ಮಗಳಿಗೆ ಓದಿದ್ದು ನೆನಪಿರಲ್ಲ ಏನು ಮಾಡಲಿ? ಅವಳಿಗೆ ಓದಿನಲ್ಲಿ ಆಸಕ್ತಿ ಬರಲು ಒಂದೊಳ್ಳೆ ಐಡಿಯಾ ಕೊಡಿ ಪ್ಲೀಸ್ -ಮನದ ಮಾತು
ಕನ್ನಡ ಸುದ್ದಿ  /  ಜೀವನಶೈಲಿ  /  ಮಗಳಿಗೆ ಓದಿದ್ದು ನೆನಪಿರಲ್ಲ ಏನು ಮಾಡಲಿ? ಅವಳಿಗೆ ಓದಿನಲ್ಲಿ ಆಸಕ್ತಿ ಬರಲು ಒಂದೊಳ್ಳೆ ಐಡಿಯಾ ಕೊಡಿ ಪ್ಲೀಸ್ -ಮನದ ಮಾತು

ಮಗಳಿಗೆ ಓದಿದ್ದು ನೆನಪಿರಲ್ಲ ಏನು ಮಾಡಲಿ? ಅವಳಿಗೆ ಓದಿನಲ್ಲಿ ಆಸಕ್ತಿ ಬರಲು ಒಂದೊಳ್ಳೆ ಐಡಿಯಾ ಕೊಡಿ ಪ್ಲೀಸ್ -ಮನದ ಮಾತು

Learning Disorder: ನನ್ನ ಮಗನಿಗೆ ಓದುವ ಆಸಕ್ತಿಯೇ ಇಲ್ಲ ಏಕೆ? ನನ್ನ ಮಗಳು ಚೆನ್ನಾಗಿ ಓದುತ್ತಾಳೆ ಆದರೆ ಓದಿದ್ದು ನೆನಪಿನಲ್ಲಿ ಇರುವುದಿಲ್ಲ ಏಕೆ? - ಎಷ್ಟೋ ಪೋಷಕರನ್ನು ಕಾಡುತ್ತಿರುವ ಇಂಥ ಪ್ರಶ್ನೆಗಳಿಗೆ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ ಅವರು ಉತ್ತರಿಸಿದ್ದಾರೆ.

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್

ಪ್ರಶ್ನೆ: ನನ್ನ ಮಗಳು ಚೆನ್ನಾಗಿ ಓದುತ್ತಾಳೆ. ಆದರೆ ಓದಿದ ಪುಸ್ತಕ ಮುಚ್ಚಿಟ್ಟರೆ ಏನೂ ನೆನಪಿನಲ್ಲಿ ಇರುವುದಿಲ್ಲ ಎಂದು ಹೇಳುತ್ತಾಳೆ. ದಯವಿಟ್ಟು ಮಾರ್ಗದರ್ಶನ ಮಾಡಿ. - ಉಮೇಶ, ಹಾಸನ

ಉತ್ತರ: ನನ್ನ ಮಗುವಿಗೆ ಓದುವುದರಲ್ಲಿ ಏಕಾಗ್ರತೆ ಇಲ್ಲವೆಂದು ಚಿಂತೆ ಮಾಡುವ ಬದಲು ಏಕಾಗ್ರತೆಯ ಕೊರತೆಗೆ ಕಾರಣಗಳೇನೆಂದು ಗುರುತಿಸಿ ಪರಿಹಾರ ಕಂಡುಕೊಳ್ಳುವುದಕ್ಕೆ ಪ್ರಯತ್ನಿಸಿ. ಈ ಕೆಳಗಿನ ಲಕ್ಷಣಗಳನ್ನು ನಿಮ್ಮ ಮಗುವಿನಲ್ಲಿ ಕಂಡರೆ, ಪರಿಹಾರವನ್ನು ಕಂಡುಕೊಳ್ಳಿ.

1) ನಿದ್ರಾಹೀನತೆ: ಪೌಷ್ಟಿಕ ಆಹಾರ, ನಿದ್ದೆ ಮತ್ತು ದೈಹಿಕ ಚಟುವಟಿಕೆ ಕೊರತೆಯು ಮಕ್ಕಳ ಬೆಳವಣಿಗೆಯ ಮೇಲೆ, ವಿಶೇಷವಾಗಿ ಮಿದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಒಳ್ಳೆಯ ನಿದ್ರೆ (8-9 ತಾಸು), ಪೌಷ್ಟಿಕ ಆಹಾರ ಮತ್ತು ತಕ್ಕಮಟ್ಟಿಗೆ ದೈಹಿಕ ಚಟುವಟಿಕೆಯು ಅತ್ಯಗತ್ಯ. ಇವುಗಳಲ್ಲಿ ಯಾವುದೇ ಕೊರತೆಯಿದ್ದರೂ ಏಕಾಗ್ರತೆ ಮತ್ತು ನೆನಪಿನ ಶಕ್ತಿಯ ಮೇಲೆ ಪರಿಣಾಮ ಬೀಳುತ್ತದೆ.

