ರೋಹನ್ ಬೋಪಣ್ಣ ಐತಿಹಾಸಿಕ ಸಾಧನೆಗೆ 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ನಡಾಲ್ ವಿಶೇಷ ಶುಭಾಶಯ
Rafael Nadal on Rohan Bopanna: ರೋಹನ್ ಬೋಪಣ್ಣ ಅವರ ಐತಿಹಾಸಿಕ ಸಾಧನೆಗೆ 22 ಬಾರಿಯ ಗ್ರ್ಯಾಂಡ್ ಸ್ಲಾಮ್ ವಿಜೇತ ರಫೆಲ್ ನಡಾಲ್ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತದ ಹಿರಿಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ (Rohan Bopanna), ಆಸ್ಟ್ರೇಲಿಯಾ ಓಪನ್ ಡಬಲ್ಸ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಮೆಲ್ಬೋರ್ನ್‌ನ ರಾಡ್ ಲೇವರ್ ಅರೆನಾದಲ್ಲಿ ಜನವರಿ 27ರ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ತಮ್ಮ ಜೊತೆಗಾರನಾದ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಎರಡನೇ ಶ್ರೇಯಾಂಕಿತ ಜೋಡಿಯಾದ ಇಟಲಿಯ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಾಸ್ಸರಿ ಅವರನ್ನು 7-6 (0), 7-5 ಸೆಟ್‌ಗಳಿಂದ ಮಣಿಸಿ ಆಸ್ಟ್ರೇಲಿಯನ್ ಓಪನ್ ಕಿರೀಟ ತಮ್ಮದಾಗಿಸಿಕೊಂಡರು.
43ರ ಹರೆಯದ ಬೋಪಣ್ಣ, ಡಬಲ್ಸ್ ವಿಭಾಗದಲ್ಲಿ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗೆಲುವಿನೊಂದಿಗೆ ಓಪನ್ ಯುಗದಲ್ಲಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಭಾರತೀಯ ಪಾತ್ರರಾದರು. ಈ ಹಿಂದೆ 40ನೇ ವಯಸ್ಸಿನಲ್ಲಿ 2022ರ ಫ್ರೆಂಚ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದ ಜೀನ್-ಜೂಲಿಯನ್ ರೋಜರ್ ಅವರ ದಾಖಲೆಯನ್ನು ಇದೀಗ ಬೋಪಣ್ಣ ಮುರಿದಿದ್ದಾರೆ.
ಬೋಪಣ್ಣ ಐತಿಹಾಸಿಕ ಗೆಲುವಿಗೆ ದಿಗ್ಗಜ ಆಟಗಾರರು ಹಾಗೂ ಗಣ್ಯರ ಶುಭಾಶಯಗಳು ಹರಿದು ಬಂದಿವೆ. ವಿಶೇಷವಾಗಿ 22 ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ರಫೆಲ್ ನಡಾಲ್ ಕೂಡಾ ಬೋಪಣ್ಣ ಸಾಧನೆಯನ್ನು ಕೊಂಡಾಡಿದ್ದಾರೆ. ಗಾಯದಿಂದಾಗಿ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಿಂದ ಹೊರಗುಳಿದ ಸ್ಪೇನ್ ಆಟಗಾರ, ಭಾರತೀಯನ ಗೆಲುವನ್ನು “ಅನನ್ಯ” ಸಾಧನೆ ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ | ರೋಹನ್ ಬೋಪಣ್ಣ ಮುಕುಟಕ್ಕೆ ಮತ್ತೊಂದು ಕಿರೀಟ; ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಆಸ್ಟ್ರೇಲಿಯಾ ಓಪನ್ ಗೆದ್ದ ಕನ್ನಡಿಗ
ಜನವರಿ 28ರ ಭಾನುವಾರ ಇನ್‌ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡ ನಡಾಲ್, “ಅದ್ಭುತ ಮತ್ತು ಅನನ್ಯ ಸಾಧನೆ ಮಾಡಿದ ರೋಹನ್ ಭೋಪಣ್ಣಗೆ ಅಭಿನಂದನೆಗಳು!” ಎಂದು ನಡಾಲ್ ಬರೆದುಕೊಂಡಿದ್ದಾರೆ.
2023ರಲ್ಲಿ ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ಜೋಡಿ ಯುಎಸ್ ಓಪನ್ ಫೈನಲ್‌ನಲ್ಲಿ ಪರಾಭವಗೊಂಡ ಬಳಿಕ ಮೊದಲ ಪ್ರಶಸ್ತಿ ಇದಾಗಿದೆ. ಈವರೆಗೆ 60 ಗ್ರ್ಯಾಂಡ್ ಸ್ಲಾಮ್‌ಗಳಲ್ಲಿ ಭಾಗವಹಿಸಿರುವ ಕನ್ನಡಿಗ ಬೋಪಣ್ಣ ಅವರಿಗೆ ಇದು ಮೊದಲ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಚಾಂಪಿಯನ್ ಕಿರೀಟವಾಗಿದೆ.
2010 ಮತ್ತು 2023ರ ಯುಎಸ್ ಓಪನ್ ಫೈನಲ್‌ನಲ್ಲಿ ಸೋತಿದ್ದ ಬೋಪಣ್ಣ ಅವರಿಗೆ, ಪುರುಷರ ಡಬಲ್ಸ್ ವಿಭಾಗದಲ್ಲಿ ಇದು ಪ್ರಮುಖ ಸಾಧನೆಯಾಗಿದೆ. ಒಟ್ಟಾರೆ ಅವರ ವೃತ್ತಿಜೀವನದ ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಇದಾಗಿದ್ದು, 2017ರ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿ ಈ ಹಿಂದಿನ ಉನ್ನತ ಗೆಲುವಾಗಿತ್ತು. ಆ ಮೂಲಕ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಅವರೊಂದಿಗೆ ಓಪನ್ ಯುಗದಲ್ಲಿ ಗ್ರ್ಯಾಂಡ್ ಸ್ಲಾಮ್ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದ ಮೂರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಬೋಪಣ್ಣ ಪಾತ್ರರಾದರು.
ಇದನ್ನೂ ಓದಿ | ನಾನು 43ನೇ ಲೆವೆಲ್ನಲ್ಲಿದ್ದೇನೆ, ವಯಸ್ಸು 43 ಅಲ್ಲ; ಆಸ್ಟ್ರೇಲಿಯನ್ ಓಪನ್ ಗೆದ್ದ ಬಳಿಕ ರೋಹನ್ ಬೋಪಣ್ಣ ಹೇಳಿದ್ದಿಷ್ಟು
1 ಗಂಟೆ 39 ನಿಮಿಷಗಳ ಕಾಲ ನಡೆದ ರೋಚಕ ಪಂದ್ಯದಲ್ಲಿ 43 ವರ್ಷದ ರೋಹನ್ ಬೋಪಣ್ಣ ಮತ್ತು ಎಬ್ಡೆನ್ ಜೋಡಿಯು 7-6 (0), 7-5 ಸೆಟ್‌ಗಳಿಂದ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದರು. ರೋಚಕವಾಗ ಸಾಗಿದ ಮೊದಲ ಸೆಟ್ ಅನ್ನು ಟೈ-ಬ್ರೇಕರ್‌ನಲ್ಲಿ ಗೆದ್ದ ಜೋಡಿಯು, ಎರಡನೇ ಸೆಟ್ ಅನ್ನು ಸುಲಭವಾಗಿ ಗೆದ್ದುಕೊಂಡರು.
(This copy first appeared in Hindustan Times Kannada website. To read more like this please logon to kannada.hindustantime.com)