ಫೇಕ್ ಇಟ್ ಟಿಲ್ ಯು ಮೇಕ್ ಇಟ್: ಓದಿಸಿದ ಗಂಡನ ಬಗ್ಗೆ ಕೃತಜ್ಞತೆ ಇದೆ, ಪ್ರೀತಿ ಹುಟ್ತಿಲ್ಲ ಎನ್ನುವ ಹೆಂಡತಿಯ ಮಾತು ಅರ್ಥೈಸುವುದು ಹೇಗೆ -ಯುವ ಮನ-relationship tips husband wife relationship problems in arranged marriage psychologist rupa rao marital problems dmg ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಫೇಕ್ ಇಟ್ ಟಿಲ್ ಯು ಮೇಕ್ ಇಟ್: ಓದಿಸಿದ ಗಂಡನ ಬಗ್ಗೆ ಕೃತಜ್ಞತೆ ಇದೆ, ಪ್ರೀತಿ ಹುಟ್ತಿಲ್ಲ ಎನ್ನುವ ಹೆಂಡತಿಯ ಮಾತು ಅರ್ಥೈಸುವುದು ಹೇಗೆ -ಯುವ ಮನ

ಫೇಕ್ ಇಟ್ ಟಿಲ್ ಯು ಮೇಕ್ ಇಟ್: ಓದಿಸಿದ ಗಂಡನ ಬಗ್ಗೆ ಕೃತಜ್ಞತೆ ಇದೆ, ಪ್ರೀತಿ ಹುಟ್ತಿಲ್ಲ ಎನ್ನುವ ಹೆಂಡತಿಯ ಮಾತು ಅರ್ಥೈಸುವುದು ಹೇಗೆ -ಯುವ ಮನ

Husband Wife Relationship: ಹೆಂಡತಿ ಇಷ್ಟಪಟ್ಟಷ್ಟೂ ಓದಿಸಿದ ಗಂಡನ ಬಗ್ಗೆ ಇತ್ತೀಚೆಗೆ ಹೆಂಡತಿಗೆ ಅಸಮಾಧಾನ. ಈ ಸಮಸ್ಯೆಗೆ ಪರಿಹಾರ ಅಂದುಕೊಂಡಷ್ಟು ಸುಲಭವಿಲ್ಲ. ಸರಿ-ತಪ್ಪು ಎಂಬ ಕಪ್ಪು-ಬಿಳುಪಿನ ಉತ್ತರಗಳ ಬದುಕು ಮನಸ್ಸುಗಳ ಹಂದರದಲ್ಲಿ ಏನೆಲ್ಲಾ ಇದೆ? ಈ ಬರಹದಲ್ಲಿ ವಿವರಿಸಿದ್ದಾರೆ ಬೆಂಗಳೂರಿನ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಡಾ ರೂಪಾ ರಾವ್.

ವಿವಾಹಪೂರ್ವ ಸಮಾಲೋಚನೆಯಿಂದ ಹೊಂದಾಣಿಕೆ ಅರಿಯಲು ಸಾಧ್ಯ. ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಡಾ ರೂಪಾ ರಾವ್
ವಿವಾಹಪೂರ್ವ ಸಮಾಲೋಚನೆಯಿಂದ ಹೊಂದಾಣಿಕೆ ಅರಿಯಲು ಸಾಧ್ಯ. ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಡಾ ರೂಪಾ ರಾವ್

