Amarnath yatra: ಶುರುವಾಯ್ತು ಈ ವರ್ಷದ ಅಮರನಾಥ ಯಾತ್ರೆ; ಭಾರೀ ಭದ್ರತೆ ನಡುವೆ ಚಾಲನೆ, ಶನಿವಾರ ದರ್ಶನಕ್ಕೆ ಹೊರಡುವ ಮೊದಲ ತಂಡ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Amarnath Yatra: ಶುರುವಾಯ್ತು ಈ ವರ್ಷದ ಅಮರನಾಥ ಯಾತ್ರೆ; ಭಾರೀ ಭದ್ರತೆ ನಡುವೆ ಚಾಲನೆ, ಶನಿವಾರ ದರ್ಶನಕ್ಕೆ ಹೊರಡುವ ಮೊದಲ ತಂಡ

Amarnath yatra: ಶುರುವಾಯ್ತು ಈ ವರ್ಷದ ಅಮರನಾಥ ಯಾತ್ರೆ; ಭಾರೀ ಭದ್ರತೆ ನಡುವೆ ಚಾಲನೆ, ಶನಿವಾರ ದರ್ಶನಕ್ಕೆ ಹೊರಡುವ ಮೊದಲ ತಂಡ

ಕಾಶ್ಮೀರದ ಹಿಮಾಲಯದ ಕಣಿವೆಗಳ ನಡುವೆ ನೆಲೆಸಿರುವ ಶಿವಲಿಂಗ ಈ ವೇಳೆ ಸಂಪೂರ್ಣ ಮಂಜುಗಡ್ಡೆ ರೂಪದಲ್ಲಿ ಇರಲಿದೆ. ಜೂನ್‌ನಿಂದ ಆಗಸ್ಟ್‌ ಅಂತ್ಯದವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಇರುತ್ತದೆ. ಶತಮಾನಗಳ ಇತಿಹಾಸ ಇರುವ ಅಮರನಾಥ ಯಾತ್ರೆಯನ್ನು ಕೆಲವು ಶಿವ ಭಕ್ತರು ಸ್ವರ್ಗದ ದಾರಿ ಎಂದು ಕರೆದರೆ, ಇನ್ನೂ ಕೆಲವರು ಮೋಕ್ಷದ ಸ್ಥಳ ಎಂದು ಕರೆಯುತ್ತಾರೆ.

ಈ ವರ್ಷದ ಅಮರನಾಥ ಯಾತ್ರೆಯ ಚಟುವಟಿಕೆಗಳಿಗೆ ಶುಕ್ರವಾರ ಚಾಲನೆ ನೀಡಲಾಗಿದೆ.
ಈ ವರ್ಷದ ಅಮರನಾಥ ಯಾತ್ರೆಯ ಚಟುವಟಿಕೆಗಳಿಗೆ ಶುಕ್ರವಾರ ಚಾಲನೆ ನೀಡಲಾಗಿದೆ.

ಶ್ರೀನಗರ: ಕಣಿವೆ ರಾಜ್ಯ ಜಮ್ಮುಕಾಶ್ಮೀರದ ಕಠಿಣ ಹಾಗೂ ಪವಿತ್ರ ಯಾತ್ರೆಗಳಲ್ಲಿ ಒಂದಾದ ಅಮರನಾಥ ಯಾತ್ರೆಗೆ ಶುಕ್ರವಾರ ಚಾಲನೆ ದೊರೆತಿದೆ.

ಮೊದಲನೇ ತಂಡ ಶುಕ್ರವಾರ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ಧಾರಿ ಮಾರ್ಗವಾಗಿ ಹೊರಟು ಬೇಸ್‌ ಕ್ಯಾಂಪ್‌ಗಳಾದ ಪಹಲ್‌ಗಾಂವ್‌ ಹಾಗೂ ಬಲ್ತಾಲ್‌ ತಲುಪಿದವು. ಅಲ್ಲಿಂದ ಯಾತ್ರೆ ಶನಿವಾರ ಶುರುವಾಗಲಿದೆ.