2) ಮನೆಯ ವಾತಾವರಣ: ಮನೆಯಲ್ಲಿ ಅನಾರೋಗ್ಯಕರ ಮತ್ತು ಅಹಿತಕರ ವಾತವರಣವಿದ್ದು, ಪೋಷಕರ ನಡುವೆ ಕಲಹಗಳು, ವಿವಾದಗಳಿದ್ದರೆ ಮಕ್ಕಳು ಗಮನವಿಟ್ಟು, ಏಕಾಗ್ರತೆಯಿಂದ ಓದಲು ಸಾಧ್ಯವಾಗುವುದಿಲ್ಲ.

3) ಬೆದರಿಸುವಿಕೆ / ದೌರ್ಜನ್ಯ: ಶಾಲೆಯಲ್ಲಿ ಇತರೆ ಮಕ್ಕಳಿಂದ ಅಥವಾ ಮನೆಯಲ್ಲಿ ಕುಟುಂಬದ ಸದಸ್ಯರಿಂದ ದೌರ್ಜನ್ಯ, ಬೆದರಿಕೆಗೆ ಒಳಗಾಗಿರುವ ಮಕ್ಕಳಿಗೆ ಏಕಾಗ್ರತೆಯ ಕೊರತೆ ಕಾಡುತ್ತದೆ.

4) ಪರೀಕ್ಷೆಯ ಆತಂಕ: ಪರೀಕ್ಷೆಯ ಸಮಯದಲ್ಲಿ ಮಕ್ಕಳು ಹೆಚ್ಚು ಆತಂಕಗೊಳಗಾಗುತ್ತಾರೆ. ಶಿಕ್ಷಕರ, ಪೋಷಕರ ಅಥವಾ ಸ್ವಯಂ ನಿರೀಕ್ಷೆಗಳು ಹೆಚ್ಚಿನ ಅಂಕವನ್ನು ಪರೀಕ್ಷೆಯಲ್ಲಿ ಗಳಿಸಲೇಬೇಕು ಎಂಬ ಒತ್ತಡವಿದ್ದೆ ಮಕ್ಕಳಿಗೆ ಮಾನಸಿಕ ಒತ್ತಡ ಹಾಗೂ ಆತಂಕ ಹೆಚ್ಚಾಗಿ ಏಕಾಗ್ರತೆ ಕಡಿಮೆಯಾಗುತ್ತದೆ

6) ಅತಿಯಾದ ನಿಂದನೆ, ಅನಾರೋಗ್ಯಕರ ಹೋಲಿಕೆ: ಓದುವ ವೇಳೆಯಲ್ಲಿ ಪೋಷಕರು ಮಕ್ಕಳಿಗೆ ಹೇಳಿಕೊಡುವ ಜೊತೆಗೆ ಅತಿಯಾದ ನಿಂದನೆ ಮತ್ತು ಬೇರೆ ಮಕ್ಕಳ ಜೊತೆ ಹೋಲಿಸುವುದರಿಂದ ಮನಸ್ಸು ವಿಚಲಿತವಾಗಿ ಏಕಾಗ್ರತೆ ಸಾಧ್ಯವಾಗುವುದಿಲ್ಲ. ಮಕ್ಕಳ ಆತ್ಮವಿಶ್ವಾಸವು ಮತ್ತು ಗೌರವ ಸಹ ಕುಂದುತ್ತದೆ.

7) ಹದಿಹರೆಯದ ಪೂರ್ವದ ವಯಸ್ಸು (ಪ್ರೀ ಟೀನ್): 9 ರಿಂದ 12 ವರ್ಷ ವಯಸ್ಸಿನ ಮಕ್ಕಳನ್ನು ‘ಪ್ರೀ ಟೀನ್’ ಎಂದು ಕರೆಯಲಾಗುತ್ತದೆ. ಬಾಲ್ಯ ಮತ್ತು ಪ್ರೌಢಾವಸ್ಥೆಯ ನಡುವಿನ ಹಂತವಾಗಿದೆ. ಈ ಸಮಯದಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಕಂಡು ಬರುತ್ತದೆ. ಮಕ್ಕಳ ಸಾಮಾಜಿಕ ನಡುವಳಿಕೆ, ವ್ಯಕ್ತಿತ್ವದಲ್ಲಿಯೂ ಸಹ ಸಾಕಷ್ಟು ಬದಲಾವಣೆಗಳನ್ನು ನೋಡಬಹುದು. ದೈಹಿಕ ಬೆಳವಣಿಗೆ ಮತ್ತು ಬದಲಾವಣೆಯಿಂದಾಗಿ ಮಕ್ಕಳು ದೈಹಿಕ ಸೌಂದರ್ಯದ ಬಗ್ಗೆ ಹೆಚ್ಚು ಗಮನವಹಿಸುತ್ತಾರೆ. ಈ ಹಂತದಲ್ಲಿ ಚಂಚಲ ಮನಸ್ಸು , ಏಕಾಗ್ರತೆಯ ಕೊರತೆ ಇತ್ಯಾದಿ ಬದಲಾವಣೆಗಳನ್ನು ಮಕ್ಕಳಲ್ಲಿ ಕಾಣಬಹುದು.

