Analysis: ಬಾಂಗ್ಲಾ ಗಲಭೆಯಲ್ಲಿ ಅಮೆರಿಕ, ಪಾಕ್ ಕೈವಾಡದ ಶಂಕೆ; ಭಾರತದ ಮಗ್ಗುಲಲ್ಲಿ ಕ್ರಿಶ್ಚಿಯನ್ ದೇಶ ರೂಪಿಸಲು ಸಂಚು, ಶುರುವಾಗಿದೆ ಚರ್ಚೆ-bangladesh coup experts suspect cia hand in uprooting pm sheikh hasina regime question of new christian country dmg ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Analysis: ಬಾಂಗ್ಲಾ ಗಲಭೆಯಲ್ಲಿ ಅಮೆರಿಕ, ಪಾಕ್ ಕೈವಾಡದ ಶಂಕೆ; ಭಾರತದ ಮಗ್ಗುಲಲ್ಲಿ ಕ್ರಿಶ್ಚಿಯನ್ ದೇಶ ರೂಪಿಸಲು ಸಂಚು, ಶುರುವಾಗಿದೆ ಚರ್ಚೆ

Analysis: ಬಾಂಗ್ಲಾ ಗಲಭೆಯಲ್ಲಿ ಅಮೆರಿಕ, ಪಾಕ್ ಕೈವಾಡದ ಶಂಕೆ; ಭಾರತದ ಮಗ್ಗುಲಲ್ಲಿ ಕ್ರಿಶ್ಚಿಯನ್ ದೇಶ ರೂಪಿಸಲು ಸಂಚು, ಶುರುವಾಗಿದೆ ಚರ್ಚೆ

ಇಂಡೋನೇಷ್ಯಾದಿಂದ ಸ್ವಾತಂತ್ರ್ಯ ಪಡೆದು ರೂಪುಗೊಂಡ ಈಸ್ಟ್‌ ತೈಮೋರ್ ಮಾದರಿಯಲ್ಲಿಯೇ ಭಾರತದ ಪೂರ್ವ ಗಡಿಯಲ್ಲಿ ಹೊಸ ಕ್ರಿಶ್ಚಿಯನ್ ದೇಶವನ್ನು ಹುಟ್ಟುಹಾಕುವುದು, ಅಲ್ಲಿ ಸೇನಾನೆಲೆ ಸ್ಥಾಪಿಸುವ ಮೂಲಕ ಹಾಲಿ ಸೂಪರ್‌ಪವರ್ ಚೀನಾ ಮತ್ತು ಭವಿಷ್ಯದ ಸೂಪರ್‌ ಭಾರತವನ್ನು ಈ ಮೂಲಕ ಏಕಕಾಲಕ್ಕೆ ಕಟ್ಟಿಹಾಕಬಹುದು ಎನ್ನುವ ಲೆಕ್ಕಾಚಾರ ಇದೆ ಎಂದು ಹಲವು ವರದಿಗಳು ಹೇಳಿವೆ.

ಬಾಂಗ್ಲಾ ಗಲಭೆಯಲ್ಲಿ ಅಮೆರಿಕ, ಪಾಕ್ ಕೈವಾಡದ ಶಂಕೆ; ಭಾರತದ ಮಗ್ಗುಲಲ್ಲಿ ಕ್ರಿಶ್ಚಿಯನ್ ದೇಶ ರೂಪಿಸಲು ಸಂಚು
ಬಾಂಗ್ಲಾ ಗಲಭೆಯಲ್ಲಿ ಅಮೆರಿಕ, ಪಾಕ್ ಕೈವಾಡದ ಶಂಕೆ; ಭಾರತದ ಮಗ್ಗುಲಲ್ಲಿ ಕ್ರಿಶ್ಚಿಯನ್ ದೇಶ ರೂಪಿಸಲು ಸಂಚು

