IAS Officer Dismiss: ವಿವಾದಿತ ಐಎಎಸ್‌ ಅಧಿಕಾರಿ ಪೂಜಾಖೇಡ್ಕರ್‌ ವಜಾ; ಕೇಂದ್ರ ಸರ್ಕಾರದಿಂದ ಅಧಿಕೃತ ಆದೇಶ ಜಾರಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ias Officer Dismiss: ವಿವಾದಿತ ಐಎಎಸ್‌ ಅಧಿಕಾರಿ ಪೂಜಾಖೇಡ್ಕರ್‌ ವಜಾ; ಕೇಂದ್ರ ಸರ್ಕಾರದಿಂದ ಅಧಿಕೃತ ಆದೇಶ ಜಾರಿ

IAS Officer Dismiss: ವಿವಾದಿತ ಐಎಎಸ್‌ ಅಧಿಕಾರಿ ಪೂಜಾಖೇಡ್ಕರ್‌ ವಜಾ; ಕೇಂದ್ರ ಸರ್ಕಾರದಿಂದ ಅಧಿಕೃತ ಆದೇಶ ಜಾರಿ

Pooja Khedkar ಮಹಾರಾಷ್ಟ್ರ ಮೂಲದ ವಿವಾದಿತ ಐಎಎಸ್‌ ಅಧಿಕಾರಿ ಪೂಜಾಖೇಡ್ಕರ್(‌ Pooja Khedkar) ಅವರನ್ನು ವಜಾಗೊಳಿಸಿ ಕೇಂದ್ರ ಸರ್ಕಾರ ಆದೇಶ ಜಾರಿ ಮಾಡಿದೆ.

ವಿವಾದಿತ ಅಧಿಕಾರಿಯನ್ನು ಕೇಂದ್ರ ಸರ್ಕಾರವೂ ವಜಾಗೊಳಿಸಿ ಆದೇಶಿಸಿದೆ.
ವಿವಾದಿತ ಅಧಿಕಾರಿಯನ್ನು ಕೇಂದ್ರ ಸರ್ಕಾರವೂ ವಜಾಗೊಳಿಸಿ ಆದೇಶಿಸಿದೆ.

ದೆಹಲಿ: ಹಲವಾರು ವಿವಾದಗಳಿಂದ ಸುದ್ದಿಯಾಗಿ ಕಳೆದ ತಿಂಗಳು ಕೇಂದ್ರ ಲೋಕಸೇವಾ ಆಯೋಗ ವಜಾಗೊಳಿಸಿದ್ದ ವಿವಾದಿತ ಐಎಎಸ್‌ ಅಧಿಕಾರಿ, ಮಹಾರಾಷ್ಟ್ರ ಕೇಡರ್‌ನ ಪೂಜಾ ಖೇಡ್ಕರ್‌ ಅವರನ್ನು ಈಗ ಅಧಿಕೃತವಾಗಿ ವಜಾಗೊಳಿಸಿ ಕೇಂದ್ರ ಸರ್ಕಾರವೂ ಆದೇಶ ಹೊರಡಿಸಿದೆ. ಈ ಮೂಲಕ ಪೂಜಾ ಖೇಡ್ಕರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಭಾರತೀಯ ಆಡಳಿತ ಸೇವೆ (ಐಎಎಸ್) ಯಿಂದ ಬಿಡುಗಡೆ ಮಾಡಲಾಗಿದೆ. ತರ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಅಂಗವೈಕಲ್ಯ ಕೋಟಾ ಪ್ರಯೋಜನಗಳನ್ನು ವಂಚಿಸಿ ಮತ್ತು ತಪ್ಪಾಗಿ ಪಡೆದ ಆರೋಪಗಳ ಹಿನ್ನೆಲೆಯಲ್ಲಿ ಖೇಡ್ಕರ್ ವಿರುದ್ದ ತನಿಖೆ ನಡೆಸಿದಾಗ ತಪ್ಪಿತಸ್ಥರೆಂದು ಕಂಡುಬಂದಿತ್ತು. ಆಕೆಯ ಆಯ್ಕೆಯನ್ನು ರದ್ದುಗೊಳಿಸಿದ ನಂತರ, ಯುಪಿಎಸ್ಸಿ ಆಕೆಯನ್ನು ಆಜೀವ ಪ್ರವೇಶ ಪರೀಕ್ಷೆ ಬರೆಯದಂತೆ ನಿರ್ಬಂಧಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಐಎಎಸ್‌ ಸೇವೆಯಿಂದಲೇ ವಜಾಗೊಂಡ ಮೊದಲ ಅಧಿಕಾರಿ ಪೂಜಾ ಖೇಡ್ಕರ್‌.

ಮಹಾರಾಷ್ಟ್ರ ಮೂಲದ ಪೂಜಾ ಖೇಡ್ಕರ್‌ ನಾಲ್ಕು ವರ್ಷದ ಹಿಂದೆ ಐಎಎಸ್‌ ಹುದ್ದೆಗೆ ಆಯ್ಕೆಯಾಗಿದ್ದರು. ಅವರಿಗೆ ತವರು ರಾಜ್ಯ ಮಹಾರಾಷ್ಟ್ರದ ಕೇಡರ್‌ನ ಹುದ್ದೆಯೂ ದೊರೆತಿತ್ತು. ಎರಡು ವರ್ಷದ ತರಬೇತಿ ನಂತರ ಸೇವೆಯನ್ನೂ ಆರಂಭಿಸಿದ್ದರು.