ಪ್ರಶ್ನೆ: ನನ್ನದು ಹಿರಿಯರು ನೋಡಿ ಮಾಡಿಕೊಟ್ಟ ಮದುವೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಗಂಡನನ್ನು ನಾನು, ನನ್ನನ್ನು ಗಂಡ ಇಷ್ಟಪಟ್ಟೆವು. ನನಗೆ ಓದಿನಲ್ಲಿ ಆಸಕ್ತಿಯಿತ್ತು. ಗಂಡನೂ ಪ್ರೋತ್ಸಾಹಿಸಿದ. ಡಿಗ್ರಿ ಮಾಡಿದೆ, ಮಾಸ್ಟರ್‌ ಡಿಗ್ರಿ ಪಡೆದೆ. ಈಗ ಒಳ್ಳೆಯ ಕಡೆ ಕೆಲಸವೂ ಸಿಕ್ಕಿದೆ. ಆದರೆ ಗಂಡನಿಗೆ ಓದಿನಲ್ಲಿ ಆಸಕ್ತಿಯಿಲ್ಲ. ಮೊದಲಿನಂತೆ ಈಗಲೂ ಒಂದು ಚಿಲ್ಲರೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಬೆವರು ವಾಸನೆಯಲ್ಲಿ ಮನೆಗೆ ಬರ್ತಾನೆ. ಅವನಿಗೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಸೆಯಿದೆ, ಅದನ್ನು ಬಾಯಿಬಿಟ್ಟೂ ಹೇಳ್ತಾನೆ. ಅದರೆ ಅವನು ನನಗೆ ಸೆಟ್ ಆಗಲ್ಲ ಮೇಡಂ. ಬಹಳ ತಡವಾಗಿ ಈ ವಿಷಯ ಅರ್ಥವಾಯಿತು. ಅವನು ಓದಿಸದಿದ್ದರೆ ಬಹುಶಃ ನನಗೆ ಈ ಭಾವನೆ ಬರುತ್ತಿರಲಿಲ್ಲ ಅನ್ನಿಸುತ್ತದೆ. ಅವನ ವಿಚಾರದಲ್ಲಿ ಗಂಡ ಎನ್ನುವ ಪ್ರೀತಿಗಿಂತಲೂ ನಾನು ಅವನಿಗೆ ಋಣಿ ಎನ್ನುವ ಪ್ರಜ್ಞೆ ಇದೆ. ಆದರೆ ಅವನನ್ನು ಬಿಡಬೇಕು ಎನ್ನುವ ಉದ್ದೇಶವಿಲ್ಲ. ದಯವಿಟ್ಟು ನನ್ನ ತೊಳಲಾಟಕ್ಕೆ ಒಂದು ಪರಿಹಾರ ಸೂಚಿಸಿ ಮೇಡಂ. -ಹೆಸರು ಮತ್ತು ಊರು ಬೇಡ

ಉತ್ತರ: ಈ ಪ್ರಶ್ನೆಗೆ ಉತ್ತರವನ್ನು ಎರಡು ಆಯಾಮಗಳಲ್ಲಿ ಕೊಡಬಹುದು. ಕೊನೆಗೆ ನಿರ್ಧಾರ ನಿಮಗೆ ಬಿಟ್ಟಿದ್ದು‌. ಮೊದಲನೆಯದು ನಿಮ್ಮ ಕೇಂದ್ರಿತ ದೃಷ್ಟಿಕೋನ.

