ಕೊಬ್ಬು ಕಡಿಮೆ ಆಗ್ಬೇಕು ಅಂದ್ರೆ ಹರಸಾಹಸ ಪಡ್ಬೇಕು ಅಂತಿಲ್ಲ; ಈ 8 ಸರಳ ನಿಯಮ ಪಾಲಿಸಿದ್ರೆ ಸಾಕು, ಕೆಲವು ದಿನಗಳಲ್ಲಿ ಪರಿಣಾಮ ಕಾಣುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  ಕೊಬ್ಬು ಕಡಿಮೆ ಆಗ್ಬೇಕು ಅಂದ್ರೆ ಹರಸಾಹಸ ಪಡ್ಬೇಕು ಅಂತಿಲ್ಲ; ಈ 8 ಸರಳ ನಿಯಮ ಪಾಲಿಸಿದ್ರೆ ಸಾಕು, ಕೆಲವು ದಿನಗಳಲ್ಲಿ ಪರಿಣಾಮ ಕಾಣುತ್ತೆ

ಕೊಬ್ಬು ಕಡಿಮೆ ಆಗ್ಬೇಕು ಅಂದ್ರೆ ಹರಸಾಹಸ ಪಡ್ಬೇಕು ಅಂತಿಲ್ಲ; ಈ 8 ಸರಳ ನಿಯಮ ಪಾಲಿಸಿದ್ರೆ ಸಾಕು, ಕೆಲವು ದಿನಗಳಲ್ಲಿ ಪರಿಣಾಮ ಕಾಣುತ್ತೆ

ದೇಹದ ಕೊಬ್ಬು ಕರಗಿಸೋದು ಹೇಗಪ್ಪಾ ಅನ್ನೋ ಚಿಂತೆ ನಿಮಗಿದ್ರೆ ಫಿಟ್‌ನೆಸ್‌ ಎಕ್ಸ್‌ಪರ್ಟ್ ಸುನಿಲ್ ಶೆಟ್ಟಿ ಒಂದಿಷ್ಟು ಟಿಪ್ಸ್ ನೀಡಿದ್ದಾರೆ. ಈ 8 ಸರಳ ಸೂತ್ರಗಳನ್ನು ಅನುಸರಿಸಿದ್ರೆ ನೀವು ಕೆಲವೇ ದಿನಗಳಲ್ಲಿ ವೇಗವಾಗಿ ಕೊಬ್ಬು ಕರಗಿಸಲು ಸಾಧ್ಯವಿದೆ. ಹಾಗಾದರೆ ಆ ಸರಳ ಸೂತ್ರಗಳು ಯಾವುದು ಎಂದು ನೋಡಿ.

ಫಿಟ್‌ನೆಸ್ ಟಿಪ್ಸ್
ಫಿಟ್‌ನೆಸ್ ಟಿಪ್ಸ್ (PC: Canva)

ದೇಹದಲ್ಲಿ ಕೊಬ್ಬಿನಾಂಶ ಹೆಚ್ಚುವುದರಿಂದ ತೂಕ ಏರಿಕೆ ಮಾತ್ರವಲ್ಲ. ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೂ ಮೂಲವಾಗುತ್ತದೆ. ಆ ಕಾರಣಕ್ಕೆ ಪರಿಣಾಮಕಾರಿಯಾಗಿ ಕೊಬ್ಬು ಕರಗಿಸಿಕೊಳ್ಳುವುದು ಅಗತ್ಯವಾಗುತ್ತದೆ. ಅತಿಯಾದ ಕೊಬ್ಬಿನಿಂದಾಗಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತವೆ.

ದೇಹದಲ್ಲಿನ ಕೊಬ್ಬು ಕರಗಿಸುವುದರಿಂದ ದೈಹಿಕ ಕಾರ್ಯಕ್ಷಮತೆ ಹೆಚ್ಚುತ್ತದೆ. ಇದರಿಂದ ಶಕ್ತಿಯ ಮಟ್ಟ ಸುಧಾರಿಸುತ್ತದೆ. ನಿದ್ದೆಯಲ್ಲಿ ಉಸಿರು ಕಟ್ಟುವಿಕೆಯಂತಹ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗಾದರೆ ವೇಗವಾಗಿ ಕೊಬ್ಬು ಕರಗಬೇಕು ಅಂದ್ರೆ ಏನು ಮಾಡಬೇಕು ಎಂಬುದನ್ನು ನೋಡೋಣ.

