ತೆಲಂಗಾಣ ಸಿಎಂ ಕೆಸಿಆರ್ ಕಾಂಗ್ರೆಸ್ ಅಭ್ಯರ್ಥಿಗಳನ್ನ ಸಂಪರ್ಕಿಸುತ್ತಿರುವ ಮಾಹಿತಿ; ಡಿಸಿಎಂ ಡಿಕೆ ಶಿವಕುಮಾರ್ ಹೊಸ ಬಾಂಬ್
ಚುನಾವಣಾ ಫಲಿತಾಂಶಕ್ಕೂ ಮುನ್ನವೇ ತೆಲಂಗಾಣ ಸಿಎಂ ಕೆಸಿಆರ್ ಕಾಂಗ್ರೆಸ್ ಅಭ್ಯರ್ಥಿಗಳನ್ನ ಸಂಪರ್ಕಿಸುತ್ತಿರುವ ಮಾಹಿತಿ ಇದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹೈದರಾಬಾದ್: ತೆಲಂಗಾಣದಲ್ಲಿ ನಾಳೆ (ಡಿಸೆಂಬರ್ 3, ಭಾನುವಾರ) ಮಧ್ಯಾಹ್ನದ ವೇಳೆಗೆ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದು ಸ್ಪಷ್ಟವಾಗಲಿದೆ. ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳು ಈಗಾಗಲೇ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ.
ಮತಗಟ್ಟೆಗಳ ಸಮೀಕ್ಷೆಗಳು ಆಡಳಿತ ಪಕ್ಷ ಬಿಆರ್‌ಎಸ್ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಲ್ಲಿ ತಳಮಳವನ್ನು ಹೆಚ್ಚಾಸಿದೆ. ಕೆಸಿಆರ್ ಹ್ಯಾಟ್ರಿಕ್ ಸರ್ಕಾರದ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ತಮ್ಮ ಪಕ್ಷಕ್ಕೆ ಬಹುಮತ ಸಿಗದಿದ್ದರೆ ಮುಂದೇನು ಮಾಡಬೇಕು ಎಂಬ ಬಗ್ಗೆಯೂ ನೆರೆಯ ರಾಜ್ಯದ ಸಿಎಂ ಕೆಸಿಆರ್ ಪ್ಲಾನ್‌ಗಳನ್ನು ರೂಪಿಸಿಕೊಳ್ಳುವಂತಿದೆ.
ಇದರ ನಡುವೆಯೇ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಕೆಶಿ, ಕೆಸಿಆರ್ ಅವರು ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಸಂಪರ್ಕಿಸುತ್ತಿರುವ ಮಾಹಿತಿ ಇದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಂದ ಮಾಹಿತಿ ಗೊತ್ತಾಯ್ತು
ಬಿಆರ್‌ಎಸ್ ನಮ್ಮನ್ನು ಬಲೆಗೆ ಬೀಳಿಸಲು ಪ್ರಯತ್ನಿಸುತ್ತಿದೆ ಅನ್ನೋದು ನಮಗೆ ಗೊತ್ತಿದೆ. ನಮ್ಮ ಅಭ್ಯರ್ಥಿಗಳು ಕೂಡ ತಮ್ಮನ್ನು ಸಿಎಂ ಕೆಸಿಆರ್ ಅವರೇ ಸಂರ್ಪಕಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೇಳಿದ್ದರಿಂದಲೇ ನಮಗೆ ಮಾಹಿತಿ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಬಹುಮತ ಪಡೆಯುವ ವಿಶ್ವಾಸವಿದೆ. ನಮ್ಮ ಪಕ್ಷವಾಗಿರುವ ಕಾರಣ ನಾನು ಅಲ್ಲಿಗೆ ಹೋಗುತ್ತಿದ್ದೇನೆ. ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ಇಡೀ ತೆಲಂಗಾಣ ನಮ್ಮೊಂದಿಗೆ ಇತ್ತು. ಇದೇ ಕಾರಣಕ್ಕೆ ನಾನು ಅಲ್ಲಿಗೆ ಹೋಗುತ್ತಿದ್ದೇನೆ. ಫಲಿತಾಂಶದ ಬಳಿಕ ಏನಾಗುತ್ತೋ ನೋಡೋಣ. ತೊಂದರೆ ಇಲ್ಲ. ಯಾವುದೇ ಬೆದರಿಕೆಯಿಲ್ಲ. ನಮಗೆ ನಂಬಿಕೆ ಇದೆ. ನಮ್ಮ ಸುಲಭವಾಗಿ ಗೆಲ್ಲುತ್ತೆ ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ನಮ್ಮ ಪಕ್ಷದ 12 ಶಾಸಕರನ್ನು ಬಿಆರ್‌ಎಸ್‌ನವರು ಕರೆದೊಯ್ದರು. ಈಗ ನಮ್ಮ ಪಕ್ಷಕ್ಕೆ ಹಿಂತಿರುತ್ತೇವೆ ಎಂದು ನಮ್ಮ ಎಲ್ಲರೂ ನನಗೆ ಕರೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ತಿಳಿಸಿದ್ದಾರೆ. ಹಿಂದೆ ಕೆಸಿಆರ್ ಅವರ ಜೊತೆ ಹೋಗಿದ್ದ ನಮ್ಮವರು ವಾಪಸ್ ಬರಲು ಸಿದ್ಧರಾಗಿದ್ದಾರೆ. ಹಾಗಾಗಿ ಬಿಆರ್‌ಎಸ್ ಪಕ್ಷವು ತಮ್ಮ ಮುಖಂಡರನ್ನು ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.
ಕಾಂಗ್ರೆಸ್‌ಗೆ ಭಾರಿ ಮುನ್ನಡೆ- ಮತಗಟ್ಟೆ ಸಮೀಕ್ಷೆಗಳು
ವಿವಿಧ ಮಾಧ್ಯಮ ಹಾಗೂ ಇತರೆ ಸಂಸ್ಥೆಗಳು ತೆಲಂಗಾಣದಲ್ಲಿ ನಡೆಸಿರುವ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ. ಕಾಂಗ್ರೆಸ್ ಮತ್ತು ಭಾರತ ರಾಷ್ಟ್ರ ಸಮಿತಿ-ಬಿಆರ್‌ಎಸ್ ನಡುವೆ ನೇರಾನೇರ ಪೈಪೋಟಿ ಏರ್ಪಟ್ಟಿದೆ ಎಂದು ಸಮೀಕ್ಷೆಯ ವರದಿಗಳು ಬಹಿರಂಗಪಡಿಸಿವೆ.
ಟಿವಿ9 ಸಮೀಕ್ಷೆಯ ಪ್ರಕಾರ, ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ 49 ರಿಂದ 59 ಸ್ಥಾನಗಳು, ಬಿಆರ್‌ಎಸ್‌ಗೆ 48 ರಿಂದ 58, ಇತರೆ 6 ರಿಂದ 8 ಸ್ಥಾನಗಳು ಸಿಗಲಿವೆ, ಜನ್ ಕೀ ಬಾತ್ ವರದಿಯ ಪ್ರಕಾರ ಬಿಆರ್‌ಎಸ್ 40 ರಿಂದ 55, ಕಾಂಗ್ರೆಸ್ 48 ರಿಂದ 64, ಬಿಜೆಪಿ 7 ರಿಂದ 13, ಐಎಎಂಐಎಂ 4 ರಿಂದ 7 ಸ್ಥಾನ, ಚಾಣಕ್ಯ ಸಮೀಕ್ಷೆಯ ಪ್ರಕಾರ ಬಿಆರ್‌ಎಸ್ 22-31, ಕಾಂಗ್ರೆಸ್ 67 ರಿಂದ 78, ಇತರರು 6 ರಿಂದ 7 ಸ್ಥಾನಗಳನ್ನು ಗಳಿಸಲಿದ್ದಾರೆ ಎಂದು ಹೇಳಿವೆ.