ಜಿತೇಶ್ ಶರ್ಮಾಗೆ ಶೇ 5400 ರಷ್ಟು ವೇತನ ಹೆಚ್ಚಳ, 55 ಪಟ್ಟು ಹೆಚ್ಚುವರಿ ಗಳಿಕೆ; ಇದು ಐಪಿಎಲ್ ಹರಾಜು ದಾಖಲೆ!
Jitesh Sharma: ಐಪಿಎಲ್ 2025ರ ಹರಾಜಿನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಅವರನ್ನು ಆರ್ಸಿಬಿ 11 ಕೋಟಿ ರೂ.ಗೆ ಖರೀದಿಸಿದೆ. ಆದರೆ ಕಳೆದ ಸಂಬಳಕ್ಕಿಂತ 55 ಪಟ್ಟು ಮತ್ತು ಶೇ 5400 ರಷ್ಟು ವೇತನ ಹೆಚ್ಚಾಗಿದೆ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಹಲವು ದಾಖಲೆಗಳು ನಿರ್ಮಾಣವಾದವು. ರಿಷಭ್ ಪಂತ್ (27 ಕೋಟಿ ರೂ), ಶ್ರೇಯಸ್ ಅಯ್ಯರ್ (26.5 ಕೋಟಿ ರೂ), ವೆಂಕಟೇಶ್ ಅಯ್ಯರ್ (24.75 ಕೋಟಿ) ಅಧಿಕ ಮೊತ್ತ ಪಡೆಯುವ ಮೂಲಕ ದುಬಾರಿ ಆಟಗಾರರಾಗಿದ್ದಾರೆ. ಇವರ ಜೊತೆಗೆ ಬಹುತೇಕ ಆಟಗಾರರು ಕಳೆದ ವರ್ಷಕ್ಕೆ ಹೋಲಿಸಿದರೆ ಡಬಲ್ ಹಣವನ್ನು ಜೇಬಿಗಿಳಿಸಿಕೊಂಡಿದ್ದಾರೆ. ಈ ಪೈಕಿ ಬಹುತೇಕ ಭಾರತೀಯರೇ ಇರುವುದು ವಿಶೇಷ. ಯಾವುದೇ ವಿದೇಶಿ ಆಟಗಾರ 16 ಕೋಟಿಗೆ ಮಾರಾಟವಾಗಿಲ್ಲ. ಈ ಬಾರಿ ಜೋಸ್ ಬಟ್ಲರ್ ಅತ್ಯಂತ ದುಬಾರಿ ವಿದೇಶಿ ಆಟಗಾರನಾಗಿದ್ದು, ಅವರನ್ನು ಗುಜರಾತ್ ಟೈಟಾನ್ಸ್ 15.75 ಕೋಟಿ ರೂ.ಗೆ ತಂಡಕ್ಕೆ ಸೇರಿಸಿದೆ.
ಇದಲ್ಲದೆ, ಐಪಿಎಲ್ ಹರಾಜಿನಲ್ಲಿ ಅನೇಕ ಆಟಗಾರರ ವೇತನ ಹೆಚ್ಚಳದಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಬಲಗೈ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು11 ಕೋಟಿ ರೂ.ಗೆ ಖರೀದಿಸಿತು. ಆದರೆ, ಈ ಹಿಂದೆ ಪಂಜಾಬ್ ಕಿಂಗ್ಸ್ ಭಾಗವಾಗಿದ್ದ ಜಿತೇಶ್ ಅವರ ಹಿಂದಿನ ಸಂಬಳ 20 ಲಕ್ಷ ರೂ ಇತ್ತು. ಇದು ತನ್ನ ಹಿಂದಿನ ಸಂಬಳ 20 ಲಕ್ಷಕ್ಕಿಂತ 55 ಪಟ್ಟು ಹೆಚ್ಚು. ಹಾಗೆ ಶೇಕಡವಾರಿನಲ್ಲಿ 5400ರಷ್ಟು ಸಂಬಳ ಹೆಚ್ಚಿಸಿಕೊಂಡಿದ್ದಾರೆ. ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಪಿಬಿಕೆಎಸ್ ಅವರನ್ನು ಮೂಲ ಬೆಲೆಗೆ ಖರೀದಿಸಿತ್ತು. ಮುಂದಿನ ಎರಡು ಸೀಸನ್ಗಳಿಗೂ ಅದೇ ಬೆಲೆಗೆ ಉಳಿಸಿಕೊಳ್ಳಲಾಗಿತ್ತು.
