Pre Marital Counselling: ಪ್ರೇಮಿಗಳಿಗೆ ತಿಳಿದಿರಲೇಬೇಕಾದ ವಿಷಯವಿದು; ಮದುವೆಯ ನಂತರವೂ ಪ್ರೀತಿ ಉಳಿಯಲು ಈ ಅಂಶಗಳು ತಿಳಿದಿರಬೇಕು-valentines day love tips how retain intimacy in husband wife relationship what is pre marital counselling dmg ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Pre Marital Counselling: ಪ್ರೇಮಿಗಳಿಗೆ ತಿಳಿದಿರಲೇಬೇಕಾದ ವಿಷಯವಿದು; ಮದುವೆಯ ನಂತರವೂ ಪ್ರೀತಿ ಉಳಿಯಲು ಈ ಅಂಶಗಳು ತಿಳಿದಿರಬೇಕು

Pre Marital Counselling: ಪ್ರೇಮಿಗಳಿಗೆ ತಿಳಿದಿರಲೇಬೇಕಾದ ವಿಷಯವಿದು; ಮದುವೆಯ ನಂತರವೂ ಪ್ರೀತಿ ಉಳಿಯಲು ಈ ಅಂಶಗಳು ತಿಳಿದಿರಬೇಕು

Valentines Day 2024: ಮೊದಲ ನೋಟದ ಪ್ರೇಮಿಗಳು, ಇಷ್ಟಪಟ್ಟು ಮದುವೆಯಾದ ಎಷ್ಟೋ ಮಂದಿಗೆ ದಾಂಪತ್ಯದ ಬಂಧ ನೀರಸ ಎನ್ನಿಸುವುದುಂಟು. ಹಾಗಿದ್ದರೆ ದಾಂಪತ್ಯದಲ್ಲಿ ಸ್ವಾರಸ್ಯ ಉಳಿಸಿಕೊಳ್ಳುವುದು ಹೇಗೆ? ಬೆಂಗಳೂರಿನ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಡಾ ರೂಪಾ ರಾವ್ ಈ ಲೇಖನದಲ್ಲಿ ವಿವರಿಸಿದ್ದಾರೆ.

ವಿವಾಹಪೂರ್ವ ಸಮಾಲೋಚನೆಯಿಂದ ಹೊಂದಾಣಿಕೆ ಅರಿಯಲು ಸಾಧ್ಯ. ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಡಾ ರೂಪಾ ರಾವ್
ವಿವಾಹಪೂರ್ವ ಸಮಾಲೋಚನೆಯಿಂದ ಹೊಂದಾಣಿಕೆ ಅರಿಯಲು ಸಾಧ್ಯ. ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಡಾ ರೂಪಾ ರಾವ್

ಪ್ರಶ್ನೆ: ಮದುವೆಯ ನಂತರ ಪ್ರೀತಿ ಕಳೆದುಹೋಗುತ್ತೆ ಅನ್ನುತ್ತಾರೆ. ಇದು ನಿಜವೇ? ಪ್ರೀತಿಸಿದವರನ್ನು ಜೀವನಪೂರ್ತಿ ಖುಷಿಯಾಗಿರುವಂತೆ ನೋಡಿಕೊಳ್ಳುವುದು ಹೇಗೆ? ಪ್ರೇಮಿಗಳು ದಂಪತಿಯಾದ ನಂತರ ಸಂಬಂಧ ಔಪಚಾರಿಕವಾಗುತ್ತೆ. ಒಲಿಸಿಕೊಳ್ಳುವ ಸ್ವಭಾವ ಕಡಿಮೆಯಾಗುತ್ತೆ. ಪ್ರೇಮದ ಕಾವು ಕಡಿಮೆಯಾಗದಂತೆ ಕಾಪಾಡಿಕೊಳ್ಳಲು ಏನು ಮಾಡಬೇಕು? -ಹೆಸರು ಮತ್ತು ಊರು ಬೇಡ