ಬಾಂಗ್ಲಾದೇಶದಲ್ಲಿ ಉದ್ಯೋಗ ಮೀಸಲಾತಿ ವಿರೋಧಿಸುವ ನೆಪದಲ್ಲಿ ಆರಂಭವಾದ ಪ್ರತಿಭಟನೆಗಳು ಕ್ರಮೇಣ ಗಲಭೆಗಳ ಸ್ವರೂಪ ಪಡೆದುಕೊಂಡು ವ್ಯಾಪಕ ಹಿಂಸಾಚಾರಕ್ಕೆ ಕಾರಣವಾದವು. ಪ್ರತಿಭಟನೆಯನ್ನು ಹತ್ತಿಕ್ಕುವಲ್ಲಿ ಪೊಲೀಸರು ವಿಫಲರಾದರು. ದಿನದಿಂದ ದಿನಕ್ಕೆ ಹಿಂಸಾಚಾರ ವ್ಯಾಪಕವಾಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಇದೀಗ ದೇಶ ತೊರೆದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಂತರವೂ ಬಾಂಗ್ಲಾ ಶಾಂತವಾಗಿಲ್ಲ. ಬಾಂಗ್ಲಾದೇಶದ ಆಂತರಿಕ ವಿದ್ಯಮಾನದಲ್ಲಿ 'ಬಿಳಿ ದೇಶ' ಒಂದು ಹಸ್ತಕ್ಷೇಪ ನಡೆಸಲು ಯತ್ನಿಸುತ್ತಿದೆ ಎಂದು ಇತ್ತೀಚೆಗೆ ಶೇಖ್ ಹಸೀನಾ ದೂರಿದ್ದರು. ಅವರ 'ಹಸ್ತಕ್ಷೇಪ'ದ ಹೇಳಿಕೆಗೆ ಇದೀಗ ಮಹತ್ವ ಬಂದಿದ್ದು, ಬಾಂಗ್ಲಾದೇಶ ಹೊತ್ತಿ ಉರಿಯಲು ಅಮೆರಿಕ ಮುಖ್ಯ ಕಾರಣ ಎಂದು ಹಲವು ಮಾಧ್ಯಮಗಳು ನೇರವಾಗಿ ದೂರುತ್ತಿವೆ.

ಇಂಡೋನೇಷ್ಯಾದಿಂದ ಈಸ್ಟ್‌ ತೈಮೋರ್‌ಗೆ ಸ್ವಾತಂತ್ರ್ಯ ಕೊಡಿಸಿ ಪ್ರತ್ಯೇಕ ದೇಶವಾಗಿ ರೂಪಿಸಿದಂತೆ ಬಾಂಗ್ಲಾ, ಮ್ಯಾನ್ಮಾರ್ ಮತ್ತು ಭಾರತದ ಗಡಿಯಲ್ಲಿ ಕ್ರಿಶ್ಚಿಯನ್ ಬಾಹುಳ್ಯ ಪ್ರದೇಶಗಳನ್ನು ಒಗ್ಗೂಡಿಸಿ ಪ್ರತ್ಯೇಕ ರಾಷ್ಟ್ರವನ್ನಾಗಿಸಲು ಸಂಚು ನಡೆದಿದೆ ಎಂಬ ಮಾತುಗಳು ಸಹ ವ್ಯಾಪಕವಾಗಿ ಕೇಳಿ ಬರುತ್ತಿವೆ. ಭಾರತದ ಭದ್ರತೆಗೆ ಆತಂಕ ತಂದಿರುವ ಈ ಬೆಳವಣಿಗೆಗೆ ಸಂಬಂಧಿಸಿದಂತೆ ಈವರೆಗಿನ 10 ಮುಖ್ಯ ಬೆಳವಣಿಗೆಗಳಿವು.

