Year in Review: 2024ರಲ್ಲಿ ಭಾರತೀಯರು ಹುಡುಕಿದ ಮಾಡಿದ ಟಾಪ್ 10 ಪ್ರವಾಸಿ ತಾಣಗಳಿವು; ಮನಾಲಿಯಿಂದ ಬಾಲಿವರೆಗೆ
ಕನ್ನಡ ಸುದ್ದಿ  /  ಜೀವನಶೈಲಿ  /  Year In Review: 2024ರಲ್ಲಿ ಭಾರತೀಯರು ಹುಡುಕಿದ ಮಾಡಿದ ಟಾಪ್ 10 ಪ್ರವಾಸಿ ತಾಣಗಳಿವು; ಮನಾಲಿಯಿಂದ ಬಾಲಿವರೆಗೆ

Year in Review: 2024ರಲ್ಲಿ ಭಾರತೀಯರು ಹುಡುಕಿದ ಮಾಡಿದ ಟಾಪ್ 10 ಪ್ರವಾಸಿ ತಾಣಗಳಿವು; ಮನಾಲಿಯಿಂದ ಬಾಲಿವರೆಗೆ

2024ರ ಗೂಗಲ್ ಸರ್ಚ್ ಪ್ರಕಾರ ಭಾರತದಾದ್ಯಂತ ಜನರು ಹುಡುಕಿರುವ ಟಾಪ್ 10 ಪ್ರವಾಸಿ ತಾಣಗಳ ಪಟ್ಟಿ ಇಲ್ಲಿದೆ. ಬಾಲಿಯಿಂದ ಜೈಪುರದವರೆಗೆ ಭಾರತೀಯರು ಭಾರತೀಯ ಪ್ರವಾಸಿ ತಾಣಗಳ ಜೊತೆಗೆ ಹೆಚ್ಚು ವಿದೇಶಿ ತಾಣಗಳನ್ನು ಹುಡುಕಿದ್ದಾರೆ. 2025ರಲ್ಲಿ ನೀವು ಪ್ರವಾಸಕ್ಕೆ ಹೋಗುವ ಪ್ಲಾನ್‌ ಇದ್ದರೆ ಗಮನಿಸಿ, ಈ ತಾಣಗಳನ್ನು ನೀವೂ ಒಮ್ಮೆಯಾದರೂ ನೋಡಿಬನ್ನಿ.

2024ರಲ್ಲಿ ಭಾರತೀಯರು ಹುಡುಕಿದ ಮಾಡಿದ ಟಾಪ್ 10 ಪ್ರವಾಸಿ ತಾಣಗಳು
2024ರಲ್ಲಿ ಭಾರತೀಯರು ಹುಡುಕಿದ ಮಾಡಿದ ಟಾಪ್ 10 ಪ್ರವಾಸಿ ತಾಣಗಳು

ವರ್ಷಾಂತ್ಯ ಅಥವಾ ಹೊಸ ವರ್ಷದ ಸಂದರ್ಭದಲ್ಲಿ ಪ್ರವಾಸ ಪ್ಲಾನ್ ಮಾಡುವವರ ಸಂಖ್ಯೆ ಹೆಚ್ಚು. ನೀವು ಈ ವರ್ಷ ಪ್ರವಾಸ ಹೋಗಬೇಕು ಅಂತಿದ್ದರೆ 2024ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಪ್ರವಾಸಿ ತಾಣಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಈ ತಾಣಗಳು ಖಂಡಿತ ನಿಮ್ಮ ಮುಂದಿನ ಡೆಸ್ಟಿನೇಷನ್ ಆದರೆ ಮರೆಯಲಾರದ ಪ್ರವಾಸ ನಿಮ್ಮದಾಗುವುದರಲ್ಲಿ ಅನುಮಾನವಿಲ್ಲ.

ಬಾಲಿಯ ಕಡಲ ತೀರಗಳಿಂದ, ಮನಾಲಿ ಹಿಮ ಹಾಸಿದ ಗುಡ್ಡದವರೆಗೆ ಭಾರತೀಯರು ಹುಡುಕಿದ ಈ ಪ್ರವಾಸಿ ತಾಣಗಳು ಒಂದಕ್ಕಿಂತ ಒಂದು ಸುಂದರವಾಗಿರುವುದು ಸುಳ್ಳಲ್ಲ. ನೀವು ಸೋಲೊ ಟ್ರಿಪ್ ಮಾಡುತ್ತಿರಲಿ, ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗುವುದರಲ್ಲಿ, ಕುಟುಂಬದವರೆಲ್ಲಾ ಎಂಜಾಯ್ ಮಾಡಲು ಹೋಗುವುದಾದರೂ ಈ ತಾಣಗಳು ಬೆಸ್ಟ್ ಅನ್ನಿಸೋದು ಸುಳ್ಳಲ್ಲ.