ಮೊದಲ ಆಯಾಮ: ಮನುಷ್ಯರಿಗಷ್ಟೇ ಇರುವ ಬುದ್ಧಿ

ನೀವು ಮೊದಲು ಅವರನ್ನು ಇಷ್ಟಪಟ್ಟಿರಿ. ಆದರೆ ಈಗೀಗ ಇಷ್ಟ ಆಗುತ್ತಿಲ್ಲ ಹಾಗೂ ಅವರು ‘ಸೆಟ್’ ಆಗುತ್ತಿಲ್ಲ ಎಂಬ ಭಾವನೆ ಬರತೊಡಗಿದೆ. ಅಂದರೆ ಓದುವ ಮುನ್ನ ನಿಮ್ಮ‌ ಮನಸು ನಿಮ್ಮ ಪತಿಯನ್ನು ಒಪ್ಪಿತ್ತು ಅನ್ನುವುದಕ್ಕಿಂತ ನಿಮಗೆ ಹೋಲಿಕೆಗೆ ಅವಕಾಶ ಇರಲಿಲ್ಲ. ಇದೀಗ ಮಾಸ್ಟರ್ ಡಿಗ್ರಿ ಮಾಡಿದ ಮೇಲೆ ನಿಮ್ಮ ಮನಸು‌ ಅವರನ್ನು ಹೊರಗಿನವರೊಂದಿಗೆ ಹೋಲಿಸಲಾರಂಭಿಸಿದೆ. ಆದ್ದರಿಂದಲೇ ಇದೀಗ ಅವರು ನಿಮಗೆ ಸೆಟ್ ಆಗುತ್ತಿಲ್ಲ ಎಂದೆನಿಸಲಾರಂಭಿಸಿದೆ. ನನಗೆ ಇವರಿಗಿಂತ ಹೆಚ್ಚು ಓದಿದವರು, ಒಪ್ಪ ಓರಣ ಇರುವವರು ಸಿಗಬೇಕಿತ್ತು ಎನಿಸುತ್ತಿದೆ. ಅದು‌ ಸಹಜ ಕೂಡ. ಇನ್ನಷ್ಟು ಬೇಕು, ಮತ್ತೇನೋ ಬೇಕಿತ್ತು‌ ಎಂಬುದು ಮನುಷ್ಯರಿಗಷ್ಟೇ ಇರುವ ಬುದ್ದಿ.

ಈ ಆಲೋಚನೆಗಳಿಂದ ನೀವು ಹೊರಬರಬೇಕು ಎಂದೆನಿಸಿದರೆ ಕೆಳಗಿನ ಇನ್ನೊಂದು ಆಯಾಮವನ್ನು ಓದಿ. ಆಗ ನಿಮಗೆ ಹೊಳಹು ಸಿಗಬಹುದು. ಆದರೆ ‌ಈ ಆಲೋಚನೆಗಳು ನಿಮಗೆ ದೂರ ತೀರದ ಆಸೆಯನ್ನು ಕಾಣಿಸುತ್ತಿದ್ದರೆ, ಈ ಇವನು ಸೆಟ್ ಆಗುತ್ತಿಲ್ಲ ಎಂಬ ಆಲೋಚನೆ ನಿಮ್ಮಿಬ್ಬರ ದಾಂಪತ್ಯದಲ್ಲಿ ಬಿರುಕು ಹಾಗೀ ವಿರಸ‌ ಮೂಡಿಸುತ್ತಿದ್ದರೆ, ನಿಮ್ಮಲ್ಲಿ ಅವರನ್ನು ನೋಡಿದರೆ ಅಸಮಾಧಾನ ಮೂಡುತ್ತಿದ್ದರೆ‌‌ ಇಬ್ಬರೂ ಈ ಬದುಕಿನಲ್ಲಿ ಸುಖವಾಗಿ ಇರಲಾರಿರಿ.