1) ಬಿಳಿ ಮನುಷ್ಯನ ಆಮಿಷ

ಬಾಂಗ್ಲಾದೇಶದಲ್ಲಿ ಕಳೆದ ಜನವರಿ ತಿಂಗಳಲ್ಲಿ ಅಮೆರಿಕ, ಕೆನಡಾ, ರಷ್ಯಾ, ಇಸ್ಲಾಮಿಕ್ ದೇಶಗಳ ಒಕ್ಕೂಟ, ಅರಬ್ ಸಂಯುಕ್ತ ಸಂಸ್ಥಾನದ ಸಂಸತ್ತು ಸೇರಿದಂತೆ ವಿಶ್ವದ ಹಲವು ದೇಶಗಳ ಕಣ್ಗಾವಲಿನಲ್ಲಿ ಚುನಾವಣೆ ನಡೆಯಿತು. ಈ ಪೈಕಿ ಚುನಾವಣೆಯು ನ್ಯಾಯಸಮ್ಮತವಾಗಿಲ್ಲ ಎಂದು ಅಮೆರಿಕ ಮಾತ್ರ ತಕರಾರು ತೆಗೆಯಿತು. ಬಾಂಗ್ಲಾದಲ್ಲಿ ಅಸ್ಥಿರತೆ ಸೃಷ್ಟಿಸಲು ಅಮೆರಿಕ ಪ್ರಯತ್ನಿಸುತ್ತಿದೆ ಎನ್ನುವ ಶಂಕೆಗೆ ಈ ತಕರಾರು ಕಾರಣವಾಯಿತು. ಚುನಾವಣೆಗೆ ಕೆಲ ದಿನಗಳ ಮೊದಲು, ಅಂದರೆ ಮೇ 23 ರಂದು ತನ್ನ ಮಿತ್ರಪಕ್ಷಗಳೊಂದಿಗೆ ಮಾತನಾಡಿದ್ದ ಪ್ರಧಾನಿ ಶೇಖ್ ಹಸೀನಾ, 'ಬಿಳಿ ಮನುಷ್ಯನೊಬ್ಬ ಕೆಲ ದೇಶಗಳಿಗೆ ಬಾಂಗ್ಲಾದಲ್ಲಿ ವಾಯುನೆಲೆ ಸ್ಥಾಪಿಸಲು ಅವಕಾಶ ಕೊಡುವಂತೆ ಕೇಳಿದ್ದಾನೆ. ನಾನು ಒಪ್ಪಿಕೊಂಡರೆ ನನಗೆ ಮುಂದೆ ಏನೂ ಸಮಸ್ಯೆ ಇರುವುದಿಲ್ಲವಂತೆ' ಎಂದು ಗುಪ್ತ ಮಾತುಕತೆಯೊಂದನ್ನು ಬಹಿರಂಗಪಡಿಸಿದ್ದರು. ಶೇಖ್ ಹಸೀನಾ ಪ್ರಸ್ತಾಪಿಸಿದ 'ಬಿಳಿ ಮನುಷ್ಯ'ನನ್ನು ಅಮೆರಿಕದ ರಾಯಭಾರಿ ಎಂದು ನಂತರ ವಿಶ್ಲೇಷಿಸಲಾಯಿತು.

2) ಉದ್ಯೋಗ ಮೀಸಲಾತಿ ವಿವಾದ

ಬಾಂಗ್ಲಾ ವಿಮೋಚನೆಗಾಗಿ ಹೋರಾಡಿರುವ ಕುಟುಂಬದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವ ವಿಚಾರದ ಬಗ್ಗೆ ಬಹುಕಾಲದಿಂದ ಚರ್ಚೆ ನಡೆಯುತ್ತಿತ್ತು. ಜೂನ್ 5 ರಂದು ಈ ಸಂಬಂಧ ಹೈಕೋರ್ಟ್ ತೀರ್ಪು ನೀಡಿ, ಮೀಸಲಾತಿ ರದ್ದುಪಡಿಸಿದ ಸರ್ಕಾರದ ಆದೇಶವನ್ನು ವಜಾ ಮಾಡಿತು. ಮುಂದಿನ ದಿನಗಳಲ್ಲಿ ಬಾಂಗ್ಲಾದಲ್ಲಿ ಮೀಸಲಾತಿ ವಿರೋಧಿಸಿ ಬೃಹತ್ ಪ್ರತಿಭಟನೆಗಳು ನಡೆದವು. ಜುಲೈ 21 ರಂದು ಸುಪ್ರೀಂ ಕೋರ್ಟ್ ಉದ್ಯೋಗ ಮೀಸಲಾತಿಯನ್ನು ಶೇ 5 ಕ್ಕೆ ಮಿತಿಗೊಳಿಸಿತು. ನಂತರದ ದಿನಗಳಲ್ಲಿ ಶಾಂತಿ ನೆಲೆಸಬಹುದು ಎಂಬ ಆಶಯ ವ್ಯಕ್ತವಾಗಿತ್ತು.