ಉತ್ತರ: ಈ ಪ್ರಶ್ನೆಗೆ ಉತ್ತರ ತಿಳಿಯುವ ಮೊದಲು ನಾವು ಹ್ಯಾಪಿ ಹಾರ್ಮೋನ್ ಡೋಪಾಮೈನ್ ಬಗ್ಗೆ ತಿಳಿಯಬೇಕು. ಡೋಪಾಮೈನ್ ಎನ್ನುವುದು ಮನುಷ್ಯನ ಮಿದುಳಿನಲ್ಲಿ ಸಂತೋಷ, ತೃಪ್ತಿ ಹಾಗೂ ಪ್ರೇರಣೆಯ ಭಾವನೆಗಳನ್ನು ಉಂಟುಮಾಡುವ ಕೆಮಿಕಲ್ ಹಾರ್ಮೋನ್. ನಮ್ಮ ಮೆದುಳಿನ ಈ ಹ್ಯಾಪಿ ಹಾರ್ಮೋನ್ ಉತ್ಪತ್ತಿ ಆಗಲು ನಮಗೆ ಥ್ರಿಲ್ ಅನಿಸುವಂಥದ್ದು, ಎಕ್ಸೈಟ್‌ಮೆಂಟ್ ಅನ್ನಿಸುವಂಥದ್ದೋ ಆಗಬೇಕು. ಹಾಗಾದಾಗ ಅದರ ಅನುಭವವನ್ನು ಪಡೆಯಲು ಅದರ ಕಡೆಗೆ ಮತ್ತೆ ಮತ್ತೆ ಧಾವಿಸುತ್ತೇವೆ.

ಸಿಗದ ಪ್ರೀತಿಯನ್ನು ಪಡೆಯಲೇಬೇಕೆಂಬ ಹಟಕ್ಕೆ ಸ್ಪೂರ್ತಿಯೇ ಈ ಡೋಪಾಮೈನ್ ಅನ್ನಬಹುದು. ಡೋಪಾಮೈನ್ ಹಾರ್ಮೋನ್‌ನ ಒಂದು ದೊಡ್ಡ ಸಮಸ್ಯೆ ಅಂದರೆ‌ ನಮಗೆ ಬೇಕಾದ್ದು ಸಿಕ್ಕಿದಂತೆಲ್ಲಾ ಇನ್ನಷ್ಟು ಮಗದಷ್ಟು ಬೇಕು ಎಂಬ‌ ಹಪಾಹಪಿ ಶುರುವಾಗುತ್ತದೆ. ಅಡಿಕ್ಷನ್‌ನ ಮೂಲಕಾರಣ ಕೂಡ ಇದೇ ಡೋಪಾಮೈನ್.

ಈಗ‌ ಮದುವೆಯ ವಿಚಾರಕ್ಕೆ ಬರೋಣ. ಮದುವೆಯಾದ ಮೊದಲಿನ ಉತ್ಸಾಹ, ಪರಸ್ಪರ ಕುತೂಹಲ, ಆಕರ್ಷಣೆ ಒಂದು ಅಥವಾ ಎರಡು ವರ್ಷಗಳ ನಂತರ (ಕೆಲವೊಮ್ಮೆ ಆರು ತಿಂಗಳ ನಂತರ) ಕಡಿಮೆ ಆಗಲು ಈ ಸಂಗಾತಿಯನ್ನು ಕಂಡಾಗ ‌ಅಥವ ಮುಟ್ಟಿದಾಗ ಏರುವ ಡೊಪಾಮೈನ್‌ ಮುಖ್ಯ ಕಾರಣ (ಇದರೊಂದಿಗೆ ಇನ್ನಿತರ ಹಾರ್ಮೋನ್‌ಗಳೂ‌ ಸೇರಿವೆ ಅನ್ನಿ).

