ಕ್ರೋಮ್‌ ಬ್ರೌಸರ್‌ ಮಾರಾಟ ಮಾಡುವ ಒತ್ತಡದಲ್ಲಿ ಗೂಗಲ್‌, ಆಂಡ್ರಾಯ್ಡ್‌ ಏಕಸ್ವಾಮ್ಯದ ಮೇಲೂ ಪ್ರಹಾರ ಸಾಧ್ಯತೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕ್ರೋಮ್‌ ಬ್ರೌಸರ್‌ ಮಾರಾಟ ಮಾಡುವ ಒತ್ತಡದಲ್ಲಿ ಗೂಗಲ್‌, ಆಂಡ್ರಾಯ್ಡ್‌ ಏಕಸ್ವಾಮ್ಯದ ಮೇಲೂ ಪ್ರಹಾರ ಸಾಧ್ಯತೆ

ಕ್ರೋಮ್‌ ಬ್ರೌಸರ್‌ ಮಾರಾಟ ಮಾಡುವ ಒತ್ತಡದಲ್ಲಿ ಗೂಗಲ್‌, ಆಂಡ್ರಾಯ್ಡ್‌ ಏಕಸ್ವಾಮ್ಯದ ಮೇಲೂ ಪ್ರಹಾರ ಸಾಧ್ಯತೆ

ಕ್ರೋಮ್‌ ಬ್ರೌಸರ್‌ ಅನ್ನು ಮಾರಾಟ ಮಾಡುವಂತೆ ಅಮೆರಿಕದ ನ್ಯಾಯಾಂಗ ಇಲಾಖೆಯ ವಕೀಲರು ಗೂಗಲ್‌ನ ಆ್ಯಂಟಿಟ್ರಸ್ಟ್ ಟ್ರಯಲ್‌ ನ್ಯಾಯಾಧೀಶರಲ್ಲಿ ಕೇಳಲು ಮುಂದಾಗಿದ್ದಾರೆ ಎಂದು ಬ್ಲೂಮ್‌ಬರ್ಗ್‌ ವರದಿ ತಿಳಿಸಿದೆ. ಗೂಗಲ್‌ ಸರ್ಚ್‌ ಮತ್ತು ಗೂಗಲ್‌ ಪ್ಲೇನಿಂದ ಆಂಡ್ರಾಯ್ಡ್‌ ಅನ್ನು ಪ್ರತ್ಯೇಕಗೊಳಿಸಬೇಕೆಂದು ಶಿಫಾರಸು ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಕ್ರೋಮ್‌ ಬ್ರೌಸರ್‌ ಮಾರಾಟ ಮಾಡುವ ಒತ್ತಡದಲ್ಲಿ ಗೂಗಲ್‌, ಆಂಡ್ರಾಯ್ಡ್‌ ಏಕಸ್ವಾಮ್ಯಕ್ಕೆ ಹೊಡೆತ
ಕ್ರೋಮ್‌ ಬ್ರೌಸರ್‌ ಮಾರಾಟ ಮಾಡುವ ಒತ್ತಡದಲ್ಲಿ ಗೂಗಲ್‌, ಆಂಡ್ರಾಯ್ಡ್‌ ಏಕಸ್ವಾಮ್ಯಕ್ಕೆ ಹೊಡೆತ

ಬೆಂಗಳೂರು: ಗೂಗಲ್‌ ಸರ್ಚ್‌ ಅಕ್ರಮ ಏಕಸ್ವಾಮ್ಯ ಕಾರ್ಯನಿರ್ವಹಣೆ ಹೊಂದಿದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ ನಂತರ ಗೂಗಲ್‌ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಅಮೆರಿಕದ ಕಾನೂನು ವಿಭಾಗ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. ಕ್ರೋಮ್‌ ಬ್ರೌಸರ್‌ ಅನ್ನು ಮಾರಾಟ ಮಾಡುವಂತೆ ಅಮೆರಿಕದ ನ್ಯಾಯಾಂಗ ಇಲಾಖೆಯು ಗೂಗಲ್‌ನ ಆ್ಯಂಟಿಟ್ರಸ್ಟ್ ಟ್ರಯಲ್‌ ನ್ಯಾಯಾಧೀಶರಲ್ಲಿ ಕೇಳಲು ಯೋಜಿಸುತ್ತಿದೆ ಎಂದು ಬ್ಲೂಮ್‌ಬರ್ಗ್‌ ವರದಿ ತಿಳಿಸಿದೆ.

