ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧು ಆಸ್ತಿ ಮೌಲ್ಯ ಎಷ್ಟು; ಇವರು ವಿಶ್ವದ ಶ್ರೀಮಂತ ಮಹಿಳಾ ಕ್ರೀಡಾಪಟು
ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಹೊಂದಿರುವ ಮಹಿಳಾ ಅಥ್ಲೀಟ್‌ಗಳಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಕೂಡಾ ಒಬ್ಬರು. ಪಿವಿ ಸಿಂಧು ಅವರ ಗಳಿಕೆಯು ಸುಮಾರು 7.1 ಮಿಲಿಯನ್ ಯುಎಸ್ ಡಾಲರ್ ಆಗಿದೆ. ಆಟದ ಜೊತೆಗೆ ವಿವಿಧ ಬ್ರಾಂಡ್‌ಗಳೊಂದಿಗೆ ಸಿಂಧು ಒಪ್ಪಂದ ಮಾಡಿಕೊಂಡಿದ್ದಾರೆ.
ಎರಡು ಬಾರಿ ಒಲಿಂಪಿಕ್ ಪದಕ ಗೆದ್ದಿರುವ ಭಾರತದ ಜನಪ್ರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು, ಶೀಘ್ರದಲ್ಲೇ ಹೊಸ ಬದುಕು ಆರಂಭಿಸಲಿದ್ದಾರೆ. 29 ವರ್ಷದ ಸ್ಟಾರ್ ಆಟಗಾರ್ತಿ ಹೈದರಾಬಾದ್‌ನ ಉದ್ಯಮಿ ವೆಂಕಟ್ ದತ್ತ ಸಾಯಿ ಅವರೊಂದಿಗೆ ಮದುವೆಯಾಗಲಿದ್ದಾರೆ. ಡಿಸೆಂಬರ್ 22ರಂದು ಉದಯಪುರದಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಸಿಂಧು ಅವರ ಭಾವಿ ಪತಿ ವೆಂಕಟ್, ಪೋಸಿಡೆಕ್ಸ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಇತ್ತೀಚೆಗಷ್ಟೇ ಸೈಯದ್ ಮೋದಿ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಪಿವಿ ಸಿಂಧು ಪ್ರಶಸ್ತಿ ಗೆದ್ದಿದ್ದಾರೆ. 2016ರ ರಿಯೊ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದ ಸಿಂಧು, 2019ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕ್ರೀಡಾಕ್ಷೇತ್ರದಲ್ಲಿ ಹಲವು ದಾಖಲೆಗಳನ್ನು ಮಾಡಿ, ಭಾರತದ ಸ್ಟಾರ್ ಕ್ರೀಡಾಪಟುಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಅಲ್ಲದೆ ಹಲವು ಬ್ರಾಂಡ್‌ಗಳ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಸಿಂಧು ಅವರ ಆದಾಯ ಕೂಡಾ ದೊಡ್ಡ ಮೊತ್ತದಲ್ಲಿದೆ. ಅವರ ಸಂಭಾವನೆ, ಒಟ್ಟಾರೆ ಆಸ್ತಿ ಮೌಲ್ಯ ಎಷ್ಟಿದೆ ಎಂಬುದನ್ನು ನೋಡೋಣ.
ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಅಥ್ಲೀಟ್‌ಗಳಲ್ಲಿ ಪಿವಿ ಸಿಂಧು ಕೂಡಾ ಒಬ್ಬರು. ಫೋರ್ಬ್ಸ್ ವರದಿಯ ಪ್ರಕಾರ, ಪಿವಿ ಸಿಂಧು ಅವರ ಗಳಿಕೆಯು ಸುಮಾರು 7.1 ಮಿಲಿಯನ್ ಯುಎಸ್ ಡಾಲರ್ ಆಗಿದೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಹೇಳುವುದಾದರೆ ಸುಮಾರು 60 ಕೋಟಿ ರೂಪಾಯಿಗಳು.