ಕ್ಯಾಲೊರಿ ಕೊರತೆ ಮಾಡುವುದು

ಕ್ಯಾಲೊರಿ ಕೊರತೆ ಅಂದರೆ ನಾವು ಸೇವಿಸುವುದಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡುವುದು. ಆ್ಯಪ್‌ಗಳ ಸಹಾಯದಿಂದ ನಿಮ್ಮ ಆಹಾರ ಸೇವನೆಯನ್ನು ಮೇಲ್ವಿಚಾರಣೆ ಮಾಡಿ. ತಿನ್ನುವ ಭಾಗ ಕಡಿಮೆ ಮಾಡುವುದು ಹಾಗೂ ಅತಿಯಾಗಿ ತಿನ್ನುವುದನ್ನು ತಪ್ಪಿಸಿ. ಸ್ಥಿರವಾದ ಕೊಬ್ಬು ನಷ್ಟಕ್ಕೆ ಪ್ರತಿ ದಿನ 500-ಕ್ಯಾಲೋರಿ ಬರ್ನ್ ಮಾಡುವ ಗುರಿ ಇರಿಸಿಕೊಳ್ಳಿ.

ಕ್ಯಾಲೊರಿ ಇರುವ ದ್ರವಾಹಾರ ಸೇವನೆ ಬೇಡ

ಸೋಡಾ, ಜ್ಯೂಸ್ ಮತ್ತು ಸಕ್ಕರೆ ಅಂಶ ಇರುವ ಕಾಫಿಗಳಂತಹ ಪಾನೀಯಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ, ಆದರೆ ಇವು ಹಸಿವನ್ನು ಪೂರೈಸುವುದಿಲ್ಲ. ಇವುಗಳ ಬದಲು ನೀರು, ಗ್ರೀನ್ ಟೀ, ಬ್ಲ್ಯಾಕ್‌ ಟೀ, ಗಿಡಮೂಲಿಕೆ ಚಹಾಗಳನ್ನು ಆರಿಸಿಕೊಳ್ಳಬಹುದು. ಇವುಗಳಿಗೆ ಸುವಾಸನೆ ದೊರೆಯಲು ನಿಂಬೆರಸ, ಸೌತೆಕಾಯಿ ಅಥವಾ ಪುದೀನಾ ಕೂಡ ಸೇರಿಸಬಹುದು.

ವಾರಕ್ಕೆ ಕನಿಷ್ಠ ಮೂರು ಬಾರಿ ವ್ಯಾಯಾಮ

ಸ್ಟ್ರೇಂಥ್ ಟ್ರೈನಿಂಗ್ ವ್ಯಾಯಾಮಗಳು ಸ್ನಾಯುಗಳಿಗೆ ಬಲತುಂಬುತ್ತವೆ. ಕಾರ್ಡಿಯೊ ವ್ಯಾಯಾಮಗಳು ಕ್ಯಾಲೊರಿ ಬರ್ನ್ ಆಗಲು ಸಹಾಯ ಮಾಡುತ್ತವೆ. ಕನಿಷ್ಠ 20 ರಿಂದ 30 ನಿಮಿಷ ಕಾರ್ಡಿಯೋ ವ್ಯಾಯಾಮ ಮಾಡಬೇಕು. ಗರಿಷ್ಠ ಫಲಿತಾಂಶಗಳಿಗಾಗಿ ಸ್ಕ್ವಾಟ್‌ಗಳು, ಡೆಡ್‌ಲಿಫ್ಟ್‌ಗಳು ಮತ್ತು ಪುಷ್-ಅಪ್‌ಗಳಂತಹ ಮೂವಿಂಗ್ ಎಕ್ಸ್‌ಸೈಜ್ ಮೇಲೆ ಗಮನ ಹರಿಸಬೇಕು.

