Rajya Sabha: ನೀವು ಸೆಲೆಬ್ರೆಟಿಯೇ ಇರಬಹುದು, ನಾವೇನೂ ಶಾಲಾ ಮಕ್ಕಳಲ್ಲ: ರಾಜ್ಯಸಭೆಯಲ್ಲಿ ಸಭಾಪತಿ ಧನಕರ್, ಸದಸ್ಯೆ ಜಯಾ ಬಚ್ಚನ್‌ ಮಾತಿನ ಚಕಮಕಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rajya Sabha: ನೀವು ಸೆಲೆಬ್ರೆಟಿಯೇ ಇರಬಹುದು, ನಾವೇನೂ ಶಾಲಾ ಮಕ್ಕಳಲ್ಲ: ರಾಜ್ಯಸಭೆಯಲ್ಲಿ ಸಭಾಪತಿ ಧನಕರ್, ಸದಸ್ಯೆ ಜಯಾ ಬಚ್ಚನ್‌ ಮಾತಿನ ಚಕಮಕಿ

Rajya Sabha: ನೀವು ಸೆಲೆಬ್ರೆಟಿಯೇ ಇರಬಹುದು, ನಾವೇನೂ ಶಾಲಾ ಮಕ್ಕಳಲ್ಲ: ರಾಜ್ಯಸಭೆಯಲ್ಲಿ ಸಭಾಪತಿ ಧನಕರ್, ಸದಸ್ಯೆ ಜಯಾ ಬಚ್ಚನ್‌ ಮಾತಿನ ಚಕಮಕಿ

Political News ರಾಜ್ಯಸಭೆ ಶುಕ್ರವಾರ ಭಿನ್ನ ಜಗಳಕ್ಕೆ ವೇದಿಕೆಯಾಯಿತು. ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಜಯಾ ಬಚ್ಚನ್‌ ಸಭಾಪತಿಯನ್ನೇ ಕೆರಳಿಸಿದರು. ನೀವು ಸೆಲೆಬ್ರಿಟಿ ಇದ್ದರೆ ಹೊರಗೆ ಇಟ್ಟುಕೊಳ್ಳಿ ಎಂದು ಸಭಾಪತಿ ತಿರುಗೇಟು ನೀಡಿದರು. ಹೀಗಿತ್ತು ಈ ಸಂವಾದ.

ರಾಜ್ಯಸಭೆಯಲ್ಲಿ ಜಗದೀಪ್‌ ಧನಕರ್‌ ಹಾಗೂ ಜಯಾಬಚ್ಚನ್‌ ನಡುವೆ ಮಾತಿನ ಚಕಮಕಿ ಹೀಗಿತ್ತು.
ರಾಜ್ಯಸಭೆಯಲ್ಲಿ ಜಗದೀಪ್‌ ಧನಕರ್‌ ಹಾಗೂ ಜಯಾಬಚ್ಚನ್‌ ನಡುವೆ ಮಾತಿನ ಚಕಮಕಿ ಹೀಗಿತ್ತು.