2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ನಂತರ, ಸಿಂಧು ಬ್ರಾಂಡ್ ವ್ಯಾಲ್ಯೂ ಹೆಚ್ಚಾಯಿತು. ಅವರ ಗಳಿಕೆ ಕಳೆದ ಕೆಲವು ವರ್ಷಗಳಿಂದ ತುಸು ಇಳಿಕೆಯಾಗಿದೆ. 2018 ರಲ್ಲಿ 8.5 ಮಿಲಿಯನ್ ಡಾಲರ್, 2019 ರಲ್ಲಿ 5.5 ಮಿಲಿಯನ್, 2021 ರಲ್ಲಿ 7.2 ಮಿಲಿಯನ್ ಮತ್ತು 2022-2023 ರಲ್ಲಿ 7.1 ಮಿಲಿಯನ್ ಡಾಲರ್ ಆಗಿದೆ.
ಬ್ರಾಂಡ್‌ಗಳ ಜೊತೆ ಒಪ್ಪಂದ
ಬ್ಯಾಡ್ಮಿಂಟನ್ ಹೊರತಾಗಿ, ಪಿವಿ ಸಿಂಧು ಅವರ ಆದಾಯದ ಮೂಲವೆಂದರೆ ಬ್ರ್ಯಾಂಡ್ ಒಪ್ಪಂದಗಳು ಮತ್ತು ಹೂಡಿಕೆ. 2019ರಲ್ಲಿ, ಅವರು ಚೈನೀಸ್ ಕ್ರೀಡಾ ಉತ್ಪನ್ನ ಕಂಪನಿ ಲಿ ನಿಂಗ್ ಜೊತೆಗೆ 50 ಕೋಟಿ ರೂಪಾಯಿ ಮೌಲ್ಯದ ನಾಲ್ಕು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದರು.
ಸಿಂಧು ಅವರು ಬ್ಯಾಂಕ್ ಆಫ್ ಬರೋಡಾ, ಮೇಬೆಲಿನ್ ಮುಂತಾದ ಅನೇಕ ಪ್ರಸಿದ್ಧ ಬ್ರಾಂಡ್‌ಗಳೊಂದಿಗೆ ಒಪ್ಪಂದ ಮಾಡಿದ್ದಾರೆ. ಇದೇ ವೇಳೆ ಏಷ್ಯನ್ ಪೇಂಟ್ಸ್ ಮತ್ತು ಇತರ ಬ್ರಾಂಡ್‌ಗಳಿಗೆ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಸಿಂಧು ಅವರ ಗಳಿಕೆಯಲ್ಲಿ ಬ್ರಾಂಡ್ ಅನುಮೋದನೆಗಳದ್ದೇ ಸಿಂಹಪಾಲು. ಹೈದರಾಬಾದ್‌ನಲ್ಲಿ ಐಷಾರಾಮಿ ಮನೆಯೂ ಸಿಂಧು ಅವರಿಗೆ ಇದೆ.
ಐಷಾರಾಮಿ ಕಾರುಗಳ ಸಂಗ್ರಹ
ಇದಲ್ಲದೆ ಪಿವಿ ಸಿಂಧು ಬಳಿ ಹಲವು ಐಷಾರಾಮಿ ಕಾರುಗಳಿವೆ. BMW X5, BMW 320D ಹೊಂದಿದ್ದಾರೆ. ಈ ಕಾರನ್ನು ಅವರಿಗೆ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಉಡುಗೊರೆಯಾಗಿ ನೀಡಿದ್ದಾರೆ. ಇದೇ ವೇಳೆ ಮಹೀಂದ್ರ ಥಾರ್ ಕಾರನ್ನು ಆನಂದ್ ಮಹೀಂದ್ರ ಉಡುಗೊರೆಯಾಗಿ ನೀಡಿದ್ದಾರೆ.
ಇದುವರೆಗೆ ಎರಡು ಒಲಿಂಪಿಕ್ಸ್ ಪದಕಗಳನ್ನು ಪಿವಿ ಸಿಂಧು ಗೆದ್ದಿದ್ದಾರೆ. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಮತ್ತು 2019ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಸತತ ಎರಡು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.