ಪ್ರತಿ ಊಟದಲ್ಲೂ ಪ್ರೊಟೀನ್ ಇರಲಿ

ನೀವು ಸೇವಿಸುವ ಪ್ರತಿ ಊಟ, ಉಪಾಹಾರದಲ್ಲಿ ಪ್ರೊಟೀನ್ ಅಂಶ ಇರಲೇಬೇಕು. ಇದರಿಂದ ನೀವು ಹೆಚ್ಚು ಕಾಲ ಹೊಟ್ಟೆ ತುಂಬಿದಂತೆ ಇರುತ್ತೀರಿ. ಇದು ಸ್ನಾಯುವಿನ ದ್ರವ್ಯರಾಶಿಯನ್ನು ಸಂರಕ್ಷಿಸುತ್ತದೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ.ಮೊಟ್ಟೆ, ಕೋಳಿ, ಮೀನು, ತೋಫು, ಮಸೂರ ಮತ್ತು ಗ್ರೀಕ್ ಕರ್ಡ್ ಸೇವನೆಗೆ ಒತ್ತು ನೀಡಬೇಕು. ಪ್ರತಿ ಊಟದಲ್ಲಿ 20-30 ಗ್ರಾಂ ಪ್ರೋಟೀನ್ ಅಂಶ ಇರುವಂತೆ ನೋಡಿಕೊಳ್ಳಿ.

ತರಕಾರಿಗಳು ಸಮೃದ್ಧವಾಗಿರುವುದು

ತರಕಾರಿಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಆದರೆ ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ, ಇವು ನಿಮಗೆ ದಿನವಿಡೀ ಹಸಿವಾಗದಂತೆ ಇರಲು ಸಹಾಯ ಮಾಡುತ್ತವೆ. ಪಾಲಕ್‌, ಕೋಸುಗಡ್ಡೆ, ಕ್ಯಾರೆಟ್, ಚೀನೀಗುಂಬಳ, ದೊಣ್ಣೆಮೆಣಸು ಹೆಚ್ಚು ಸೇವಿಸಿ.

ಪ್ರತಿದಿನ 7 ರಿಂದ 9 ಗಂಟೆ ನಿದ್ದೆ

ಅಸಮರ್ಪಕ ನಿದ್ರೆ ಹಸಿವಿನ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬಿನ ನಷ್ಟವನ್ನು ನಿಧಾನಗೊಳಿಸುತ್ತದೆ. ಮಲಗುವ ಸಮಯದ ದಿನಚರಿಯನ್ನು ಅನುಸರಿಸಿ, ಮಲಗುವ ಮುನ್ನ ಸ್ಕ್ರೀನ್‌ ಟೈಮ್‌ ಮಿತಿಗೊಳಿಸಿ ಮತ್ತು ಗಾಢವಾದ, ಶಾಂತ ವಾತಾವರಣವನ್ನು ರಚಿಸಿ. ಗುಣಮಟ್ಟದ ನಿದ್ರೆಯು ಚೇತರಿಕೆಯನ್ನು ಹೆಚ್ಚಿಸುತ್ತದೆ ಮತ್ತು ಕಡುಬಯಕೆಗಳನ್ನು ನಿಗ್ರಹಿಸುತ್ತದೆ.

ಪ್ರತಿದಿನ ವಾಕಿಂಗ್‌ ಮಾಡುವುದು

ಪ್ರತಿದಿನ ವಾಕಿಂಗ್ ಮಾಡುವುದು ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ದೈಹಿಕ ಚಟುವಟಿಕೆಯು ಸಾಕಷ್ಟು ಕೊಬ್ಬು ಸುಡಲು ನೆರವಾಗುತ್ತದೆ. ಊಟದ ನಂತರ ಸ್ವಲ್ಪ ನಡೆಯಿರಿ ಮತ್ತು ಲಿಫ್ಟ್‌ಗಳ ಬದಲಿಗೆ ಮೆಟ್ಟಿಲುಗಳನ್ನು ಆರಿಸಿಕೊಳ್ಳಿ.

ಸ್ಥಿರತೆ ಕಾಪಾಡಿಕೊಳ್ಳಿ

ಕೊಬ್ಬು ಒಂದೇ ಬಾರಿಗೆ ಕರಗುವುದಿಲ್ಲ. ಅದಕ್ಕಾಗಿ ಸಾಕಷ್ಟು ಶ್ರಮದ ಅವಶ್ಯಕತೆ ಇದೆ. ಜೊತೆಗೆ ಸ್ಥಿರತೆ ಕೂಡ ಬಹಳ ಮುಖ್ಯ. ನೀವು ಸ್ಥಿರವಾಗಿರಲು ಅಭ್ಯಾಸ ಮಾಡಿ. ಇದರಿಂದ ನಿರೀಕ್ಷಿತ ಫಲಿತಾಂಶ ಖಚಿತ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner