Delhi Capitals kit theft: ಪತ್ತೆಯಾಯ್ತು ಕಳವಾದ ಕ್ರಿಕೆಟ್ ಕಿಟ್; ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ನಿರಾಳ
ಡೆಲ್ಲಿ ತಂಡದ ನಾಯಕ ಡೇವಿಡ್ ವಾರ್ನರ್ ಈ ಬಗ್ಗೆ ಇನ್‌ಸ್ಟಾಗ್ರಾಮ್ ಸ್ಟೋರಿ ಅಪ್ಲೋಡ್ ಮಾಡಿದ್ದು, ಅಪರಾಧಿಗಳು ಪತ್ತೆಯಾಗಿದ್ದಾರೆ ಮತ್ತು ನಮ್ಮ ಬ್ಯಾಟ್‌ಗಳು ಸಿಕ್ಕಿವೆ ಎಂದು ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಸದಸ್ಯರು ಇತ್ತೀಚೆಗೆ ಆಘಾತಕಾರಿ ಸನ್ನಿವೇಶ ಎದುರಿಸಿದ್ದರು. ತಂಡದ ಆಟಗಾರರಿಗೆ ಸೇರಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಿಟ್ ಕಳ್ಳತನವಾಗಿತ್ತು. ಕಿಟ್ನಲ್ಲಿ ಬ್ಯಾಟ್, ಪ್ಯಾಡ್ ಸೇರಿದಂತೆ ಇತರೆ ಕೆಲವು ಉಪಕರಣಗಳು ಕಳವಾಗಿವೆ ಎಂದು ವರದಿಯಾಗಿತ್ತು. ಈ ಬಗ್ಗೆ ಡೆಲ್ಲಿ ಫ್ರಾಂಚೈಸಿ ದೂರು ಕೂಡಾ ನೀಡಿತ್ತು. ಸದ್ಯ ತಂಡದ ಆಟಗಾರರು ತುಸು ನಿರಾಳರಾಗಿದ್ದಾರೆ.
ಇತ್ತೀಚೆಗೆ ಆರ್‌ಸಿಬಿ ವಿರುದ್ಧ ಪಂದ್ಯವಾಡಿದ ಬಳಿಕ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸಿದ ನಂತರ ತಂಡದ ಬಹಳಷ್ಟು ಆಟಗಾರರ ಕಿಟ್ ಕಾಣೆಯಾಗಿತ್ತು. ಕಳ್ಳತನವಾಗಿದ್ದ ವಸ್ತುಗಳ ಪೈಕಿ ಡೇವಿಡ್ ವಾರ್ನರ್ ಮತ್ತು ಫಿಲ್ ಸಾಲ್ಟ್ ತಲಾ ಮೂರು ಬ್ಯಾಟ್‌ಗಳನ್ನು ಕಳೆದುಕೊಂಡಿದ್ದರು. ಇದೇ ವೇಳೆ ಮಿಚೆಲ್ ಮಾರ್ಷ್ ಅವರ ಎರಡು ಬ್ಯಾಟ್ ಕಾಣೆಯಾಗಿತ್ತು. ಸದ್ಯ ಕಳ್ಳರು ಪತ್ತೆಯಾಗಿದ್ದು, ಈ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಮಾಹಿತಿ ನೀಡಿದ್ದಾರೆ.
ವಾರ್ನರ್ ಈ ಬಗ್ಗೆ ಇನ್‌ಸ್ಟಾಗ್ರಾಮ್ ಸ್ಟೋರಿ ಅಪ್ಲೋಡ್ ಮಾಡಿದ್ದು, ಅಪರಾಧಿಗಳು ಪತ್ತೆಯಾಗಿದ್ದಾರೆ ಮತ್ತು ನಮ್ಮ ಬ್ಯಾಟ್‌ಗಳು ಸಿಕ್ಕಿವೆ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಹೆಲ್ಮೆಟ್‌ಗಳು, ಬ್ಯಾಟಿಂಗ್ ಗ್ಲೌಸ್ ಮತ್ತು ಪ್ಯಾಡ್‌ಗಳ ಜೊತೆಗೆ ಹಲವಾರು ಬ್ಯಾಟ್‌ಗಳನ್ನು ಕಾಣಬಹುದು. “ಅವರು ಅಪರಾಧಿಗಳನ್ನು ಪತ್ತೆಹಚ್ಚಿದ್ದಾರೆ” ಎಂದು ವಾರ್ನರ್ ಸ್ಟೋರಿಯಲ್ಲಿ ಬರೆದಿದ್ದಾರೆ. ಇದೇ ವೇಳೆ “ಕೆಲವೊಂದು ಇನ್ನೂ ಕಾಣೆಯಾಗಿವೆ, ಆದರೂ, ಇಷ್ಟು ಪತ್ತೆಹಚ್ಚಿದ್ದಕ್ಕೆ ಧನ್ಯವಾದಗಳು,” ಎಂದು ಹೇಳಿದ್ದಾರೆ.
ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸಿದ ಬಳಿಕ ಆಟಗಾರರ ರೂಮ್ಗೆ ಕಿಟ್ ಬ್ಯಾಗ್ಗಳನ್ನು ತಲುಪಿಸಲಾಗಿತ್ತು. ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ಉಲ್ಲೇಖ ಮಾಡಿತ್ತು. ಆ ವರದಿಯಂತೆ ಕಿಟ್ ಬ್ಯಾಗ್ಗಳು ಆಟಗಾರರ ಕೊಠಡಿಗೆ ತಲುಪಿದ ನಂತರ ವಸ್ತುಗಳು ಕಳ್ಳತನವಾಗಿರುವುದು ಗೊತ್ತಾಗಿದೆ. ಡೆಲ್ಲಿ ತಂಡದ 16 ಬ್ಯಾಟ್‌ಗಳು, ಪ್ಯಾಡ್‌ಗಳು, ಶೂ, ಥೈಪ್ಯಾಡ್ (ತೊಡೆಯ ಭಾಗಕ್ಕೆ ಕಟ್ಟುವ ಪ್ಯಾಡ್) ಹಾಗೂ ಗ್ಲೌಸ್‌ಗಳು ನಾಪತ್ತೆಯಾಗಿದ್ದವು.
ಯುವ ಕ್ರಿಕೆಟಿಗ ಯಶ್ ಧುಲ್ ಅವರ 5 ಬ್ಯಾಟ್‌ಗಳು ಕಳ್ಳತನವಾಗಿತ್ತು. ಜೊತೆಗೆ ಕೆಲ ಆಟಗಾರರ ಶೂ, ಗ್ಲೌಸ್, ಪ್ಯಾಡ್ ಎಲ್ಲವೂ ಕಾಣೆಯಾಗಿದ್ದವು. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಎಚ್ಚರ ವಹಿಸಿತ್ತು. ತಕ್ಷಣ ಲಾಜಿಸ್ಟಿಕ್ಸ್ ವಿಭಾಗ, ಪೊಲೀಸ್ ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ದೂರು ನೀಡಿತ್ತು.
ಆಟಗಾರರ ಉಪಕರಣಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾಣೆಯಾಗಿರುವುದು ಇದೇ ಮೊದಲು. ಕೆಲವು ವಿದೇಶಿ ಆಟಗಾರರ ಒಂದು ಬ್ಯಾಟ್ ಬೆಲೆ ಸುಮಾರು ಒಂದು ಲಕ್ಷ ರೂಪಾಯಿಗೂ ಹೆಚ್ಚು ಎಂದು ಹೇಳಲಾಗಿದೆ. ಹೀಗಾಗಿ ಕಳವಾದ ವಸ್ತುಗಳು ಲಕ್ಷಾಂತರ ರೂಪಾಯಿ ಬೆಲೆಬಾಳುತ್ತವೆ. ಸದ್ಯ ಕೆಲ ವಸ್ತುಗಳು ಮಾತ್ರ ಪತ್ತೆಯಾಗಿವೆ ಎಂದು ವಾರ್ನರ್ ತಿಳಿಸಿದ್ದಾರೆ. ಇನ್ನೂ ಕೆಲ ಬ್ಯಾಟ್ ಹಾಗೂ ವಸ್ತುಗಳು ಇನ್ನಷ್ಟೇ ಪತ್ತೆಯಾಗಬೇಕಿವೆ.
ಐಪಿಎಲ್ ಸಾಮಾನ್ಯವಾಗಿ ಆಟಗಾರರ ಕಿಟ್‌ಗಳ ಸಾಗಣೆಗೆ ಲಾಜಿಸ್ಟಿಕ್ಸ್ ಕಂಪನಿಯನ್ನು ನೇಮಿಸುತ್ತದೆ. ಆಟಗಾರರ ಕಿಟ್‌ಬ್ಯಾಗ್‌ಗಳನ್ನು ಒಂದು ಸ್ಥಳದಿಂದ ಇನ್ನೊಂದೆಡೆಗೆ ಸುಗಮವಾಗಿ ಸಾಗಿಸುವುದು ಅದರ ಕೆಲಸ. ಹೀಗಿದ್ದರೂ ಪ್ರಮುಖ ವಸ್ತುಗಳು ಕಳ್ಳತನ ಆಗಿರುವುದು ಅಚ್ಚರಿ ಮೂಡಿಸಿದೆ.