ಗೂಗಲ್ ಪ್ರಕಾರ ಭಾರತೀಯರು ಹೆಚ್ಚು ಹುಡುಕಿದ ಪ್ರವಾಸಿ ತಾಣಗಳಲ್ಲಿ ವಿದೇಶಿ ತಾಣಗಳ ಜೊತೆಗೆ ಭಾರತದಲ್ಲಿ ಅತ್ಯದ್ಭುತ ಪ್ರವಾಸಿ ತಾಣಗಳು ಸೇರಿರುವುದು ವಿಶೇಷ. ಅಂತಹ ತಾಣಗಳು ಯಾವುವು ನೋಡಿ.

ಅಜೆರ್ಬೈಜಾನ್

ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಆಧುನಿಕ ಸೌಕರ್ಯಗಳ ಅನನ್ಯ ಮಿಶ್ರಣದ ನಗರ ಅಜೆರ್ಬೈಜಾನ್. ಇದು ಕಾರ್ಪೊರೇಟ್ ಆಫ್‌ಸೈಟ್‌ಗಳಿಗೆ ಆಕರ್ಷಕ ಆಯ್ಕೆಯಾಗಿದೆ. ಇದು ಫಾರ್ಮುಲಾ 1 ಗ್ರ್ಯಾಂಡ್ ಪ್ರಿಕ್ಸ್ ಮತ್ತು ಯೂರೋವಿಷನ್ ಸಾಂಗ್ ಕಾಂಟೆಸ್ಟ್‌ನಂತಹ ಪ್ರತಿಷ್ಠಿತ ಈವೆಂಟ್‌ಗಳನ್ನು ಆಯೋಜಿಸಲು ಹೆಸರುವಾಸಿಯಾಗಿದೆ. ಕುದುರೆ ಸವಾರಿಯಿಂದ ಹಿಡಿದು ಮೌಂಟೇನ್ ಜೀಪ್ ಸಫಾರಿಗಳವರೆಗೆ, ದೇಶವು ವೈವಿಧ್ಯಮಯ ಹೊರಾಂಗಣ ಅನುಭವಗಳನ್ನು ನೀಡುತ್ತದೆ. ಇಲ್ಲಿನ ಸಮುದ್ರ ತೀರಗಳಲ್ಲಿ ಕಾಲ ಕಳೆಯುವ ಮಜಾವೇ ಬೇರೆ. ಅಜೆರ್ಬೈಜಾನ್ ಇರುವುದು ಯುರೋಪ್‌ನಲ್ಲಿ.

ಬಾಲಿ

ಇದು ಭಾರತೀಯ ನೆಚ್ಚಿನ ವಿದೇಶಿ ಪ್ರವಾಸಿ ತಾಣ ಎಂದರೂ ತಪ್ಪಾಗಲಿಕ್ಕಿಲ್ಲ. ಭಾರತೀಯರಿಗೆ ಬಾಲಿ ಎಂದರೆ ವಿಶೇಷ ಪ್ರೀತಿ. ಹಿಂದೂ ಸಂಸ್ಕೃತಿ ಹಾಸುಹೊಕ್ಕಾಗಿರುವ ಬಾಲಿಯ ಬಗ್ಗೆ ಭಾರತೀಯರು 2024ರಲ್ಲಿ ಹೆಚ್ಚು ಹುಡುಕಿದ್ದಾರೆ. ಬಾಲಿಯ ಪ್ರಶಾಂತ ಕಡಲತೀರಗಳು ಮತ್ತು ಸಾಂಸ್ಕೃತಿಕ ಅದ್ಭುತಗಳನ್ನು ನೋಡಿಯೇ ಸವಿಯಬೇಕು. ಉಬುಡ್‌ನ ಸೊಂಪಾದ ಅಕ್ಕಿ ಟೆರೇಸ್‌ಗಳ ಮೂಲಕ ಸುತ್ತಾಡಿ, ಪವಿತ್ರ ಮಂಕಿ ಫಾರೆಸ್ಟ್‌ಗೆ ಭೇಟಿ ನೀಡಿಬಹುದು. ಇಲ್ಲಿ ಹಲವು ಹಿಂದೂ ದೇವಾಲಯಗಳೂ ಇವೆ.

