ಕನ್ನಡ ಸುದ್ದಿ  /  Nation And-world  /  India News Another Neet Coaching Student Commits Suicide In Kota Rajasthan 6th Case In 2024 Rmy

Student Suicide: ಕೋಟಾದಲ್ಲಿ ಮತ್ತೊಬ್ಬ ನೀಟ್ ಕೋಚಿಂಗ್ ವಿದ್ಯಾರ್ಥಿ ಆತ್ಮಹತ್ಮೆ; 2024 ರಲ್ಲಿ 6ನೇ ಪ್ರಕರಣ

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಗೆ ತಯಾರಿ ನಡೆಸುತ್ತಿದ್ದ 20 ವರ್ಷದ ವಿದ್ಯಾರ್ಥಿ ಮಂಗಳವಾರ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನೀಟ್‌ಗೆ ತಯಾರಿ ನಡೆಸುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿ ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನೀಟ್‌ಗೆ ತಯಾರಿ ನಡೆಸುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿ ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದೆಹಲಿ: ಭಾರತದ ಪ್ರಮುಖ ಕೋಚಿಂಗ್ ಹಬ್ ಆಗಿರುವ ರಾಜಸ್ಥಾನದ ಕೋಟಾದಲ್ಲಿ ಮತ್ತೊಬ್ಬ ನೀಟ್ ಕೋಚಿಂಗ್ ವಿದ್ಯಾರ್ಥಿಗಳ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಗೆ ತಯಾರಿ ನಡೆಸುತ್ತಿದ್ದ 20 ವರ್ಷದ ವಿದ್ಯಾರ್ಥಿ ಇಂದು (ಮಾರ್ಚ್ 26, ಮಂಗಳವಾರ) ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಈ ವರ್ಷ ಕೋಚಿಂಗ್ ಹಬ್‌ನಲ್ಲಿ ನಡೆದ ಆರನೇ ಪ್ರಕರಣ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ ಕೋಟಾ ಜಿಲ್ಲೆಯಲ್ಲಿರುವ ವಿವಿಧ ಸ್ಪರ್ಧಾತ್ಮಕ ಕೇಂದ್ರಗಳಲ್ಲಿ ಕೋಚಿಂಗ್ ಪಡೆಯುತ್ತಿದ್ದ 27 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವತ್ತಿನ (ಮಾರ್ಚ್ 26, ಮಂಗಳವಾರ) ಘಟನೆ ಬಗ್ಗೆ ಮಾಹಿತಿ ನೀಡಿರುವ ಕೋಟಾದ ವಿಜ್ಞಾನ್ ನಗರದ ಸ್ಟೇಷನ್ ಹೌಸ್ ಅಧಿಕಾರಿ ಸತೀಶ್ ಚಂದ್, ಉತ್ತರ ಪ್ರದೇಶದ ಕನೌಜ್‌ನ ವಿದ್ಯಾರ್ಥಿ ತನ್ನ ಬಾಡಿಗೆ ಅಪಾರ್ಟ್ಮೆಂಟ್‌ನಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

"ಬೆಳಿಗ್ಗೆ ತನ್ನ ಪೋಷಕರ ಫೋನ್‌ ಕರೆಗೆ ಪ್ರತಿಕ್ರಿಯಿಸದಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ, ನಂತರ ಈತನ ಹೆತ್ತವರು ಜವಾಹರ್ ನಗರ ಪ್ರದೇಶದಲ್ಲಿ ವಾಸಿಸುವ ಮೃತನ ಸ್ನೇಹಿತನಿಗೆ ಕರೆ ಮಾಡಿದ್ದಾರೆ. ಸ್ನೇಹಿತರು ಅಪಾರ್ಟ್ಮೆಂಟ್‌ ಬಳಿಗೆ ಬಂದು, ಮಾಲೀಕ ಮತ್ತು ಭದ್ರತಾ ಸಿಬ್ಬಂದಿಯನ್ನು ಕರೆದು ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಮೃತ ವಿದ್ಯಾರ್ಥಿ ಕಳೆದ ಒಂದು ವರ್ಷದಿಂದ ಕೋಟಾದಲ್ಲಿ ಅಧ್ಯಯನ ಮಾಡುತ್ತಿದ್ದ. ಕೆಲವು ದಿನಗಳ ಹಿಂದೆ ಅಪಾರ್ಟ್ಮೆಂಟ್‌ಗೆ ಸ್ಥಳಾಂತರಗೊಂಡಿದ್ದ. ಆತನ ಕೋಣೆಯಿಂದ ಯಾವುದೇ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಳ್ಳಲಾಗಿಲ್ಲ. ಸಾವಿನ ಬಗ್ಗೆ ಅವರ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ. ತನಿಖೆ ನಡೆಸುತ್ತಿದ್ದೇವೆ ಸ್ಪಷ್ಟಪಡಿಸಿದ್ದಾರೆ.