8) ಅರ್ಥ ಮಾಡಿಕೊಳ್ಳುವ / ಗ್ರಹಿಸುವ ಶಕ್ತಿ: ಕೆಲವು ಮಕ್ಕಳಿಗೆ ಎಷ್ಟು ಓದಿದರೂ ಅರ್ಥವಾಗುವುದಿಲ್ಲ. ಗ್ರಹಿಸುವ ಮತ್ತು ನೆನಪಿನ ಶಕ್ತಿಯ ಕೊರತೆಯಿರುತ್ತದೆ. ಇದರಿಂದ ಮಕ್ಕಳು ಓದುವುದರಲ್ಲಿ ಆಸಕ್ತಿಯನ್ನು ಕಳೆದುಕೊಂಡು, ಓದುವ ವೇಳೆಯಲ್ಲಿ ಏಕಾಗ್ರತೆ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ.

9) ಮಾನಸಿಕ ದೌರ್ಬಲ್ಯ / ಅಸ್ವಸ್ಥತೆ: ಕಲಿಕೆಯಲ್ಲಿ ಅಸಮರ್ಥತೆ (slow learning ) ಚಂಚಲತೆ ಮತ್ತು ಅತಿ ಚಟುವಟಿಕೆಯ ಕಾಯಿಲೆ (ADHD) ಇರುವ ವ್ಯಕ್ತಿಗಳು ತುಂಬಾ ಆಕ್ಟೀವ್ ಆಗಿರುವಂತೆ ಕಾಣಿಸುತ್ತಾರೆ. ಇಂಥವರು ಹೋಂವರ್ಕ್ ಅಥವಾ ಶಾಲೆಯ ಚಟುವಟಿಕೆಗಳು ಮುಂತಾದ ದಿನನಿತ್ಯದ ಕೆಲಸಗಳನ್ನು ಮಾಡಲು ಇಷ್ಟಪಡುವುದಿಲ್ಲ. ದೈನಂದಿನ ಚಟುವಟಿಕೆಗಳಲ್ಲಿ ಬಲುಬೇಗನೆ ಬೇಸರಗೊಳ್ಳುವುದು. ಏಕಾಗ್ರತೆಯ ಕೊರತೆಯೂ ಹೆಚ್ಚಿರುತ್ತದೆ

10) ಓದಲು ನಿರಾಸಕ್ತಿ: ಕೆಲವು ಮಕ್ಕಳಿಗೆ ಸ್ವಾಭಾವಿಕವಾಗಿ ಹುಟ್ಟಿನಿಂದಲೂ ಓದುವುದರಲ್ಲಿ ಆಸಕ್ತಿ ಕಡಿಮೆಯಿರುತ್ತದೆ. ಹಾಗಂತ ದಡ್ಡರಲ್ಲ. ಆದರೆ ಇತರೆ ಚಟುವಟಿಕೆಗಳಲ್ಲಿ ಬಹಳ ಆಸಕ್ತಿ ಮತ್ತು ಪ್ರತಿಭೆಯೂ ಇರುತ್ತದೆ. ಈ ಮಕ್ಕಳಿನ ಗಮನ ಓದಲೂ ಕೂತಾಗ ಸಹಜವಾಗಿ ಬೇರೆ ಕಡೆ ವಾಲುತ್ತದೆ. ಏಕಾಗ್ರತೆಯ ಕೊರತೆ ಎದುರಿಸುತ್ತಾರೆ.

11) ಚಿತ್ತ ಚಾಂಚಲ್ಯ (Distractions): ಓದುವಾಗ ಮೊಬೈಲ್, ಟಿವಿ ಇತ್ಯಾದಿ ವಸ್ತುಗಳು ಸುತ್ತಮುತ್ತ ಇದ್ದರೆ ಅಥವಾ ಓದುವ ಮೊದಲೇ ಇವುಗಳನ್ನು ಬಳಕೆ ಮಾಡಿ ಸ್ವಲ್ಪ ನಂತರವೇ ಓದಲು ಕೂತಾಗ ಗಮನವಿಟ್ಟು ಓದಲು ಸಾಧ್ಯವಾಗುವುದಿಲ್ಲ. ಚಿತ್ತ ಚಾಂಚಲ್ಯ ಯಾಗುತ್ತದೆ.