3) ಶಾಂತಿ ಮರೀಚಿಕೆ

ಆದರೆ ಬಾಂಗ್ಲಾದಲ್ಲಿ ಶಾಂತಿ ನೆಲೆಸಲಿಲ್ಲ. ಬದಲಿಗೆ ಪ್ರತಿಭಟನೆಗಳು ವ್ಯಾಪಕವಾದವು. ಸೇನೆ ಸಹ ಪ್ರತಿಭಟನಾಕಾರರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿತು. ಆಗಸ್ಟ್‌ 5 ರಂದು 'ಢಾಕಾ ಕಡೆಗೆ ದೀರ್ಘ ನಡಿಗೆ' (Long March To Dhaka) ಜಾಥಾಗೆ ಕರೆ ನೀಡಿತು. ಪ್ರಧಾನಿಗೆ ಪರಿಸ್ಥಿತಿಯನ್ನು ವಿವರಿಸಿದ ಸೇನಾ ಮುಖ್ಯಸ್ಥ ವಕರ್-ಉರ್-ಜಮಾನ್, 45 ನಿಮಿಷಗಳ ಒಳಗೆ ದೇಶ ಬಿಟ್ಟು ಹೊರಡಿ ಎಂದು ಸೂಚಿಸಿದರು. ವಿಶೇಷ ವಿಮಾನದ ಮೂಲಕ ಶೇಖ್ ಹಸೀನಾ ಭಾರತಕ್ಕೆ ಬಂದರು.

4) ಸೇಂಟ್ ಮಾರ್ಟಿನ್ ದ್ವೀಪ

ಬಂಗಾಳ ಕೊಲ್ಲಿಯಲ್ಲಿರುವ 'ಸೇಂಟ್ ಮಾರ್ಟಿನ್ ದ್ವೀಪ'ವನ್ನು ತನಗೆ ಬಿಟ್ಟುಕೊಡಬೇಕು ಎಂದು ಅಮೆರಿಕ ಬಹುಕಾಲದಿಂದ ಕೇಳುತ್ತಿತ್ತು. ಈ ದ್ವೀಪವನ್ನು ತನಗೆ ಬಿಟ್ಟುಕೊಟ್ಟರೆ ಶೇಖರ್ ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೆ ನೆಮ್ಮದಿಯಾಗಿ ಅಧಿಕಾರ ನಡೆಸಲು ಅವಕಾಶ ಮಾಡಿಕೊಡುವ ಆಮಿಷವನ್ನೂ ಅಮೆರಿಕ ಒಡ್ಡಿತ್ತು ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಅಮೆರಿಕ ವಿದೇಶಾಂಗ ಕಚೇರಿಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಈ ವರದಿಗಳನ್ನು ನಿರಾಕರಿಸಿದ್ದರು.