ಈಗಾಗಲೇ ನೋಂದಣಿ ಮಾಡಿಸಿಕೊಂಡು ಕಾಶ್ಮೀರಕ್ಕೆ ಆಗಮಿಸಿರುವ ಯಾತ್ರಾರ್ಥಿಗಳನ್ನು ಬೇಸ್‌ ಕ್ಯಾಂಪ್‌ಗಳಿಗೆ ಕಳುಹಿಸುವ ತಲುಪಿಸುವ ಶುಕ್ರವಾರ ಬೆಳಗಿನ ಜಾವವೇ ಶುರುವಾದವು. ಶನಿವಾರ ಬೆಳಗ್ಗೆ ಈ ವರ್ಷದ ಅಮರನಾಥ ಯಾತ್ರೆಗೆ ಮೊದಲ ತಂಡ ಎರಡು ಬೇಸ್‌ ಕ್ಯಾಂಪ್‌ಗಳಿಂದ ಪ್ರಯಾಣ ಆರಂಭಿಸಲಿದೆ. ಅಮರನಾಥ ಯಾತ್ರೆ ದೇಗುಲ ಮಂಡಳಿ ಅಧ್ಯಕ್ಷರೂ ಆಗಿರುವ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರು ಅಮರನಾಥ ಯಾತ್ರೆಯ ಚಟುವಟಿಕೆಗಳಿಗೆ ಶುಕ್ರವಾರ ಬೆಳಗ್ಗೆ ಚಾಲನೆ ನೀಡಿದರು. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸಾರಿಗೆ ಬಸ್‌ಗಳಲ್ಲಿ ಕ್ಯಾಂಪ್‌ಗಳತ್ತ ಹೊರಟ ಯಾತ್ರಾರ್ಥಿಗಳ ಭಂ ಭಂ ಬೋಲೇನಾಥ್‌ ಉದ್ಘೋಷಗಳು ಮೊಳಗಿದವು. ಹಿಂದಿನ ವರ್ಷಗಳಿಗಿಂತ ಈ ಬಾರಿ ಹೆಚ್ಚಿನ ಯಾತ್ರಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದು, ವ್ಯವಸ್ಥೆಗಳಲ್ಲೂ ಸುಧಾರಣೆ ಮಾಡಲಾಗಿದೆ.

ಕಾಶ್ಮೀರದ ಹಿಮಾಲಯದ ಕಣಿವೆಗಳ ನಡುವೆ ನೆಲೆಸಿರುವ ಶಿವಲಿಂಗ ಈ ವೇಳೆ ಸಂಪೂರ್ಣ ಮಂಜುಗಡ್ಡೆ ರೂಪದಲ್ಲಿ ಇರಲಿದೆ. ಇದರ ದರ್ಶನಕ್ಕೆ ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಜೂನ್‌ನಿಂದ ಆಗಸ್ಟ್‌ ಅಂತ್ಯದವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಇರುತ್ತದೆ.

ಶತಮಾನಗಳ ಇತಿಹಾಸ ಇರುವ ಅಮರನಾಥ ಯಾತ್ರೆಯನ್ನು ಕೆಲವು ಶಿವ ಭಕ್ತರು ಸ್ವರ್ಗದ ದಾರಿ ಎಂದು ಕರೆದರೆ, ಇನ್ನೂ ಕೆಲವರು ಮೋಕ್ಷದ ಸ್ಥಳ ಎಂದು ಕರೆಯುತ್ತಾರೆ. ಅಷ್ಟರ ಮಟ್ಟಿಗೆ ಭಕ್ತರ ನಂಬಿಕೆಯ ಪಾವಿತ್ರ್ಯತೆಯುಳ್ಳ ತಾಣವಾಗಿದೆ.