ದೆಹಲಿ: ನೀವು ಸೆಲೆಬ್ರೆಟಿಯೇ ಆಗಿರಬಹುದು. ಹೊರಗಡೆ ಏನೇ ಇರಬಹುದು. ಸದನದಲ್ಲಿ ಸದಸ್ಯರಂತೆಯೇ ಇರಬೇಕು. ಪೀಠಕ್ಕೆ ಗೌರವ ಕೊಟ್ಟು ಮಾತನಾಡಬೇಕು. ನಾನು ಇಂತಹ ವರ್ತನೆಯನ್ನು ಎಂದಿಗೂ ಒಪ್ಪುವುದಿಲ್ಲ. ಸಹಿಸಿಕೊಳ್ಳುವುದೇ ಇಲ್ಲ. ನಿಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಲ್ಲದೇ ಇದ್ದರೆ ಸರಿಯಿರುವುದಿಲ್ಲ ಎನ್ನುವ ಉತ್ತರ, ನೀವು ನಮ್ಮಂತೆಯೇ ಒಬ್ಬರು ಸದಸ್ಯರು. ನೀವು ಪೀಠದ ಮೇಲೆ ಕುಳಿತಿರಬಹುದು. ಹಾಗೆಂದು ಸದಸ್ಯರನ್ನು ವಿದ್ಯಾರ್ಥಿಗಳಂತೆ ನೋಡುವುದು, ನಾವು ಹೇಳದ್ದನ್ನು ಒಪ್ಪದೇ ಇರುವುದು, ನೀವೇ ಹೇಳದ್ದನ್ನು ನಾವು ಒಪ್ಪಿಕೊಳ್ಳಲೇಬೇಕು ಎನ್ನುವುದು ಸರಿಯಲ್ಲ. ನಾವೂ ಇದನ್ನು ಒಪ್ಪೊಲ್ಲ.ನಿಮ್ಮ ಧ್ವನಿಯೇ ಸರಿಯಾಗಿಲ್ಲ ಎನ್ನುವ ತಿರುಗೇಟು.

ಇಂತಹ ಮಾತಿನ ಚಕಮಕಿ, ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು ಹಿರಿಯರ ಮನೆ ಎಂದೇ ಕರೆಯಿಸಿಕೊಳ್ಳುವ ರಾಜ್ಯಸಭೆಯಲ್ಲಿ. ಉಪರಾಷ್ಟ್ರಪತಿಯೂ ಆಗಿರುವ ರಾಜ್ಯಸಭೆಯ ಸಭಾಪತಿ ಜಗದೀಪ್‌ ಧನಕರ್‌(Rajya Sabha Chairperson Jagdeep Dhankhar) ಹಾಗೂ ಹಿರಿಯ ನಟಿ, ಸಮಾಜವಾದಿ ಪಕ್ಷದ ಸದಸ್ಯೆ ಜಯಾ ಬಚ್ಚನ್‌( Samajwadi Party MP Jaya Bachchan) ನಡುವೆ.

ಇದು ಹಲವು ಹೊತ್ತಿನವರೆಗೂ ಮುಂದುವರೆದಿತ್ತು. ಬಿಜೆಪಿ ಸದಸ್ಯರು ಹಾಗೂ ಪ್ರತಿಪಕ್ಷಗಳ ಸದಸ್ಯರ ಮಾತಿನ ಗದ್ದಲಗಳ ನಡುವೆ ಇಬ್ಬರ ಮಾತಿನ ಚಕಮಕಿ ಮುಂದುವರೆದೇ ಇತ್ತು.

ಶುಕ್ರವಾರ ಸದನ ಆರಂಭವಾದಾಗ ಜಯಾ ಬಚ್ಚನ್‌ ಅವರು ಯಾವುದೇ ವಿಷಯ ಪ್ರಸ್ತಾಪಿಸಲು ಮುಂದಾದರು. ಇದಕ್ಕೆ ಪೀಠದಲ್ಲಿದ್ದ ಧನಕರ್‌ ಅವರು ಅವಕಾಶ ನೀಡಲಿಲ್ಲ. ಎರಡು ದಿನದ ಹಿಂದೆಯೂ ಹೀಗೆಯೇ ಆದಾಗ ಜಯಾ ವಿರೋಧ ವ್ಯಕ್ತಪಡಿಸಿದ್ದರು. ಇಂದೂ ಕೂಡ ಹೀಗೆ ಆಗಿದ್ದರಿಂದ ಮಾತನಾಡಲು ಅವಕಾಶ ಕೊಡಿ ಎನ್ನುವ ಮನವಿಯನ್ನು ಜಯಾ ಮಾಡಿದರು. ಸದಸ್ಯರ ಮಾತಿಗೆ ಅವಕಾಶವೇ ಸಿಗುತ್ತಿಲ್ಲ ಎನ್ನುವ ಅಸಮಾಧಾನವನ್ನೂ ಹೊರ ಹಾಕಿದರು.