ಮನಾಲಿ

ಭೂಲೋಕದ ಸ್ವರ್ಗದಂತಿರುವ ಮನಾಲಿ ಭಾರತದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಚಳಿಗಾಲದಲ್ಲಂತು ಕೈಲಾಸದಂತೆ ಕಾಣುವ ತಾಣವಿದು. ಭಾರತದಲ್ಲೇ ಇರುವ ಈ ತಾಣವನ್ನೂ 2024ರಲ್ಲಿ ಹಲವರು ಹುಡುಕುತ್ತಿದ್ದಾರೆ. ಮನಾಲಿಯ ಹಿಮಚ್ಛಾದಿತ ಪ್ರದೇಶಗಳಲ್ಲಿ ನೀವು ಎಂಜಾಯ್ ಮಾಡಬಹುದು. ಇದರೊಂದಿಗೆ ಇಲ್ಲಿನ ಹಿಂಡಿಬಾ ದೇವಾಲಯಕ್ಕೂ ಭೇಟಿ ನೀಡಬಹುದು. ಪ್ಯಾರಾಗ್ಲೈಡಿಂಗ್ ಮತ್ತು ರಿವರ್ ರಾಫ್ಟಿಂಗ್‌ನಂತಹ ಚಟುವಟಿಕೆಯಲ್ಲೂ ನೀವು ಭಾಗವಹಿಸಬಹುದು.

ಕಝಾಕಿಸ್ತಾನ್

ಟ್ರಾನ್ಸ್-ಇಲಿ ಅಲಾಟೌ ಪರ್ವತ ಶ್ರೇಣಿಯಿಂದ ಗುರುತಿಸಲ್ಪಟ್ಟ ಕಝಾಕಿಸ್ತಾನ್ ಮಧ್ಯ ಏಷ್ಯಾದಲ್ಲಿ ಒಂದು ಆಕರ್ಷಕ ತಾಣವಾಗಿ ಹೊರಹೊಮ್ಮುತ್ತದೆ, ಶ್ರೀಮಂತ ಇತಿಹಾಸ ಮತ್ತು ರೋಮಾಂಚಕ ಸಾಂಸ್ಕೃತಿಕ ದೃಶ್ಯವನ್ನು ಹೊಂದಿರುವ ದೇಶ ಇದಾಗಿದೆ. ಇಲ್ಲಿನ ನೈಸರ್ಗಿಕ ಸೌಂದರ್ಯ ಸವಿಯನ್ನು ಒಮ್ಮೆಯಾದರೂ ನೋಡಲೇಬೇಕು.

ಜೈಪುರ

ಐತಿಹಾಸಿಕ ಕೋಟೆಗಳು, ರಾಜಮನೆತನಗಳು ಮತ್ತು ಸದಾ ಬ್ಯುಸಿಯಾಗಿರುವ ಬೀದಿಗಳು ಈ ಎಲ್ಲವೂ ಜೈಪುರದ ಸಂಕೇತ. ರಾಜಸ್ಥಾನ ರಾಜಮನೆತನಗಳ ಕೋಟೆಗಳು ಮತ್ತು ಅರಮನೆಗಳು ಈ ನಗರ ವೈಭೋಗಕ್ಕೆ ಸಾಕ್ಷಿಯಾಗಿವೆ. ಗಾಳಿಪಟ ಉತ್ಸವ ಮತ್ತು ಜೈಪುರ ಸಾಹಿತ್ಯ ಉತ್ಸವವು ಜನವರಿಯಲ್ಲಿ ನಡೆಯುತ್ತದೆ ಮತ್ತು ಜೈಪುರಕ್ಕೆ ಭೇಟಿ ನೀಡಲು ಇದು ಸೂಕ್ತ ಸಮಯವಾಗಿದೆ.

ಜಾರ್ಜಿಯಾ

ಜಾರ್ಜಿಯಾ ಸುಂದರ ನೈಸರ್ಗಿಕ ಪ್ರದೇಶಗಳನ್ನು ಹೊಂದಿರುವ ದೇಶ. ಯುರೋಪಿಯನ್ ಗೇಟ್‌ವೇಗಾಗಿ ಹುಡುಕುತ್ತಿದ್ದರೆ ನೀವು ಈ ತಾಣವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ರಷ್ಯಾ ಹಾಗೂ ಟರ್ಕಿ ನಡುವೆ ಇರುವ ದೇಶವಾಗಿದೆ. ಹಿಮದಿಂದ ಆವೃತವಾದ ಪರ್ವತಗಳು, ಕಣಿವೆಗಳು ಮತ್ತು ನದಿಗಳ ಸುತ್ತುವರಿದ ಸುಂದರವಾದ ಭೂದೃಶ್ಯಗಳ ಸೊಬಗನ್ನು ಕಣ್ತುಂಬಿಕೊಳ್ಳಲು ನೀವು ಅಲ್ಲಿಗೆ ಭೇಟಿ ನೀಡಬೇಕು.

