PM In Uzbekistan: ಉಜ್ಬೇಕಿಸ್ತಾನ್‌ನಲ್ಲಿ ಪುಟಿನ್‌ ಭೇಟಿ ಮಾಡಲಿರುವ ಮೋದಿ: ಏನು ಮಾತುಕತೆ?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm In Uzbekistan: ಉಜ್ಬೇಕಿಸ್ತಾನ್‌ನಲ್ಲಿ ಪುಟಿನ್‌ ಭೇಟಿ ಮಾಡಲಿರುವ ಮೋದಿ: ಏನು ಮಾತುಕತೆ?

PM In Uzbekistan: ಉಜ್ಬೇಕಿಸ್ತಾನ್‌ನಲ್ಲಿ ಪುಟಿನ್‌ ಭೇಟಿ ಮಾಡಲಿರುವ ಮೋದಿ: ಏನು ಮಾತುಕತೆ?

ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ʼಕೌನ್ಸಿಲ್ ಆಫ್ ಹೆಡ್ಸ್ ಆಫ್ ಸ್ಟೇಟ್‌ʼನ 22ನೇ ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ಉಜ್ಬೇಕಿಸ್ತಾನ್‌ ರಾಜಧಾನಿ ಸಮರಖಂಡ ತಲುಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದು, ವ್ಯಾಪಾರ ಮತ್ತು ಪ್ರಸ್ತುತ ಜಾಗತಿಕ ವಿದ್ಯಮಾನಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

<p>ಉಜ್ಬೇಕಿಸ್ತಾನ್‌ಕ್ಕೆ ಬಂದಿಳಿದ ಮೋದಿ</p>
ಉಜ್ಬೇಕಿಸ್ತಾನ್‌ಕ್ಕೆ ಬಂದಿಳಿದ ಮೋದಿ (Verified Twitter)

ಸಮರಖಂಡ: ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ʼಕೌನ್ಸಿಲ್ ಆಫ್ ಹೆಡ್ಸ್ ಆಫ್ ಸ್ಟೇಟ್‌ʼನ 22ನೇ ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ಉಜ್ಬೇಕಿಸ್ತಾನ್‌ ರಾಜಧಾನಿ ಸಮರಖಂಡ ತಲುಪಿದ್ದಾರೆ. ಮಾರಕ ಕೊರೊನಾ ವೈರಸ್‌ ಹಾವಳಿಯಿಂದಾಗಿ ಎರಡು ವರ್ಷ ಸ್ಥಗಿತಗೊಂಡಿದ್ದ ನೇರ ಸಭೆಗೆ ಇದೀಗ ಮತ್ತೆ ಚಾಲನೆ ನೀಡಲಾಗಿದೆ.

ಎಸ್‌ಸಿಒದ ಎಲ್ಲಾ ಎಂಟು ರಾಷ್ಟ್ರಗಳ ಮುಖ್ಯಸ್ಥರು ಎರಡು ವರ್ಷಗಳ ಬಳಿಕ ಮುಖಾಮುಖಿ ಭೇಟಿಯಾಗುತ್ತಿದ್ದು, ಸಾಮಾನ್ಯ ಕಾಳಜಿಯ ಜಾಗತಿಕ ಮತ್ತು ಪ್ರಾದೇಶಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಪ್ರಾದೇಶಿಕ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದು, ವ್ಯಾಪಾರ ಮತ್ತು ಪ್ರಸ್ತುತ ಜಾಗತಿಕ ವಿದ್ಯಮಾನಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಭಾರತಕ್ಕೆ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್, ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಎದುರು ನೋಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ರಷ್ಯಾದ ಅಧಿಕೃತ ಸುದ್ದಿ ಸಂಸ್ಥೆ TASS ಕೂಡ, ರಷ್ಯಾ ಅಧ್ಯಕ್ಷ ಪುಟಿನ್ ಸಹಾಯಕ ಯೂರಿ ಉಷ್ಕೋ‌ವ್ ಅವರನ್ನು ಉಲ್ಲೇಖಿಸಿ, ಮೋದಿ ಅವರೊಂದಿಗೆ ಅಂತರರಾಷ್ಟ್ರೀಯ ಕಾರ್ಯಸೂಚಿಯ ಕುರಿತು ಸಂವಾದ ನಡೆಸಲು ಪುಟಿನ್‌ ಉತ್ಸುಕರಾಗಿದ್ದಾರೆ ಎಂದು ವರದಿ ಮಾಡಿತ್ತು.

ಕಾರ್ಯತಂತ್ರದ ಸ್ಥಿರತೆಯ ಸಮಸ್ಯೆಗಳು, ಏಷ್ಯಾ ಪೆಸಿಫಿಕ್ ಪ್ರದೇಶದ ಪರಿಸ್ಥಿತಿ, ಯುನ್, ಜಿ-20 ಮತ್ತು ಎಸ್‌ಸಿಒನಂತಹ ಪ್ರಮುಖ ಬಹುಪಕ್ಷೀಯ ಸ್ವರೂಪಗಳಲ್ಲಿ ಪರಸ್ಪರ ಸಹಕಾರ ವೃದ್ಧಿಸುವುದು ಭಾರತ-ರಷ್ಯಾದ ಬಯಕೆಯಾಗಿದೆ ಎಂದು ಯೂರಿ ಉಷ್ಕೋ‌ವ್ ಹೇಳಿದ್ದಾರೆ ಎಂದು TASS ವರದಿ ಮಾಡಿದೆ.