ಮದುವೆಯ ಮೊದಲ ಹಂತ ಪರಸ್ಪರ ತನ್ಮಯತೆಗೆ ಒಳಗಾಗುವ ದೈಹಿಕ ಮಿಲನ. ಹೆಣ್ಣಿಗೆ ಸ್ಪರ್ಶ, ರೊಮಾಂಟಿಕ್ ಸ್ಪರ್ಶ, ‌ಮಾತುಗಳು, ಕೀಟಲೆಗಳು ದೈಹಿಕ ಮಿಲನಕ್ಕೆ ‌ಅನುವು ಮಾಡಿಕೊಡುವ ಪ್ರಮುಖ ಸಾಧನಗಳು. ಗಂಡಸಿಗೆ ಇವಳು ನನ್ನವಳು ಎಂಬ‌ ಭಾವನೆ ಅಥವಾ "ಅವಳು" ಎಂಬುದೇ ಸಾಕು ಲೈಂಗಿಕ ಕ್ರಿಯೆಗೆ ಸಿದ್ಧವಾಗಲು. ಆದ್ದರಿಂದಲೇ ಹೆಣ್ಣನ್ನು ‌ಮಿಲನಕ್ಕೆ ಅನುನಯಗೊಳಿಸಿದರೆ ಆಕೆಗೆ ತೃಪ್ತಿ ಇಲ್ಲವಾದರೆ ಗಂಡಿನ ಅಹಂಗೆ ಮಾತ್ರ ತೃಪ್ತಿ. ಬಹಳ‌ ಜನ ಗಂಡಸರಿಗೆ ಹೆಣ್ಣನ್ನು ಮಿಲನಕ್ಕೆ ‌ಸಜ್ಜುಗೊಳಿಸುವಷ್ಟು ತಾಳ್ಮೆಯೂ ಇರುವುದಿಲ್ಲ. ಇಂತಹ ಸಮಯದಲ್ಲಿ ಹೆಣ್ಣಿಗೆ ಅಂಥ ಸಂಬಂಧವು ಅತೃಪ್ತಿಯನ್ನು ಮಾತ್ರ ‌ಕೊಡುತ್ತದೆ.

ಮೊದಲ ರಾತ್ರಿ ಅಥವಾ ಒಂದಿಷ್ಟು ದಿನ ಅಥವಾ ಒಂದಿಷ್ಟು ತಿಂಗಳು‌ ಚರ್ಮ‌ದ ಹೊಸ ಸ್ಪರ್ಶಕ್ಕೆ ಡೋಪಾಮೈನ್ ಹಾತೊರೆಯುತ್ತದೆ. ಹೀಗೇ ಏರುತ್ತಾ ಹೋಗಿ ಒಂದು ತಟಸ್ಥ ಸ್ಥಿತಿಗೆ ನಿಂತುಬಿಡುತ್ತದೆ. ಅಲ್ಲಿಂದ ಆ ಸ್ಪರ್ಶ ಹಳೆಯದಾಗುತ್ತಾ ಎಕ್ಸೈಟ್‌ಮೆಂಟ್ ಕಡಿಮೆಯಾಗುತ್ತಾ, ಡೋಪಾಮೈನ್ ತನ್ನ ಆಸಕ್ತಿ ‌ಕಳೆದುಕೊಳ್ಳುತ್ತದೆ‌.

ಹೀಗಾಗಬಾರದೆಂದರೆ ಮದುವೆಯಲ್ಲಿ ದೈಹಿಕ ಮತ್ತು ಮಾನಸಿಕ ಸಂಬಂಧಕ್ಕೆ ಸದಾ ವಿನೂತನ ಹಿಗ್ಗು, ನಾವೀನ್ಯತೆ ಹಾಗೂ ಆಕರ್ಷಣೆಯ ಪೋಷಣೆ ಇರಬೇಕು. ಕೇವಲ ಡೋಪಾಮೈನ್ ಇದ್ದರೆ ಅದು ಆಕರ್ಷಣೆ ಮಾತ್ರವೇ ಆಗುತ್ತೆ. ಆದ್ದರಿಂದ ಪರಸ್ಪರ ಬಿಡಿಸಲಾಗದಂಥ ಬಂಧ ಏರ್ಪಡಬೇಕು. ಅದಕ್ಕೆ ಆಕ್ಸಿಟೋಸಿನ್ ಕಾರಣ‌. ಜೊತೆಗೆ ವ್ಯಾಸೋಪ್ರೋಸೀನ್ ಸಹಾ ಕಾಳಜಿ ಹಾಗೂ ಜವಾಬ್ದಾರಿಯನ್ನು ತೋರಿಸುತ್ತದೆ. ಹಾಗಾಗಿ ಈಗ ಡೋಪಾಮೈನ್ ಅನ್ನು ಎರಡನೇ ಆದ್ಯತೆಯಾಗಿ ಮಾಡಿ ಆಕ್ಸಿಟೋಸಿನ್ ಹಾಗೂ ವ್ಯಾಸೋಪ್ರೋಸೀನ್ ಅನ್ನು‌ ಹೆಚ್ಚುಗೊಳಿಸಬೇಕು.

