Taiwan Response to China: ಯುದ್ಧ ಭೂಮಿಯಲ್ಲಿ ಭೇಟಿಯಾಗಲು ಸಿದ್ಧ; ಕ್ಸಿ ಜಿನ್‌ಪಿಂಗ್‌ಗೆ ತೈವಾನ್ ಸಂದೇಶ!
ತೈವಾನ್ ಸಮಸ್ಯೆಯನ್ನು ಪರಿಹರಿಸುವುದು ಚೀನಾದ ಜನರಿಗೆ ಬಿಟ್ಟಿದ್ದು ಮತ್ತು ಚೀನಾ ಎಂದಿಗೂ ಬಲವನ್ನು ಬಳಸುವ ಹಕ್ಕನ್ನು ತ್ಯಜಿಸುವುದಿಲ್ಲ ಎಂಬ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿಕೆಗೆ, ತೈವಾನ್ ಸೂಕ್ತ ತಿರುಗೇಟು ನೀಡಿದೆ. ಸಾರ್ವಭೌಮತ್ವ ಕಾಪಾಡುವಲ್ಲಿ ಮತ್ತು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ತೈವಾನ್ ಸ್ಪಷ್ಟ ಸಂದೇಶ ರವಾನಿಸಿದೆ.
ತೈಪೆ: ತೈವಾನ್ ಸಮಸ್ಯೆಯನ್ನು ಪರಿಹರಿಸುವುದು ಚೀನಾದ ಜನರಿಗೆ ಬಿಟ್ಟಿದ್ದು ಮತ್ತು ಚೀನಾ ಎಂದಿಗೂ ಬಲವನ್ನು ಬಳಸುವ ಹಕ್ಕನ್ನು ತ್ಯಜಿಸುವುದಿಲ್ಲ ಎಂಬ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿಕೆಗೆ, ತೈವಾನ್ ಸೂಕ್ತ ತಿರುಗೇಟು ನೀಡಿದೆ. ಸಾರ್ವಭೌಮತ್ವ ಕಾಪಾಡುವಲ್ಲಿ ಮತ್ತು
ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ತೈವಾನ್ ಸ್ಪಷ್ಟ ಸಂದೇಶ ರವಾನಿಸಿದೆ.
ಚೀನಾ ತನ್ನ ಆಕ್ರಮಣಕಾರಿ ನೀತಿಯನ್ನು ಮುಂದುವರೆಸಲಿದೆ ಎಂಬುದು ನಮಗೆ ಗೊತ್ತಿದೆ. ಆದರೆ ಮಿಲಿಟರಿ ಶಕ್ತಿಯ ಮೂಲಕ ತೈವಾನ್ ವಶಪಡಿಸಿಕೊಳ್ಳುವ ಅದರ ಹುನ್ನಾರ ಎಂದಿಗೂ ಫಲ ನೀಡದು ಎಂದು ತೈವಾನ್ ಗುಡುಗಿದೆ. ಅಲ್ಲದೇ ಚೀನಾದ ಯಾವುದೇ ಸಂಭಾವ್ಯ ದಾಳಿಯನ್ನು ಎದುರಿಸಲು ತಾನು ಸಿದ್ಧವಿರುವುದಾಗಿಯೂ ತೈವಾನ್ ಸ್ಪಷ್ಟಪಡಿಸಿದೆ.
ತೈವಾನ್‌ನನ್ನು ನುಂಗಲು ಹವಣಿಸುತ್ತಿರುವ ಚೀನಾದ ಅಧ್ಯಕ್ಷರಿಂದ ಇದಕ್ಕಿಂತೆ ಬೇರೆನೂ ನಿರೀಕ್ಷಿಸಲು ಸಾಧ್ಯವಿಲ್ಲ. ಚೀನಾದ ಬೆದರಿಕೆಗಳು ನಮಗೆ ಹೊಸದಲ್ಲ. ಬಿಕ್ಕಟ್ಟು ಪರಿಹಾರಕ್ಕೆ ಮಿಲಿಟರಿ ಕಾರ್ಯಾಚರಣೆಯೇ ಪರಿಹಾರ ಎಂದು ಚೀನಾ ನಂಬುವುದಾದರೆ ನಾವು ಅದಕ್ಕೆ ಸಿದ್ಧ ಎಂದು ತೈವಾನ್ ಹೇಳಿದೆ.
ಚೀನಾ ನಮ್ಮ ಸಾರ್ವಭೌಮತ್ವವನ್ನು ಪ್ರಶ್ನಿಸುತ್ತಿದೆ. ಆದರೆ ಬಲಪ್ರಯೋಗದ ಮೂಲಕ ನಮ್ಮ ಸಾರ್ವಭೌಮತ್ವವನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ನಾವು ಸಶಕ್ತರಾಗಿದ್ದೇವೆ ಎಂದು ತೈವಾನ್ ಗುಡುಗಿದೆ. ಚೀನಿ ಕಮ್ಯುನಿಸ್ಟ್ ಪಕ್ಷದ 20ನೇ ಪಕ್ಷದ ಮಹಾ ಅಧಿವೇಶನ ಉದ್ದೇಶಿಸಿ, ಕ್ಸಿ ಜಿನ್‌ಪಿಂಗ್ ಭಾಷಣ ಮಾಡಿದ ಕೆಲವೇ ಗಂಟೆಗಳಲ್ಲಿ, ತೈವಾನ್ ತನ್ನ ಹೇಳಿಕೆ ಪ್ರಕಟಿಸಿರುವುದು ಗಮನ ಸೆಳದಿದೆ.
ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್‌ಗೆ ಭೇಟಿ ಬಳಿಕ, ತೈವಾನ್-ಚೀನಾ ನಡುವಿನ ಬಿಕ್ಕಟ್ಟು ತೀವ್ರವಾಗಿ ಉಲ್ಬಣಿಸಿದೆ. ತೈವಾನ್ ತನ್ನ ಅವಿಭಾಜ್ಯ ಅಂಗ ಎಂದು ಚೀನಾ ಪ್ರತಿಪಾದಿಸುತ್ತಿದ್ದರೆ, ತಾನು ಸ್ವತಂತ್ರ್ಯ ರಾಷ್ಟ್ರ ಎಂದು ತೈವಾನ್ ಹೇಳುತ್ತಿದೆ.
ನಮ್ಮ ನಿಲುವು ದೃಢವಾಗಿದೆ. ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರ್ಯದ ಬಗ್ಗೆ ನಾವು ರಾಜಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ನಾವು ಯುದ್ಧ ಭೂಮಿಯಲ್ಲಿ ಭೇಟಿಯಾಗಲು ಸಿದ್ಧರಿದ್ದೇವೆ ಎಂದು ತೈವಾನ್ ಅತ್ಯಂತ ಗಟ್ಟಿ ಧ್ವನಿಯಲ್ಲಿ ಹೇಳಿದೆ.
ಬೀಜಿಂಗ್‌ನಲ್ಲಿ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ 20ನೇ ಪಕ್ಷದ ಮಹಾ ಅಧಿವೇಶನ ಉದ್ಘಾಟಿಸಿ ಮಾತನಾಡಿದ್ ಕ್ಸಿ ಜಿನ್‌ಪಿಂಗ್, ಚೀನಾ ಯಾವಾಗಲೂ ತೈವಾನ್‌ನ ಜನರನ್ನು ಗೌರವಿಸುತ್ತದೆ ಮತ್ತು ಅವರ ಕಾಳಜಿ ತೋರುತ್ತದೆ. ಚೀನಾ ಮತ್ಯು ತೈವಾನ್ ನಡುವಿನ ಆರ್ಥಿಕ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸಲು ನಾವು ಬದ್ಧ ಎಂದು ಹೇಳಿದ್ದರು.
ಅತ್ಯಂತ ಪ್ರಾಮಾಣಿಕತೆ ಮತ್ತು ಉತ್ತಮ ಪ್ರಯತ್ನಗಳೊಂದಿಗೆ ಶಾಂತಿಯುತ ಪರಿಹಾರವನ್ನು ನಾವು ಬಯಸುತ್ತೇವೆ. ಆದರೆ ತೈವಾನ್ ವಿದೇಶಿ ಶಕ್ತಿಗಳ ನೆರವು ಪಡೆದು ಹೂಂಕರಿಸಿದರೆ ಬಲಪ್ರಯೋಗ ಅನಿವಾರ್ಯವಾಗಲಿದೆ ಎಂದು ಕ್ಸಿ ಜಿನ್‌ಪಿಂಗ್ ಗಂಭೀರ ಎಚ್ಚರಿಕೆ ನೀಡಿದ್ದರು. ಆದರೆ ಯುದ್ಧ ನಮ್ಮ ಮುಂದಿನ ಆಯ್ಕೆ ಖಂಡಿತ ಅಲ್ಲ ಎಂದು ಕ್ಸಿ ಜಿನ್‌ಪಿಂಗ್ ಹೇಳಿದ್ದರು.
ಈ ಕುರಿತು ಮಾತನಾಡಿರುವ ತೈವಾನ್‌ನ ಸು ತ್ಸೆಂಗ್-ಚಾಂಗ್, ಚೀನಾದ ಹಲವು ನಿರ್ಬಂಧಗಳ ಹೊರತಾಗಿಯೂ ನಾವು ನಮ್ಮ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವಲ್ಲಿ ನಿರತವಾಗಿದ್ದೇವೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಮೂರನೇ ಅವಧಿಗೆ ಚೀನಾದ ಅಧ್ಯಕ್ಷರಾಗಲಿರುವ ಕ್ಸಿ ಜಿನ್‌ಪಿಂಗ್, ತೈವಾನ್ ಕುರಿತು ಬಿಗಿ ಹಿಡಿತದ ನಿಲುವು ತಳೆಯುವುದಾಗಿ ಹೇಳಿದ್ದು, ಇದಕ್ಕೆ ತೈವಾನ್ ಕೂಡ ಅಷ್ಟೇ ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿರುವುದು ಗಮನ ಸೆಳೆದಿದೆ.