ಸಕಲ ಸಿದ್ದತೆ

ಎರಡು ಮಾರ್ಗಗಳಲ್ಲಿ ತೆರಳಿ 13,600 ಅಡಿ ಎತ್ತರದಲ್ಲಿರುವ ವಿಶೇಷ ಗುಹೆಯಲ್ಲಿ ಅಮರನಾಥನ ದರ್ಶನ ಮಾಡಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಎರಡು ಮಾರ್ಗವನ್ನೂ ಅಗಲಗೊಳಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಹೆಲ್ಮೆಟ್‌ಗಳನ್ನೂ ಇರಿಸಲಾಗಿದೆ. ಮಳೆಯಿಂದ ಅಲ್ಲಲ್ಲಿ ಭೂಕುಸಿತ, ಕಲ್ಲುಗಳು ಉದುರಿ ಬೀಳುವ ವಾತಾವರಣವೂ ಇರುವುದರಿಂದ ವಿಶೇಷ ತುರ್ತು ತಂಡಗಳನ್ನುಸಿದ್ದಪಡಿಸಲಾಗಿದೆ. ಕಳೆದ ವರ್ಷ ಭಾರೀ ಮಳೆಯಿಂದ ಹದಿನೈದು ಯಾತ್ರಾರ್ಥಿಗಳು ಮೃತಪಟ್ಟಿದ್ದರಿಂದ ಈ ಬಾರಿ ರಾತ್ರಿ ವೇಳೆ ಗುಹೆ ಬಳಿ ತಂಗಲು ಅವಕಾಶ ನೀಡುತ್ತಿಲ್ಲ. ಎರಡೂ ಮಾರ್ಗದಲ್ಲಿ ಒಎಫ್‌ಸಿ ಕೇಬಲ್‌ ಅಳವಡಿಸಿ ಇಂಟರ್‌ನೆಟ್‌ ಹಾಗೂ ಮೊಬೈಲ್‌ ಸಂಪರ್ಕ ಸಿಗುವಂತೆ ವ್ಯವಸ್ಥೆ ಕೂಡ ಮಾಡಲಾಗಿದೆ.

ಮೂರು ಲಕ್ಷ ನೋಂದಣಿ

ಈ ವರ್ಷದ ಅಮರನಾಥ ಯಾತ್ರೆಗೆ ಮೂರು ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.10 ರಷ್ಟು ಭಕ್ತರು ಅಧಿಕ ನೋಂದಣಿ ಮಾಡಿಸಿದ್ದಾರೆ. ಈ ವರ್ಷ 62 ದಿನಗಳ ಕಾಲ ಯಾತ್ರೆ ಇರಲಿದೆ.

ಇದರ ಜತೆಗೆ ಅಮರನಾಥ ಯಾತ್ರೆಗೆಂದು ಸ್ಥಳದಲ್ಲೇ ನೋಂದಣಿ ಮಾಡಿಸಿಕೊಳ್ಳುವ ವ್ಯವಸ್ಥೆಯನ್ನೂ ಮಂಡಳಿ ಮಾಡಿದೆ. ದೇಶದ ನಾನಾ ಭಾಗಗಳಿಂದ ಆಗಮಿಸಿರುವ ಸಾಧುಗಳು ಸೇರಿದಂತೆ 1500 ಕ್ಕೂ ಅಧಿಕ ಯಾತ್ರಾರ್ಥಿಗಳಿಗೆ ಬೇರೆ ಬೇರೆ ಸ್ಥಳಗಳಲ್ಲಿ ನೋಂದಣಿ ಮಾಡಿಸಬಹುದು.

ಈ ವರ್ಷದ ಏಪ್ರಿಲ್‌ ಮೂರನೇ ವಾರದಲ್ಲಿ ಅಧಿಕೃತ ನೋಂದಣಿಯನ್ನು ಮಂಡಳಿ ಆರಂಭಿಸಿತ್ತು.ಈ ಬಾರಿ ವೈಯಕ್ತಿಕ ನೋಂದಣಿ ಜತೆಗೆ ಗುಂಪು ನೋಂದಣಿಗೂ ಅವಕಾಶ ನೀಡಲಾಗಿತ್ತು. ಅಂದರೆ ಕುಟುಂಬ, ಸ್ನೇಹಿತರು, ನೆರೆಹೊರೆಯವರು ಒಟ್ಟಾಗಿ ದರ್ಶನಕ್ಕೆ ಹೋಗಲು ಅವಕಾಶ ಮಾಡಿಕೊಡಲಾಗುತ್ತಿದೆ. ಅನಿವಾಸಿ ಭಾರತೀಯರ ನೋಂದಣಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ನೋಂದಣಿ ಪ್ರಮಾಣವೂ ಅಧಿಕವಾಗಿದೆ. ಇದಕ್ಕಾಗಿ ಅಮರನಾಥ ದೇಗುಲ ಮಂಡಳಿ ಈಗಾಗಲೇ ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದು ಮಂಡಳಿ ಸಿಇಒ ಮಂದೀಪ್‌ ಕುಮಾರ್‌ ಭಂಡಾರಿ ವಿವರಿಸುತ್ತಾರೆ.

