ರಾನಾ ದಗ್ಗುಬಾಟಿ ಟಾಕ್ ಶೋನಲ್ಲಿ ಕನ್ನಡದ ನಟ ರಿಷಬ್ ಶೆಟ್ಟಿ; ಬಿಡುಗಡೆಯಾಯ್ತು ಪ್ರೋಮೋ - ಸ್ಟ್ರೀಮಿಂಗ್ ಎಲ್ಲಿ?
ರಾನಾ ದಗ್ಗುಬಾಟಿ ಅವರ ಟಾಕ್ ಶೋನಲ್ಲಿ ಈ ಬಾರಿ ಕನ್ನಡದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಶಾಲೆಯ ಕಪ್ಪು ಹಲಗೆಯ ಮೇಲೆ ಅ, ಆ ಬರೆದು ಅದನ್ನು ರಾನಾ ಓದಿದ್ದಾರೆ. ಸಾಕಷ್ಟು ವಿಚಾರ ಚರ್ಚೆಯಾದಂತಿದೆ.
ರಾನಾ ದಗ್ಗುಬಾಟಿ ಅವರ ಟಾಕ್ ಶೋ ಈಗಾಗಲೇ ಹೊರಬಿದ್ದಿದ್ದು ನವೆಂಬರ್ 23ರಿಂದ ಆರಂಭವಾಗಿದೆ. ಇದೀಗ ಐದನೇ ಸಂಚಿಕೆ ಹೊರಬರುವ ಸಮಯವೂ ಬಂದಾಗಿದೆ. ಆದರೆ ಈ ಬಾರಿ ಬಿಡುಗಡೆಯಾದ ಪ್ರೋಮೋದಲ್ಲಿ ಕೊಂಚ ವಿಶೇಷವಿದೆ. ಏನು ವಿಶೇಷತೆ ಎಂದರೆ ಈ ಬಾರಿ ಕನ್ನಡದ ನಟ ಹಾಗೂ ನಿರ್ದೇಶಕರಾದ ರಿಷಬ್ ಶೆಟ್ಟಿ ಟಾಕ್ ಶೋನಲ್ಲಿ ಭಾಗಿಯಾಗಿದ್ದಾರೆ. ಅಮೆಜಾನ್ ಪ್ರೈಂ ಒಟಿಟಿಯಲ್ಲಿ ನೀವು ಈ ಕಾರ್ಯಕ್ರಮ ವೀಕ್ಷಿಸಬಹುದು.
8 ಎಪಿಸೋಡ್‌ಗಳಲ್ಲಿ ಹಲವಾರು ಸೆಲೆಬ್ರಿಟಿಗಳು ಅತಿಥಿಗಳಾಗಿರುತ್ತಾರೆ. ಶೋ ಟ್ರೈಲರ್ ಆನ್‌ಲೈನ್‌ನಲ್ಲಿ ಬಿಡುಗಡೆಯಾಗಿದೆ. ಸುಮಾರು 2 ನಿಮಿಷಗಳ ಟ್ರೈಲರ್‌ನಲ್ಲಿ ನಾಗ ಚೈತನ್ಯ, ದುಲ್ಕರ್ ಸಲ್ಮಾನ್, ನಾನಿ, ತೇಜ ಸಜ್ಜ, ಸಿದ್ದು ಜೊನ್ನಲಗಡ್ಡ, ಎಸ್‌ಎಸ್ ರಾಜಮೌಳಿ, ರಾಮ್ ಗೋಪಾಲ್ ವರ್ಮಾ ಮತ್ತು ಶ್ರೀಲೀಲಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳನ್ನು ಕಾಣಬಹುದು. ರಾನಾ ಅವರ ಪತ್ನಿ ಮಿಹೀಕಾ ಬಜಾಜ್ ಕೂಡ ಕಾಣಿಸಿಕೊಂಡಿದ್ದಾರೆ.
