ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪ; ಎಂಎಲ್‌ಸಿ ಸಿಟಿ ರವಿ ಮೊದಲ ಪ್ರತಿಕ್ರಿಯೆ ಹೀಗಿತ್ತು- 6 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪ; ಎಂಎಲ್‌ಸಿ ಸಿಟಿ ರವಿ ಮೊದಲ ಪ್ರತಿಕ್ರಿಯೆ ಹೀಗಿತ್ತು- 6 ಮುಖ್ಯ ಅಂಶಗಳು

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪ; ಎಂಎಲ್‌ಸಿ ಸಿಟಿ ರವಿ ಮೊದಲ ಪ್ರತಿಕ್ರಿಯೆ ಹೀಗಿತ್ತು- 6 ಮುಖ್ಯ ಅಂಶಗಳು

CT Ravi: ಸುವರ್ಣ ಸೌಧದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪಕ್ಕೆ ಸಂಬಂಧಿಸಿ ಎಂಎಲ್‌ಸಿ ಸಿಟಿ ರವಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಅವರು ಆರು ಅಂಶಗಳನ್ನು ವಿವರಿಸಿದ್ದಾರೆ. ಆ ವಿವರ ಇಲ್ಲಿದೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪಕ್ಕೆ ಸಂಬಂಧಿಸಿ ಎಂಎಲ್‌ಸಿ ಸಿಟಿ ರವಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಆರೋಪಕ್ಕೆ ಸಂಬಂಧಿಸಿ ಎಂಎಲ್‌ಸಿ ಸಿಟಿ ರವಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

CT Ravi: ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಪರಿಷತ್ ಕಲಾಪದ ನಡುವೆ ನಿನ್ನೆ ರಾಜ್ಯ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಯನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸದಸ್ಯರು ಖಂಡಿಸಿ ಪ್ರತಿಭಟನೆ ನಡೆಸಿದರು. ಆಗ ಪ್ರತಿ ಪಕ್ಷ ಬಿಜೆಪಿ ಸದಸ್ಯರೂ ಪ್ರತಿಭಟನೆ ನಡೆಸಿದ್ದು, ಗದ್ದಲದ ಕಾರಣ ಕಲಾಪವನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಂದೂಡಿದ್ದರು. ಆಗ, ಪರಿಷತ್ ಸದಸ್ಯ ಬಿಜೆಪಿ ನಾಯಕ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಸಿದರು ಎಂಬ ಆರೋಪ ವ್ಯಕ್ತವಾಗಿದೆ. ಈ ಆರೋಪಕ್ಕೆ ಸಂಬಂಧಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಕಾಂಗ್ರೆಸ್ ಸದಸ್ಯರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು ಸಲ್ಲಿಸಿದ್ದಾರೆ. ಅವರು ಆಡಿಯೋ ವಿಡಿಯೋ ದಾಖಲೆ ಪರಿಶೀಲಿಸಲು ಸಚಿವಾಲಯದ ಸಿಬ್ಬಂದಿಗೆ ಸೂಚಿಸಿದ್ದು, ನಂತರ ಸಿಟಿ ರವಿ ಅವರಿಂದ ವಿವರಣೆ ಕೇಳುವ ಸಾಧ್ಯತೆ ಇದೆ. ಈ ನಡುವೆ ಈ ಘಟನೆ ಬಳಿಕ ಸದಸ್ಯ ಸಿಟಿ ರವಿ ಅವರ ಮಾಧ್ಯಮ ಪ್ರತಿನಿಧಿಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಅವಾಚ್ಯ ಪದ ಬಳಕೆ ಆರೋಪ; ಎಂಎಲ್‌ಸಿ ಸಿಟಿ ರವಿ ಮೊದಲ ಪ್ರತಿಕ್ರಿಯೆ; 6 ಅಂಶಗಳು

1) ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಅವರು ಹೇಳುತ್ತಿರುವಂತಹ ಪದ ನಾನು ಬಳಕೆ ಮಾಡಿಲ್ಲ. ಇದು ಸ್ಪಷ್ಟ. ದಾಖಲೆಗಳನ್ನು ಪರಿಶೀಲಿಸಿ ನೋಡಲಿ. ಸಭಾಂಗಣದ ಒಳಗೆ ನಡೆದ ಘಟನೆ ಎಂದು ಹೇಳುತ್ತಿರುವ ಕಾರಣ ಆಡಿಯೋ, ವಿಡಿಯೋ ಎಲ್ಲ ಪರಿಶೀಲಿಸಲಿ.

