PKL 10: ಪುಣೇರಿ ಪಲ್ಟನ್ ಗೆಲುವಿನ ನಾಗಾಲೋಟ; ಹರಿಯಾಣ ಮಣಿಸಿದ ಹಾಲಿ ಚಾಂಪಿಯನ್ ಜೈಪುರ
Pro Kabaddi League 2023: ಪುಣೇರಿ ಪಲ್ಟನ್ ತಂಡವು ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಆ ಮೂಲಕ ಪಿಕೆಎಲ್ ಸೀಸನ್10ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಪ್ರೊ ಕಬಡ್ಡಿ ಲೀಗ್‌ನ (Pro Kabaddi League 2023) ಬುಧವಾರದ (ಜನವರಿ 03) ಪಂದ್ಯದಲ್ಲಿ ಎರಡು ರೋಚಕ ಪಂದ್ಯಗಳು ನಡೆದವು. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) ಜಯ ಸಾಧಿಸಿದರೆ, ದಿನದ ಎರಡನೇ ಪಂದ್ಯದಲ್ಲಿ ಯುಪಿ ಯೋಧಾಸ್ ವಿರುದ್ಧ ಪುಣೇರಿ ಪಲ್ಟಾನ್ಸ್ ತಂಡವು 31-40 ಅಂತರದಿಂದ ಗೆದ್ದು ಬೀಗಿತು.
ದಿನದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಹರಿಯಾಣ ಸ್ಟೀಲರ್ಸ್ ತಂಡದ ವಿರುದ್ಧ 45-34 ಅಂಕಗಳ ಅಂತರದಿಂದ ಜಯ ಸಾಧಿಸಿತು. ಅರ್ಜುನ್ ದೇಶ್ವಾಲ್ ರೈಡಿಂಗ್ ತಂಡದ ಕೈ ಹಿಡಿಯಿತು. ಭರ್ಜರಿ 14 ಪಾಯಿಂಟ್ ಕಲೆ ಹಾಕಿದ ಅವರು ಸೂಪರ್ 10 ಪೂರ್ಣಗೊಳಿಸಿದರು. ಇದೇ ವೇಳೆ ಟ್ಯಾಕಲ್‌ನಲ್ಲಿ ಮಿಂಚಿದ ರೆಜಾ ಮಿರ್ಬಘೇರಿ 7 ಪಾಯಿಂಟ್ ಕಲೆ ಹಾಕಿದರು. ಅವರಿಗೆ ಉತ್ತಮ ಸಾಥ್ ನೀಡಿದ ಅಂಕುಶ್ 5 ಟ್ಯಾಕಲ್ ಪಾಯಿಂಟ್ ಪಡೆದರು.
ಇದನ್ನೂ ಓದಿ | ಹೊಸ ವರ್ಷಕ್ಕೆ ಗೆಲುವಿನ ಸಿಹಿ ನೀಡಿದ ಬೆಂಗಳೂರು ಬುಲ್ಸ್; ಗೆದ್ದು ಅಗ್ರಸ್ಥಾನಕ್ಕೇರಿದ ಗುಜರಾತ್
ಹರಿಯಾಣ ಸ್ಟೀಲರ್ಸ್ ಉತ್ತಮ ಪ್ರತಿರೋಧ ಒಡ್ಡಿತು. ತಂಡದ ಪರ ಚಂದ್ರನ್ ರಂಜಿತ್ 11 ರೈಡ್ ಪಾಯಿಂಟ್ ಗಳಿಸಿದರು. ಇದೇ ವೇಳೆ ಮೋಹಿತ್ ನಂದಲ್ 5 ಟ್ಯಾಕಲ್ ಪಾಯಿಂಟ್ ಪಡೆದರು. ಆದರೆ ಹಾಲಿ ಚಾಂಪಿಯನ್ ಪಂದ್ಯದಲ್ಲಿ ಮುನ್ನಡೆ ಕಾಯ್ದುಕೊಂಡು ಸಾಗಿತು.
ಪಂದ್ಯದಲ್ಲಿ ಹರಿಯಾಣ ಎರಡು ಬಾರಿ ಆಲೌಟ್ ಆದರೆ, ಜೈಪುರ ಒಮ್ಮೆ ಕೋರ್ಟ್ ಖಾಲಿ ಮಾಡಿತು.
ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟಾನ್ಸ್ ಮತ್ತೆ ರೈಡಿಂಗ್‌ನಲ್ಲಿ ಅಬ್ಬರಿಸಿತು. ಅಸ್ಲಾಂ ಇನಾಮ್ದಾರ್ ಸೂಪರ್ 10 ಪೂರ್ಣಗೊಳಿಸಿ ಒಟ್ಟು 11 ರೈಡ್ ಪಾಯಿಂಟ್ ಕಲೆ ಹಾಕಿದರು. ಅವರಿಗೆ ಟ್ಯಾಕಲ್‌ನಲ್ಲಿ ಸಾಥ್ ನೀಡಿದ ಶಾದ್ಲೋಯಿ 7 ಅಂಕ ಕಲೆ ಹಾಕಿದರು.
ಯುಪಿ ತಂಡದಿಂದ ನಿರೀಕ್ಷಿತ ಪ್ರದರ್ಶನ ಹೊರಬರಲಿಲ್ಲ. ಭರವಸೆಯ ಆಟಗಾರ ಪರ್ದೀಪ್ ನರ್ವಾಲ್ 6 ರೈಡ್ ಮಾಯಿಂಟ್ ಮಾತ್ರ ಗಳಿಸಿದರು. ಸುಮಿತ್ ಕೂಡಾ 6 ಅಂಕ ಕಲೆ ಹಾಕುವಲ್ಲಿ ಶಕ್ತರಾದರು.
ಪಂದ್ಯದ ಬಳಿಕ ಪುಣೇರಿ ಪಲ್ಟನ್ ಅಂಕಪಟ್ಟಿಯ ಅಗ್ರಸ್ಥಾನದಲ್ಲಿ ಮುಂದುವರೆದರೆ, ಜೈಪುರ ತಂಡವು ಮೂರನೇ ಸ್ಥಾನದಲ್ಲಿದೆ.