ದಾಂಪತ್ಯದಲ್ಲಿ ಖುಷಿ ಉಳಿಯಲು ಈ 5 ಅಂಶ ತಿಳಿದಿರಿ

ಕೆಳಗೆ ಹೇಳಿರುವ ಹಲವಾರು ಸರಳ ವಿಧಾನಗಳ ಮೂಲಕ ಪರಸ್ಪರರ ಪ್ರೀತಿಯನ್ನು ಜೀವಂತವಾಗಿರಿಸಿಕೊಳ್ಳಬಹುದು. ಅವುಗಳೆಂದರೆ...

1) ಮುಕ್ತ ಮಾತುಕತೆ: ದಾಂಪತ್ಯದಲ್ಲಿ ದಂಪತಿಗಳು ವರ್ಷ ಕಳೆದಂತೆ ಪರಸ್ಪರ ತೆರೆದ ಮನದಿಂದ ಮಾತಾಡುವುದನ್ನೇ ನಿಲ್ಲಿಸಿಬಿಡುತ್ತಾರೆ. ಹೆಂಡತಿ-ಗಂಡನ ನಡುವೆ ಯಾಂತ್ರಿಕ ಮಾತುಕತೆ ಬಿಟ್ಟರೆ ಬೇರೇನೂ ಇರುವುದಿಲ್ಲ. ಹೀಗಾದಾಗ ಅವರಿಬ್ಬರಲ್ಲಿ ದೊಡ್ಡ ಬಿರುಕು ಬಿಡುತ್ತದೆ. ಆದ್ದರಿಂದ ಕನಿಷ್ಠ ವಾರಕ್ಕೊಮ್ಮೆಯಾದರೂ ಒಂದಿಷ್ಟು ಸಮಯವನ್ನು ಮಾತನಾಡಲು ಮೀಸಲಿಡಬೇಕು. ತಮ್ಮ ಸಮ‌ಸ್ಯೆ, ಅನಿಸಿಕೆ, ಬಯಕೆ ಹಾಗೂ ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕು.

2) ಜೊತೆಯಾಗಿ ಸಮಯ ಕಳೆಯಿರಿ: ಪ್ರತಿದಿನ ಒಂದು ವಾಕ್ ಅಥವಾ ಒಂದು ಪ್ರೀತಿಯ ಮಾತು, ತಮಾಷೆಯ‌ ಮಾತು, ಗಾಢ ಅಪ್ಪುಗೆಯು ದಿನದ ಭಾಗವಾಗಿರಲಿ‌. ಪ್ರತಿದಿನ ಅಪ್ಪುವುದರಿಂದ ಆಕ್ಸಿಟೋಸಿನ್ ಹೆಚ್ಚು ಬಿಡುಗಡೆಯಾಗುತ್ತದೆ.

3) ಪಾಸಿಟಿವ್ ಅಂಶಗಳನ್ನು ಮಾತಾಡಿ: ಪರಸ್ಪರರಲ್ಲಿ ಕಂಡ ಪಾಸಿಟೀವ್ ಅಂಶಗಳನ್ನು ಪ್ರತಿದಿನ ಹೇಳಿಕೊಳ್ಳಿ. ಅವರು ಮಾಡಿದ ಒಳ್ಳೆಯ‌ ಕೆಲಸಗಳನ್ನು ಗುರುತಿಸಿ, ಹೊಗಳಿ, ಒಳ್ಳೆಯ ಕೆಲಸ ಮಾಡಿದ್ದಕ್ಕಾಗಿ ಅಭಿನಂದಿಸಿ, ಧನ್ಯವಾದ ಹೇಳಿ.

