ರೋಜರ್ ಫೆಡರರ್ ಮತ್ತು ನಾನು ವಿಂಬಲ್ಡನ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದೆವು; ಟೆನಿಸ್ ದಿಗ್ಗಜನ ಕ್ರೀಡಾಪ್ರೇಮ ವಿವರಿಸಿದ ಬೋಪಣ್ಣ
ಕನ್ನಡ ಸುದ್ದಿ  /  ಕ್ರೀಡೆ  /  ರೋಜರ್ ಫೆಡರರ್ ಮತ್ತು ನಾನು ವಿಂಬಲ್ಡನ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದೆವು; ಟೆನಿಸ್ ದಿಗ್ಗಜನ ಕ್ರೀಡಾಪ್ರೇಮ ವಿವರಿಸಿದ ಬೋಪಣ್ಣ

ರೋಜರ್ ಫೆಡರರ್ ಮತ್ತು ನಾನು ವಿಂಬಲ್ಡನ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದೆವು; ಟೆನಿಸ್ ದಿಗ್ಗಜನ ಕ್ರೀಡಾಪ್ರೇಮ ವಿವರಿಸಿದ ಬೋಪಣ್ಣ

Rohan Bopanna: ರೋಹನ್ ಬೋಪಣ್ಣ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಹಲವು ಬಾರಿ ರೋಜರ್ ಫೆಡರರ್ ಅವರೊಂದಿಗೆ ಟೆನಿಸ್‌ ಲಾಕರ್ ರೂಮ್ ಹಂಚಿಕೊಂಡಿದ್ದಾರೆ.‌ ಆ ಸಮಯದ ಸ್ವಾರಸ್ಯಕರ ಅಂಶಗಳನ್ನು ಬೋಪಣ್ಣ ಹಂಚಿಕೊಂಡಿದ್ದಾರೆ.

ಟೆನಿಸ್ ದಿಗ್ಗಜ ರೋಜರ್ ಫೆಡರರ್ ಕ್ರೀಡಾಪ್ರೇಮ ವಿವರಿಸಿದ ರೋಹನ್ ಬೋಪಣ್ಣ
ಟೆನಿಸ್ ದಿಗ್ಗಜ ರೋಜರ್ ಫೆಡರರ್ ಕ್ರೀಡಾಪ್ರೇಮ ವಿವರಿಸಿದ ರೋಹನ್ ಬೋಪಣ್ಣ (Getty Images)

2003ರಲ್ಲಿ ವೃತ್ತಿಜೀವನಕ್ಕೆ ಕಾಲಿಟ್ಟ ರೋಹನ್ ಬೋಪಣ್ಣ (Rohan Bopanna), 20 ವರ್ಷಗಳು ಕಳೆದರೂ ಇನ್ನೂ ಉನ್ನತ ಮಟ್ಟದ ಟೆನಿಸ್‌ ಆಡುತ್ತಿದ್ದಾರೆ. 43 ವರ್ಷದ ಬೋಪಣ್ಣ ಈ ವಾರದ ಆರಂಭದಲ್ಲಿ ಆಸ್ಟ್ರೇಲಿಯನ್ ಓಪನ್‌ ಡಬಲ್ಸ್‌ ಕಿರೀಟ ಮುಡಿಗೇರಿಸಿಕೊಂಡರು. ಆಸೀಸ್‌ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ, ಓಪನ್ ಯುಗದಲ್ಲಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅದರೊಂದಿಗೆ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಪುರುಷರ ಡಬಲ್ಸ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದರು.

ಪುರುಷರ ಟೆನಿಸ್‌ನಲ್ಲಿ ಹೊಸ ಎತ್ತರಕ್ಕೆ ಏರಿದ ಏಕೈಕ ವ್ಯಕ್ತಿ ಬೋಪಣ್ಣ ಮಾತ್ರವಲ್ಲ. ಟೆನಿಸ್‌ ದಿಗ್ಗಜರಾದ ನೊವಾಕ್ ಜೊಕೊವಿಕ್, ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಕೂಡಾ ಈ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಸದ್ಯ ನಡಾಲ್ ಗಾಯಗಳಿಂದ ಬಳಲುತ್ತಿದ್ದರೆ, ಫೆಡರರ್ 2022ರಲ್ಲಿ ಈ ಕ್ರೀಡೆಯಿಂದ ನಿವೃತ್ತರಾಗಿದ್ದಾರೆ. ಬೋಪಣ್ಣ ಮಾತ್ರ ತಾನಿನ್ನೂ 43ನೇ ಲೆವೆಲ್‌ನಲ್ಲಿದ್ದೇನೆ ಅಷ್ಟೇ ಎಂದು ಹುರುಪಿನೊಂದಿಗೆ ಅಂಗಣಕ್ಕಿಳಿಯುತ್ತಿದ್ದಾರೆ.