ಕ್ರೋಮ್ ಜಗತ್ತಿನಾದ್ಯಂತ ಅತ್ಯಧಿಕ ಜನರು ಬಳಸುವ ಬ್ರೌಸರ್ ಆಗಿದೆ. ಗೂಗಲ್‌ ಕಂಪನಿಯು ತನ್ನ ಉತ್ಪನ್ನಗಳ ಪ್ರಚಾರಕ್ಕೆ ಮತ್ತು ತನ್ನ ಉತ್ಪನ್ನಗಳು, ಸೇವೆಗಳ ಪ್ರಚಾರದಲ್ಲಿ ಏಕಸ್ವಾಮ್ಯ ಹೊಂದಿದೆ. ಈ ವಿಭಾಗಗಳಲ್ಲಿ ಪ್ರತಿಸ್ಪರ್ಧಿಗಳನ್ನು ಬೆಳೆಯಲು ಅಥವಾ ಸ್ಪರ್ಧಿಗಳಿಗೆ ಪ್ರವೇಶಿಸಲು ಅವಕಾಶ ನೀಡದಂತೆ ಏಕಸ್ವಾಮ್ಯ ಹೊಂದಿದೆ. ಇದರ ವಿರುದ್ಧ ಕ್ರಮಕೈಗೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

"ಗೂಗಲ್‌ ಸರ್ಚ್‌ ಮತ್ತು ಗೂಗಲ್‌ ಪ್ಲೇನಿಂದ ಆಂಡ್ರಾಯ್ಡ್‌ ಅನ್ನು ಪ್ರತ್ಯೇಕಗೊಳಿಸಬೇಕೆಂದು ಅಧಿಕಾರಿಗಳು ಕೇಳಲು ತಯಾರಿ ನಡೆಸುತ್ತಿದ್ದಾರೆ. ಅದಕ್ಕಾಗಿ ಆಂಡ್ರಾಯ್ಡ್‌ ಅನ್ನು ಮಾರಾಟ ಮಾಡುವಂತೆ ಗೂಗಲ್‌ ಮೇಲೆ ಒತ್ತಡ ಹೇರಲು ಪ್ರಯತ್ನಿಸುವ ಸೂಚನೆ ಇದೆ. ಇದರೊಂದಿಗೆ ಕಂಪನಿಯು ಜಾಹೀರಾತುದಾರರೊಂದಿಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಬೇಕು, ಜಾಹೀರಾತುಗಳು ಎಲ್ಲಿ ಕಾಣಿಸಿಕೊಳ್ಳುತ್ತವೆ ಎನ್ನುವ ವಿಚಾರದಲ್ಲಿ ಹೆಚ್ಚಿನ ನಿಯಂತ್ರಣ ನೀಡಬೇಕು ಎಂದು ಸೂಚಿಸಲಿದೆ" ಎಂದು ಬ್ಲೂಮ್‌ಬರ್ಗ್‌ ವರದಿ ತಿಳಿಸಿದೆ.

"ಗೂಗಲ್‌ನ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌) ಉತ್ಪನ್ನಗಳು ತಮ್ಮ ಕಂಟೆಂಟ್‌ಗಳನ್ನು ಬಳಸದಂತೆ ತಡೆಯಲು ವೆಬ್‌ಸೈಟ್‌ಗಳಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಬೇಕು ಎಂದು ಕೂಡ ಅಧಿಕಾರಿಗಳು ಶಿಫಾರಸು ಮಾಡುತ್ತಿದ್ದಾರೆ" ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಗೂಗಲ್‌ಗೆ ನೀಡಿರುವ ವಿಶೇಷ ಒಪ್ಪಂದ, ಅಧಿಕಾರಗಳನ್ನು ನಿಷೇಧಿಸಲು ಈ ಕಾನೂನು ಅಧಿಕಾರಿಗಳು ಒತ್ತಾಯಿಸಲು ಪ್ರಯತ್ನಿಸಲಿದ್ದಾರೆ ಎಂದು ವರದಿಯಾಗಿದೆ.

