ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ; ಇದನ್ನು ಅಣ್ಣ ತಂಗಿಯರ ಹಬ್ಬ ಎಂದು ಕರೆಯಲು ಕಾರಣವೇನು? -ದಿನ ವಿಶೇಷ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ; ಇದನ್ನು ಅಣ್ಣ ತಂಗಿಯರ ಹಬ್ಬ ಎಂದು ಕರೆಯಲು ಕಾರಣವೇನು? -ದಿನ ವಿಶೇಷ

ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ; ಇದನ್ನು ಅಣ್ಣ ತಂಗಿಯರ ಹಬ್ಬ ಎಂದು ಕರೆಯಲು ಕಾರಣವೇನು? -ದಿನ ವಿಶೇಷ

ಶ್ರಾವಣ ಮಾಸಗಳಲ್ಲಿ ಆಚರಿಸುವ ಹಬ್ಬಗಳಲ್ಲಿ ನಾಗರ ಪಂಚಮಿ ಕೂಡಾ ಒಂದು. ಇದನ್ನು ಕೆಲವೆಡೆ ಅಣ್ಣ- ತಂಗಿಯರ ಹಬ್ಬ ಎಂದರೂ ಕರೆಯುತ್ತಾರೆ. ದಕ್ಷಿಣ ಕನ್ನಡದಲ್ಲಿ ಕುಟುಂಬ ಸಹಿತ ನಾಗಬನಕ್ಕೆ ಹೋಗಿ ಪೂಜೆ ಸಲ್ಲಿಸಿದರೆ ಉತ್ತರ ಕರ್ನಾಟಕದ ಕಡೆ ಜೋಕಾಲಿ ಜೀಕಿ ಖುಷಿ ಪಡುತ್ತಾರೆ. ಎಳ್ಳುಂಡೆ, ಶೇಂಗಾ ಉಂಡೆ, ತಂಬಿಟ್ಟು ತಯಾರಿಸುತ್ತಾರೆ.

ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ; ಅಣ್ಣ ತಂಗಿಯರ ಹಬ್ಬ ಎಂದು ಕರೆಯಲು ಕಾರಣವೇನು? -ದಿನ ವಿಶೇಷ
ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ; ಅಣ್ಣ ತಂಗಿಯರ ಹಬ್ಬ ಎಂದು ಕರೆಯಲು ಕಾರಣವೇನು? -ದಿನ ವಿಶೇಷ

ಹಿಂದೂಗಳು ಆಚರಿಸುವ ಹಬ್ಬಗಳಲ್ಲಿ ನಾಗರ ಪಂಚಮಿ ಕೂಡಾ ಒಂದು. ಇದು ಶ್ರಾವಣ ಮಾಸದ ಮೊದಲ ಹಬ್ಬ. ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುತ್ತದೆ. ಈ ದಿನ ನಾಗದೇವತೆಯ ಆರಾಧನೆ ಬಹಳ ಮುಖ್ಯ. ನಾಗ ಪಂಚಮಿಯಂದು ನಾಗದೇವತೆಯೊಂದಿಗೆ ಶಿವನನ್ನು ಪೂಜಿಸುವುದರಿಂದ ಕಾಳಸರ್ಪ ದೋಷ ಸೇರಿದಂತೆ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗಿ ಜೀವನದಲ್ಲಿ ಸಂತೋಷವನ್ನು ತರುತ್ತದೆ ಎಂಬ ನಂಬಿಕೆ ಇದೆ.