ರಾನಾ ದಗ್ಗುಬಾಟಿ ಶೋ ನವೆಂಬರ್ 23 ರಂದು ಪ್ರೀಮಿಯರ್ ಆಗಿದೆ ಮತ್ತು ಪ್ರೈಮ್ ವಿಡಿಯೋದಲ್ಲಿ ಪ್ರತಿ ಶನಿವಾರ ಹೊಸ ಸಂಚಿಕೆಗಳು ಅಪ್‌ಲೋಡ್ ಆಗುತ್ತವೆ. ರಾನಾ ದಗ್ಗುಬಾಟಿ ಅವರ ಬ್ಯಾನರ್, ಸ್ಪಿರಿಟ್ ಮೀಡಿಯಾ ಅಡಿಯಲ್ಲಿ ಕಾರ್ಯಕ್ರಮವನ್ನು ಹೈದರಾಬಾದ್‌ನಲ್ಲಿರುವ ಅವರ ಕುಟುಂಬದ ಒಡೆತನದ ರಾಮನಾಯ್ಡು ಸ್ಟುಡಿಯೋಸ್‌ನಲ್ಲಿ ಚಿತ್ರೀಕರಿಸಲಾಗುತ್ತದೆ. ಇನ್ನು ಕೆಲವು ಬಾರಿ ಹೊರಾಂಗಣದಲ್ಲಿಯೂ ಶೂಟಿಂಗ್ ನಡೆದಿರುವುದು ಕಂಡುಬಂದಿದೆ.
ಈ ಸಂಚಿಕೆಯನ್ನು ರಿಷಬ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ಚಿತ್ರೀಕರಿಸಲಾಗಿದೆಯಂತೆ. ಇನ್ನು ಅವರು ಶಾಲೆಯೊಂದರ ಹೊರಾಂಗಣದಲ್ಲಿ ನಿಂತು ಉತ್ತರಿಸುತ್ತಿರುವ ದ್ರಶ್ಯ ಕೂಡ ಕಾಣಿಸುತ್ತದೆ. ರಾನಾ ಅವರು ಕೇಳಿದ ಪ್ರಶ್ನೆಗೆ ರಿಷಬ್ ಹಿಂದಿಯಲ್ಲೇ ಉತ್ತರಿಸಿದ್ದಾರೆ. ಇನ್ನು ಅವರ ಜೊತೆ ರಿಷಬ್ ಶೆಟ್ಟಿ ಅವರ ಪತ್ನಿ ಕೂಡ ಕಾಣಿಸಿಕೊಂಡಿದ್ದಾರೆ. ಹೇಗೆ ನಿಮ್ಮಿಬ್ಬರ ಪ್ರೇಮ ಅರಳಿತು ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಫೇಸ್ಬುಕ್‌ನಲ್ಲಿ ನನ್ನ ಹೆಸರನ್ನು ಅವರು ಹುಡುಕಲು ಆರಂಭಿಸಿದರು ಅಲ್ಲಿಂದ ಇದೆಲ್ಲವೂ ಆರಂಭವಾಯಿತು ಎಂದು ಅವರು ಹೇಳಿದ್ದಾರೆ.
ಇನ್ನು ಕನ್ನಡ ಕಲಿಕೆಯ ಪ್ರಯತ್ನವೂ ನಡೆದಿದೆ. ಶಾಲೆಯ ಕಪ್ಪು ಹಲಗೆಯ ಮೇಲೆ ಅ, ಆ ಬರೆದು ಅದನ್ನು ರಾನಾ ಓದಿದ್ದಾರೆ. ಇನ್ನು ಸಮುದ್ರದ ಬದಿಯಲ್ಲಿ ಮೀನು ಹಿಡಿಯುವುದು ಈ ರೀತಿಯಾಗಿ ಒಂದಷ್ಟು ಹೊರಾಂಗಣ ಶೂಟಿಂಗ್ ನಡೆದು ಬಂದಿದ್ದು. ಸಾಕಷ್ಟು ವಿಚಾರಗಳು ಚರ್ಚೆಯಾದಂತಿದೆ.