Kannada News  /  Nation And-world  /  Centre Orders Blocking Of Tweets, Youtube Videos On Bbc Documentary On Pm Modi
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

BBC documentary on PM Modi: ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಟ್ವೀಟ್​​, ವಿಡಿಯೋಗಳಿಗೆ ಕೇಂದ್ರ ನಿರ್ಬಂಧ

21 January 2023, 18:01 ISTHT Kannada Desk
21 January 2023, 18:01 IST

ಪಿಎಂ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಮೊದಲ ಸಂಚಿಕೆಯನ್ನು ಪ್ರಕಟಿಸಿದ ಯೂಟ್ಯೂಬ್ ವಿಡಿಯೋಗಳನ್ನು ಹಾಗೂ ಸಾಕ್ಷ್ಯಚಿತ್ರದ ಕುರಿತ 50ಕ್ಕೂ ಹೆಚ್ಚು ಟ್ವೀಟ್​ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಆದೇಶಿಸಿದೆ.

ನವದೆಹಲಿ: ಯುನೈಟಡ್​ ಕಿಂಗ್​ಡಮ್​​ನ ರಾಷ್ಟ್ರೀಯ ಪ್ರಸಾರ ಮಾಧ್ಯಮವಾದ ಬಿಬಿಸಿ (ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್) ಪ್ರಧಾನಿ ನರೇಂದ್ರ ಮೋದಿ ಕುರಿತು 'ಇಂಡಿಯಾ: ದಿ ಮೋದಿ ಕ್ವಶ್ಚನ್' ಹೆಸರಿನ ಸಾಕ್ಷ್ಯಚಿತ್ರವೊಂದನ್ನು ತಯಾರಿಸಿದೆ.

ಆದರೆ ಇದೀಗ ಪಿಎಂ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಮೊದಲ ಸಂಚಿಕೆಯನ್ನು ಪ್ರಕಟಿಸಿದ ಯೂಟ್ಯೂಬ್ ವಿಡಿಯೋಗಳನ್ನು ಹಾಗೂ ಸಾಕ್ಷ್ಯಚಿತ್ರದ ಕುರಿತ 50ಕ್ಕೂ ಹೆಚ್ಚು ಟ್ವೀಟ್​ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಆದೇಶಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರಾಂಗ ಸಚಿವಾಲಯವು ಐಟಿ ನಿಯಮ 2021ರ ಅಡಿಯಲ್ಲಿ ಯೂಟ್ಯೂಬ್​ ಮತ್ತು ಟ್ವಿಟರ್​ಗೆ ನಿರ್ದೇಶನ ನೀಡಿದ್ದು, ಇವೆರಡೂ ಆದೇಶವನ್ನು ಪಾಲಿಸಿವೆ ಎಂದು ಮೂಲಗಳು ತಿಳಿಸಿವೆ.

ಹೀಗೆ ಟ್ವಿಟರ್​​ನಿಂದ ತೆಗೆದು ಹಾಕಲ್ಪಟ್ಟ ಟ್ವೀಟ್​​ಗಳಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒ'ಬ್ರಿಯಾನ್ ಅವರು ಸಾಕ್ಷ್ಯಚಿತ್ರದ ಕುರಿತು ಮಾಡಿದ್ದ ಟ್ವೀಟ್ ಕೂಡ ಸೇರಿದೆ ಎಂದು ಹೇಳಲಾಗಿದೆ.

ಎರಡು ಭಾಗಗಳಲ್ಲಿ ಮೂಡಿ ಬಂದಿರುವ ಬಿಬಿಸಿ ಸಾಕ್ಷ್ಯಚಿತ್ರ 'ಇಂಡಿಯಾ: ದಿ ಮೋದಿ ಕ್ವಶ್ಚನ್' (India: The Modi Question)ನಲ್ಲಿ 2002ರ ಗುಜರಾತ್ ಗಲಭೆಯಲ್ಲಿ ಅಂದಿನ ಗುಜರಾತ್​ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಪಾತ್ರವನ್ನು ತೋರಿಸಲಾಗಿದೆ.

