ಪಿಂಕ್ ಬಾಲ್ ಟೆಸ್ಟ್ಗೂ ಮುನ್ನ ಆಸ್ಟ್ರೇಲಿಯಾ ತಂಡದಲ್ಲಿ ದೊಡ್ಡ ಬದಲಾವಣೆ; 5297 ರನ್, 148 ವಿಕೆಟ್ ಕಿತ್ತ ಆಲ್ರೌಂಡರ್ಗೆ ಮಣೆ
ಭಾರತ ವಿರುದ್ಧದ 2ನೇ ಟೆಸ್ಟ್‌ಗೆ ಆಸ್ಟ್ರೇಲಿಯಾ ತನ್ನ ತಂಡಕ್ಕೆ ಆಲ್‌ರೌಂಡರ್ ಬ್ಯೂ ವೆಬ್‌ಸ್ಟರ್ ಅನ್ನು ಸೇರಿಸಿದೆ. ಪರ್ತ್‌ನಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನ ನಂತರ ಮಿಚೆಲ್ ಮಾರ್ಷ್ ಅವರ ಫಿಟ್‌ನೆಸ್ ಸಮಸ್ಯೆ ಎದುರಿಸುತ್ತಿರುವ ಕಾರಣ ಕ್ರಿಕೆಟ್ ಆಸ್ಟ್ರೇಲಿಯಾ ಈ ನಿರ್ಧಾರ ಕೈಗೊಂಡಿದೆ.
ಡಿಸೆಂಬರ್ 6ರಿಂದ ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಭಾರತದ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ 2ನೇ ಹಾಗೂ ಪಿಂಕ್ಬಾಲ್ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡವು ದೊಡ್ಡ ಬದಲಾವಣೆಯೊಂದನ್ನು ಮಾಡಿದೆ. ಮಿಚೆಲ್ ಮಾರ್ಷ್ ಅವರ ಫಿಟ್‌ನೆಸ್ ಬಗ್ಗೆ ಅನಿಶ್ಚಿತತೆಯ ನಡುವೆ ಅನ್‌ಕ್ಯಾಪ್ಡ್ ವೇಗದ ಬೌಲಿಂಗ್ ಆಲ್-ರೌಂಡರ್ ಬ್ಯೂ ವೆಬ್‌ಸ್ಟರ್ ಅವರನ್ನು ಆಸೀಸ್ ತನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಪರ್ತ್ನ ಆಪ್ಟಸ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ 295 ರನ್‌ಗಳ ಹೀನಾಯ ಸೋತಿರುವ ಆಸೀಸ್ಗೆ ಗಾಯದ ಮೇಲೆ ಬರೆ ಬಿದ್ದಂತಾಗಿದೆ.
ಮಿಚೆಲ್ ಮಾರ್ಷ್ ಅವರು ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಆಯ್ಕೆ ಆಲ್‌ರೌಂಡರ್ ಆಗಿರಲಿಲ್ಲ. ಕ್ಯಾಮರೂನ್ ಗ್ರೀನ್ ಮೊದಲ ಆಯ್ಕೆ ಆಗಿದ್ದರು. ಆದರೆ ಗಾಯಕೊಂಡ ಕಾರಣ ಅವಕಾಶ ಪಡೆಯುವಲ್ಲಿ ವಿಫಲರಾದರು. ಆಪ್ಟಸ್ ಸ್ಟೇಡಿಯಂನಲ್ಲಿ 17 ಓವರ್ ಬೌಲ್ ಮಾಡಿದ್ದ ಮಿಚೆಲ್ ಮಾರ್ಷ್, 3 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅತ್ಯಧಿಕ ಬೌಲಿಂಗ್ ಓವರ್ಗಳು ಬೌಲಿಂಗ್ ಮಾಡಿದ್ದಾರೆ. ಇದು ಆತನ ಫಿಟ್‌ನೆಸ್ ಮೇಲೆ ಪರಿಣಾಮ ಬೀರಿತು. ಆದರೆ 2ನೇ ಟೆಸ್ಟ್ನಲ್ಲಿ ಬೌಲಿಂಗ್ ಮಾಡದೆ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯುವ ನಿರೀಕ್ಷೆಯಿದೆ.
