ಪ್ಯಾರಾ ಒಲಿಂಪಿಕ್ಸ್​​ನಲ್ಲಿ ಚೊಚ್ಚಲ ಚಿನ್ನ ಗೆದ್ದ ಭಾರತ; ಸತತ 2ನೇ ಬಂಗಾರ ಜಯಿಸಿ ದಾಖಲೆ ಬರೆದ ಅವನಿ ಲೇಖರಾ-gold for india avani lekhara becomes first indian woman to win two gold medals at paralympics prs ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಾ ಒಲಿಂಪಿಕ್ಸ್​​ನಲ್ಲಿ ಚೊಚ್ಚಲ ಚಿನ್ನ ಗೆದ್ದ ಭಾರತ; ಸತತ 2ನೇ ಬಂಗಾರ ಜಯಿಸಿ ದಾಖಲೆ ಬರೆದ ಅವನಿ ಲೇಖರಾ

ಪ್ಯಾರಾ ಒಲಿಂಪಿಕ್ಸ್​​ನಲ್ಲಿ ಚೊಚ್ಚಲ ಚಿನ್ನ ಗೆದ್ದ ಭಾರತ; ಸತತ 2ನೇ ಬಂಗಾರ ಜಯಿಸಿ ದಾಖಲೆ ಬರೆದ ಅವನಿ ಲೇಖರಾ

Avani Lekhara: ಪ್ಯಾರಿಸ್ ಒಲಿಂಪಿಕ್ಸ್​​ 2024 ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್ ಫೈನಲ್​​ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ಅವನಿ ಲೆಖರಾ ಅವರು ದಾಖಲೆ ಬರೆದಿದ್ದಾರೆ.

ಸತತ 2ನೇ ಬಂಗಾರ ಜಯಿಸಿ ದಾಖಲೆ ಬರೆದ ಅವನಿ ಲೇಖರಾ
ಸತತ 2ನೇ ಬಂಗಾರ ಜಯಿಸಿ ದಾಖಲೆ ಬರೆದ ಅವನಿ ಲೇಖರಾ

ಪ್ಯಾರಿಸ್​​​ನಲ್ಲಿ ನಡೆಯುತ್ತಿರುವ 2024ರ​ ಪ್ಯಾರಾ ಒಲಿಂಪಿಕ್ಸ್​​​ನಲ್ಲಿ ಭಾರತ ಮೊದಲ ಚಿನ್ನದ ಪದಕ ಗೆದ್ದುಕೊಂಡಿದೆ. ಮಹಿಳೆಯರ 10 ಮೀಟರ್ ಏರ್​ರೈಫಲ್​ನಲ್ಲಿ ಅವನಿ ಲೇಖರಾ ಅವರು ಐತಿಹಾಸಿಕ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಅವರಿಗೆ ಸತತ 2ನೇ ಪ್ಯಾರಾ ಒಲಿಂಪಿಕ್ಸ್​​ ಬಂಗಾರದ ಪದಕವಾಗಿದೆ. ಟೊಕಿಯೊದಲ್ಲಿ ನಡೆದಿದ್ದ ಮೆಗಾ ಈವೆಂಟ್​ನಲ್ಲೂ ಗೋಲ್ಡ್​ ಮೆಡಲ್ ಗೆದ್ದಿದ್ದರು.

ಚಿನ್ನ ಗೆಲ್ಲುವುದರ ಜೊತೆಗೆ ಪ್ಯಾರಾ ಒಲಿಂಪಿಕ್ಸ್​​ನಲ್ಲಿ ತಮ್ಮದೇ ಆದ ದಾಖಲೆಯನ್ನು ಮುರಿದಿದ್ದಾರೆ. ಪ್ರಸ್ತುತ ಟೂರ್ನಿಯಲ್ಲಿ 249.7 ಅಂಕ ಗಳಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದುಕೊಂಡು ಕಳೆದ ಬಾರಿ ಟೂರ್ನಿಯಲ್ಲಿ ತಾನು ದಾಖಲಿಸಿದ್ದ ದಾಖಲೆ ಬ್ರೇಕ್ ಮಾಡಿದ್ದಾರೆ. ಟೊಕಿಯೊ ಪ್ಯಾರಾ ಒಲಿಂಪಿಕ್ಸ್​​ನಲ್ಲಿ 249.6 ಅಂಕ ಗಳಿಸಿ ಬಂಗಾರ ಜಯಿಸಿದ್ದರು. ಈಗ ಈ ದಾಖಲೆಯನ್ನು ಪುಡಿಗಟ್ಟಿದ್ದಾರೆ.

ಇದೇ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ ಭಾರತದ ಮತ್ತೋರ್ವ ಪ್ಯಾರಾ ಶೂಟರ್​ ಮೋನಾ ಅಗರ್ವಾಲ್ ಅವರು ಕಂಚಿನ ಪದಕ ಗೆದ್ದಿದ್ದಾರೆ. ಮೋನಾ ಅವರು 228.7 ಅಂಕ ಗಳಿಸಿದ್ದಾರೆ. ಸೌತ್ ಕೊರಿಯಾದ ಲಿ ಯುನ್ರಿ ಅವರು 246.8 ಅಂಕ ಪಡೆಯುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಒಲಿಂಪಿಕ್ಸ್​​​ನಲ್ಲಿ ಭಾರತ ಒಂದೇ ಒಂದು ಚಿನ್ನ ಗೆಲ್ಲಲು ವಿಫಲವಾಗಿತ್ತು.