ಇದನ್ನೂ ಓದಿ | ರೋಹನ್ ಬೋಪಣ್ಣ ಐತಿಹಾಸಿಕ ಸಾಧನೆಗೆ 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ನಡಾಲ್‌ ವಿಶೇಷ ಶುಭಾಶಯ

ರೋಹನ್‌ ಬೋಪಣ್ಣ ತಮ್ಮ ಸುದೀರ್ಘ ವೃತ್ತಿಜೀವನದ ಅವಧಿಯಲ್ಲಿ ಈ ಮೂವರೊಂದಿಗೆ ಸಮಯ ಕಳೆದಿದ್ದಾರೆ. ಈ ನಡುವೆ ಕೆಲವೊಮ್ಮೆ ಲಾಕರ್‌ ರೂಮ್‌ನಲ್ಲಿ ಫೆಡರರ್ ಅವರೊಂದಿಗೆ ಕ್ರಿಕೆಟ್ ಆಡುತ್ತಿದ್ದುದಾಗಿ ಬೋಪಣ್ಣ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ | ರೋಹನ್ ಬೋಪಣ್ಣ ಹೊಸದಾಗಿ ಸೇರ್ಪಡೆ; ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಗೆದ್ದ ಭಾರತೀಯರ ಸಂಪೂರ್ಣ ಪಟ್ಟಿ

“ಲಾಕರ್ ರೂಮ್‌ನಲ್ಲಿ ಅವರು ಮುಕ್ತರಾಗಿದ್ದರು. ಅವರು ಕ್ರಿಕೆಟ್‌ನ ದೊಡ್ಡ ಅಭಿಮಾನಿ. ಅವರ ತಾಯಿ ಕೂಡಾ ದಕ್ಷಿಣ ಆಫ್ರಿಕಾ ಮೂಲದವರು. ನಾವು ವಿಂಬಲ್ಡನ್‌ ವೇಳೆ ಲಾಕರ್ ರೂಮ್‌ನಲ್ಲಿ ಜೊತೆಗೆ ಸಮಯ ಕಳೆದಿದ್ದೇವೆ. ರೋಜರ್ ಮತ್ತು ನಾನು ವಿಂಬಲ್ಡನ್‌ ಲಾಕರ್‌ ರೂಮ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದೆವು,” ಎಂದು ಬೋಪಣ್ಣ ಯೂಟ್ಯೂಬ್ ಚಾನೆಲ್ 'ದಿ ಅದರ್ ಸೈಡ್'ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ | ನಾನು 43ನೇ ಲೆವೆಲ್​ನಲ್ಲಿದ್ದೇನೆ, ವಯಸ್ಸು 43 ಅಲ್ಲ; ಆಸ್ಟ್ರೇಲಿಯನ್ ಓಪನ್ ಗೆದ್ದ ಬಳಿಕ ರೋಹನ್ ಬೋಪಣ್ಣ ಹೇಳಿದ್ದಿಷ್ಟು

“ಅವರು ಇತರ ಎಲ್ಲಾ ಆಟಗಾರರೊಂದಿಗೆ ಮಾತನಾಡಿಸುವ ಮತ್ತು ಅವರನ್ನು ಅರ್ಥಮಾಡಿಕೊಳ್ಳುವಂಥ ವ್ಯಕ್ತಿ. ಅವರು ಅಂಥ ಶ್ರೇಷ್ಠ ಚಾಂಪಿಯನ್ ಆಟಗಾರ ಆಗಿದ್ದರೂ, ಕೆಲವು ಆಟಗಾರರನ್ನು ಎಲ್ಲಿ ಭೇಟಿಯಾಗಿದರೂ ಅವರೊಂದಿಗೆ ಬೆರೆಯುವ ರೀತಿ ಮಾತ್ರ ಅದ್ಭುತ,” ಎಂದು ಬೋಪಣ್ಣ ಹೇಳಿದ್ದಾರೆ.

ಜನವರಿ 27ರ ಶನಿವಾರ ಮೆಲ್ಬೋರ್ನ್​​ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ 2024ರ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿ ಗೆದ್ದುಕೊಂಡರು. ಇಂಡೋ-ಆಸೀಸ್ ಜೋಡಿ, ಫೈನಲ್​​ನಲ್ಲಿ ಇಟಲಿಯ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಾಸ್ಸೊರಿ ಅವರನ್ನು 7-6 (0), 7-5 ಸೆಟ್​​ಗಳಿಂದ ಮಣಿಸಿ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಇದು ಬೋಪಣ್ಣ ಅವರ ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. 2018 ರಲ್ಲಿ ಅವರು ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದರು. ಆಸೀಸ್‌ ಓಪನ್ ಪಂದ್ಯಾವಳಿ ನಡುವೆ ಬೋಪಣ್ಣ ಅವರಿಗೆ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಗೆ ಹೆಸರಿಸಿತು.

(This copy first appeared in Hindustan Times Kannada website. To read more like this please logon to kannada.hindustantime.com )

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.