ಕನ್ನಡ ಸುದ್ದಿ  /  Nation And-world  /  Gujarat Model Is Being Endorsed Says Pralhad Joshi As Bjp Is Leading In Gujarat Assembly Elections

Gujarat Assembly Elections 2022 Results: 'ಗುಜರಾತ್‌ ಮಾಡೆಲ್‌'ಗೆ ಜನರಿಂದ ಅಧಿಕೃತ ಮುದ್ರೆ: ಪ್ರಲ್ಹಾದ್‌ ಜೋಶಿ

ಗುಜರಾತ್‌ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವಿನ ಸಮೀಪಕ್ಕೆ ಬಂದಿದೆ. ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಇದು 'ಗುಜರಾತ್‌ ಮಾಡೆಲ್‌'ಗೆ ಸಂದ ಜಯ ಎಂದು ಬಣ್ಣಿಸಿದ್ಧಾರೆ. 'ಗುಜರಾತ್‌ ಮಾಡೆಲ್‌'ಗೆ ಜನರಿಂದ ಅಧಿಕೃತ ಮುದ್ರೆ ದೊರೆತಿದ್ದು, ಈ ಐತಿಹಾಸಿಕ ಗೆಲುವಿಗಾಗಿ ಗುಜರಾತ್ ಜನರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಲ್ಹಾದ್‌ ಜೋಶಿ ಹೇಳಿದರು.

ಪ್ರಲ್ಹಾದ್‌ ಜೋಶಿ (ಸಂಗ್ರಹ ಚಿತ್ರ)
ಪ್ರಲ್ಹಾದ್‌ ಜೋಶಿ (ಸಂಗ್ರಹ ಚಿತ್ರ) (ANI)

ನವದೆಹಲಿ: ಗುಜರಾತ್‌ ವಿಧಾನಸಭೆ ಚುನಾವಣೆಗೆ ಮತ ಎಣಿಕೆ ಪ್ರಕ್ರಿಯೆ ಜಾರಿಯಲ್ಲಿದ್ದು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿರುವುದು ಬಹುತೇಕ ಖಚಿತವಾಗಿದೆ. ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಕ್ಷೇತ್ರಗಳಲ್ಲಿ ಜಯ ಸಾಧಿಸಲಿರುವುದು ಖಚಿತ.

ಇನ್ನು ಗುಜರಾತ್‌ನಲ್ಲಿ ಪಕ್ಷದ ಜಯ ಖಚಿತವಾಗುತ್ತಿದ್ದಂತೇ, ಬಿಜೆಪಿ ನಾಯಕರು ಈ ಗೆಲುವನ್ನು ಐತಿಹಾಸಿಕ ಎಂದು ಬಣ್ಣಿಸಲಾರಂಭಿಸಿದ್ದಾರೆ. ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಇದು 'ಗುಜರಾತ್‌ ಮಾಡೆಲ್‌'ಗೆ ಸಂದ ಜಯ ಎಂದು ಬಣ್ಣಿಸಿದ್ಧಾರೆ.

ನವದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಪ್ರಲ್ಹಾದ್‌ ಜೋಶಿ, 'ಗುಜರಾತ್‌ ಮಾಡೆಲ್‌'ಗೆ ಜನರಿಂದ ಅಧಿಕೃತ ಮುದ್ರೆ ದೊರೆತಿದೆ. ಈ ಐತಿಹಾಸಿಕ ಗೆಲುವನ್ನು ನಮಗೆ ವರದಾನವಾಗಿ ನೀಡಿರುವ ಗುಜರಾತ್‌ ಜನರಿಗೆ ನಾನು ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ ಎಂದು ನುಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವ, ದೇಶದ ಅಭಿವೃದ್ಧಿಗೆ ಬಿಜೆಪಿ ಪ್ರಸ್ತುತಪಡಿಸಿದ 'ಗುಜರಾತ್‌ ಮಾಡೆಲ್‌'ನ್ನು ಜನರು ಮೆಚ್ಚಿಕೊಂಡಿದ್ದಾರೆ. ಇದೇ ಕಾರಣಕ್ಕೆ 27 ವರ್ಷಗಳ ಬಳಿಕ ಬಿಜೆಪಿ ಗುಜರಾತ್‌ನಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ ಎಂಬ ವಿಶ್ಲೇಷಣೆಗಳೆಲ್ಲಾ ತಲೆ ಕೆಳಗಾಗಿದೆ ಎಂದು ಪ್ರಲ್ದಾದ್‌ ಜೋಶಿ ಹೇಳಿದರು.