ಪೂಜೆಗೆ ಶುಭ ಮುಹೂರ್ತ

ನಾಗರ ಪಂಚಮಿಯನ್ನು ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಆಚರಿಸಲಾಗುತ್ತದೆ. ಈ ದಿನ ಎಂಟು ಸರ್ಪ ದೇವತೆಗಳನ್ನು ಪೂಜಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ, ಶ್ರಾವಣ ಮಾಸದ ಶುಕ್ಲ ಪಕ್ಷ ಪಂಚಮಿ ತಿಥಿ 9 ಆಗಸ್ಟ್ 2024 ರಂದು ಬೆಳಗ್ಗೆ 8:15 ಕ್ಕೆ ಪ್ರಾರಂಭವಾಗುತ್ತದೆ. ಮರುದಿನ ಅಂದರೆ ಆಗಸ್ಟ್ 10 ರಂದು ಬೆಳಗ್ಗೆ 06:0 ಕ್ಕೆ ಕೊನೆಗೊಳ್ಳುತ್ತದೆ. ಆದ್ದರಿಂದ ಪಂಚಾಂಗದ ಪ್ರಕಾರ ಆಗಸ್ಟ್ 9 ರಂದು ನಾಗ ಪಂಚಮಿ ಆಚರಿಸಲಾಗುತ್ತದೆ. ಇಂದು ವಿಶೇಷ ಪೂಜಾ ಸಮಯವು ಮಧ್ಯಾಹ್ನ 12.13 ಕ್ಕೆ ಪ್ರಾರಂಭವಾಗಿ 1 ಗಂಟೆಗೆ ಕೊನೆಗೊಳ್ಳುತ್ತದೆ. ಈ ದಿನ ಪ್ರದೋಷ ಕಾಲದಲ್ಲಿ ನಾಗದೇವತೆಯ ಆರಾಧನೆಗೆ ಮಹತ್ವವಿದೆ. ಇಂದು ಸಂಜೆ 6.33 ರಿಂದ 8.20 ರವರೆಗೆ ಸರ್ಪ ದೇವರನ್ನು ಪೂಜಿಸಲು ಉತ್ತಮ ಸಮಯ.

ನಾಗ ಪಂಚಮಿಯಂದು ಬೆಳಗಿನ ಸ್ನಾನದ ನಂತರ ಶುಭ್ರ ಬಟ್ಟೆಯನ್ನು ಧರಿಸಬೇಕು. ದೇವರಕೋಣೆಯನ್ನು ಸ್ವಚ್ಚಗೊಳಿಸಿ ಹೂ, ಧೂಪ, ದೀಪ ನೈವೇದ್ಯಗಳಿಂದ ಪೂಜೆ ಮಾಡಿ. ಶಿವಲಿಂಗಕ್ಕೆ ನೀರನ್ನು ಅರ್ಪಿಸಿ ಶಿವನನ್ನು ಪೂಜಿಸಿ. ನಾಗದೇವತೆಯ ಚಿತ್ರ ಬಿಡಿಸಿ, ಹೂಗಳಿಂದ ಸಿಂಗರಿಸಿ, ನೈವೇದ್ಯ ಇಟ್ಟು ದೀಪ ಹಚ್ಚಿ ಪೂಜಿಸಬೇಕು. ಕೊನೆಯದಾಗಿ ನಾಗದೇವನನ್ನು ಧ್ಯಾನಿಸಿ ಮತ್ತು ಆರತಿಯನ್ನು ಅರ್ಪಿಸಿ. ಆರತಿ ನಂತರ ನಾಗ ಪಂಚಮಿ ವ್ರತಕತೆಯನ್ನು ಪಠಿಸಬೇಕು. ಶ್ರಾವಣ ಶಿವನಿಗೆ ಪ್ರಿಯವಾದ ಮಾಸವಾಗಿರುವುದರಿಂದ ಈ ದಿನ ಶಿವಾಲಯಗಳಿಂದ ತೆರಳಿ ಶಿವನ ಪೂಜೆಯಲ್ಲಿ ಕೂಡಾ ಭಕ್ತರು ಪಾಲ್ಗೊಳ್ಳುತ್ತಾರೆ.

ಎಲ್ಲೆಲ್ಲಿ ಆಚರಣೆ?