ಎರಡು ಮಾರ್ಗಗಳಲ್ಲಿ ಹೋಗಬಹುದು

ಅಮರನಾಥ ಯಾತ್ರೆಗೆ ತೆರಳಲು ಎರಡು ಮಾರ್ಗಗಳಿವೆ. ಇದರಲ್ಲಿ48 ಕಿ.ಮಿ ಉದ್ದದ ಪಹಲ್‌ಗಾಂವ್‌ನಿಂದ ನುನ್‌ವಾನ್‌ ಕಡೆಯಿಂದ ಹೋಗುವ ಉದ್ದನೇ ಮಾರ್ಗ. ಬಲ್ತಾಲ್‌ನಿಂದ ಗಂಡೇರ್‌ಬಾಲ್‌ ಕಡೆಯಿಂದ ತೆರಳುವ 14 ಕಿ.ಮಿನ ಹತ್ತಿರ ಮಾರ್ಗ. ಪ್ರತಿದಿನ ಒಂದು ಮಾರ್ಗದಲ್ಲಿ 7500 ಯಾತ್ರಾರ್ಥಿಗಳು ತೆರಳಲು ಅವಕಾಶ ನೀಡಲಾಗುತ್ತದೆ. ಅಂದರೆ ನೋಂದಾಯಿತ 15 ಸಾವಿರ ಯಾತ್ರಾರ್ಥಿಗಳು ಒಂದು ದಿನದ ಯಾತ್ರೆಗೆ ಅವಕಾಶವಿರಲಿದೆ. ಹೆಲಿಕಾಪ್ಟರ್‌ನಲ್ಲಿ ಆಗಮಿಸುವ ದರ್ಶನ ಮಾಡುವವರಿಗೂ ಪ್ರತ್ಯೇಕ ವ್ಯವಸ್ಥೆ ಇರಲಿದೆ.

ಯಾತ್ರಾರ್ಥಿಗಳು ಸಂಚರಿಸುವ ಮಾರ್ಗದುದಕ್ಕೂ ವ್ಯವಸ್ಥೆಗಳನ್ನುಜಮ್ಮು ಮತ್ತು ಕಾಶ್ಮೀರ ಸರ್ಕಾರ ಮಾಡಿಕೊಂಡಿದೆ. ಆರೋಗ್ಯ ಶಿಬಿರಗಳನ್ನು ತೆರೆಯಲಾಗಿದ್ದು, ರಕ್ಷಣಾ ಸಚಿವಾಲಯದ ಡಿಆರ್‌ಡಿಒ ಕೂಡ ಸಹಕರಿಸಲಿದೆ. ಎಲ್ಲಾ ಸಮಯದಲ್ಲೂ ಆರೋಗ್ಯ ಸೇವೆ ಸಿಗುವಂತೆ ವೈದ್ಯರು ಹಾಗೂ ಸಿಬ್ಬಂದಿಗಳ ತಂಡ ಸನ್ನದ್ದವಾಗಿರಲಿದೆ. ಬಲ್ತಾಲ್‌ ಹಾಗೂ ಚಂದನ್‌ವರಿಯಲ್ಲಿ ಡಿಆರ್‌ಡಿಒ ತಲಾ ನೂರು ಹಾಸಿಗೆಯ ಆಸ್ಪತ್ರೆಗಳನ್ನೂ ಆರಂಭಿಸಿದೆ.

ಭಾರೀ ಭದ್ರತೆ

ಯಾತ್ರೆ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ದ್ರೋಣ್‌ ಬಳಸಿ ವಿಚಕ್ಷಣೆ ಮಾಡಲಾಗುತ್ತಿದೆ. ಪೊಲೀಸ್‌, ರಕ್ಷಣಾ ಸಿಬ್ಬಂದಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಮೊದಲ ಬಾರಿಗೆ ಇಂಡೋ ಟಿಬೆಟಿಯನ್‌ ಗಡಿ ಪೊಲೀಸರನ್ನೂ ಅಮರನಾಥ ಯಾತ್ರೆ ಭದ್ರತೆಗೆ ನಿಯೋಜಿಸಲಾಗಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.