ಕೋಟಾ ಭಾರತದ ಪರೀಕ್ಷಾ-ಸಿದ್ಧತಾ ವ್ಯವಹಾರದ ಕೇಂದ್ರವಾಗಿದ್ದು, ವಾರ್ಷಿಕವಾಗಿ 10,000 ಕೋಟಿ ರೂ.ಗಳ ವ್ಯವಹಾರ ಇಲ್ಲಿ ನಡೆಯುತ್ತದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ದೇಶಾದ್ಯಂತದ ವಿದ್ಯಾರ್ಥಿಗಳು ತಮ್ಮ ಹತ್ತನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ದೊಡ್ಡ ಸಂಖ್ಯೆಯಲ್ಲಿ ಅಲ್ಲಿಗೆ ಹೋಗುತ್ತಾರೆ ಮತ್ತು ವಸತಿ ಪರೀಕ್ಷಾ-ಸಿದ್ಧತಾ ಸಂಸ್ಥೆಗಳಿಗೆ ನೋಂದಾಯಿಸಿಕೊಳ್ಳುತ್ತಾರೆ. ಅವರು ಶಾಲೆಗಳಲ್ಲಿ ದಾಖಲಾಗುತ್ತಾರೆ, ಅವುಗಳಲ್ಲಿ ಹೆಚ್ಚಿನವು ಉತ್ತಮ ತರಬೇತಿಗಳನ್ನು ನೀಡುತ್ತವೆ.

ವಿದ್ಯಾರ್ಥಿಗಳು ತಮ್ಮ ಹನ್ನೆರಡನೇ ತರಗತಿ ಓದಿನ ಜೊತೆಗೆ ಮುಖ್ಯವಾಗಿ ನೀಟ್ ಮತ್ತು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ನಂತಹ ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆಗಳನ್ನು ನಡೆಸುತ್ತಾರೆ. ಕೆಲವು ವಿದ್ಯಾರ್ಥಿಗಳು ತಮ್ಮ ಕುಟುಂಬಗಳಿಂದ ದೂರವಿರುವುದರಿಂದ ಒತ್ತಡವನ್ನು ಅನುಭವಿಸುತ್ತಿದ್ದಾರೆ.

2020, 2021 ರಲ್ಲಿ ಯಾವುದೇ ಆತ್ಮಹತ್ಯೆಗಳು ವರದಿಯಾಗಿಲ್ಲ

ಪೊಲೀಸ್ ಅಂಕಿಅಂಶಗಳ ಪ್ರಕಾರ, ಕೋಟಾದಲ್ಲಿ 2022 ರಲ್ಲಿ 15, 2019 ರಲ್ಲಿ 18, 2018 ರಲ್ಲಿ 20, 2017 ರಲ್ಲಿ 7, 2016 ರಲ್ಲಿ 17 ಮತ್ತು 2015 ರಲ್ಲಿ 18 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕೋಚಿಂಗ್ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದರಿಂದ ಅಥವಾ ಆನ್‌ಲೈನ್‌ನಲ್ಲಿ ಕಾರ್ಯನಿರ್ವಹಿಸಿದ್ದರಿಂದ 2020 ಮತ್ತು 2021 ರಲ್ಲಿ ಯಾವುದೇ ಆತ್ಮಹತ್ಯೆಗಳು ವರದಿಯಾಗಿಲ್ಲ.

ಬಿಹಾರ ಮೂಲದ 16 ವರ್ಷದ ಜೆಇಇ ವಿದ್ಯಾರ್ಥಿ ಮಾರ್ಚ್ 8 ರಂದು ಆತ್ಮಹತ್ಯೆ ಮಾಡಿಕೊಂಡರೆ, ಛತ್ತೀಸ್ಗಢದ 16 ವರ್ಷದ ಜೆಇಇ ಆಕಾಂಕ್ಷಿ ಫೆಬ್ರವರಿ 13 ರಂದು ತನ್ನ ಜವಾಹರ್ ನಗರ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉತ್ತರ ಪ್ರದೇಶ ಮೂಲದ 19 ವರ್ಷದ ನೀಟ್ ವಿದ್ಯಾರ್ಥಿ ಜನವರಿ 23 ರಂದು ಜವಾಹರ್ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡರೆ, ಕೋಟಾ ಮೂಲದ 18 ವರ್ಷದ ಜೆಇಇ ವಿದ್ಯಾರ್ಥಿ ಜನವರಿ 29 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 10 ದಿನಗಳಿಂದ ನಾಪತ್ತೆಯಾಗಿದ್ದ ಮಧ್ಯಪ್ರದೇಶ ಮೂಲದ 16 ವರ್ಷದ ಜೆಇಇ ಆಕಾಂಕ್ಷಿ ಫೆಬ್ರವರಿ 19 ರಂದು ಕೋಟಾದ ಚಂಬಲ್ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದರು.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ

ಸಹಾಯವಾಣಿಗಳು: ಆಸ್ರಾ: 022 2754 6669

ಸ್ನೇಹ ಇಂಡಿಯಾ ಫೌಂಡೇಶನ್: +914424640050 ಮತ್ತು ಸಂಜೀವಿನಿ: 011-24311918

ರೋಶನಿ ಫೌಂಡೇಶನ್ (ಸಿಕಂದರಾಬಾದ್) ಸಂಪರ್ಕ ಸಂಖ್ಯೆಗಳು: 040-66202001, 040-66202000,

ಒನ್ ಲೈಫ್: ಸಂಪರ್ಕ ಸಂಖ್ಯೆ: 78930 7893 09441778290