5) ಹೊಸ ಕ್ರಿಶ್ಚಿಯನ್ ದೇಶ

ಬಾಂಗ್ಲಾದೇಶ, ಭಾರತ ಮತ್ತು ಮ್ಯಾನ್ಮಾರ್‌ ಗಡಿಯಲ್ಲಿರುವ ಚಿನ್, ಕುಕಿ ಮತ್ತು ಜೋ ಬುಡಕಟ್ಟುಗಳನ್ನು ಒಗ್ಗೂಡಿಸಿ ಹೊಸದೊಂದು ಕ್ರಿಶ್ಚಿಯನ್ ದೇಶ ಹುಟ್ಟುಹಾಕುವ ಪ್ರಯತ್ನವೂ ನಿರಂತರ ನಡೆಯುತ್ತಿದೆ ಎನ್ನುವ ಬಗ್ಗೆ ಹಲವು ತಿಂಗಳುಗಳಿಂದ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗುತ್ತಿವೆ. ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಸಹ ಈ ಕುರಿತು ಪ್ರಸ್ತಾಪಿಸಿದ್ದರು. ಅವರ ಮಾತುಗಳಲ್ಲಿ ಭಾರತದ ಹೆಸರು ಉಲ್ಲೇಖವಾಗಿರಲಿಲ್ಲ. ಆದರೆ ವಿಶ್ಲೇಷಕರು ಭಾರತದ ಹೆಸರು ಸೇರಿಸಿ ವರದಿಗಳನ್ನು ಪ್ರಕಟಿಸಿದ್ದರು. ಇಂಡೋನೇಷ್ಯಾದಿಂದ ಸ್ವಾತಂತ್ರ್ಯ ಪಡೆದು ರೂಪುಗೊಂಡ ಈಸ್ಟ್‌ ತೈಮೋರ್ ಮಾದರಿಯಲ್ಲಿ ಈ ದೇಶವನ್ನು ಹುಟ್ಟುಹಾಕುವುದು, ಅಲ್ಲಿ ಪ್ರಬಲ ಸೇನಾ ನೆಲೆ ಸ್ಥಾಪಿಸುವುದು ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ತಂತ್ರ. ಹಾಲಿ ಸೂಪರ್‌ಪವರ್ ಚೀನಾ ಮತ್ತು ಭವಿಷ್ಯದ ಸೂಪರ್‌ ಭಾರತವನ್ನು ಈ ಮೂಲಕ ಏಕಕಾಲಕ್ಕೆ ಕಟ್ಟಿಹಾಕಬಹುದು ಎನ್ನುವ ಲೆಕ್ಕಾಚಾರ ಇದೆ ಎಂದು ಹಲವು ವರದಿಗಳು ಹೇಳಿವೆ.

6) ಭಾರತ ಬಹಿಷ್ಕರಿಸಿ ಹೋರಾಟ

ಬಾಂಗ್ಲಾದೇಶದಲ್ಲಿ ಇತ್ತೀಚೆಗೆ 'ಭಾರತ ಬಹಿಷ್ಕರಿಸಿ' (Boycott India) ಹೋರಾಟ ನಡೆದಿತ್ತು. ಭಾರತದಿಂದ ಆಮದಾಗುತ್ತಿದ್ದ ವಸ್ತುಗಳನ್ನು ರಸ್ತೆಗಳ ಮೇಲೆ ಸುಟ್ಟು ಜನರು ಪ್ರತಿಭಟಿಸಿದ್ದರು. ಆದರೆ, ಸ್ಥಳೀಯ ವಸ್ತುಗಳ ಕೊರತೆ ಮತ್ತು ಭಾರತದ ಉತ್ಪನ್ನಗಳ ಜನಪ್ರಿಯತೆಯ ಕಾರಣದಿಂದ ಈ ಹೋರಾಟ ನಂತರದ ದಿನಗಳಲ್ಲಿ ಕಾವು ಕಳೆದುಕೊಂಡಿತು. ಆದರೆ, ಬಾಂಗ್ಲಾದೇಶದ ಹೊಸ ತಲೆಮಾರಿಗೆ ಭಾರತದ ಬಗ್ಗೆ ಪ್ರೀತಿಯಿಲ್ಲ ಎನ್ನುವುದನ್ನು ಈ ಬೆಳವಣಿಗೆ ತೋರಿಸಿತು. ಬಾಂಗ್ಲಾದಲ್ಲಿ ಈಗ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿರುವ ಮೂಲಭೂತವಾದಿ ಮುಸ್ಲಿಮ್ ಸಂಘಟನೆ 'ಜಮಾತ್‌-ಎ-ಇಸ್ಲಾಮಿ'ಗೆ ಪಾಕಿಸ್ತಾನದ ಬೆಂಬಲವಿದೆ ಎನ್ನುವ ಮಾತುಗಳು ಪ್ರಬಲವಾಗಿವೆ.

