Gautam Gambhir: 'ಆಟಗಾರರು ಚೆನ್ನಾಗಿ ಆಡದಿದ್ದರೆ ಅವರನ್ನೇ ದೂರಿ, ಐಪಿಎಲ್ ಮೇಲೆ ಬೊಟ್ಟು ಮಾಡಬೇಡಿ'
ಐಪಿಎಲ್ ಮೇಲೆ ಬೆರಳು ತೋರಿಸುತ್ತಿರುವುದು ನಿಜಕ್ಕೂ ಅನ್ಯಾಯ ಎಂದು ಗಂಭೀರ್ ಹೇಳಿದ್ದಾರೆ. ಭಾರತವು ಐಸಿಸಿ ಈವೆಂಟ್‌ಗಳಲ್ಲಿ ವಿಫಲವಾದರೆ, ಅದಕ್ಕೆ ಆಟಗಾರರು ಮತ್ತು ಅವರ ಪ್ರದರ್ಶನವೇ ಕಾರಣ. ಅದು ಬಿಟ್ಟು ಐಪಿಎಲ್ ಮೇಲೆ ಬೊಟ್ಟು ಮಾಡಿ ತೋರಿಸುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಭಾರತ ತಂಡವು ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋತು ನಿರ್ಗಮಿಸಿದ ಬಳಿಕ, ತಂಡದ ಆಟಗಾರರ ಬಗ್ಗೆ ವ್ಯಾಪಕ ಟೀಕೆ ಕೇಳಿಬಂದಿದೆ. ಭಾರತದ ಆಟಗಾರರು ಕೆಲವು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಹೋಲಿಸಿದರೆ, ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದು ಟೀಕಿಸಲಾಗುತ್ತಿದೆ. ಅಲ್ಲದೆ ಐಪಿಎಲ್ ಪ್ರಾರಂಭವಾದಾಗಿನಿಂದ ಭಾರತ ಎಂದಿಗೂ ಟಿ20 ವಿಶ್ವಕಪ್ ಗೆದ್ದಿಲ್ಲ ಎಂದು ವಾಸಿಂ ಅಕ್ರಂ ಅವರಂತಹ ಹಿರಿಯ ಕ್ರಿಕೆಟಿಗರು ಆರೋಪಿಸಿದ್ದಾರೆ.
ಇನ್ನೊಂದೆಡೆ ಭಾರತದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಸೇರಿದಂತೆ ಇನ್ನೂ ಕೆಲವರು, ಕೆಲಸದ ನಿರ್ವಹಣೆಯ ಭಾಗವಾಗಿ ಅಂತಾರಾಷ್ಟ್ರೀಯ ಸರಣಿಗಳನ್ನು ಕೈಬಿಟ್ಟು ಐಪಿಎಲ್‌ನಲ್ಲಿ ಆಡುವ ಆಟಗಾರರನ್ನು ಟೀಕಿಸಿದ್ದಾರೆ. ಆದರೆ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಈ ಎಲ್ಲಾ ಟೀಕಾಕಾರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
FICCI ಯ TURF2022 ಮತ್ತು ಇಂಡಿಯಾ ಸ್ಪೋರ್ಟ್ಸ್ ಅವಾರ್ಡ್ಸ್‌ನಲ್ಲಿ ಮಾತನಾಡಿದ ಭಾರತದ ಮಾಜಿ ಆಟಗಾರ ಗಂಭೀರ್, ಭಾರತೀಯ ಕ್ರಿಕೆಟ್‌ನಲ್ಲೇ ಅತ್ಯುತ್ತಮ ವಿಷಯವೆಂದು ಭಾವಿಸಲಾದ ಐಪಿಎಲ್ ಮೇಲೆ ಬೆರಳು ತೋರಿಸುತ್ತಿರುವುದು ನಿಜಕ್ಕೂ ಅನ್ಯಾಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತವು ಐಸಿಸಿ ಈವೆಂಟ್‌ಗಳಲ್ಲಿ ವಿಫಲವಾದರೆ, ಅದಕ್ಕೆ ಆಟಗಾರರು ಮತ್ತು ಅವರ ಪ್ರದರ್ಶನವೇ ಕಾರಣ. ಅದು ಬಿಟ್ಟು ಐಪಿಎಲ್ ಮೇಲೆ ಬೊಟ್ಟು ಮಾಡಿ ತೋರಿಸುವುದು ಸರಿಯಲ್ಲ ಎಂದು ಗಂಭೀರ್ ಆಕ್ರೋಶ ಹೊರಹಾಕಿದ್ದಾರೆ.