ಭಾರತವು ಡಿಸೆಂಬರ್‌ನಲ್ಲಿ ನಡೆಯಲಿರುವ ಯುಎನ್ ಸೆಕ್ಯುರಿಟಿ ಕೌನ್ಸಿಲ್‌ ಸಭೆಯ ಅಧ್ಯಕ್ಷತೆ ವಹಿಸಲಿದೆ. 2023 ರಲ್ಲಿ ಭಾರತವು ಎಸ್‌ಸಿಒ ಶೃಂಗಸಭೆಯ ಆತಿಥ್ಯ ಕೂಡ ವಹಿಸಲಿದೆ.ಅಲ್ಲದೇ ಜಿ-20 ಸಭೆಗಳನ್ನೂ ಕೂಡ ಮುನ್ನಡೆಸಲಿದೆ. ಈ ಹಿನ್ನೆಲೆಯಲ್ಲಿ ಭಾರತ-ರಷ್ಯಾ ನಡುವಿನ ದಿಪಕ್ಷೀಯ ಮಾತುಕತೆ ಮಹತ್ವ ಪಡೆದುಕೊಂಡಿದೆ ಎಂದು ಯೂರಿ ಉಷ್ಕೋ‌ವ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಜುಲೈನಲ್ಲಿ ಪ್ರಧಾನಿ ಮೋದಿ ಮತ್ತು ವ್ಲಾಡಿಮಿರ್‌ ಪುಟಿನ್‌ ಪರಸ್ಪರ ದೂರವಾಣಿಯಲ್ಲಿ ಮಾತನಾಡಿದ್ದರು. ಈ ವೇಳೆ ಕಳೆದ 2021ರ ಡಿಸೆಂಬರ್‌ನಲ್ಲಿ ಅಧ್ಯಕ್ಷ ಪುಟಿನ್ ಅವರ ಭಾರತ ಭೇಟಿಯ ಸಮಯದಲ್ಲಿ, ತೆಗೆದುಕೊಂಡ ನಿರ್ಧಾರಗಳ ಅನುಷ್ಠಾನವನ್ನು ಉಭಯ ನಾಯಕರು ಪರಿಶೀಲಿಸಿದ್ದರು.

ಅದಕ್ಕೂ ಮೊದಲು ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ನಂತರ, ಫೆಬ್ರವರಿ 24ರಂದು ಪ್ರಧಾನಿ ಮೋದಿ ಮತ್ತು ಪುಟಿನ್ ದೂರವಾಣಿಯಲ್ಲಿ ಮಾತನಾಡಿದ್ದರು. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆಯೂ ಉಭಯ ನಾಯಕರು ಚರ್ಚೆ ನಡೆಸಿದ್ದರು.

ಇನ್ನು ತಮ್ಮ ಉಜ್ಬೇಕಿಸ್ತಾನ ಪ್ರವಾಸದ ಕುರಿತು ಮಾಹಿತಿ ನೀಡಿರುವ ಪ್ರಧಾನಿ ಮೋದಿ, ʼʼಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ಉಜ್ಬೇಕಿಸ್ತಾನದ ಸಮರ್‌ಕಂಡ್‌ಗೆ ಬಂದಿಳಿದಿದ್ದೇನೆ. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ವ್ಯಾಪಕ ಶ್ರೇಣಿಯ ಅಭಿಪ್ರಾಯಗಳ ವಿನಿಮಯಕ್ಕೆ ಈ ಸಭೆ ಸಾಕ್ಷಿಯಾಗಲಿದೆ..ʼʼ ಎಂದು ಟ್ವೀಟ್ ಮಾಡಿದ್ದಾರೆ.

ಉಜ್ಬೇಕಿಸ್ತಾನ್‌ಕ್ಕೆ ತೆರಳುವ ಮುನ್ನ ಪ್ರಧಾನಿ ಮೋದಿ ಅವರು, ಸಾಮರಿಕ, ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಎದುರು ನೋಡುತ್ತಿರುವುದಾಗಿ ಹೇಳಿಕೆ ನೀಡಿದ್ದರು. ಬಹುಮುಖಿ ಮತ್ತು ಪರಸ್ಪರ ಪ್ರಯೋಜನಕಾರಿ ಸಹಕಾರದ ವಿಸ್ತರಣೆಗೆ ಎಸ್‌ಸಿಓ ಸಾಕ್ಷಿಯಾಗಲಿದೆ ಎಂದೂ ಪ್ರಧಾನಿ ಮೋದಿ ಆಶಯ ವ್ಯಕ್ತಪಡಿಸಿದ್ದರು.

ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಸ್‌ಸಿಒ, ಎಂಟು ಸದಸ್ಯರ ಆರ್ಥಿಕ ಮತ್ತು ಭದ್ರತಾ ಸಂಘಟನೆಯಾಗಿದೆ. ಚೀನಾ, ರಷ್ಯಾ, ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್, ಭಾರತ ಮತ್ತು ಪಾಕಿಸ್ತಾನ ಈ ಸಂಘಟನೆಯ ಸದಸ್ಯ ರಾಷ್ಟ್ರಗಳಾಗಿವೆ.

2019ರ ಬಳಿಕ ಇದೇ ಮೊದಲ ಬಾರಿ ನಡೆಯುತ್ತಿರುವ ಎಸ್‌ಸಿಒ ಶೃಂಗಸಭೆಯ ನೇರ ಸಭೆಯಲ್ಲಿ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾದ ಅಧ್ಯಕ್ಷ ಪುಟಿನ್ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಳೂ ನಡೆಯಲಿವೆ ಎಂಬುದು ಗಮನಾರ್ಹ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.