Who is Isudan Gadhvi: ಎಎಪಿಯಿಂದ ಗುಜರಾತ್ ಸಿಎಂ ಅಭ್ಯರ್ಥಿಯಾಗಿರುವ ಇಸುದನ್ ಗಧ್ವಿ ಯಾರು? ಇವರ ಬಗ್ಗೆ ಇಲ್ಲಿದೆ ಮಾಹಿತಿ
ಗುಜರಾತ್ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ)ದಿಂದ ಇಸುದನ್ ಗಧ್ವಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ. ಇಸುದನ್ ಗಧ್ವಿ ಯಾರು? ಇವರ ಬಗ್ಗೆ ಇಲ್ಲಿದೆ 5 ಅಂಶಗಳು..
ಅಹಮದಾಬಾದ್ (ಗುಜರಾತ್): ಡಿಸೆಂಬರ್ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ)ದಿಂದ ಇಸುದನ್ ಗಧ್ವಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.
ಕೇಜ್ರಿವಾಲ್ ಅವರು ಅಹಮದಾಬಾದ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೆಸರನ್ನು ಘೋಷಿಸಿದರು. ಎಎಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಇಸುದನ್ ಗಧ್ವಿ ಜೊತೆ ಎಎಪಿ ಗುಜರಾತ್ ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಮನೋಜ್ ಸೊರತಿಹ್ಯ ಕೂಡ ಸಿಎಂ ಅಭ್ಯರ್ಥಿಯ ರೇಸ್ನಲ್ಲಿದ್ದರು.
ಸಿಎಂ ಅಭ್ಯರ್ಥಿ ಇಸುದನ್ ಗಧ್ವಿ ಬಗ್ಗೆ 5 ಪ್ರಮುಖ ಅಂಶಗಳು
- ಇಸುದನ್ ಗಧ್ವಿ, ಅವರು ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಜನಪ್ರಿಯ ಗುಜರಾತಿ ಪತ್ರಕರ್ತ ಮತ್ತು ಸುದ್ದಿವಾಹಿನಿಯ ನಿರೂಪಕರಾಗಿದ್ದರು. ಇವರು ಎಷ್ಟು ಪ್ರಸಿದ್ಧರಾಗಿದ್ದರೆಂದರೆ ರಾತ್ರಿ 8 ರಿಂದ 9 ಗಂಟೆಯ ವರೆಗೆ ಪ್ರಸಾರವಾಗುತ್ತಿದ್ದ ಕಾರ್ಯಕ್ರಮವನ್ನು ಜನರ ಬೇಡಿಕೆಯ ಮೇರೆಗೆ ಅರ್ಧ ಗಂಟೆ ಜಾಸ್ತಿ ಅಂದರೆ 8 ರಿಂದ 9.30 ರವರೆಗೆ ವಿಸ್ತರಿಸಲಾಗಿತ್ತು.
- ಗಧ್ವಿ ಅವರು ದ್ವಾರಕಾ ಜಿಲ್ಲೆಯ ಪಿಪಾಲಿಯಾ ಗ್ರಾಮದ ರೈತ ಕುಟುಂಬದಿಂದ ಬಂದವರು. ಆದರೆ ಆರ್ಥಿಕವಾಗಿ ಪ್ರಬಲ ಕುಟುಂಬದವರು.
- ರಾಜ್ಯದ ಜನಸಂಖ್ಯೆಯ ಶೇಕಡಾ 48 ರಷ್ಟಿರುವ ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದವರು.
- ಜುಲೈ 1, 2021 ರಂದು ಮಾಧ್ಯಮ ಕ್ಷೇತ್ರದಲ್ಲಿ ತಮ್ಮ ಕೆಲಸವನ್ನು ತೊರೆದ ನಂತರ ಇಸುದನ್ ಗಧ್ವಿ ಅವರನ್ನು ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ಪಕ್ಷಗಳು ಸಂಪರ್ಕಿಸಿದ್ದವು.
- ಆ ಸಮಯದಲ್ಲಿ, ಎಎಪಿಯ ಗೋಪಾಲ್ ಇಟಾಲಿಯಾ ಮತ್ತು ರಾಜ್ಯ ಉಸ್ತುವಾರಿ ಗುಲಾಬ್ ಸಿಂಗ್ ಯಾದವ್ ಅವರು ಗಧ್ವಿಯನ್ನು ಭೇಟಿಯಾದರು ಮತ್ತು ಅವರು ಅಂತಿಮವಾಗಿ ಜುಲೈ 14, 2021 ರಂದು ಆಮ್ ಆದ್ಮಿ ಪಕ್ಷಕ್ಕೆ ಸೇರಿದರು. ಪ್ರಸ್ತುತ ಅವರು ಎಎಪಿಯ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಪ್ರಸ್ತುತ ಭಾರತೀಯ ಜನತಾ ಪಕ್ಷವು (ಬಿಜೆಪಿ) ಆಡಳಿತ ನಡೆಸುತ್ತಿರುವ ರಾಜ್ಯದಲ್ಲಿ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ನೀಡಲು ಎಸ್‌ಎಂಎಸ್, ವಾಟ್ಸಾಪ್, ವಾಯ್ಸ್ ಮೇಲ್ ಮತ್ತು ಇ-ಮೇಲ್ ಮೂಲಕ ಪಕ್ಷವನ್ನು ಸಂಪರ್ಕಿಸುವಂತೆ ಕಳೆದ ವಾರ ಕೇಜ್ರಿವಾಲ್ ಜನರನ್ನು ಕೇಳಿಕೊಂಡಿದ್ದರು.
ನವೆಂಬರ್ 3 ರ ಸಂಜೆಯವರೆಗೆ ಜನರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದು ಮತ್ತು ಅವರ ಅಭಿಪ್ರಾಯಗಳ ಆಧಾರದ ಮೇಲೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಮರುದಿನ ಪ್ರಕಟಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದರು. ಅದರಂತೆ ಇಂದು ಸಿಎಂ ಅಭ್ಯರ್ಥಿಯ ಹೆಸರನ್ನು ಘೋಷಿಸಿದ್ದಾರೆ. ಪಕ್ಷ ನಡೆಸಿದ ಸಮೀಕ್ಷೆಯಲ್ಲಿ 40 ವರ್ಷದ ಗಧ್ವಿ ಶೇ.73ರಷ್ಟು ಮತಗಳನ್ನು ಪಡೆದಿದ್ದಾರೆ.
ಎಎಪಿ ಗುರುವಾರ ಗುಜರಾತ್ ಚುನಾವಣೆಗೆ 10 ಅಭ್ಯರ್ಥಿಗಳ ತನ್ನ ಒಂಬತ್ತನೇ ಪಟ್ಟಿಯನ್ನು ಪ್ರಕಟಿಸಿದ್ದು, ಇದುವರೆಗೆ ಒಟ್ಟು 118 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. 182 ಸದಸ್ಯರ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.