"ಈ ಪ್ರಕರಣದಲ್ಲಿ ಕಾನೂನು ಸಮಸ್ಯೆಗಳನ್ನು ಮೀರಿದ ಅಮೂಲಾಗ್ರ ಕಾರ್ಯಸೂಚಿಯನ್ನು ಹೊಂದಿರುವ ಪ್ರಯತ್ನದಂತೆ ಕಾಣುತ್ತದೆ ಎಂದು ಗೂಗಲ್‌ನ ನಿಯಂತರಕ ವ್ಯವಹಾರಗಳ ಉಪಾಧ್ಯಕ್ಷರಾದ ಲೀ ಆನ್ ಮುಲ್ಹೋಲ್ಯಾಂಡ್ ಪ್ರತಿಕ್ರಿಯೆ ನೀಡಿದ್ದಾರೆ" ಎಂದು ವರದಿಯಾಗಿದೆ.

ಗೂಗಲ್ ಕ್ರೋಮ್ ಇದೀಗ ವಿಶ್ವದ ಅತ್ಯಂತ ಜನಪ್ರಿಯ ಬ್ರೌಸರ್ ಆಗಿದೆ. ಸುಮಾರು ಶೇಕಡ 65 ಮಾರುಕಟ್ಟೆ ಪಾಲನ್ನು ಹೊಂದಿದೆ. ಅಕ್ಟೋಬರ್ 2024ರವರೆಗಿನ ಅಂಕಿಅಂಶಗಳ ಪ್ರಕಾರ ಸಫಾರಿ ಬ್ರೌಸರ್‌ ಶೇಕಡ 21ರಷ್ಟು ಪಾಲು ಹೊಂದಿದ್ದು, ಎರಡನೇ ಸ್ಥಾನದಲ್ಲಿದೆ.

ನಿಮ್ಮ ಮೊಬೈಲ್‌ನಲ್ಲಿ ಆಂಡ್ರಾಯ್ಡ್‌ ಉತ್ಪನ್ನಗಳನ್ನು ಮೊದಲೇ ಇನ್‌ಸ್ಟಾಲ್‌ ಮಾಡಲಾಗಿರುತ್ತದೆ. ನಿಮಗೆ ಬೇಡವೆಂದರೂ ಕೆಲವೊಂದು ಗೂಗಲ್‌ ಆಂಡ್ರಾಯ್ಡ್‌ ಆಪ್‌ಗಳನ್ನು ಅನ್‌ಇನ್‌ಸ್ಟಾಲ್‌ ಮಾಡಲಾಗುವುದಿಲ್ಲ. ಈ ಮೂಲಕ ಸ್ಮಾರ್ಟ್‌ಫೋನ್‌ ಖರೀದಿದಾರರ ಮೇಲೆ ಬಲವಂತವಾಗಿ ತನ್ನ ಉತ್ಪನ್ನಗಳನ್ನು ಗೂಗಲ್‌ ಹೇರಿಕೆ ಮಾಡುತ್ತಿದೆ. ನಿಮಗೆ ಬೇರೆ ಕಂಪನಿಯ ಅದೇ ರೀತಿಯ ಉತ್ಪನ್ನಗಳನ್ನು ಹಾಕುವ ಅವಕಾಶವೂ ಇರುವುದಿಲ್ಲ. ಇದೇ ರೀತಿ ಗೂಗಲ್‌ ಹಲವು ರೀತಿಯಲ್ಲಿ ಬಳಕೆದಾರರ ಮೇಲೆ ಅನಿವಾರ್ಯತೆಯನ್ನು ಉಂಟು ಮಾಡಿದೆ. ಪ್ರತಿಸ್ಪರ್ಧಿ ಕಂಪನಿಗಳಿಗೆ ಕಾಲಿಡಲು ಅವಕಾಶ ನೀಡದಂತಹ ವ್ಯವಸ್ಥೆ ರೂಪಿಸಿದೆ ಎಂದು ಈ ಹಿಂದೆಯೂ ಗೂಗಲ್‌ ವಿರುದ್ಧ ಸಾಕಷ್ಟು ವಿಚಾರಣೆ ನಡೆದಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.