ಕೋಟಿ ಕೋಟಿ ಪಡೆದರೂ ಪಂತ್, ಶ್ರೇಯಸ್ ಹತ್ತಿರಕ್ಕೂ ಸುಳಿದಿಲ್ಲ
ಪ್ರಸ್ತುತ ಪಂತ್, ಅಯ್ಯರ್, ವೆಂಕಟೇಶ್ ಸೇರಿದಂತೆ ದುಬಾರಿ ವೇತನ ಪಡೆದ ಹಲವು ಆಟಗಾರರು ಜಿತೇಶ್ ಶರ್ಮಾಗೆ ಸಿಕ್ಕಷ್ಟು ಸಂಬಳ ಪಡೆಯುವಲ್ಲಿ ವಿಫಲರಾಗಿದ್ದಾರೆ. ದುಬಾರಿ ಆಟಗಾರರಾದ ಪಂತ್, ಅಯ್ಯರ್ ಮತ್ತು ವೆಂಕಟೇಶ್ ಅವರ ವೇತನದಲ್ಲೂ ಏರಿಕೆಯಾಗಿದ್ದರೂ ಇಷ್ಟರಮಟ್ಟಿಗೆ ಅಲ್ಲ. ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದಾಗ 16 ಕೋಟಿ ಪಡೆಯುತ್ತಿದ್ದರು. ಆದರೀಗ ಅದಕ್ಕಿಂತ 11 ಕೋಟಿ ಹೆಚ್ಚಳ ಪಡೆಯಲಿದ್ದಾರೆ. ಇದರ ಏರಿಕೆ ಶೇ 68.75ರಷ್ಟು ಮಾತ್ರ. ಕೋಲ್ಕತ್ತಾ ನೈಟ್ ರೈಡರ್ಸ್ ಪರ 12.25 ಕೋಟಿ ಪಡೆಯುತ್ತಿದ್ದ ಪಂಜಾಬ್ ಸೇರಿರುವ ಶ್ರೇಯಸ್ ಸಂಬಳ 26.75 ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 14.50 ಕೋಟಿ ಹೆಚ್ಚಳ. ಅಂದರೆ ಶೇ 117.96ರಷ್ಟು ಏರಿದೆ.
ವೆಂಕಟೇಶ್ ಸ್ಯಾಲರಿ ಶೇ 196.25ರಷ್ಟು ಏರಿಕೆ
ಮತ್ತೊಂದೆಡೆ ವೆಂಕಟೇಶ್ ಅಯ್ಯರ್ ಮತ್ತೆ ಕೆಕೆಆರ್ ತಂಡಕ್ಕೆ ಖರೀದಿಯಾಗಿದ್ದಾರೆ. ಅವರು ಈ ಬಾರಿ ಬೃಹತ್ ಮೊತ್ತವನ್ನೇ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಈ ಹರಾಜಿಗೂ ಮುನ್ನ 8 ಕೋಟಿ ರೂ ಪಡೆಯುತ್ತಿದ್ದರು. ಈಗ ಅದರ ಬೆಲೆ 23.75 ಕೋಟಿ ರೂ.ಗೆ ಹೆಚ್ಚಳವಾಗಿದೆ. ಶೇ 196.25ರಷ್ಟು ಏರಿಕೆಯಾಗಿದೆ. ಈ ಹಿಂದಿನ ವೇತನಕ್ಕಿಂತ ಈ ಬಾರಿ 15.75 ಕೋಟಿ ಹೆಚ್ಚಾಗಿ ಪಡೆಯುತ್ತಿದ್ದಾರೆ.