ಮಕ್ಕಳಲ್ಲಿ ಏಕಾಗ್ರತೆ ಸುಧಾರಿಸಲು ಕೆಲವು ಟಿಪ್ಸ್

i) ಆದಷ್ಟು ಓದುವ ಸ್ಥಳ ಮತ್ತು ಸಮಯ ಬದಲಾಯಿಸಬಾರದು.

ii) ಓದುವ ಸುತ್ತಮುತ್ತ ಮಕ್ಕಳ ಮನಸ್ಸನ್ನು ಆಕಷಿ೯ಸುವಂತಹ ಯಾವುದೇ ವಸ್ತುಗಳನ್ನು ಇಡಬೇಡಿ

iii) ನಿದ್ರೆ, ಪೌಷ್ಟಿಕ ಆಹಾರ, ದೈಹಿಕ ಚಟುವಟಿಕೆಯ ಕೊರತೆ ಇಲ್ಲದಂತೆ ನೋಡಿಕೊಳ್ಳಿ.

iv) ಮನೆಯಲ್ಲಿ ಯಾವುದೇ ಕಲಹಗಳು, ಸದ್ದುಗದ್ದಲುಗಳು ಮಕ್ಕಳು ಓದುವ ಸಮಯದಲ್ಲಿ ಇಲ್ಲದಂತೆ ನೋಡಿಕೊಳ್ಳಿ.

v) ಓದುವ ಮುಂಚೆ ಮಕ್ಕಳು ಮೊಬೈಲ್, ಟಿವಿ, ಆನ್‌ಲೈನ್ ಗೇಮ್ಸ್ ಇತರೆ ಚಟುವಟಿಕೆಗಳಲ್ಲಿ ಮುಳುಗಿದ್ದರೆ, ಕನಿಷ್ಠ 30 ನಿಮಿಷವಾದರೂ ವಿರಾಮ ತೆಗೆದುಕೊಂಡು ನಂತರ ಫ್ರೆಶ್ ಮೈಂಡ್‌ನಲ್ಲಿ ಓದುವುದಕ್ಕೆ ಪ್ರಾರಂಭ ಮಾಡಲಿ.

vi) ಪೋಷಕರು ಮತ್ತು ಶಿಕ್ಷಕರು ಮಕ್ಕಳನ್ನು ಅತಿಯಾದ ನಿಂದನೆ, ತೇಜೋವಧೆ, ಬೇರೆ ಮಕ್ಕಳ ಜೊತೆ ಪೈಪೋಟಿ ಮಾಡುವುದನ್ನು ತಡೆಯಬೇಕು.

vii) ಹೆಚ್ಚಿನ ಅಂಕ ಗಳಿಸಲು ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರಬೇಡಿ. ಇದರಿಂದ ಮಕ್ಕಳಲ್ಲಿ ಆತಂಕ ಉಂಟಾಗಿ ಗ್ರಹಿಕೆ, ನೆನಪಿನ ಶಕ್ತಿ, ಏಕಾಗ್ರತೆ ಕುಂಠಿತವಾಗುತ್ತದೆ

viii) ಶಾಲೆಯಲ್ಲಾಗಲಿ ಅಥವಾ ಮನೆಯಲ್ಲಾಗಲಿ ಮಕ್ಕಳು ಯಾವುದೇ ಸಮಸ್ಯೆಗಳಿಂದ ಬಳಲುತ್ತಿದ್ದರೆ ನಿರ್ಲಕ್ಷ್ಯ ಮಾಡದೇ, ಪರಿಹರಿಸಿಕೊಳ್ಳುವುದಕ್ಕೆ ಮಕ್ಕಳಿಗೆ ಬೆಂಬಲ ನೀಡಿ.

ix) ಅತಿಯಾದ ಚಾಂಚಲ್ಯ, ಮಾನಸಿಕ ದೌರ್ಬಲ್ಯದಿಂದ ಮಕ್ಕಳು ಬಳಲುತ್ತಿದ್ದರೆ, ನಿಮಗೆ ನಿಭಾಯಿಸಲು ಅಸಾಧ್ಯವಾದರೆ ಆಪ್ತಸಮಾಲೋಚಕರ ಅಥವ ಮನೋಚಿಕಿತ್ಸರ ಮಾಗ೯ದಶ೯ನ ಪಡೆದುಕೊಳ್ಳಿ.

ಗಮನಿಸಿ: ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542.

ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

Whats_app_banner