2) ಲಕ್ಷ್ಮೀ ಹೆಬ್ಬಾಳ್ಕರ್ ಅವರು ಏನು ಹೇಳಿದ್ದಾರೆ. ನಾನು ಅದಕ್ಕೆ ಏನು ಹೇಳಿದ್ದೇನೆ ಎಂಬುದು ಗೊತ್ತಾಗುತ್ತದೆ. ದಾಖಲೆ ಪರಿಶೀಲಿಸಬೇಕು. ಅವರು ಯಾಕೆ ಹಾಗೆ ಭಾವಿಸಿದಾರೋ ನನಗೆ ಗೊತ್ತಿಲ್ಲ. ಏನು ಹೇಳಿದ್ದೇನೆ ಎಂಬುದು ದಾಖಲೆಯಲ್ಲಿರುತ್ತದೆ ಚೆಕ್ ಮಾಡಿ.

3) ದಾಖಲೆ ಪರಿಶೀಲನೆ ಮುಗಿಯಲಿ. ಅದೇನು ತೀರ್ಮಾನ ಆಗುತ್ತೋ ನಂತರ ಮಾತನಾಡುತ್ತೇನೆ. ಈಗ ಪ್ರತಿಕ್ರಿಯೆ ನೀಡುವ ಸಮಯವಲ್ಲ. ಎಲ್ಲವೂ ಸ್ಪಷ್ಟವಾಗಿದೆ. ವಿಡಿಯೋ, ಆಡಿಯೋ ಪರಿಶೀಲನೆ ಮುಗಿಯಲಿ. ಅವರು ಹೇಳುವ ರೀತಿ ಯಾವುದೇ ವ್ಯಕ್ತಿಗತ ಆರೋಪ ನಾನು ಮಾಡಿಲ್ಲ. ಈ ವಿಚಾರವನ್ನು ನಾನು ಒಂಟಿಯಾಗಿಯೇ ಎದುರಿಸಬಲ್ಲೆ.

4) ಕಾಂಗ್ರೆಸ್ ಪಕ್ಷ ಬದುಕಿದ್ದಾಗ ಹೇಗೆ ಅಪಮಾನ ಮಾಡಿದೆ. ಸತ್ತಾಗ ಹೇಗೆ ಅಪಮಾನ ಮಾಡಿತು. ಭಾರತ ರತ್ನ ಕೊಡುವುದಕ್ಕೂ ಹೇಗೆ ನಿರಾಕರಿಸಿತ್ತು ಎಂಬುದನ್ನು ನಾನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದೇನೆ.

5) ಡಾ ಬಿ ಆರ್ ಅಂಬೇಡ್ಕರ್ ಅವರು 1952ರಲ್ಲಿ ಲೋಕಸಭೆಗೆ ಮೊದಲ ಬಾರಿ ಸ್ಪರ್ಧಿಸಿದಾಗ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಪಾರ್ಟಿ. 1954ರ ಉಪಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ ಪಾರ್ಟಿ. ಹಾಗೆಯೇ ಅವರು ಮೃತಪಟ್ಟಾಗ ದೆಹಲಿಯಲ್ಲಿ ಆರು ಮೂರಡಿ ಜಾಗ ಕೊಡದೇ ಅಪಮಾನ ಮಾಡಿದ್ದು ಕೂಡ ಕಾಂಗ್ರೆಸ್ ಪಕ್ಷವೇ. ಅವರ ಪಾರ್ಥಿವ ಶರೀರ ಸಾಗಣೆ ಮಾಡುವುದಕ್ಕೆ ವಿಮಾನದ ಬಾಡಿಗೆಯನ್ನೂ ಕುಟುಂಬವೇ ಭರಿಸಬೇಕಾಯಿತು. ಆ ರೀತಿ ಅವಮಾನ ಮಾಡಿದ್ದರು.

6) ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಟ್ಟದ್ದು ಕಾಂಗ್ರೆಸ್ ಪಕ್ಷದ ಸರ್ಕಾರವಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಸ್ತಾವನೆ ಸಲ್ಲಿಸಿದರು. ಬಿಜೆಪಿ ಬೆಂಬಲಿತ ವಿಪಿ ಸಿಂಗ್ ಸರ್ಕಾರ ಡಾ ಬಿಆರ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಿತು. ಆದರೆ ಕಾಂಗ್ರೆಸ್ ಹಾಗಲ್ಲ. ಅದು ತನ್ನ ನೇತಾರರಿಗಷ್ಟೇ ಪುರಸ್ಕಾರ ನೀಡಿಕೊಂಡಿದೆ. ಅಂಬೇಡ್ಕರ್‌ ಅವರನ್ನು ಮರೆತುಬಿಟ್ಟಿದೆ. ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಪಂಚಧಾಮಗಳನ್ನು ಅಭಿವೃದ್ಧಿ ಪಡಿಸಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಪಕ್ಷವಲ್ಲ.

Whats_app_banner