ಎದ್ದು ನಿಂತು ಮಾತನಾಡಲು ಹೊರಟ ಜಯಾ ಬಚ್ಚನ್‌, ನೀವು ಪೀಠದಲ್ಲಿ ಕುಳಿತಿರಬಹುದು. ನಮ್ಮಂತೆಯೇ ಒಬ್ಬರು ಸದಸ್ಯರು ಎನ್ನುವುದನ್ನು ಮರೆಯಬೇಡಿ. ಅಲ್ಲಿ ಕುಳಿತರೆ ಸದಸ್ಯರ ಮನೋಭಾವ ಅರ್ಥವಾಗುವುದಿಲ್ಲ. ನೀವು ಧ್ವನಿಸುವ ರೀತಿಯೇ ಸರಿಯಿಲ್ಲ. ಮಕ್ಕಳ ರೀತಿ ಗದರಬೇಡಿ. ನಿಮ್ಮ ಎಲ್ಲ ಸೂಚನೆಗಳನ್ನು ಒಪ್ಪಿಕೊಳ್ಳೋಲ್ಲ ಎಂದು ಹೇಳಿದರು.

ಅವರು ಮಾತನಾಡುತ್ತಿದ್ದಾಗಲೇ ಕೆರಳಿದ ಸಭಾಪತಿ ಧನಕರ್‌, ಜಯಾ ಅವರು ನೀವು ಸಲೆಬ್ರೆಟಿ ಹೊರಗಡೆ ಇರಬಹುದು. ಒಳಗಡೆ ನೀವೊಬ್ಬ ಸದಸ್ಯರೇ. ಎಲ್ಲರಿಗೂ ಅವಕಾಶ ನೀಡುವ ಹಾಗೆ ನಿಮಗೂ ಅವಕಾಶ ಮಾಡಿಕೊಡುತ್ತೇವೆ. ಎಲ್ಲರಂತೆ ನೀವು ನಡೆದುಕೊಳ್ಳಿ. ನಾನು ಚಲನಚಿತ್ರ ನಿರ್ದೇಶಕನಲ್ಲ. ಸಭಾಪತಿ. ಪೀಠಕ್ಕೆ ಸರಿಯಾಗಿ ನಡೆದುಕೊಳ್ಳಬೇಕು. ಈ ನಡುವಳಿಕೆ ಒಪ್ಪುವುದಿಲ್ಲ ಎಂದು ತಿರುಗೇಟು ನೀಡಿದರು.

ಬಳಿಕ ಹೊರಗಡೆ ಮಾತನಾಡಿದ ಜಯಾ ಬಚ್ಚನ್‌, ಸದಸ್ಯರು ಮಾತನಾಡಲು ಅವಕಾಶವೇ ಇಲ್ಲ ಎಂದರೆ ಹೇಗೆ. ನಮ್ಮನ್ನು ವಿದ್ಯಾರ್ಥಿಗಳ ರೀತಿ ನೋಡಬಾರದು. ಕೆಲವರು ನಾವು ಹಿರಿಯರ ಸದಸ್ಯರು ಇದ್ದೇವೆ. ನಾನು ಸೆಲೆಬ್ರೆಟಿ ಎಂದು ಹೇಳಿಲ್ಲ. ಸದಸ್ಯೆಯಾಗಿ ನನ್ನ ಹಕ್ಕನ್ನು ಕೇಳಿದ್ದೇನೆ. ಹಿಂದೆ ಸದನದಲ್ಲಿ ಯಾವ ಸಭಾಪತಿಯೂ ಈ ರೀತಿ ನಡೆದುಕೊಂಡಿಲ್ಲ. ಅವರು ನಮಗೆ ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದರು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.