Ramiz Raja on Team India: 'ಭಾರತವನ್ನು ಸೋಲಿಸುವುದು ಅಸಾಧ್ಯ'; ಟೀಮ್ ಇಂಡಿಯಾವನ್ನು ಹಾಡಿ ಹೊಗಳಿದ ರಮೀಜ್ ರಾಜಾ
ಭಾರತದ ಪ್ರದರ್ಶನದ ಬಗ್ಗೆ ಮಾತನಾಡಿದ ರಮೀಜ್ ರಾಜಾ, ಯಾವುದೇ ತಂಡವು ತವರಿನಲ್ಲಿ ಭಾರತವನ್ನು ಸೋಲಿಸುವುದು ಅಸಾಧ್ಯವೆಂದು ಹೇಳಿದ್ದಾರೆ.
ಆಸ್ಟ್ರೇಲಿಯಾವನ್ನು ಮಣಿಸಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಉಳಿಸಿಕೊಂಡ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯ ಮಾಜಿ ಮುಖ್ಯಸ್ಥ ರಮಿಜ್ ರಾಜಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯವನ್ನು ಭಾರತವು 6 ವಿಕೆಟ್‌ಗಳಿಂದ ಗೆದ್ದಿತ್ತು. ರವೀಂದ್ರ ಜಡೇಜಾ ಅವರ ಸ್ಪಿನ್ ದಾಳಿಗೆ ಪ್ಯಾಟ್ ಕಮಿನ್ಸ್ ಬಳಗವು ಮುಗ್ಗರಿಸಿತು. ಆ ಮೂಲಕ ಆತಿಥೇಯ ತಂಡವು ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ಅಲ್ಲದೆ ಪ್ರತಿಷ್ಟಿತ ಟ್ರೋಫಿಯನ್ನು ಉಳಿಸಿಕೊಂಡಿದೆ.
ದೆಹಲಿಯಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಜಡೇಜಾ 42 ರನ್ ಬಿಟ್ಟುಕೊಟ್ಟು 7 ವಿಕೆಟ್ ಪಡೆದರು. ಇದು ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ. ಮತ್ತೊಂದೆಡೆ ಅಶ್ವಿನ್ ಮೂರು ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. 100ನೇ ಟೆಸ್ಟ್ ಪಂದ್ಯವನ್ನು ಆಡಿದ ಚೇತೇಶ್ವರ ಪೂಜಾರ, ಅಜೇಯ ಆಟವಾಡಿ ಗೆಲುವಿನ ರನ್ ಗಳಿಸಿದರು.
ಭಾರತದ ಪ್ರದರ್ಶನದ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ರಮೀಜ್ ರಾಜಾ, ಯಾವುದೇ ತಂಡವು ತವರಿನಲ್ಲಿ ಭಾರತವನ್ನು ಸೋಲಿಸುವುದು ಅಸಾಧ್ಯವೆಂದು ಹೇಳಿಕೊಂಡಿದ್ದಾರೆ. “ಭಾರತ ಮತ್ತು ಆಸ್ಟ್ರೇಲಿಯದ ಪಂದ್ಯವು ಹೇಗೆ ಮುಗಿಯಿತೋ, ಅದೇ ರೀತಿ ಆಸೀಸ್ ತಂಡವು ಪರ್ತ್ ಅಥವಾ ಬ್ರಿಸ್ಬೇನ್‌ನಲ್ಲಿ ಉಪ-ಖಂಡದ ತಂಡಗಳ ವಿರುದ್ಧ ಪಂದ್ಯಗಳನ್ನು ಮುಗಿಸುತ್ತಿತ್ತು. ಆದರೆ ಈಗ ಅದರ ತದ್ವಿರುದ್ಧ. ವಿಶೇಷವಾಗಿ ಭಾರತದಲ್ಲಿ ಉತ್ತಮ ಟೆಸ್ಟ್ ಕ್ರಿಕೆಟ್ ಆಡುವ ವಿಚಾರದಲ್ಲಿ ಆಸ್ಟ್ರೇಲಿಯಾ ಸಿದ್ಧವಾಗಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಭಾರತದಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವುದು ಅಸಾಧ್ಯ. ಸ್ಪಿನ್ ವಿರುದ್ಧ ಆಸೀಸ್ ತಂಡದ್ದು ಸಾಮಾನ್ಯ ಪ್ರದರ್ಶನ. ಒಂದು ಸೆಷನ್‌ನಲ್ಲಿ ಒಂಬತ್ತು ವಿಕೆಟ್‌ಗಳು ಉರುಳಿದವು. ಜಡೇಜಾ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು,” ಎಂದು ರಾಜಾ ಹೇಳಿದ್ದಾರೆ.