ಈ ವರ್ಷದ ಜೂನ್ ನಲ್ಲಿ ಪುಣೆ ಜಿಲ್ಲಾಧಿಕಾರಿ ಸುಹಾಸ್ ದಿವಸ್ ಅವರು ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿ ಸುಜಾತಾ ಸೌನಿಕ್ ಅವರಿಗೆ ಪತ್ರ ಬರೆದಾಗ ಪೂಜಾ ಖೇಡ್ಕರ್ ಅವರ ತೊಂದರೆಗಳು ಪ್ರಾರಂಭವಾದವು.

ತರಬೇತಿ ಅವಧಿಯಲ್ಲಿಯೇ ಹಲವಾರು ಸೌಲಭ್ಯಗಳಿಗೆ ಬೇಡಿಕೆ ಇಟ್ಟಿದ್ದು, ಅಧಿಕಾರಿಗಳೊಂದಿಗೆ ದುರ್ವರ್ತನೆ ತೋರಿದ್ದು, ಖಾಸಗಿ ವಾಹನಕ್ಕೆ ಸರ್ಕಾರಿ ವಾಹನದ ರೀತಿ ಕೆಂಪು ದೀಪ ಅಳವಡಿಸಿಕೊಂಡಿದ್ದು ಭಾರೀ ವಿವಾದ ಸೃಷ್ಟಿಸಿತ್ತು. ಪತ್ರದ ನಂತರ ಪುಣೆಯಿಂದ ವಾಶಿಮ್‌ಗೆ ಖೇಡ್ಕರ್‌ ಅವರನ್ನು ವರ್ಗ ಮಾಡಲಾಗಿತ್ತು.

ಇದಾದ ನಂತರ ಅವರ ಹಿಂದುಳಿದ ವರ್ಗಗಳು ಹಾಗೂ ವಿಕಲಚೇತನ ಪ್ರಮಾಣ ಪತ್ರಗಳ ಬಗ್ಗೆಯೂ ಆಕ್ಷೇಪಗಳು ಕೇಳಿ ಬಂದಿದ್ದವು. ಈ ಕುರಿತು ವಿಚಾರಣೆಗೆ ಕೇಂದ್ರ ಲೋಕಸೇವಾ ಆಯೋಗವು ಆದೇಶಿಸಿತ್ತು. ಇಲ್ಲಿಯೂ ಲೋಪ ಇರುವುದು ಕಂಡು ಬಂದಿತ್ತು.

ಅದರಲ್ಲೂ ಯುಪಿಎಸ್ಸಿ ಅನೇಕ ಬಾರಿ ಪರೀಕ್ಷೆ ಬರೆಯಲು ತನ್ನ ಗುರುತನ್ನು ನಕಲಿ ಮಾಡಿರುವುದಲ್ಲೂ ತಪ್ಪಿತಸ್ಥರೆನ್ನುವುದು ಪತ್ತೆಯಾಗಿತ್ತು.. ಮಹಾರಾಷ್ಟ್ರ ಸರ್ಕಾರದ ಮಾಜಿ ಅಧಿಕಾರಿಯಾಗಿದ್ದ ಆಕೆಯ ತಂದೆ 40 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರು ಎಂಬುದು ನಂತರ ಬೆಳಕಿಗೆ ಬಂದಿತು.

ಒಬಿಸಿ ನಾನ್-ಕ್ರೀಮಿ ಲೇಯರ್ ವ್ಯಾಪ್ತಿಗೆ ಬರುವುದಿಲ್ಲ ಎನ್ನುವುದೂ ದೃಢವಾಗಿತ್ತು. ಅಂಗವೈಕಲ್ಯಕ್ಕೆ ತನ್ನ ವಿನಾಯಿತಿಯನ್ನು ದೃಢೀಕರಿಸಲು ಸರ್ಕಾರಿ ಸೌಲಭ್ಯದಲ್ಲಿ ಕಡ್ಡಾಯ ಆರೋಗ್ಯ ಪರೀಕ್ಷೆಗೆ ಅವಳು ಹಾಜರಾಗಿಲ್ಲ ಎನ್ನುವುದೂ ಬಯಲಾಯಿತು. ಈ ಎಲ್ಲಾ ಅಂಶಗಳನ್ನು ಉಲ್ಲೇಖಿಸಿ ಯುಪಿಎಸ್‌ಸಿ ಪೂಜಾ ಅವರನ್ನು ವಜಾಗೊಳಿಸಿ ಮುಂದಿನ ಎಲ್ಲಾ ಪರೀಕ್ಷೆಗಳಿಂದ ನಿರ್ಬಂಧಿಸಿತ್ತು. ಈಗ ಕೇಂದ್ರ ಸರ್ಕಾರವೂ ಆದೇಶವನ್ನು ಹೊರಡಿಸಿದೆ.

ಇದಲ್ಲದೇ ಪೂಜಾ ತಾಯಿ ಜನರಿಗೆ ಬೆದರಿಕೆ ಹಾಕಲು ಬಂದೂಕು ಹಿಡಿದಿರುವ ವೀಡಿಯೊವೂ ಬಿದ್ದು ನಂತರ ಮನೋರಮಾ ಖೇಡ್ಕರ್ ಅವರನ್ನು ಬಂಧಿಸಲಾಯಿತು. ಆಕೆಯ ತಂದೆ ದಿಲೀಪ್ ಖೇಡ್ಕರ್ ಅವರ ಆದಾಯಕ್ಕಿಂತ ಆಸ್ತಿ ಹೊಂದಿರುವ ಪ್ರಕರಣದಲ್ಲಿ ಈಗ ವಿಚಾರಣೆ ನಡೆಯುತ್ತಿದೆ. ಇದರಿಂದ ಇಡೀ ಖೇಡ್ಕರ್‌ ಕುಟುಂಬ ತೊಂದರೆಗೆ ಸಿಲುಕಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.