ಫೈನಲ್​ ಪಂದ್ಯಕ್ಕೂ ಮುನ್ನ ಮಹಿಳೆಯರ 10 ಮೀಟರ್​ ಏರ್​​ರೈಫಲ್ ಫೈನಲ್ ಅರ್ಹತಾ ಸುತ್ತಿನಲ್ಲಿ 625.8 ಅಂಕ ಕಲೆ ಹಾಕಿದ್ದ ಅವನಿ ಎರಡನೇ ಸ್ಥಾನ ಪಡೆದಿದ್ದರು. ಆ ಮೂಲಕ ಫೈನಲ್​ಗೇರಿದ್ದರು. ಅವರಂತೆ ಮತ್ತೋರ್ವ ಶೂಟರ್​ ಮೋನಾ ಅವರು ಕ್ವಾಲಿಫಿಕೇಷನ್ ರೌಂಡ್​ನಲ್ಲಿ 5ನೇ ಸ್ಥಾನ ಪಡೆದಿದ್ದರು. ಫೈನಲ್​ಗೇರಿದ್ದ ಭಾರತದ ಇಬ್ಬರೂ ಸಹ ಪದಕ ಗೆಲ್ಲಲು ಯಶಸ್ವಿಯಾಗಿದ್ದಾರೆ.

12ನೇ ವಯಸ್ಸಲ್ಲೇ ಕಾರು ಅಪಘಾತ

ಚಿನ್ನದ ಪದಕ ಗೆದ್ದಿರುವ ಅವನಿ ಲೇಖರಾ ಅವರು ರಾಜಸ್ಥಾನದ ಜೈಪುರದವರು. 2012ರಲ್ಲಿ ಕಾರು ಅಪಘಾತದಲ್ಲಿ ಅವನಿ ಅವರು ಗಂಭೀರ ಗಾಯಗೊಂಡಿದ್ದರು. ಇದರಿಂದ ಅವರು ಪಾರ್ಶ್ವವಾಯುಗೆ ತುತ್ತಾದರು. ಅಂದು ಅವರ ವಯಸ್ಸು 12 ವರ್ಷ. ಆ ಬಳಿಕ ಶೂಟಿಂಗ್​ನಲ್ಲಿ ನಿರತರಾದರು. ಅದನ್ನೇ ವೃತ್ತಿಯನ್ನಾಗಿಸಿಕೊಂಡರು. 2015ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಚಾಂಪಿಯನ್​ಶಿಪ್​​ನಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ ಅವರು ನಡೆದಿದ್ದೇ ದಾರಿ.

22 ವರ್ಷದ ಅವನಿ ತನ್ನ ಮೂರನೇ ಪ್ಯಾರಾಲಿಂಪಿಕ್ಸ್ ಪದಕ ಮತ್ತು ಎರಡನೇ ಚಿನ್ನದೊಂದಿಗೆ ಹಲವು ದಾಖಲೆಗಳನ್ನು ಬರೆದಿದ್ದಾರೆ. ಬ್ಯಾಕ್-ಟು-ಬ್ಯಾಕ್ ಪ್ಯಾರಾಲಿಂಪಿಕ್ ಈವೆಂಟ್‌ಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಪುರುಷ ಅಥವಾ ಮಹಿಳೆ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಅವನಿ 2 ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಗಮನಾರ್ಹ ಸಾಧನೆಯನ್ನು ಸಾಧಿಸಿದ ದಂತಕಥೆ ದೇವೇಂದ್ರ ಜಜಾರಿಯಾ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಅವನಿ 2024ರ ಟೊಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಕಂಚಿನ ಪದಕ ಗೆದ್ದರು. ಈಗ ತನ್ನ ಮೂರನೇ ಪದಕದೊಂದಿಗೆ ಭಾರತಕ್ಕೆ ಹೆಚ್ಚು ಪದಕ ಜಯಿಸಿದ ಜಜಾರಿಯಾ ಅವರ ಸಾರ್ವಕಾಲಿಕ ದಾಖಲೆ ಸರಿಗಟ್ಟಿದ್ದಾರೆ.

ಪ್ಯಾರಾಲಿಂಪಿಕ್ಸ್​​ನಲ್ಲಿ ಹೆಚ್ಚು ಪದಕ ಗೆದ್ದವರ ಪಟ್ಟಿ

ದೇವೇಂದ್ರ ಝಜಹರಿಯಾ - 3 (2 ಚಿನ್ನ ಮತ್ತು 1 ಬೆಳ್ಳಿ)

ಅವನಿ ಲೆಖರಾ - 3 (2 ಚಿನ್ನ ಮತ್ತು 1 ಕಂಚು)

ಜೋಗಿಂದರ್ ಸಿಂಗ್ ಬೇಡಿ - 3 (2 ಬೆಳ್ಳಿ ಮತ್ತು 1 ಕಂಚು)

ಮರಿಯಪ್ಪನ್ ತಂಗವೇಲು - 2 (1 ಚಿನ್ನ ಮತ್ತು 1 ಬೆಳ್ಳಿ)

ಸಿಂಗ್ರಾಜ್ ಅಧಾನ - 2 (1 ಬೆಳ್ಳಿ ಮತ್ತು 1 ಕಂಚು)

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.