ಹುಬ್ಬಳ್ಳಿ ಅಪರಾಧ: ಅಂಗಡಿಗೆ ನುಗ್ಗಿ ದರೋಡೆ ನಡೆಸಿದ 6 ಜನರ ಸೆರೆ, ಮಹಿಳೆ ಕೊಲೆ ಯತ್ನಿಸಿದ ನಾಲ್ವರನ್ನು ಬಂಧಿಸಿದ ಪೊಲೀಸರು
ಹುಬ್ಬಳ್ಳಿ ನಗರದಲ್ಲಿ ನಡೆದ ಪ್ರತ್ಯೇಕ ಪ್ರಕರಣದಲ್ಲಿ ತ್ವರಿತವಾಗಿಯೇ ವಿಚಾರಣೆ ನಡೆಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಪ್ರಕರಣಗಳ ವಿವರ ಇಲ್ಲಿದೆ.
ಹುಬ್ಬಳ್ಳಿ : ಹುಬ್ಬಳ್ಳಿ ಸ್ಟೇಶನ್ ರಸ್ತೆಯ ಚಂದ್ರಕಲಾ ಟಾಕೀಸ್ ಹತ್ತಿರದ ಚಿಕನ್ ಪೌಲ್ಟ್ರಿ ಅಂಗಡಿಗೆ ನುಗ್ಗಿ ಅಂಗಡಿಯಲ್ಲಿದ್ದವರಿಗೆ ಚಾಕು ತೋರಿಸಿ ಹೆದರಿಸಿ ಅವರ ಬಳಿ ಇದ್ದ 5000 ರೂ. ನಗದು ಹಣವನ್ನು ದೋಚಿದ್ದ ಆರು ಜನರನ್ನು ಶಹರ ಪೊಲೀಸರು ಬಂಧಿಸಿದ್ದಾರೆ. ದರೋಡೆ ಮಾಡಿಕೊಂಡು ಹೋಗಿದ್ದರ ಬಗ್ಗೆ ಶಹರ ಠಾಣೆಯಲ್ಲಿ ದೂರು ದಾಖಲಾದ ಬೆನ್ನ ಹಿಂದೆಯೇ ಆರೋಪಿಗಳನ್ನು ಪತ್ತೆಹಚ್ಚಲು ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ತಹಶೀಲ್ದಾರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.
ತಂಡವು ಆರೋಪಿಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಮೊಹಮ್ಮದ್ ಫಹದ್ ಮಿಠಾಯಿಗಾರ್, ಅಯ್ಯು ಬೇಪಾರಿ, ಖಾಜಾ ಭಾಷಾ ಮುಲ್ಲಾ, ಶಿವಾಜಿ ಮದ್ರಾಸಿ, ಮುಬಾರಕ್ ಮಂಚಿನಕೊಪ್ಪ,ಅಬ್ಬು ಮನಿಯಾರ್ ಎಂಬ ಆರು ಜನ ಆರೋಪಿತರನ್ನು ಬಂಧಿಸಿದೆ.
ಬಂಧಿತರಿಂದ ಕೃತಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನ ಹಾಗೂ ಒಂದು ಚಾಕು,ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಬಂಧಿತ ಆರು ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಹುಬ್ಬಳ್ಳಿಯಲ್ಲಿ ಅಪರಾಧ ಪ್ರಕರಣ ನಡೆದಾಗ ನಿಖರ ಮಾಹಿತಿಯನ್ನು ಕೂಡಲೇ ಪೊಲೀಸರಿಗೆ ನೀಡಬೇಕು. ಸೂಕ್ತ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಕೈಗೊಳ್ಳುತ್ತಾರೆ. ಇದರಿಂದ ಮುಂದೆ ಇಂತಹ ಪ್ರಕರಣ ಮರುಕಳುಹಿಸುವುದನ್ನು ತಪ್ಪಿಸಬಹುದು ಎಂಬುದು ಪೊಲೀಸರ ಮನವಿ.
ನಾಲ್ವರು ಆರೋಪಿಗಳು ಅರೆಸ್ಟ್
ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬ್ಯಾಂಕರ್ಸ್ ಕಾಲೊನಿಯಲ್ಲಿ ಬುಧವಾರ ಮಧ್ಯಾಹ್ನ ಮಹಿಳೆಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ನಾಲ್ಕು ಜನ ಆರೋಪಿತರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಹೆಗ್ಗೇರಿಯ ಅಭಿಷೇಕ ಬಿಲಾನಾ ಎಂಬ ಯುವಕ ಬ್ಯಾಂಕರ್ಸ್ ಕಾಲೋನಿಯಲ್ಲಿನ ಪಲ್ಲವಿ ಹಾಗೂ ಸುವರ್ಣಾ ಎಂಬ ಇಬ್ಬರು ಮಹಿಳೆಯರಿಗೆ ಫೈನಾನ್ಸ್ ಮಾಡಿದ್ದು, ಈ ನಡುವೆ ಸುವರ್ಣಾ ಎಂಬ ಮಹಿಳೆಯ ಜೊತೆ ಅಭಿಷೇಕ್ ಅತಿಯಾದ ಸಲುಗೆ ಸ್ನೇಹ ಬೆಳೆದಿತ್ತು.
ಹೀಗಾಗಿ ಇವರಿಬ್ಬರ ವಿಚಾರವನ್ನು ಹಲ್ಲೆಗೊಳಗಾದ ಪಲ್ಲವಿ ಸುವರ್ಣಾಳ ಮನೆಯವರಿಗೆ ತಿಳಿಸಿದ್ದು, ಪಲ್ಲವಿಗೆ ಬುದ್ದಿ ಕಲಿಸಬೇಕು ಎಂದು ಸುವರ್ಣಾ ಹಾಗೂ ಅಭಿಷೇಕ್ ಸಂಚು ರೂಪಿಸಿದ್ದರು.
ತನ್ನ ಇಬ್ಬರು ಸ್ನೇಹಿತರಾದ ಅಭಿಷೇಕ ಹಾಗೂ ಪ್ರಜ್ವಲ್ ಎಂಬುವರಿಂದ ಮಚ್ಚನ್ನು ತರಿಸಿ ಪಲ್ಲವಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಪ್ರಯತ್ನಿಸಿದ ಘಟನೆ ನಡೆದಿತ್ತು.
ಘಟನೆಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದ್ದು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸುರೇಶ ಯಳ್ಳೂರ ನೇತೃತ್ವದ ತಂಡ ತನಿಖೆ ನಡೆಸಿತ್ತು.
ಪ್ರಕರಣದ ಆರೋಪಿಗಳಾದ ಅಭಿಷೇಕ್ ಬಿಲಾನಾ, ಸುವರ್ಣ ಜರೆ, ಅಭಿಷೇಕ್ ಶಿಕ್ಕಲಿಗಾರ್, ಪ್ರಜ್ವಲ್ ಘೋಡಕೆ ಎಂಬ ನಾಲ್ವರನ್ನೂ ವಶಕ್ಕೆ ಪಡೆದಿದೆ ಎಂದು ಪೊಲೀಸ್ ಆಯುಕ್ತ ಎನ್ .ಶಶಿಕುಮಾರ ತಿಳಿಸಿದ್ದಾರೆ.