ಮಲೇಷ್ಯಾ

ಭಾರತೀಯರು ಹೆಚ್ಚಾಗಿ ಪ್ರವಾಸಕ್ಕೆ ತೆರಳುವ ತಾಣಗಳಲ್ಲಿ ಮಲೇಷ್ಯಾ ಕೂಡ ಒಂದು. ಇದು ಕೂಡ ಸುಂದರ ಕಡಲ ತೀರಗಳ ಜೊತೆಗೆ ಸಾಂಸ್ಕೃತಿಕ ವೈಭವವನ್ನು ಹೊಂದಿರುವ ದೇಶವಾಗಿದೆ. ಇಲ್ಲಿನ ಸ್ಥಳೀಯ ಖಾದ್ಯಗಳು, ಸಾಂಪ್ರದಾಯಿಕ ಸಂಗೀತಗಳು ನಿಮ್ಮ ಗಮನ ಸೆಳೆಯುತ್ತವೆ.

ಅಯೋಧ್ಯೆ

2024ರ ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತದೆ. ಅಂದಿನಿಂದ ಅಯೋಧ್ಯೆಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ ಮಾತ್ರವಲ್ಲ. ಭಾರತೀಯರು ಹುಡುಕಿದ ಟಾಪ್ 10 ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ಕೂಡ ಸ್ಥಾನ ಪಡೆದಿದೆ. ಈ ವರ್ಷದ ಮೊದಲ ಆರು ತಿಂಗಳಲ್ಲಿ 11 ಕೋಟಿ ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರವಾಸಿಗರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ.

ಕಾಶ್ಮೀರ

ಭಾರತದ ತುತ್ತ ತುದಿಯಲ್ಲಿರುವ ಕಾಶ್ಮೀರ ಭಾರತೀಯರ ಹಾಟ್ ಫೇವರಿಟ್ ಸರ್ಚ್‌ನಲ್ಲಿ ಜಾಗ ಪಡೆದಿದೆ. ಇಲ್ಲಿನ ದಾಲ್ ಸರೋವರ್‌, ಗುರ್ಲ್ಮಗ್‌ನಂತಹ ತಾಣಗಳಲ್ಲಿ ಸುತ್ತಾಡುವ ಖುಷಿಯೇ ಬೇರೆ. ಸ್ಕೀಯಿಂಗ್, ಸ್ನೋಬೋರ್ಡಿಂಗ್‌, ಗೊಂಡೊಲಾ ಸವಾರಿ ಈ ಎಲ್ಲವೂ ಅದ್ಭುತವಾಗಿರುತ್ತದೆ. ಸಾಂಪ್ರದಾಯಿಕ ಕಾಶ್ಮೀರಿ ಹೌಸ್‌ಬೋಟ್‌ನಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಕಾಶ್ಮೀರದ ಪ್ರಶಾಂತ ವಾತಾವರಣದಲ್ಲಿ ಕಾಲ ಕಳೆಯಬಹುದು.

ದಕ್ಷಿಣ ಗೋವಾ

ಗೋವಾ ಭಾರತೀಯರಿಗೆ ಮಾತ್ರವಲ್ಲ, ವಿದೇಶಿಗರಿಗೂ ಅಚ್ಚುಮೆಚ್ಚು. ಆದರೆ ಈ ಬಾರಿ ಭಾರತೀಯರು ಸೌತ್ ಗೋವಾವನ್ನು ಹೆಚ್ಚು ಹುಡುಕಿದ್ದಾರೆ. ನಾರ್ತ್ ಗೋವಾ ಭಾರತೀಯರಿಗೆ ಹಿಡಿಸಿದಂತೆ ಕಾಣುತ್ತಿಲ್ಲ. ಇಲ್ಲಿಗೆ ಪ್ರವಾಸ ಹೋದರೆ ಇಲ್ಲಿನ ಕಡಲ ತೀರಗಳಲ್ಲಿ ನಲಿದಾಡುವ ಜೊತೆಗೆ ಸ್ಥಳೀಯ ಆಹಾರ ಪದ್ಧತಿಗಳ ಸ್ವಾದವನ್ನೂ ಸವಿದು ಬರಬಹುದು.

Whats_app_banner