ಸಾಕ್ಷ್ಯಚಿತ್ರಕ್ಕೆ ಭಾರತ ಆಕ್ಷೇಪ

ಕೇಂದ್ರ ಗೃಹ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಮಾಹಿತಿ ಮತ್ತು ಪ್ರಸಾರಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳು ಸಾಕ್ಷ್ಯಚಿತ್ರವನ್ನು ಪರಿಶೀಲಿಸಿದ್ದು, ಪ್ರಧಾನಿ ಮೋದಿ ಬಗ್ಗೆ ಅಪಪ್ರಚಾರ ಮಾಡಲು ಹಾಗೂ ಭಾರತದ ಸುಪ್ರೀಂ ಕೋರ್ಟ್​ನ ವಿಶ್ವಾಸಾರ್ಹತೆಗೆ ಧಕ್ಕೆ ತರಲು ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ.

ಬಿಬಿಸಿ ಸಾಕ್ಷ್ಯಚಿತ್ರಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಪಕ್ಷಪಾತಿ ಧೋರಣೆಯುಳ್ಳ ಅಪಪ್ರಚಾರದ ತುಣಕು ಎಂದು ಕಿಡಿಕಾರಿದೆ. ಬಿಬಿಸಿಯ ಸಾಕ್ಷ್ಯಚಿತ್ರ ಪಕ್ಷಪಾತಿಯಾಗಿದ್ದು, ವಸ್ತುನಿಷ್ಠತೆ ಕೊರತೆಯಿಂದ ಕೂಡಿದೆ. ಇದು ಪ್ರಧಾನಿ ಮೋದಿ ಅವರ ವಿರುದ್ಧ ನಡೆಸಿದ ಪಿತೂರಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

"ಈ ಸಾಕ್ಷ್ಯಚಿತ್ರವು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ದುರ್ಬಲಗೊಳಿಸುತ್ತದೆ. ವಿದೇಶಗಳೊಂದಿಗಿನ ಭಾರತದ ಸ್ನೇಹ ಸಂಬಂಧ ಮತ್ತು ದೇಶದೊಳಗಿನ ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಮೂಲಗಳು ತಿಳಿಸಿವೆ. ಭಾರತ ವಿರೋಧಿ ಅಜೆಂಡಾವನ್ನು ಪ್ರಚಾರ ಮಾಡಲು ಅದನ್ನು ಯೂಟ್ಯೂಬ್​ಗೆ ಅಪ್‌ಲೋಡ್ ಮಾಡಲಾಗಿದೆ ಎಂದು ವರದಿಯಾಗಿದೆ

ಮೋದಿಯನ್ನು ಸಮರ್ಥಿಸಿಕೊಂಡ ಯುಕೆ ಪ್ರಧಾನಿ

ಪ್ರಧಾನಿ ಮೋದಿಯನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸಮರ್ಥಿಸಿಕೊಂಡಿದ್ದಾರೆ. "ಗುಜರಾತ್ ಗಲಭೆ ಬಗ್ಗೆ ಬ್ರಿಟನ್ ಸರ್ಕಾರದ ನಿಲುವು ಸ್ಪಷ್ಟವಾಗಿದೆ ಮತ್ತು ದೀರ್ಘಕಾಲೀಕವಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಯಾವುದೇ ಕಿರುಕುಳವನ್ನು ಸಹಿಸುವುದಿಲ್ಲ. ಆದರೆ ಪ್ರಧಾನಿ ಮೋದಿ ಅವರ ಪಾತ್ರವನ್ನು ನಾನು ಒಪ್ಪುತ್ತೇನೆ ಎಂದು ನನಗೆ ಅನಿಸುತ್ತಿಲ್ಲ" ಎಂದು ಹೇಳಿದ್ದರು.

ವಿಭಾಗ