ವರ್ಷಕ್ಕೆ ಒಮ್ಮೆ, ನಾಗರ ಪಂಚಮಿಯಂದು ಮಾತ್ರ ತೆರೆಯಲಿರುವ ದೇವಸ್ಥಾನ; ಇಲ್ಲಿ ಪೂಜೆ ಸಲ್ಲಿಸಿದರೆ ನಾಗದೋಷ ಕಳೆದಂತೆ
Aug 09, 2024 11:37 AM IST
ವರ್ಷಕ್ಕೆ ಒಮ್ಮೆ, ನಾಗರ ಪಂಚಮಿಯಂದು ಮಾತ್ರ ತೆರೆಯಲಿರುವ ದೇವಸ್ಥಾನ; ಇಲ್ಲಿ ಪೂಜೆ ಸಲ್ಲಿಸಿದರೆ ನಾಗದೋಷ ಕಳೆದಂತೆ
ಮೂರು ದಿನಗಳ ನಾಗರ ಪಂಚಮಿ ಹಬ್ಬ ಎಲ್ಲೆಡೆ ಕಳೆಗಟ್ಟಿದೆ. ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯನ್ನು ನಾಡಿನಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಭಕ್ತರು ವರ್ಷಕ್ಕೆ ಒಮ್ಮೆ ಮಾತ್ರ ತೆರೆಯುವ ಉಜ್ಜಯಿನಿಯ ನಾಗಚಂದ್ರೇಶ್ವರ ದೇವಾಲಯಕ್ಕೆ ತೆರಳಿ ದರ್ಶನ ಪಡೆಯುತ್ತಿದ್ದಾರೆ.
ನಾಗ ಪಂಚಮಿ 2024: ದೇಶಾದ್ಯಂತ ಇಂದು ನಾಗ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹುತ್ತಕ್ಕೆ ತನಿ ಎರೆಯುವುದು, ನಾಗಬನಕ್ಕೆ ಕುಟುಂಬ ಸಹಿತ ಭೇಟಿ ನೀಡುವುದು, ಮನೆಯ ಹೆಣ್ಣು ಮಕ್ಕಳಿಗೆ ಬಾಗಿನ ನೀಡುವುದು, ಜೋಕಾಲಿ ಕಟ್ಟಿ ಜೀಕುವುದು ಸೇರಿದಂತೆ ಒಂದೊಂದು ಕಡೆ ಒಂದೊಂದು ರೀತಿ ನಾಗಪಂಚಮಿಯನ್ನು ಆಚರಿಸಲಾಗುತ್ತಿದೆ.
ತಾಜಾ ಫೋಟೊಗಳು
ಮಹಾಕಾಳೇಶ್ವರ ದೇವಾಲಯದ ಸಂಕಿರ್ಣದಲ್ಲಿರುವ ನಾಗಚಂದ್ರೇಶ್ವರ ದೇವಾಲಯ
ಈ ದಿನ ನಾಗದೇವತೆಗೆ ಮಾತ್ರವಲ್ಲದೆ, ಭಕ್ತರು ಶಿವಾಲಯಗಳಿಗೂ ಭೇಟಿ ನೀಡುತ್ತಾರೆ. ಜೊತೆಗೆ ಉತ್ತರ ಭಾರತದಲ್ಲಿ ಭಕ್ತರು ಇಂದು ವರ್ಷಕ್ಕೆ ಒಂದು ಬಾರಿ ಮಾತ್ರ ತೆಗೆಯುವ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಹೌದು, ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದ ಸಂಕಿರ್ಣದಲ್ಲಿರುವ ನಾಗಚಂದ್ರೇಶ್ವರ ದೇವಾಲಯವನ್ನು ಇಂದು ತೆರೆಯಲಾಗಿದೆ. ವರ್ಷಕ್ಕೊಮ್ಮೆ ಮಾತ್ರ ಈ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಅದೂ ಶ್ರಾವಣ ಮಾಸದಲ್ಲಿ ಬರುವ ನಾಗ ಪಂಚಮಿಯ ದಿನ ಮಾತ್ರ. ಆದ್ದರಿಂದ ಭಕ್ತರು ನಾಗಪಂಚಮಿಗೂ ಮುನ್ನ ಆಗಸ್ಟ್ 8ರ ತಡರಾತ್ರಿಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ನಾಗದೇವತೆ ಪೂಜೆ ಸಲ್ಲಿಸಿ, ನಾಗಚಂದ್ರೇಶ್ವರನ ದರ್ಶನ ಮಾಡುತ್ತಿದ್ದಾರೆ.
ನಾಗ ಪಂಚಮಿಯಂದು ನಾಗದೇವತೆಯನ್ನು ಪೂಜಿಸುವುದರಿಂದ ಹಾವು ಕಡಿತದ ಭಯ ದೂರವಾಗುತ್ತದೆ ಮತ್ತು ಜೀವನದಲ್ಲಿನ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಈ ದಿನ ವಾಸುಕಿ, ಮಣಿಭದ್ರ, ಕಾಳಿಕಾ, ಧನಂಜಯ, ತಕ್ಷಕ, ಕಾರ್ಕೋಟಕ ಸೇರಿದಂತೆ ಮೊದಲಾದ ನಾಗದೇವತೆಗಳನ್ನು ಪೂಜಿಸುವ ಸಂಪ್ರದಾಯವಿದೆ.
ಈ ಮಹಾಕಾಳೇಶ್ವರ ದೇವಸ್ಥಾನದಲ್ಲಿ ನಾಗಪಂಚಮಿಯಂದು ನಾಗಚಂದ್ರೇಶ್ವರ ದೇವರ ದರ್ಶನ ಮಾಡುವುದು ಬಹಳ ಪುಣ್ಯ ಎಂದು ನಂಬಲಾಗಿದೆ. ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಳ ದೇವಾಲಯದ ಸಂಕೀರ್ಣವು ಬಹಳ ಪುರಾತನವಾದ ನಾಗಚಂದ್ರೇಶ್ವರ ದೇವಾಲಯವನ್ನು ಹೊಂದಿದೆ. ಈ ದೇವಾಲಯದಲ್ಲಿ ಹಾವಿನ ಮೇಲೆ ಕುಳಿತಿರುವ ಶಿವ-ಪಾರ್ವತಿಯರ ವಿಗ್ರಹ ಬಹಳ ಆಕರ್ಷಕವಾಗಿದೆ. ದೇವಾಲಯದಲ್ಲಿರುವ ನಾಗಚಂದ್ರೇಶ್ವರನ ವಿಗ್ರಹ ದರ್ಶನ ಮಾಡಿ ಪೂಜಿಸುವುದರಿಂದ ಶಿವ ಮತ್ತು ಪಾರ್ವತಿಯರಿಬ್ಬರೂ ಸಂತುಷ್ಟರಾಗುತ್ತಾರೆ, ಹಾವಿನ ಭಯ ದೂರವಾಗುತ್ತದೆ ಹಾಗೂ ಎಲ್ಲಾ ಸರ್ಪದೋಷಗಳು ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ.
ಶೇಷ ನಾಗುವಿನ ಮೇಲೆ ಶಿವ ಪಾರ್ವತಿ
ಸಾಮಾನ್ಯವಾಗಿ ವಿಷ್ಣುವು ಶೇಷನಾಗುವಿನ ಮೇಲೆ ವಿಶ್ರಮಿಸುತ್ತಾನೆ. ಆದರೆ ಇಲ್ಲಿ ಶೇಷ ನಾಗುವಿನ ಮೇಲೆ ಶಿವ ಪಾರ್ವತಿ ಮಲಗಿದ್ದಾರೆ. ಅವರೊಂದಿಗೆ ಗಣೇಶನೂ ಇದ್ದಾನೆ. ಈ ವಿಗ್ರಹ ಬಹಳ ಪ್ರಾಚೀನವಾದುದು. ಜಗತ್ತಿನಲ್ಲಿ ಇಂತಹ ಪ್ರತಿಮೆ ಇನ್ನೊಂದಿಲ್ಲ. ನಾಗ ದೇವತೆಗಳ ರಾಜನೆಂದು ಪರಿಗಣಿಸಲ್ಪಟ್ಟ ತಕ್ಷಕನು ಈ ದೇವಾಲಯದಲ್ಲಿ ನೆಲೆಸಿದ್ದಾನೆ ಎಂದು ಭಕ್ತರು ನಂಬುತ್ತಾರೆ . ನಾಗಪಂಚಮಿಯ ದಿನದಂದು ಈ ದೇವಾಲಯಕ್ಕೆ ಭೇಟಿ ನೀಡಿದರೆ ಎಲ್ಲಾ ಅನಿಷ್ಟಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಈ ದೇವಾಲಯಕ್ಕೆ ಭೇಟಿ ನೀಡಿದವರಿಗೆ ಕಾಳಸರ್ಪ ದೋಷ ನಿವಾರಣೆಯಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ . ಈ ಒಂದು ದಿನ ಮಾತ್ರ ದೇವಾಲಯ ತೆರೆದಿರುತ್ತದೆ. ಆಗಸ್ಟ್ 9ರ ತಡರಾತ್ರಿ ಮತ್ತೆ ದೇವಸ್ಥಾನದ ಬಾಗಿಲು ಮುಚ್ಚಲಿದೆ. ಇಲ್ಲಿ ಸ್ವಾಮಿಯ ದರ್ಶನಕ್ಕೆ ಕೇವಲ 24 ಗಂಟೆ ಸಮಯ ಇರುವ ಕಾರಣ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಬರುತ್ತಾರೆ.
ಈ ಬಾರಿಯೂ ಗುರುವಾರ ಮತ್ತು ಶುಕ್ರವಾರ ರಾತ್ರಿ ಪೂರ್ಣ ಪೂಜೆಯೊಂದಿಗೆ ದೇವಾಲಯದ ಬಾಗಿಲು ತೆರೆಯಲಾಗಿದೆ. ಈ ಸಂದರ್ಭದಲ್ಲಿ ದೇವಸ್ಥಾನದ ಎಲ್ಲಾ ಅರ್ಚಕರು ಭಾಗವಹಿಸಿದ್ದರು. ಬಾಗಿಲು ತೆರೆದ ನಂತರ ನಾಗಚಂದ್ರೇಶ್ವರನಿಗೆ ವಿಧಿವಿಧಾನಗಳ ಪ್ರಕಾರ ಪೂಜೆ, ಅಭಿಷೇಕ ನೆರವೇರಿಸಲಾಯಿತು. ಇಂದು, ನಾಗಚಂದ್ರೇಶ್ವರನ ದರ್ಶನಕ್ಕಾಗಿ ಜನರು ದೇಶದ ವಿವಿಧ ಮೂಲೆಗಳಿಂದ ಬರಲಿದ್ದಾರೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.