಾನವಾಗಿದೆ. ಮೊದಲು ಬೆಳ್ಳುಳ್ಳಿಯನ್ನು ಬೇರ್ಪಡಿಸಿ. ನಂತರ ಅವುಗಳನ್ನು ಮೈಕ್ರೋವೇವ್-ಸುರಕ್ಷಿತ ಬಟ್ಟಲಿನಲ್ಲಿ ಇರಿಸಿ. ಮೈಕ್ರೊವೇವ್‍ನಲ್ಲಿ 10 ರಿಂದ 15 ಸೆಕೆಂಡುಗಳ ಕಾಲ ಬಿಸಿ ಮಾಡಿ.
ಈಗ ಮೈಕ್ರೋವೇವ್ ಶಾಖವು ಬೆಳ್ಳುಳ್ಳಿ ಪದರಗಳನ್ನು ಸಡಿಲಗೊಳಿಸುತ್ತದೆ. ಬೆಳ್ಳುಳ್ಳಿ ಬಿಸಿಯಾಗುವುದರಿಂದ ಅದರ ಸಿಪ್ಪೆಯು ವಿಸ್ತರಿಸಲು ಕಾರಣವಾಗುತ್ತದೆ. ಇದರಿಂದ ಬಹಳ ಸುಲಭವಾಗಿ ಬೇರ್ಪಡುತ್ತದೆ. ಈ ಸರಳ ಸಲಹೆಯನ್ನು ಅನುಸರಿಸುವುದರಿಂದ ನಿಮ್ಮ ಸಮಯವನ್ನು ಉಳಿಸಬಹುದು ಜತೆಗೆ ಶ್ರಮವೂ ಕಡಿಮೆಯಾಗಲಿದೆ.
ನೀರಿನಲ್ಲಿ ನೆನೆಸಿ: ಇನ್ನೊಂದು ಸುಲಭ ವಿಧಾನವೆಂದರೆ ಬೆಳ್ಳುಳ್ಳಿ ಎಸಳನ್ನು ಒಂದು ಬೌಲ್ ನೀರಿನಲ್ಲಿ ಕೆಲವು ನಿಮಿಷಗಳ ಕಾಲ ನೆನೆಸಿಡುವುದು. ಇದು ಬೆಳ್ಳುಳ್ಳಿಯ ಚರ್ಮವನ್ನು ಮೃದುಗೊಳಿಸುತ್ತದೆ. ಅದನ್ನು ಒಣಗಿಸಿ ನಂತರ ಬಳಸಬಹುದು. ಆದರೆ, ನೀವು ಬೆಳ್ಳುಳ್ಳಿ ಪೇಸ್ಟ್ ಮಾಡಲು ಇಚ್ಛಿಸಿದಾಗ ಈ ರೀತಿ ನೀರಿನಲ್ಲಿಡುವುದರಿಂದ ಅದನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಸಾಧ್ಯವಾಗದಿರಬಹುದು. ಹೀಗಾಗಿ ಅದನ್ನು ಸಾಕಷ್ಟು ಒಣಗಿಸುವ ಅಗತ್ಯವಿದೆ.
ಬೆಳ್ಳುಳ್ಳಿಯನ್ನು ಒತ್ತಬಹುದು ಅಥವಾ ಸೂಜಿಯನ್ನು ಬಳಸಬಹುದು: ತಳದಲ್ಲಿ ಸೂಜಿಯನ್ನು ಬಳಸಿ ಬೆಳ್ಳುಳ್ಳಿಯ ಸಿಪ್ಪೆ ತೆಗೆಯಬಹುದು. ಮೇಲೆ ತಿಳಿಸಿದ ಸಲಹೆಗಳಿಗೆ ಹೋಲಿಸಿದರೆ ಇದು ಉತ್ತಮ ವಿಧಾನವಲ್ಲ. ಬೆಳ್ಳುಳ್ಳಿಯ ಮೇಲೆ ಸ್ವಲ್ಪ ಕತ್ತರಿಸಿ ಅದನ್ನು ಗಟ್ಟಿಯಾಗಿ ಒತ್ತಿದಾಗ ಸಿಪ್ಪೆ ಸಡಿಲಗೊಳ್ಳುತ್ತದೆ. ನಂತರ ಪದರವನ್ನು ತೆಗೆದುಹಾಕಲು ಸುಲಭವಾಗುತ್ತದೆ.
ಬೆಳ್ಳುಳ್ಳಿ ಪ್ರೆಸ್, ಸಿಪ್ಪೆಸುಲಿಯುವ ಉಪಕರಣಗಳು: ಬೆಳ್ಳುಳ್ಳಿ ಪ್ರೆಸ್ ಮತ್ತು ಸಿಪ್ಪೆಸುಲಿಯುವ ಉಪಕರಣಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆನ್‌ಲೈನ್ ಮಾತ್ರವಲ್ಲದೆ ಮಾರುಕಟ್ಟೆಗಳಲ್ಲೂ ಇದು ಲಭ್ಯವಿದೆ. ಇದರಿಂದಲೂ ಬೆಳ್ಳುಳ್ಳಿಯ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು.
ವಿಭಾಗ