4) ರೋಲ್ ಬದಲಿಸಿ: ತಿಂಗಳಲ್ಲಿ ಒಮ್ಮೆಯಾದರೂ ರೋಲ್ ಬದಲಾವಣೆ‌ ಮಾಡಿಕೊಳ್ಳಿ. ಉದಾ: ಹೆಂಡತಿ ಮಾಡುತ್ತಿದ್ದ ಕೆಲಸಗಳನ್ನು ಗಂಡ ಮಾಡುವುದು, ಗಂಡ ಮಾಡುತ್ತಿದ್ದ ಕೆಲಸಗಳನ್ನು ಹೆಂಡತಿ ಮಾಡುವುದು ಇತ್ಯಾದಿ

5) ತುಂಟತನವಿರಲಿ: ಸಂಗಾತಿಗಳಲ್ಲಿ ಪರಸ್ಪರ ನಡೆಯುವ ಮಾತುಕತೆ, ವರ್ತನೆಯಲ್ಲಿ ತುಂಟತನ, ಕೊಂಚ ಫ್ಲರ್ಟಿಂಗ್‌ ಇರಲಿ. ಲೈಂಗಿಕ ಚಟುವಟಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳದಿರಿ.

ಆಕರ್ಷಣೆಯಿಲ್ಲದ ದಾಂಪತ್ಯವೆಂದರೆ ಶುಷ್ಕ ಕರ್ತವ್ಯ

ಒಂದು ಅಂಶವನ್ನು ಎಲ್ಲ ದಂಪತಿಗಳೂ ಚೆನ್ನಾಗಿ ನೆನಪಿಟ್ಟುಕೊಳ್ಳಬೇಕು. ಸಂಬಂಧಗಳಲ್ಲಿ ಗೌರವ ಅಥವಾ ಮನ್ನಣೆ ಸಿಗದಿದ್ದಾಗ ಅಥವಾ ತನ್ನ ಸಂಗಾತಿ ತನ್ನನ್ನು ಸದಾ ನಿಂದಿಸುತ್ತಿರುತ್ತಾರೆ ಎನಿಸಿದಾಗ ಒಬ್ಬರಿಗೆ ಆ ವಿವಾಹದ ದೈಹಿಕ ಸಂಬಂಧದಲ್ಲಿ ಆಕರ್ಷಣೆ ಇಲ್ಲದಂತೆ ಆಗುತ್ತದೆ. ನಂತರ ಉಳಿಯುವುದು ಕೇವಲ ಶುಷ್ಕ ಕರ್ತವ್ಯ ಮಾತ್ರ. ಇಂಥ ಪರಿಸ್ಥಿತಿ ಇದ್ದಾಗಲೂ ತೃಪ್ತಿದಾಯಕ ದೈಹಿಕ ಮಿಲನ ಸಾಧ್ಯವಿಲ್ಲ. ಈ ಸ್ಥಿತಿಯನ್ನು "protest polka" ಎಂದು ಕರೆಯುತ್ತಾರೆ.

ನೀವು ಪ್ರೇಮಿಗಳಾಗಿದ್ದರೆ, ನೆನಪಿಡಿ ಮದುವೆಗೆ ಮುಂಚೆಯೇ ನಿಮ್ಮ ಮನಸು ಒಬ್ಬರೊಂದಿಗೆ ಕನೆಕ್ಟ್ ‌ಆಗಿದೆಯೇ ಇಲ್ಲವೇ ಎಂದು ಹೇಳಿರುತ್ತದೆ. ಅದನ್ನು ನಿರ್ಲಕ್ಷಿಸಿ ಮುನ್ನಡೆಯುವ ಮೊದಲು ವಿವಾಹ‌ಪೂರ್ವ ಕೌನ್ಸಲರ್ (pre marital counselor) ಅನ್ನು ಕಾಣುವುದು ಬಹಳ‌ ಮುಖ್ಯ. ಜೀವನವಿಡಿ ಶುಷ್ಕ ‌ಸಂಬಂಧದಲ್ಲಿ ಎರಡೂ ಜೀವ ನರಳುವುದಕ್ಕಿಂತ ಇಬ್ಬರೂ ಜೊತೆಗೆ ಬಂದು ವಿವಾಹಪೂರ್ವ ಕೌನ್ಸಲರ್ ಒಬ್ಬರನ್ನು ಭೇಟಿಯಾಗುವುದು ಎಷ್ಟೋ ಮೇಲು.