“ಐಪಿಎಲ್ ಭಾರತೀಯ ಕ್ರಿಕೆಟ್‌ನಲ್ಲಿ ಸಂಭವಿಸಿದ ಅತ್ಯುತ್ತಮ ವಿಷಯ. ನಾನು ಇದನ್ನು ನನ್ನ ಎಲ್ಲಾ ಇಂದ್ರಿಯಗಳೊಂದಿಗೆ ಹೇಳಬಲ್ಲೆ. ಐಪಿಎಲ್ ಆರಂಭವಾದಾಗಿನಿಂದ ಇದರ ಬಗ್ಗೆ ಸಾಕಷ್ಟು ಟೀಕೆ ಟಿಪ್ಪಣಿಗಳು ಕೇಳಿಬಂದಿವೆ. ಪ್ರತಿ ಬಾರಿ ಭಾರತೀಯ ಕ್ರಿಕೆಟ್ ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ, ಐಪಿಎಲ್ ಮೇಲೆ ಆರೋಪ ಬರುತ್ತದೆ. ಐಸಿಸಿ ಪಂದ್ಯಾವಳಿಗಳಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡದಿದ್ದರೆ ಆಟಗಾರರನ್ನು ದೂಷಿಸಿ, ಅವರ ಪ್ರದರ್ಶನವನ್ನು ದೂಷಿಸಿ. ಅದು ಬಿಟ್ಟು ಐಪಿಎಲ್ ಮೇಲೆ ಬೆರಳು ತೋರಿಸುವುದು ಸರಿಯಲ್ಲ” ಎಂದು ಗಂಭೀರ್ ಹೇಳಿದ್ದಾರೆ.
ಎರಡು ಬಾರಿಯ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಗಂಭೀರ್, ಕಳೆದ ಎರಡು ವರ್ಷಗಳಿಂದ ಭಾರತ ತಂಡವನ್ನು ಮುನ್ನಡೆಸಲು ಭಾರತೀಯ ತರಬೇತುದಾರರನ್ನೇ ನೇಮಿಸಿಕೊಂಡಿದ್ದಕ್ಕಾಗಿ ಬಿಸಿಸಿಐ ಅನ್ನು ಶ್ಲಾಘಿಸಿದ್ದಾರೆ. ಇದರೊಂದಿಗೆ ಐಪಿಎಲ್‌ಗೂ ಹೆಚ್ಚಿನ ಭಾರತೀಯ ತರಬೇತುದಾರರನ್ನು ಕರೆತರುವ ಅಗತ್ಯವನ್ನು ಮತ್ತಷ್ಟು ಒತ್ತಿ ಹೇಳಿದ್ದಾರೆ.
“ಭಾರತೀಯ ಕ್ರಿಕೆಟ್‌ನಲ್ಲಿ ಸಂಭವಿಸಿದ ಒಂದು ಒಳ್ಳೆಯ ವಿಷಯವೆಂದರೆ ಭಾರತೀಯರೇ ಈಗ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ತರಬೇತಿ ನೀಡುತ್ತಿದ್ದಾರೆ. ಭಾರತೀಯರು ಭಾರತ ತಂಡಕ್ಕೆ ತರಬೇತಿ ನೀಡಬೇಕು ಎಂದು ನಾನು ಬಲವಾಗಿ ನಂಬುತ್ತೇನೆ. ಈ ಹಿಂದೆ ವಿದೇಶಿ ತರಬೇತುದಾರರಿಗೆ ನಾವು ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇವೆ. ಅವರೆಲ್ಲಾ ಭಾರತಕ್ಕೆ ಬಂದು ಹಣ ಸಂಪಾದಿಸಿ ಮಾಯವಾಗುತ್ತಾರೆ. ಕ್ರೀಡೆಯಲ್ಲಿ ಭಾವನೆಗಳು ಮುಖ್ಯ. ಭಾರತೀಯ ಕ್ರಿಕೆಟ್ ಬಗ್ಗೆ ಭಾವುಕರಾಗಲು ಸಾಧ್ಯವಿರುವುದು ನಮ್ಮ ದೇಶವನ್ನು ಪ್ರತಿನಿಧಿಸಿರುವವರಿಗೆ ಮಾತ್ರ” ಎಂದು ಗಂಭೀರ್ ಹೇಳಿದ್ದಾರೆ.
“ನಾನು ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್. ನಾನು ಎಲ್ಲಾ ಐಪಿಎಲ್ ತಂಡಗಳಲ್ಲಿ ಭಾರತೀಯ ಕೋಚ್‌ಗಳನ್ನು ನೋಡಲು ಬಯಸುತ್ತೇನೆ. ಏಕೆಂದರೆ ಯಾವುದೇ ಭಾರತೀಯ ಕೋಚ್‌ಗೆ ಬಿಗ್ ಬ್ಯಾಷ್ ಅಥವಾ ಇತರ ಯಾವುದೇ ವಿದೇಶಿ ಲೀಗ್‌ಗಳಲ್ಲಿ ಅವಕಾಶ ಸಿಗುವುದಿಲ್ಲ. ಭಾರತ ಕ್ರಿಕೆಟ್‌ನಲ್ಲಿ ಸೂಪರ್ ಪವರ್. ಆದರೆ ನಮ್ಮ ತರಬೇತುದಾರರಿಗೆ ಎಲ್ಲಿಯೂ ಅವಕಾಶ ಸಿಗುವುದಿಲ್ಲ. ಎಲ್ಲಾ ವಿದೇಶಿಗರು ಇಲ್ಲಿಗೆ ಬಂದು ಉನ್ನತ ಉದ್ಯೋಗಗಳನ್ನು ಪಡೆಯುತ್ತಾರೆ. ಹೀಗಾಗಿ ನಾವು ನಮ್ಮ ದೇಶದ ಜನರಿಗೆ ಹೆಚ್ಚಿನ ಅವಕಾಶವನ್ನು ನೀಡಬೇಕಾಗಿದೆ,” ಎಂದು ಅವರು ಹೇಳಿದರು.