ನಾಗರ ಪಂಚಮಿಯನ್ನು ದೇಶಾದ್ಯಂತ ಒಂದೊಂದು ವಿಧದಲ್ಲಿ ಆಚರಿಸಲಾಗುತ್ತದೆ. ಕರ್ನಾಟದಲ್ಲಿ ದಕ್ಷಿಣ ಕನ್ನಡ, ಉತ್ತರ ಕರ್ನಾಟಕದಲ್ಲಿ ಈ ಹಬ್ಬ ಬಹಳ ವಿಶೇಷವಾಗಿದೆ. ದಕ್ಷಿಣ ಕನ್ನಡದಲ್ಲಿ ನಾಗಾರಾಧನೆಗೆ ಹೆಚ್ಚು ಪ್ರಾಮುಖ್ಯತೆ ಇದೆ. ಕುಟುಂಬಸ್ಥರು ಜೊತೆ ಸೇರಿ ನಾಗಬನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬೆಲ್ಲ, ಕಾಯಿಯ ಕಡುಬು ತಯಾರಿಸಿ ನಾಗದೇವತೆಗೆ ನೈವೇದ್ಯ ಅರ್ಪಿಸಿ ನಂತರ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಸೇವಿಸುತ್ತಾರೆ. ಇನ್ನು ಉತ್ತರ ಕರ್ನಾಟಕದಲ್ಲಿ ಕೂಡಾ ಇದು ಬಹಳ ದೊಡ್ಡ ಹಬ್ಬ. ಮನೆಯಲ್ಲಿ ಶೇಂಗಾ ಉಂಡೆ, ತಂಬಿಟ್ಟು, ಎಳ್ಳು ಉಂಡೆ ಸೇರಿದಂತೆ ವಿವಿಧ ಉಂಡೆಗಳನ್ನು ಮಾಡುತ್ತಾರೆ, ಹುತ್ತಕ್ಕೆ ತನಿ ಎರೆಯುತ್ತಾರೆ. ಜೋಕಾಲಿ ಕಟ್ಟಿ ಹಿರಿಯರು, ಕಿರಿಯರು ಎನ್ನದೆ ಜೀಕಿ ಖುಷಿಪಡುತ್ತಾರೆ. ಪುರುಷರ ತಮ್ಮ ಅಕ್ಕ, ತಂಗಿಯರಿಗೆ ಬಾಗಿನ ನೀಡುತ್ತಾರೆ.

ಅಣ್ಣ ತಂಗಿಯರ ಹಬ್ಬ ಗರುಡ ಪಂಚಮಿ

ಹಿಂದೊಮ್ಮೆ ಯುವತಿಯೊಬ್ಬಳು ತನ್ನ ಅಣ್ಣನೊಂದಿಗೆ ಹಬ್ಬ ಆಚರಿಸುತ್ತಿದ್ದಳು. ಪೂಜೆಗೆ ಹೂ ತಂದುಕೊಡುವುದಾಗಿ ಯುವತಿ ತನ್ನ ಅಣ್ಣನ ಬಳಿ ಮನವಿ ಮಾಡುತ್ತಾಳೆ. ನಿನಗೆ ಕೇದಿಗೆ ಹೂ ತರುವುದಾಗಿ ನಾಗಬನಕ್ಕೆ ಹೋದ ಅಣ್ಣ ಹಾವಿನ ಕಡಿತದಿಂದ ಸಾವನ್ನಪ್ಪುತ್ತಾನೆ. ಈ ವಿಚಾರ ತಿಳಿದ ಯುವತಿ ದುಃಖಿತಳಾಗುತ್ತಾಳೆ. ನಾಗದೇವತೆಯನ್ನು ಪ್ರಾರ್ಥಿಸಿ ತನ್ನ ಅಣ್ಣನನ್ನು ಬದುಕಿಸಿಕೊಳ್ಳುತ್ತಾಳೆ. ಅಂದಿನಿಂದ ಇದು ಅಣ್ಣ ತಂಗಿಯರ ಹಬ್ಬವೆಂದೇ ಹೆಸರಾಯ್ತು. ಕೆಲವೆಡೆ ಯುವತಿಯರು ಸಹೋದರರ ಬೆನ್ನು ಪೂಜೆ ಮಾಡಿ, ಆತನಿಗೆ ಒಳಿತು ಕೋರುತ್ತಾರೆ. ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಹಾಗೇ ಪುರುಷರು ತಮ್ಮ ಸಹೋದರಿಯರಿಗೆ ಬಾಗಿನ ನೀಡಿ ಶುಭ ಹಾರೈಸುತ್ತಾರೆ.

ನಿಯಮಾನುಸಾರ ನಾಗರ ಪಂಚಮಿ ಆಚರಿಸಲು ಸೂಕ್ತ ಪುರೋಹಿತರನ್ನು ಭೇಟಿ ಮಾಡಿ ಮಾಹಿತಿ ಪಡೆಯಿರಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.