7) ಮರುಕಳಿಸಿದ ಶ್ರೀಲಂಕಾ ನೆನಪು

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ದೇಶ ಬಿಟ್ಟು ಹೋದ ಸಂದರ್ಭ ಮತ್ತು ನಂತರದ ಬೆಳವಣಿಗೆಗಳು ಶ್ರೀಲಂಕಾ ರಾಜಧಾನಿ ಕೊಲೊಂಬದಲ್ಲಿ ನಡೆದ ಘಟನೆಗಳನ್ನು ನೆನಪಿಗೆ ತರುತ್ತವೆ. 2022 ರಲ್ಲಿ ಶ್ರೀಲಂಕಾದ ಜನರು ಅಧ್ಯಕ್ಷರ ಮನೆಗೆ ನುಗ್ಗಿ ಲೂಟಿ ಮಾಡಿದ್ದರು. ಜನರಿಗೆ ಹೆದರಿದ ಅಧ್ಯಕ್ಷ ದೇಶಬಿಟ್ಟು ಹೋಗಬೇಕಾಯಿತು. ಇದೀಗ ಅಂಥದ್ದೇ ವಿದ್ಯಮಾನ ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ನಡೆದಿದೆ. ಪ್ರಧಾನಿ ಶೇಖ್ ಹಸೀನಾ ದೇಶ ಬಿಟ್ಟು ಹೋಗಿದ್ದಾರೆ.

8) ಭಾರತದ ಭದ್ರತೆಗೆ ಆತಂಕ

ಬಾಂಗ್ಲಾದೇಶದ ವಿಮೋಚನೆಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿದ್ದ ಭಾರತದ ಬಗ್ಗೆ ಬಾಂಗ್ಲಾದೇಶೀಯರಲ್ಲಿ ಗೌರವದ ಭಾವನೆ ಇತ್ತು. ಬಾಂಗ್ಲಾದೇಶದ ಅಭಿವೃದ್ಧಿಗೆ ಭಾರತ ಹಲವು ರೀತಿಯಲ್ಲಿ ನೆರವಾಗುತ್ತಿತ್ತು. ಭಾರತದ ಪಾಲಿಗೆ ಬಾಂಗ್ಲಾ ಎಂದರೆ ಪಕ್ಕದಲ್ಲಿರುವ ಮಿತ್ರರಾಷ್ಟ್ರ ಎನಿಸಿತ್ತು. ಆದರೆ ಇದೀಗ ಭಾರತದ ಅಕ್ಕಪಕ್ಕ ಇರುವ ಯಾವ ದೇಶದಲ್ಲಿಯೂ ಸಶಕ್ತ ಸರ್ಕಾರವೇ ಇಲ್ಲ. ಇದು ಭಾರತದ ಭದ್ರತಾ ಆತಂಕವನ್ನು ಹೆಚ್ಚಿಸಿದೆ.