ಅದೇ ರೀತಿ ಹಿಮಾಚಲ ಪ್ರದೇಶದಲ್ಲೂ ಬಿಜೆಪಿ ಉತ್ತಮ ಪ್ರದರ್ಶನ ತೋರುತ್ತಿದ್ದು, ಅಲ್ಲಿಯೂ ಪಕ್ಷ ಸ್ಪಷ್ಟ ಬಹುಮತ ಗಳಿಸುವ ನಿರೀಕ್ಷೆ ಇದೆ. ಏನೇ ಆದರೂ ಅಂತಿಮ ಫಳಿತಾಂಶ ಬಂದ ಬಳಿಕಷ್ಟೇ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಪ್ರಲ್ಹಾದ್‌ ಜೋಶಿ ಸ್ಪಷ್ಟಪಡಿಸಿದರು.

ಸದ್ಯದ ಅಂಕಿ ಅಂಶಗಳ ಪ್ರಕಾರ ಗುಜರಾತ್‌ನಲ್ಲಿ ಬಿಜೆಪಿಯು 154 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದು ಕಳೆದ ಬಾರಿಗಿಂತ 55 ಹೆಚ್ಚಿನ ಕ್ಷೇತ್ರಗಳನ್ನು ಒಳಗೊಂಡಿದೆ ಎಂಬುದು ವಿಶೇಷ.

ಅದೇ ರೀತಿ ಕಾಂಗ್ರೆಸ್‌ ಕೇವಲ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಲಿದ್ದು, ಇದು ಕಳೆದ ಬಾರಿಗಿಂತ 59 ಸೀಟು ಕಡಿಮೆ ಎಂಬುದು ಇಲ್ಲಿ ಉಲ್ಲೇಖನೀಯ. ಆದಾಗ್ಯೂ, ಕಾಂಗ್ರೆಸ್‌ ಗುಜರಾತ್‌ನಲ್ಲಿ ಎರಡನೇ ಸ್ಥಾನದಲ್ಲಿದೆ ಎಂಬುದು ಪಕ್ಷದ ಪಾಲಿಗೆ ಸಮಾಧಾನಕರ ಸಂಗತಿಯಾಗಿದೆ.

ಇನ್ನು ಈ ಬಾರಿಯ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ್ದ ಆಮ್‌ ಆದ್ಮಿ ಪಕ್ಷ(ಆಪ್‌) ಸದ್ಯ 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಬಾರಿ ಶೂನ್ಯ ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಆಪ್‌, ಈ ಬಾರಿ ಗುಜರಾತ್‌ನಲ್ಲಿ ಕೆಲವು ಕ್ಷೇತ್ರಗಳಲ್ಲಿ ಜಯ ಸಾಧಿಸಲಿರುವುದು ಖಚಿತ ಎನ್ನಲಾಗಿದೆ.

ಒಟ್ಟಿನಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಐತಿಹಾಸಿಕ ಜಯ ಸಾಧಿಸುವತ್ತ ಹೆಜ್ಜೆ ಇಟ್ಟಿದ್ದು, ಮಧ್ಯಾಹ್ನದ ವೇಳೆಗೆ ಗುಜರಾತ್‌ ವಿಧಾನಸಭೆ ಚುನಾವಣೆ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯಲಿದೆ.

ಇಂದಿನ ಪ್ರಮುಖ ಸುದ್ದಿಗಳು

Gujarat Assembly Elections 2022 Results: ಬಿಜೆಪಿ ಪಾಳೆಯದಲ್ಲಿ ಸಂಭ್ರಮ: ಐತಿಹಾಸಿಕ ಗೆಲುವಿನ ಸ್ವಾಗತಕ್ಕೆ ಕ್ಷಣಗಣನೆ

ಗುಜರಾತ್‌ ವಿಧಾನಸಭೆ ಚುನಾವಣೆಗೆ ಮತ ಎಣಿಕೆ ಪ್ರಕ್ರಿಯೆ ಜಾರಿಯಲ್ಲಿದ್ದು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿರುವುದು ಬಹುತೇಕ ಖಚಿತವಾಗಿದೆ. ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಕ್ಷೇತ್ರಗಳಲ್ಲಿ ಜಯ ಸಾಧಿಸಲಿರುವುದು ಖಚಿತ. ಈ ಹಿನ್ನೆಲೆಯಲ್ಲಿ ಗುಜರಾತ್‌ ಬಿಜೆಪಿ ಘಟಕದಲ್ಲಿ ಸಂಭ್ರಮಾಚರಣೆ ಆರಂಭವಾಗಿದ್ದು, ಬಿಜೆಪಿ ಕಾರ್ಯಕರ್ತರು ಪಕ್ಷದ ಧ್ವಜಗಳೊಂದಿಗೆ ರಸ್ತೆಗಿಳಿದಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

IPL_Entry_Point