ನೀವು ಬರೆದಂತೆ ಪ್ರಿತಿಗಿಂತ ಋಣಿ ಎಂದು ನೀವು ಈ ದಾಂಪತ್ಯದಲ್ಲಿ ಮುಂದುವರೆಯುತ್ತಿದ್ದರೆ, ನಿಮಗೂ ‌ಹಾಗೂ ಅವರಿಗೂ ಇಬ್ಬರಿಗೂ ದ್ರೋಹ‌ ಬಗೆದುಕೊಳ್ಳುತ್ತಿದ್ದೀರಿ ಎಂದೇ ಅರ್ಥ. ನೆನಪಿಟ್ಟುಕೊಳ್ಳಿ ಅವರು ನಿಮ್ಮ‌ ಆಸೆಗಳನ್ನು ಪ್ರೋತ್ಸಾಹಿಸಿದರು ಆದರೆ‌ ಅವರಿಗೆ ಓದುವ ಆಸಕ್ತಿ ಇಲ್ಲ ಎನ್ನುವುದನ್ನೂ ನೀವು ಅಕ್ಸೆಪ್ಠ್ ಮಾಡಲಾಗದೇ ಅದನ್ನೇ ಕುಂದಾಗಿ ನೋಡಿದರೆ ಬದುಕು ಇಬ್ಬರಿಗೂ ಬವಣೆಯೇ. ಆದ್ದರಿಂದ ಇಬ್ಬರೂ‌ ಅಥವಾ ನೀವಾದರೂ ಆಪ್ತ ಸಮಾಲೋಚಕರನ್ನು ಭೇಟಿಯಾಗಿ ಖುಷಿಯಾಗಿ ಒಟ್ಟಿಗೆ ಬದುಕುವ ಅಥವಾ ಬೇರೆಯಾಗಿ ಬದುಕುವ ದಾರಿಗಳನ್ನು ಆರಿಸಿಕೊಳ್ಳಿ.

ಎರಡನೆಯ ಆಯಾಮ: ಫೇಕ್ ಇಟ್ ಟಿಲ್ ಯು ಮೇಕ್ ಇಟ್

ಪ್ರೀತಿಯ ಅಭಿವ್ಯಕ್ತಿ ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ.‌ ಹಾಗೇ ಅದನ್ನು ತನ್ನ ಸಂಗಾತಿ ಹೀಗೆ ವ್ಯಕ್ತಪಡಿಸಲಿ ಎಂಬ ನಿರೀಕ್ಷೆಯೂ ಇರುತ್ತದೆ . ಈಗ ನೀವೇ ಹೇಳಿದಂತೆ, 'ನಿಮ್ಮ ಪತಿ ನಿಮ್ಮನ್ನು ಓದಿಸದಿದ್ದಿದ್ದರೆ ನಿಮಗೆ ಈ ರೀತಿ ಅನಿಸಿಕೆ ಬರುತ್ತಿರಲಿಲ್ಲವೇನೋ' ಎಂಬ ಮಾತನ್ನು ತೆಗೆದುಕೊಳ್ಳುವ. ನಿಮಗೆ ಓದುವ ಆಸಕ್ತಿ ಇದ್ದುದನ್ನು ಮನಗಂಡು ನಿಮ್ಮ ಬೇಕುಗಳನ್ನು ಅರಿತುಕೊಂಡು ಅವರು ನಿಮ್ಮನ್ನು ಓದಿಸಿದರು. ಅವರ ಪ್ರೀತಿಯ ಅಭಿವ್ಯಕ್ತಿ ಮಡದಿಯು ಬಯಸಿದ್ದನ್ನ ಓದಿಸುವುದು. ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುವುದು.

ಆದರೆ ಗಂಡನಿಂದ ಪ್ರೀತಿಯ ಅಭಿವ್ಯಕ್ತಿಯಲ್ಲಿ ನೀವೇನು ಬಯಸುತ್ತೀರಿ ಎಂಬುದನ್ನು ತಿಳಿದುಕೊಳ್ಳಿ. ಅವರೊಡನೆ ಕೂತು ಮಾತಾಡಿ, ಬದುಕನ್ನು ಒಂದೇ ಸಲ ನಮಗೆ ಬೇಕಾದ ಹಾಗೆ ಬದಲಿಸಲು ಆಗುವುದಿಲ್ಲ. ಆದರೆ ನಮ್ಮ ಆಲೋಚನೆಗಳನ್ನು ಬದಲಿಸುವುದರ ಮೂಲಕ ಪರಿಸ್ಥಿತಿಯನ್ನು ಸಹ್ಯ ಮಾಡಿಕೊಳ್ಳಬಹುದು. ಹಿಂದಿನ ವಾರದ ಅಂಕಣ ಓದಿ. 'ಫೇಕ್ ಇಟ್ ಟಿಲ್ ಯು ಮೇಕ್ ಇಟ್' ಎನ್ನುವ ಹಾಗೇ ನಿಮಗೆ ಅವರೊಡನೆ ಬಾಳಬೇಕೆಂಬ ಮನಸು ಹಾಗೂ ಯೋಚನೆ ಇದ್ದರೆ ಅವರನ್ನು ಪ್ರೀತಿಸುವಂತೆ ಕಲ್ಪಿಸಿಕೊಳ್ಳಿ. ಅವರ ಪಾಸಿಟೀವ್ ಗುಣಗಳನ್ನು ಒಂದು ಕಡೆ ಬರೆಯಲು ಶುರು ಮಾಡಿ. ಕೊಂಚ ದಿನದ ನಂತರ ಅದೇ ರೂಢಿಯಾಗುತ್ತದೆ.