9) ಶೇಖ್ ಹಸೀನಾ ಸರ್ವಾಧಿಕಾರಿ ಧೋರಣೆ

ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮೊಹಮದ್ ಯೂನುಸ್ ಸೇರಿದಂತೆ ಹಲವರು ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. 'ಬಾಂಗ್ಲಾ ಎರಡನೇ ಬಾರಿಗೆ ವಿಮೋಚನೆಯಾಗಿದೆ' ಎನ್ನುವುದು ಇಂಥವರು ನೀಡುತ್ತಿರುವ ಸಾಮಾನ್ಯ ಹೇಳಿಕೆಯಾಗಿದೆ. ಶೇಖ್ ಹಸೀನಾ ಆಡಳಿತಾವಧಿಯಲ್ಲಿ ಬಾಂಗ್ಲಾ ಹಲವು ವಿಚಾರಗಳಲ್ಲಿ ಪ್ರಗತಿ ಸಾಧಿಸಿತ್ತು. ಆದರೆ ಆಡಳಿತದ ಪ್ರತಿಹಂತದಲ್ಲಿಯೂ ಹಿಡಿತ ಸಾಧಿಸಲು ಹೊರಟ ಶೇಖ್ ಹಸೀನಾ ವಿರೋಧಿಗಳನ್ನು ಹತ್ತಿಕ್ಕಿದರು. ಅವರ ಪಕ್ಷದ ನಾಯಕರು ಅಮಾನವೀಯವಾಗಿ ವರ್ತಿಸಿದರು. ಈ ಅಂಶಗಳು ಸಹ ಆಡಳಿತದ ವಿರುದ್ಧ ಜನರ ಆಕ್ರೋಶ ಹೆಚ್ಚಾಗಲು ಕಾರಣವಾಯಿತು.

10) ಬಾಂಗ್ಲಾದಲ್ಲಿ ಈಗೇನು ನಡೆಯುತ್ತಿದೆ? ಭಾರತದ ಮೇಲೇನು ಪರಿಣಾಮ

ಬಾಂಗ್ಲಾದೇಶದ ಸೇನೆಯು ಸದ್ಯಕ್ಕೆ ಹಂಗಾಮಿ ಸರ್ಕಾರ ರಚಿಸಿದೆ. ಎಲ್ಲರಿಗೂ ಭದ್ರತೆಯ ಭರವಸೆ ಕೊಟ್ಟು ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರಯತ್ನಿಸುತ್ತಿದೆ. ಆದರೆ ಹಿಂಸಾಚಾರ ವ್ಯಾಪಿಸುತ್ತಿದ್ದು, ಜನರು ಸಾಯುವುದು ಮುಂದುವರಿದಿದೆ. ಹಿಂದೂಗಳ ಮನೆ, ದೇಗುಲಗಳ ಮೇಲೆಯೂ ದಾಳಿ ನಡೆಯುತ್ತಿದೆ. ಗಾರ್ಮೆಂಟ್ಸ್ ಉದ್ಯಮ ಹಿನ್ನಡೆ ಅನುಭವಿಸಿದೆ. ಜನಸಾಂದ್ರತೆ, ನಿರುದ್ಯೋಗ, ಹವಾಮಾನ ಬಿಕ್ಕಟ್ಟು ಎದುರಿಸುತ್ತಿರುವ ಬಾಂಗ್ಲಾದಲ್ಲಿ ಶೀಘ್ರ ಸ್ಥಿರತೆ ಮರುಸ್ಥಾಪನೆಯಾಗದಿದ್ದರೆ ಪರಿಸ್ಥಿತಿ ಇನ್ನಷ್ಟು ವಿಷಮಿಸುತ್ತದೆ. ಒಮ್ಮೆ ಆರ್ಥ ವ್ಯವಸ್ಥೆ ಕುಸಿದರೆ ಬಾಂಗ್ಲಾದ ಇಷ್ಟು ವರ್ಷಗಳ ಪ್ರಗತಿ ಕಣ್ಮರೆಯಾಗಿ ಬಡತನ ತಾಂಡವವಾಡಲಿದೆ. ಬಾಂಗ್ಲಾದ ಎಲ್ಲ ಬೆಳವಣಿಗೆಗಳನ್ನು ಭಾರತ ಎಚ್ಚರದಿಂದ ಗಮನಿಸುತ್ತಿದೆ. ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ಬಾಂಗ್ಲಾದೇಶದ ಆಗುಹೋಗುಗಳು ಭಾರತದ ಮೇಲೆ ನೇರ ಪರಿಣಾಮ ಬೀರುತ್ತವೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.