ಆಸ್ಟ್ರೇಲಿಯಾವನ್ನು ಗುರಿಯಾಗಿಸಿ ಮಾತನಾಡಿದ ಪಿಸಿಬಿ ಮಾಜಿ ಮುಖ್ಯಸ್ಥ ರಾಜಾ, ಭಾರತೀಯ ಸ್ಪಿನ್ನರ್‌ಗಳ ವಿರುದ್ಧ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ ಕಮಿನ್ಸ್ ಮತ್ತು ತಂಡವನ್ನು ಟೀಕಿಸಿದರು. ಇದೇ ವೇಳೆ ದೆಹಲಿಯಲ್ಲಿ ನಡೆದ 2ನೇ ಟೆಸ್ಟ್‌ನ 1ನೇ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಗರಿಷ್ಠ ಸ್ಕೋರ್ ಮಾಡಿದ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶ್ಲಾಘಿಸಿದ್ದಾರೆ. ಅಕ್ಸರ್ ಆಸ್ಟ್ರೇಲಿಯಾ ವಿರುದ್ಧ 115 ಎಸೆತಗಳಲ್ಲಿ 74 ರನ್ ಗಳಿಸಿದರು. ಕೆಳ ಕ್ರಮಾಂಕದ ಬ್ಯಾಟರ್ ಅಕ್ಸರ್, ನಾಗ್ಪುರದಲ್ಲಿ ನಡೆದ ಮೊದಲನೇ ಟೆಸ್ಟ್‌ನಲ್ಲಿಯೂ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು.
“ಅಕ್ಷರ್ ಪಟೇಲ್ ಅವರ ಬ್ಯಾಟಿಂಗ್ ಅದ್ಭುತವಾಗಿತ್ತು. ಪರಿಸ್ಥಿತಿಯನ್ನು ನೋಡಿಕೊಂಡು, ಅವರು 60-70 ರನ್ ಗಳಿಸಿದರು. ಆಸ್ಟ್ರೇಲಿಯಕ್ಕೆ ಗಮನಾರ್ಹ ಮುನ್ನಡೆ ಸಿಗುವ ಸಾಧ್ಯತೆಯಿದ್ದಾಗ ಅವರು ಅಶ್ವಿನ್ ಜೊತೆಗೂಡಿ ಉತ್ತಮ ಜೊತೆಯಾಟವಾಡಿದರು. ಆಸ್ಟ್ರೇಲಿಯಾ ಮಾನಸಿಕವಾಗಿ ಸದೃಢವಾಗಿರಲಿಲ್ಲ ಮತ್ತು ಅವರಲ್ಲಿ ಕೆಲವೊಂದು ತಾಂತ್ರಿಕ ದೋಷಗಳಿವೆ. ಸ್ಪಿನ್ ವಿರುದ್ಧ ಅವರ ಬ್ಯಾಟಿಂಗ್ ಅತ್ಯಂತ ಕಳಪೆಯಾಗಿದೆ. ಅವರು ತಪ್ಪಾದ ಹೊಡೆತಗಳನ್ನಾಡಿದರು,” ಎಂದು ಪಾಕಿಸ್ತಾನದ ಮಾಜಿ ನಾಯಕ ವಿವರಿಸಿದ್ದಾರೆ.
ಇದನ್ನೂ ಓದಿ
WTC points table: ಆಸೀಸ್ ವಿರುದ್ಧ ಐತಿಹಾಸಿಕ ಗೆಲುವಿನ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಲೆಕ್ಕಾಚಾರ ಹೇಗಿದೆ?
ದೆಹಲಿಯಲ್ಲಿ ನಡೆದ ನಾಲ್ಕು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ ನಂತರ, ಭಾರತ ತನ್ನ ಗೆಲುವಿನ ಶೇಕಡಾವಾರು ಪ್ರಮಾಣವನ್ನು 64.06ಕ್ಕೆ ಹೆಚ್ಚಿಸಿಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (WTC) ಫೈನಲ್‌ಗೆ ಪ್ರವೇಶಿಸಲು ಭಾರತವು ಡ್ರೈವಿಂಗ್ ಸೀಟಿನಲ್ಲಿ ಕುಳಿತಿದ್ದರೂ, ಆತಿಥೇಯರು ಇನ್ನೂ ತಮ್ಮ ಸ್ಥಾನವನ್ನು ಕಳೆದುಕೊಂಡಿಲ್ಲ. ಅದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಲು ಶ್ರೀಲಂಕಾ ತಂಡಕ್ಕೂ ಅವಕಾಶವಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