ಜಾತಕದಲ್ಲಿ 34 ಗುಣಗಳು ಮ್ಯಾಚ್ ಆಗಿಯೂ ಹೊಂದಾಣಿಕೆ, ಲೈಂಗಿಕ ಆಸಕ್ತಿಯಂಥ ವಿಷಯದಲ್ಲಿ ಒದ್ದಾಡುವ ಜೋಡಿಗಳನ್ನು ನಾನು ನೋಡಿರುವೆ. ಆದ್ದರಿಂದ ಜಾತಕದ ಜೊತೆ ಸ್ವಭಾವ, ಬದುಕು, ಪರಸ್ಪರ ಆಕರ್ಷಣೆ, ಅನುಬಂಧಗಳ ಹೊಂದಾಣಿಕೆಯ ಪರೀಕ್ಷೆ ಬಹಳ‌ ಮುಖ್ಯ. ನನಗೆ ಗೊತ್ತಿರುವಂತೆ ನಮ್ಮ ಸಮಾಜದಲ್ಲಿ ಈಗಲೂ ವಿವಾಹಪೂರ್ವ ಕೌನ್ಸಲಿಂಗ್ ಪಡೆದುಕೊಳ್ಳುವ ವಿಚಾರ ಅಂತಿರಲಿ, ಲೈಂಗಿಕ ಆಸಕ್ತಿ ಹಾಗೂ ಮಾನಸಿಕ ಬಾಂಧವ್ಯದ ಕೊರತೆಯ ಕುರಿತು ಇನ್ನೊಬ್ಬರಲ್ಲಿ ‌ಹೇಳಿಕೊಳ್ಳುವುದೂ ಸಹಾ ದೊಡ್ಡ ಅಪರಾಧವೇ ಎನಿಸಿದೆ.

ಸಲಹೆ, ನೆರವು ಪಡೆಯಲು ಹಿಂಜರಿಕೆ ಸಲ್ಲದು

48 ವರ್ಷದ ಹೆಣ್ಣೊಬ್ಬಳು ತನ್ನ ಗಂಡನೊಡನೆ ‌ಮೊದಲಿನಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿಕೊಂಡಾಗ ಗೈನಕಾಲಜಿಸ್ಟ್ ಒಬ್ಬರು ಇಷ್ಟು ವಯಸಾಯಿತಲ್ಲ ಇನ್ನೇತಕ್ಕೆ ಬಿಡಿ ಎಂದು ಉಡಾಫೆಯಲ್ಲಿ ಹೇಳಿದ್ದರಂತೆ. ಈ ಮಾತನ್ನು ಆ ಹೆಣ್ಣು ನನ್ನ ಬಳಿ ತೋಡಿಕೊಂಡರು.‌ ವೈದ್ಯರ ಮನಃಸ್ಥಿತಿಯೇ ಹೀಗಿದ್ದರೆ ಸಾಮಾನ್ಯರ ಬಗ್ಗೆ ಹೇಳುವುದೇನು?

ಮದುವೆಯಾಗಿ ‌ಅದೆಷ್ಟೋ ವರ್ಷಗಳ ನಂತರವೂ ಪರಸ್ಪರರಲ್ಲಿ ಸಂಘರ್ಷ, ಅಸಮಾಧಾನ, ಅತೃಪ್ತಿಯಂಥವು ಆಗಾಗ ಕಂಡುಬರುತ್ತಿದ್ದರೆ ಅದಕ್ಕೆ ನಾನು ಮೇಲೆ ಹೇಳಿದ ಕಾರಣವೂ ಇರಬಹುದು. ದಯವಿಟ್ಟು ಆಪ್ತಸಮಾಲೋಚಕರ ನೆರವು ಪಡೆದುಕೊಳ್ಳಿ, ಅಂಥ ಗೊಂದಲಗಳನ್ನು ಪರಿಹರಿಸಿಕೊಳ್ಳಿ. ಸಫಲ ದಾಂಪತ್ಯ ನಿಮ್ಮದಾಗಲಿ.

---

ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990

mysore-dasara_Entry_Point