ಮುಂದಿನ ಪಂದ್ಯಕ್ಕೆ ಇನ್ನೂ 8-9 ದಿನಗಳು ಬಾಕಿ ಇರುವ ಕಾರಣ ಮಿಚೆಲ್ ಮಾರ್ಷ್ ಅಷ್ಟರೊಳಗೆ ಚೇತರಿಸಿಕೊಂಡರೂ ಅಚ್ಚರಿ ಇಲ್ಲ. ಒಂದು ವೇಳೆ ಈ ಅವಧಿಯ ನಡುವೆಯೇ ಗಾಯ ಮತ್ತಷ್ಟು ಕ್ಷೀಣಿಸಿದರೆ ತುರ್ತಾಗಿ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ಮೊದಲ ಅವಕಾಶ ನೀಡಲಾಗುತ್ತದೆ. ಗಾಯ ಮತ್ತಷ್ಟು ಗಂಭೀರವಾದರೆ ವೆಬ್‌ಸ್ಟರ್ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ. ಎರಡನೇ ಹಾಗೂ ಮೂರನೇ ಟೆಸ್ಟ್ ನಡುವೆ ಕೇವಲ 4 ದಿನಗಳ ಅಂತರವಿರುವ ಕಾರಣ ಮಿಚೆಲ್ಗೆ ವಿಶ್ರಾಂತಿ ನೀಡಿ ವೆಬ್ಸ್ಟರ್ಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಶೆಫೀಲ್ಡ್ ಶೀಲ್ಡ್ನಲ್ಲಿ ದಾಖಲೆ
30 ವರ್ಷದ ಆಲ್‌ರೌಂಡರ್ ವೆಬ್‌ಸ್ಟರ್ ಆಸ್ಟ್ರೇಲಿಯಾದ ದೇಶೀಯ ಸರ್ಕ್ಯೂಟ್‌ನಲ್ಲಿ ಟ್ಯಾಸ್ಮೆನಿಯಾ ಪರ ಕಣಕ್ಕಿಳಿಯುತ್ತಾರೆ. ಕಳೆದ 2 ಸೀಸನ್‌ಗಳಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿರುವ ವೆಬ್‌ಸ್ಟರ್, ಶೆಫೀಲ್ಡ್ ಶೀಲ್ಡ್ ಟೂರ್ನಿ ಇತಿಹಾಸದಲ್ಲಿ 900 ರನ್ ಜೊತೆಗೆ 30 ವಿಕೆಟ್ ಪಡೆದ 2ನೇ ಆಟಗಾರನಾಗಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲೂ 448 ರನ್, 16 ವಿಕೆಟ್ ಗಳಿಸಿ ಪ್ರಭಾವಿಯಾಗಿದ್ದಾರೆ. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ (SCG) ಈ ಋತುವಿನ ಶೆಫೀಲ್ಡ್ ಶೀಲ್ಡ್‌ನ 14 ನೇ ಪಂದ್ಯದಲ್ಲಿ ನ್ಯೂ ಸೌತ್ ವೇಲ್ಸ್ ವಿರುದ್ಧ ಟ್ಯಾಸ್ಮೆನಿಯಾ 55 ರನ್‌ಗಳ ಜಯದಲ್ಲಿ ವೆಬ್‌ಸ್ಟರ್ ಪ್ರಮುಖ ಕಾಣಿಕೆ ನೀಡಿದರು. ಮೊದಲ ಇನ್ನಿಂಗ್ಸ್ನಲ್ಲಿ 61, ಎರಡನೇ ಇನ್ನಿಂಗ್ಸ್ನಲ್ಲಿ 49 ರನ್ ಗಳಿಸಿದರು. ಜೊತೆಗೆ 5 ವಿಕೆಟ್‌ಗಳನ್ನು ಪಡೆದರು.
ಭಾರತ ಎ ವಿರುದ್ಧವೂ ಅದ್ಭುತ ಪ್ರದರ್ಶನ
ಇತ್ತೀಚೆಗೆ ಮುಕ್ತಾಯಗೊಂಡ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯಲ್ಲಿ ಭಾರತ ಎ ತಂಡವನ್ನು ಎದುರಿಸಿದ ಆಸ್ಟ್ರೇಲಿಯಾ ಎ ತಂಡದ ಭಾಗವಾಗಿದ್ದ ವೆಬ್‌ಸ್ಟರ್ ಅಜೇಯ 61* ಮತ್ತು 48* ರನ್ ಗಳಿಸಿ ನಿರ್ಣಾಯಕ ಇನ್ನಿಂಗ್ಸ್ಗಳನ್ನು ಕಟ್ಟುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೆ, 3 ವಿಕೆಟ್ ಸಹ ಪಡೆದರು. ಇನ್ನು 2ನೇ ಪಂದ್ಯದಲ್ಲಿ ಆರು ವಿಕೆಟ್ ಜೊತೆಗೆ ಅಜೇಯ 46* ರನ್ ಬಾರಿಸಿದ್ದರು.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವೆಬ್‌ಸ್ಟರ್ ಪ್ರದರ್ಶನ
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇಲ್ಲಿಯವರೆಗೂ 93 ಪ್ರಥಮ ದರ್ಜೆ ಪಂದ್ಯಗಳಲ್ಲಿ ವೆಬ್‌ಸ್ಟರ್ 12 ಶತಕ, 24 ಅರ್ಧಶತಕ ಒಳಗೊಂಡಂತೆ 37.83 ಸರಾಸರಿಯಲ್ಲಿ 5,297 ರನ್ ಗಳಿಸಿದ್ದಾರೆ. ಬೌಲಿಂಗ್ನಲ್ಲಿ 148 ವಿಕೆಟ್‌ಗಳನ್ನು ಪಡೆದಿದ್ದಾರೆ.
ಎರಡನೇ ಟೆಸ್ಟ್‌ಗೆ ಆಸ್ಟ್ರೇಲಿಯಾ ತಂಡ
ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ನೇಥನ್ ಲಿಯಾನ್, ಮಿಚೆಲ್ ಮಾರ್ಷ್, ನಾಥನ್ ಮೆಕ್‌ಸ್ವೀನಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್, ಬ್ಯೂ ವೆಬ್‌ಸ್ಟರ್.