ಬದುಕು ನಾವು ಕೇಳಿದ್ದನ್ನೆಲ್ಲಾ ಕೊಡುವುದಿಲ್ಲ, ಅದೇ ರೀತಿ ಬದುಕು ಕೊಟ್ಟಿದ್ದನ್ನೆಲ್ಲಾ ನಾವೂ ಸಹ ಸಾಕು ಎಂದು ಸ್ವೀಕರಿಸುವುದಿಲ್ಲ. ಈ ಸಂಬಂಧದಲ್ಲಿ ಕುಂದು ಎಂದು ನೀವು ಅಲ್ಲಿಂದ ಹೊರಗೆ ಬಂದರೆ ಅಲ್ಲಿ ಎದುರಾಗುವ ಸವಾಲುಗಳನ್ನು ಪಟ್ಟಿ ಮಾಡಿ. ಅ‌ದೇ ರೀತಿ ಅವರೊಡನೆ ಬದುಕುವಾಗ ಸಿಗುವ ಆನಂದ, ಸಂತೋಷ ಹಾಗೂ ಪ್ರಯೋಜನಗಳನ್ನು ನೋಡಿ. ಎರಡನ್ನೂ ತುಲನೆ ಮಾಡಿ. ನಂತರ ನಿರ್ಧಾರ ನಿಮ್ಮದು.

ಒಂದು ಹಂತ ದಾಟಿದ ನಂತರ ಪರಸ್ಪರರ ಪ್ರೀತಿ ಎಂದರೆ‌ ಈ ಓದು, ಅಂತಸ್ತು, ಅಂದ, ಅಧಿಕಾರ ಎಲ್ಲವನ್ನೂ ಮೀರಿದ್ದು ಎಂದು ಅರಿವಾಗುತ್ತದೆ. ಅದು ಪರಸ್ಪರ ಕಾಳಜಿ, ಪರಸ್ಪರ ಹಂಬಲ, ಸಹಕಾರ, ಜವಾಬ್ದಾರಿ, ಮೋಹ, ಮಮತೆ ಇವುಗಳು ಸಂಗಮ ವಷ್ಟೇ. ಯಾವುದೇ ಸಂಬಂಧವಾಗಲಿ ಅದು ಜವಾಬ್ದಾರಿಯೊಡನೆ ಬರುತ್ತದೆ. ಅದರಲ್ಲಿ ಒಂದಷ್ಟು ಕಡೆ ನಾವು ಪಡೆಯುವುದು ಇದೆ, ಅದೇ ರೀತಿ ಕಳೆದುಕೊಳ್ಳುವುದೂ ಇದೆ. ಈ ಸಂಬಂಧದಲ್ಲಿ ನೀವು ಪಡೆದುದು ಹೆಚ್ಚೇ ಅಥವಾ ಕಳೆದುಕೊಂಡುದು ಹೆಚ್ಚೇ ಎನ್ನುವ ಬಗ್ಗೆ ಯೋಚಿಸಿ.

ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990

mysore-dasara_Entry_Point